Human Interest: ಕ್ರಿಕೆಟ್ ಟೂರ್ನಿ ಮಾಡಿ ಮಡಿದ ಗೆಳೆಯನ ಕುಟುಂಬಕ್ಕೆ ಹಸು ಕೊಡಿಸಿದ ಗ್ರಾಮಸ್ಥರು

ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದ ಸುಬ್ರಮಣಿ ಅಚಾನಕ್ಕಾಗಿ ಸಾವಿಗೀಡಾಗಿದ್ದು, ಸ್ನೇಹಿತನ ಪತ್ನಿಯ ಜೀವನಕ್ಕೆ ಏನಾದರೊಂದು ದಾರಿ ಮಾಡಿಕೊಡುವ ಉದ್ದೇಶದಿಂದ ಕ್ರಿಕೆಟ್ ಟೂರ್ನಿ ಆಯೋಜಿಸಾಗಿತ್ತು.

ಹಸುಗಳ ಹಸ್ತಾಂತರ

ಹಸುಗಳ ಹಸ್ತಾಂತರ

  • Share this:
ಇವತ್ತಿನ ದಿನಗಳಲ್ಲಿ ಕ್ರಿಕೆಟ್ ಟೂರ್ನಮೆಂಟ್ (Cricket Tournament) ಮ್ಯಾಚ್‍ಗಳೆಂದರೆ, ಅವು ಪ್ರಶಸ್ತಿ, ಹಣ, ಮನರಂಜನೆ (Entertainment) ಗೆ ಮಾತ್ರ ಸೀಮಿತ ಎನ್ನುವುದು ಹಲವರ ಅಭಿಪ್ರಾಯವಾಗಿದೆ,  ಆದರೆ ಕೋಲಾರದಲ್ಲಿ ಕಳೆದ ತಿಂಗಳ ಜನವರಿ 22 ರಂದು, ಗ್ರಾಮವೊಂದರಲ್ಲಿ ನಡೆದ ಟಿ-20 ಕ್ರಿಕೆಟ್ ಟೂರ್ನಮೆಂಟ್, ಸಮಾಜಮುಖಿ ಕಾರ್ಯದ ಮೂಲಕ ಮೆಚ್ಚುಗೆ ಗಳಿಸಿದೆ,  ಪತಿಯನ್ನ ಕಳೆದುಕೊಂಡಿರುವ ಬಡ ಮಹಿಳೆಗೆ (poor woman) ಎರಡು ಹಸುಗಳನ್ನ (cows) ಸಹಾಯವಾಗಿ ನೀಡುವ ಮೂಲಕ, ಈ ಗ್ರಾಮಸ್ಥರು ಎಲ್ಲರಿಗೂ ಮಾದರಿಯಾಗಿದ್ದಾರೆ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದ ವಾಸಿಯಾಗಿರೊ ಸುಬ್ರಮಣಿ,  ಇದೇ ತಿಂಗಳ ಜನವರಿ 1 ರಂದು, ತಮ್ಮ ಮನೆ ಎದುರಿನ ಹಳೇ ಕಟ್ಟಡದ ಮೇಲ್ಛಾವಣಿ ಕುಸಿದು ಅಕಾಲಿಕವಾಗಿ ಸಾವನ್ನಪ್ಪಿದ್ದರು.

ಮೃತ ಸುಬ್ರಮಣಿ ಅವರಿಗೆ ಪತ್ನಿ ಚಂದ್ರಿಕಾ ಹಾಗು ಇಬ್ಬರು ಮಕ್ಕಳಿದ್ದು ಕುಟುಂಬದ ಆಧಾರ ಸ್ಥಂಭ ಪತಿಯನ್ನ ಕಳೆದುಕೊಂಡ ಪತ್ನಿ ಚಂದ್ರಿಕಾ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನ ಗಮನಿಸಿದ  ಮೃತ ಸುಬ್ರಮಣಿ ಸ್ನೇಹಿತರು ಹಾಗು ಗ್ರಾಮಸ್ಥರು ಏನಾದರೂ ಮಾಡಿ ಸ್ನೇಹಿತನ ಕುಟುಂಬಕ್ಕೆ ಆಸರೆಯಾಗುವ ಯೋಜನೆ ಹಾಕಿಕೊಂಡಿದ್ದರು

ಕ್ರಿಕೆಟ್ ಟೂರ್ನಿ ಮೂಲಕ ನೆರವಿನ ಹಸ್ತ

ಸುಬ್ರಮಣಿ ಅವರು  ಬದುಕಿದ್ದಾಗಲೇ ಗ್ರಾಮದಲ್ಲಿ "ಕಪ್ಪಲಮಡಗು ಪ್ರೀಮಿಯರ್ ಲೀಗ್" ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿತ್ತು,  ಆದರೆ ಸುಬ್ರಮಣಿ ಅವರ ಹಠಾತ್ ಸಾವಿನಿಂದ ಟೂರ್ನಿ ನಡೆಸದಂತೆ ತೀರ್ಮಾನಿಸಲಾಗಿತ್ತು, ಆದರೆ ಸ್ನೇಹಿತನ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು, ಗ್ರಾಮದ ಹೆಸರಲ್ಲೆ ಸುಬ್ರಮಣಿ ಅವರ ಸ್ಮರಣಾರ್ಥ, ಕಳೆದ ಜನವರಿ  ತಿಂಗಳ 22 ಹಾಗು 23 ರಂದು ಕ್ರಿಕೆಟ್ ಟೂರ್ನಮೆಂಟ್ ನ್ನು ಗ್ರಾಮಸ್ಥರೇ ಮುಂದೆ ನಿಂತು ನಡೆಸಿದ್ದಾರೆ, ಇದಕ್ಕೆ ಕಪ್ಪಲಮಡಗು ಗ್ರಾಮದ ಸುತ್ತಮುತ್ತಲಿನ ಪ್ರದೇಶದಿಂದ 80 ಕ್ಕು ಹೆಚ್ಚು ಯುವಕರು ಭಾಗಿಯಾಗಿದ್ದು, ನಾಲ್ಕು ತಂಡಗಳಂತೆ ಬೇರ್ಪಟ್ಟು ಕ್ರಿಕೆಟ್ ಮ್ಯಾಚ್ ಆಡಿದ್ದಾರೆ.

ಇದನ್ನೂ ಓದಿ: ಆಹಾರ ಕೊಟ್ಟ ಸಾಧ್ವಿಯನ್ನು ನೆನೆಯುತ್ತಾ 5 ಕಿ.ಮೀ ಅಂತಿಮ ಯಾತ್ರೆಯಲ್ಲಿ ನಡೆದ ನಾಯಿ..!

ನಾಲ್ಕು ಟೀಂಗಳ ಪ್ರತಿಯೊಬ್ಬ ಸದಸ್ಯರಿಗೂ 200 ರೂಪಾಯಿ ಯಂತೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು, ಹಿರಿಯರು, ಟೂರ್ನಮೆಂಟ್‍ಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದಾರೆ. ಮೊದಲೆ ನಿರ್ಧರಿಸಿದಂತೆ ಟೂರ್ನಮೆಂಟ್‍ ನಲ್ಲಿನ  ಉಳಿದ ಹಣ ಹಾಗು ಗ್ರಾಮಸ್ಥರು ನೀಡಿದ ಸಹಾಯದಿಂದ ಒಂದು ಹಸುವನ್ನ, ಸುಬ್ರಮಣಿ ಪತ್ನಿ ಚಂದ್ರಿಕಾರಿಗೆ ಸಹಾಯವಾಗಿ ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಮ್ಯಾಚ್ ಮುಗಿಯುವ ಮುನ್ನವೇ ಒಂದು ಸೀಮೆ ಹಸುವನ್ನ ಖರೀದಿಸಿದ್ದರು ಗ್ರಾಮಸ್ಥರು.

ಮತ್ತೊಂದು ಹಸು ನೀಡಿ ಮಾನವೀಯತೆ ಮೆರೆದ ಮುಖಂಡ

ಗ್ರಾ‌ಮಸ್ಥರ ಈ ಸಹಾಯ ಹಸ್ತದ ಮಾಹಿತಿ ಪಡೆದುಕೊಂಡ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ಗ್ರಾಮಸ್ಥರು ನೀಡುವ ಒಂದು ಹಸುವಿನ ಜೊತೆಗೆ,  ಮತ್ತೊಂದು ಹಸುವನ್ನ ತಮ್ಮ ಸ್ವಂತ ಹಣದಿಂದ ಖರೀದಿಸಿ ನೀಡಿದ್ದು, ಕ್ರಿಕೆಟ್ ಟೂರ್ನಮೆಂಟ್ ನಡೆಯುವ ಸ್ಥಳಕ್ಕೆ ಆಗಮಿಸಿ ಎರಡು ಹಸುಗಳನ್ನ, ಸುಬ್ರಮಣಿ ಪತ್ನಿ ಚಂದ್ರಿಕಾರಿಗೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.

ಗ್ರಾಮಸ್ತರ ಸಹಕಾರಕ್ಕೆ ಭಾವುಕರಾದ ಪತ್ನಿ

ಕ್ರಿಕೆಟ್  ಟೂರ್ನಮೆಂಟ್ ಆಯೋಜನೆ ಮಾಡಿರುವ ಬಗ್ಗೆ  ಸುಬ್ರಮಣಿ ಸ್ನೇಹಿತರು ಮಾತನಾಡಿದ್ದು,  ಗ್ರಾಮೀಣ ಭಾಗದಲ್ಲಿ ಹಸುವಿದ್ದರೆ ಜೀವನ ನಡೆಸಲು ಸಹಕಾರಿಯಾಗಲಿದೆ, ಮೊದಲಿಗೆ  ಹಸು ನೀಡಲು ಎಲ್ಲರೂ ಒಮ್ಮತ ಸೂಚಿಸಿದ್ದು, ಅದರಂತೆ ಈ ಕಾರ್ಯಕ್ಕೆ ಗ್ರಾಮಸ್ಥರು, ಸ್ನೇಹಿತರು, ಗ್ರಾಮ ಪಂಚಾಯಿತಿ ಸದಸ್ಯರು ಎಲ್ಲರೂ ಕೈ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಮ್ಮಗಳನ್ನು ಮರಳಿ ಮನೆಗೆ ಕರೆದೊಯ್ಯಲು ಹರಸಾಹಸ ಪಡುತ್ತಿರುವ ವೃದ್ಧ ದಂಪತಿ, ಕಾರವಾರದಲ್ಲೊಂದು ಕರುಣಾಜನಕ ಕಥೆ !

ಈ ಕುರಿತು ಮಾತನಾಡಿದ ಮೃತ ಸುಬ್ರಮಣಿ ಪತ್ನಿ  ಚಂದ್ರಿಕಾ ಅವರು, ನಮಗೆ ಮಾಹಿತಿ ನೀಡದೆ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಹಸುಗಳನ್ನ  ಖರೀದಿಸಿ ನಮಗೆ  ಸಹಾಯವಾಗಿ ನೀಡಿದ್ದಾರೆ. ಇದು ಖಂಡಿತ ನಮಗೆ ಆಸರೆಯಾಗಲಿದೆ. ಆದರೆ ಇಬ್ಬರು ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸಲು ಬಯಕೆ ಇಟ್ಟಿರುವೆ, ಹಾಗಾಗಿ ಕೆಲಸಕ್ಕೆ ತೆರಳುವುದು ಅನಿವಾರ್ಯ ಎಂದು ಚಂದ್ರಿಕಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Published by:Soumya KN
First published: