ಚನ್ನಪಟ್ಟಣದ ಕನ್ನಸಂದ್ರದ ಹಾಲು ಡೈರಿ ಸೆಕ್ರೆಟರಿ ಬದಲಾವಣೆ ವಿಚಾರಕ್ಕೆ ಗಲಾಟೆ; ಪೊಲೀಸರಿಂದ ಪರಿಸ್ಥಿತಿ ಶಾಂತ

ಕೆಲವರ ಪಿತೂರಿಯಿಂದಾಗಿ ಹರೀಶ್ರಿಂದ ಸೆಕ್ರೆಟರಿ ಹುದ್ದೆ ಕೈತಪ್ಪಿದೆ. ಚಂದ್ರಯ್ಯ ಎಂಬುವವರು ಸಂಚು ರೂಪಿಸಿ ತಮ್ಮ ಮಗನಿಗೆ ಪಟ್ಟ ಕಟ್ಟಿದ್ದಾರೆ ಎಂದು ಕನ್ನಸಂದ್ರ ಗ್ರಾಮಸ್ಥರು ಆರೋಪಿಸಿದ್ದಾರೆ.

ಕನ್ನಸಂದ್ರದ ಹಾಲಿನ ಡೈರಿ

ಕನ್ನಸಂದ್ರದ ಹಾಲಿನ ಡೈರಿ

  • Share this:
ರಾಮನಗರ(ಚನ್ನಪಟ್ಟಣ): ಹಾಲಿನ ಡೈರಿ ಸೆಕ್ರೆಟರಿ ಬದಲಾವಣೆ ವಿಚಾರವಾಗಿ ಚನ್ನಪಟ್ಟಣ ತಾಲೂಕಿನ ಕನ್ನಸಂದ್ರ ಗ್ರಾಮದ ಹಾಲಿನ ಡೈರಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಡೈರಿಯಲ್ಲಿ ಕಳೆದ 2 ವರ್ಷದಿಂದ ಗ್ರಾಮದ ಹರೀಶ್ ಎಂಬುವರು ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಮಾರ್ಚ್​ನಲ್ಲಿ ಇವರ ವಿರುದ್ಧ ಕೆಲವರ ಪಿತೂರಿಯಿಂದಾಗಿ ಆ ಹುದ್ದೆ ಕಳೆದುಕೊಂಡಿದ್ದರೆನ್ನಲಾಗಿದೆ. ಈಗ ಅದೇ ಗ್ರಾಮದ ಚಂದ್ರಯ್ಯ ಎಂಬುವರು ತಮ್ಮ ಕುಟುಂಬಕ್ಕೆ ಡೈರಿ ಸೆಕ್ರೆಟರಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಡೈರಿಯ ಅಧ್ಯಕ್ಷರು ಸೇರಿ ಒಟ್ಟು 8 ಜನ ಸದಸ್ಯರು ಈ ಡೈರಿ ಮಂಡಳಿಯಲ್ಲಿದ್ದರು. ಆದರೆ ಅಧಿಕಾರಕ್ಕಾಗಿ ಬೋರ್ಡ್ ಅನ್ನೇ ಸೂಪರ್ ಸೀಡ್ ಮಾಡುವ ಮೂಲಕ ವಾಮಮಾರ್ಗದಿಂದ ಅಧಿಕಾರ ಪಡೆಯಲು ಹೊರಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೈವಾಡವಿದೆ. ಹರೀಶ್ ವಿರುದ್ಧ ಚಂದ್ರಯ್ಯ ಮತ್ತು ಶ್ರೀಧರ್ ಜೊತೆಗೆ ಸೇರಿ ಪಿತೂರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ಇಂದು ಗ್ರಾಮದ ಜನರು ಚಂದ್ರಯ್ಯ ಹಾಗೂ ನೂತನ ಸೆಕ್ರೆಟರಿಯಾಗಿ ಆಯ್ಕೆಯಾಗಿರುವ ಮಗ ಜಯಂತ್ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಹರೀಶ್ ಸೆಕ್ರೆಟರಿ ಆಗಬೇಕು. ಚಂದ್ರಯ್ಯನ ಮಗ ಸೆಕ್ರೆಟರಿಯಾದರೆ ನಾವು ಯಾವುದೇ ಕಾರಣಕ್ಕೂ ಡೈರಿಗೆ ಹಾಲನ್ನ ಹಾಕುವುದಿಲ್ಲವೆಂದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಕೊರೋನಾದಿಂದ ಹೊಸ ಆವಿಷ್ಕಾರಗಳಿಗೆ ಬಂತು ಮಾರುಕಟ್ಟೆ; ಸ್ಯಾನಿಟೈಸರ್ ಸ್ಟ್ಯಾಂಡ್​ಗೆ ಭಾರೀ ಬೇಡಿಕೆ

ಸ್ಥಳಕ್ಕೆ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ಪಿಎಸ್​ಐ ಸದಾನಂದ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಾರೆ ಎಂದು ಸದಾನಂದ್ ಗ್ರಾಮಸ್ಥರನ್ನ ಸಮಾಧಾನಪಡಿಸಿದರು. ಕನ್ನಸಂದ್ರದಲ್ಲಿ ಒಟ್ಟು 90 ಜನ ದಿನನಿತ್ಯ ಡೈರಿಗೆ ಹಾಲು ಹಾಕುತ್ತಿದ್ದು, ಇಲ್ಲಿಂದ 400 ಲೀ.ನಷ್ಟು ಹಾಲು ಭೈರಾಪಟ್ಟಣದ ಹಾಲಿನ ಡೈರಿಗೆ ಸೇರುತ್ತಿದೆ.

First published: