ಬಾಗಲಕೋಟೆ (ಡಿಸೆಂಬರ್ 09): ಜಿಲ್ಲೆಯಲ್ಲಿ ಹಳ್ಳಿ ರಾಜಕಾರಣ ಗರಿಗೆದರಿದೆ. ಪಕ್ಷದ ಚಿಹ್ನೆ ಇರದಿದ್ದರೂ ಪಕ್ಷ, ಜಾತಿ ರಾಜಕಾರಣ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್. ಲೋಕಲ್ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳು ತಮ್ಮ ಬಂಧು ಬಳಗದವರನ್ನು ಮಾತನಾಡಿಸುವುದು, ಮನೆ ಮನೆಗೆ ಹೋಗುವುದು. ಅಲ್ಲಲ್ಲಿ ಸಭೆ ಸೇರಿ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ವರ್ಷವೀಡಿ ಮಾತನಾಡದವರನ್ನೂ ಈಗ ಚುನಾವಣೆಗೆ ಸ್ಪರ್ಧಿಸಿದವರು ಅತೀ ಆತ್ಮೀಯತೆ, ಅಕ್ಕರೆಯಿಂದ ಮಾತನಾಡಿಸುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಗೋವಿಂದ ಕಾರಜೋಳರಿಗೆ ಲೋಕಲ್ ಚುನಾವಣೆ ಪ್ರತಿಷ್ಠೆಯಾಗಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಈಗಾಗಲೇ 193 ಗ್ರಾಮ ಪಂಚಾಯಿತಿ ಚುನಾವಣೆಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದರು. ಆದರೆ ಹುನಗುಂದ ತಾಲೂಕಿನ ಹಾವರಗಿ, ಬಿಂಜವಾಡಗಿ ಗ್ರಾಮ ಪಂಚಾಯಿತಿ ಚುನಾವಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶಿಸಿದೆ. ಮನ್ಮಥನಾಳ ಗ್ರಾಮ ಹಾವರಗಿ ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸಿ ಬಿಂಜವಾಡಗಿ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ತಡೆಯಾಜ್ಞೆ ಬಿದ್ದಿದೆ. ಹೀಗಾಗಿ ಜಿಲ್ಲೆಯಲ್ಲಿ 191 ಗ್ರಾಮ ಪಂಚಾಯಿತಿ ಗಳಿಗೆ ಚುನಾವಣೆ ನಡೆಯಲಿದ್ದು, ಮೊದಲನೆ ಹಂತ ಡಿಸೆಂಬರ್ 22ರಂದು ನಡೆಯುವ ಮತದಾನಕ್ಕೆ ಜಮಖಂಡಿ ಉಪವಿಭಾಗದ ಮುಧೋಳ, ಜಮಖಂಡಿ,ಬೀಳಗಿ ರಬಕವಿ-ಬನಹಟ್ಟಿ ತಾಲೂಕಿನ 89 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಲಿದೆ.
ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನಾಂಕ, ನಾಮಪತ್ರ ಪರಿಶೀಲನೆ ಡಿ,12, ನಾಮಪತ್ರ ಹಿಂಪಡೆಯಲು ಡಿ,14 ಕೊನೆಯ ದಿನಾಂಕವಾಗಿದ್ದು, ಡಿ .22ರಂದು ಬೆಳಿಗ್ಗೆ 7ರಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಎರಡನೆ ಹಂತದಲ್ಲಿ ಡಿಸೆಂಬರ್ 27ರಂದು ಬಾಗಲಕೋಟೆ ಉಪವಿಭಾಗದ ಬಾದಾಮಿ, ಬಾಗಲಕೋಟೆ, ಹುನಗುಂದ, ಇಳಕಲ್, ಗುಳೇದಗುಡ್ಡ ತಾಲೂಕಿನ 102 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ಪರಿಶೀಲನೆ ಡಿ.17ನಾಮ ಪತ್ರ ಹಿಂಪಡೆಯಲು ಡಿ.19ಕೊನೆ ದಿನವಾಗಿದ್ದು, ಡಿ,27ರಂದು ಬೆಳಿಗ್ಗೆ,7ರಿಂದ ಸಾಯಂಕಾಲ 5ಗಂಟೆಯವರೆಗೆ ಮತದಾನ ನಡೆದು, ಮೊದಲನೆ, ಎರಡನೆ ಹಂತದ ಚುನಾವಣೆಯ ಮತ ಎಣಿಕೆ ಡಿಸೆಂಬರ್ 30ರಂದು ನಡೆಯಲಿದೆ.
ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕಾರ ಎಚ್ಚರಿಕೆ!
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದಾರೆ. ಇನ್ನು ಬೀಳಗಿ ತಾಲೂಕಿನ ರೊಳ್ಳಿ ಗ್ರಾಮ ಗ್ರಾಮ ಪಂಚಾಯಿತಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಬಾಡಗಂಡಿ ಗ್ರಾಮ ಪಂಚಾಯಿತಿಗೆ ರೊಳ್ಳಿ ಸೇರಿಸಿದ್ದು, 1050 ಮತದಾರರಿಗೆ 11 ಸದಸ್ಯರಿದ್ದಾರೆ. ರೊಳ್ಳಿ ಗ್ರಾಮದಲ್ಲಿ 3ಸಾವಿರ ಮತದಾರಿದ್ದು, ಕೇವಲ 7 ಸದಸ್ಯ ಸ್ಥಾನ ಕೊಟ್ಟಿದ್ದಾರೆ. ಈ ತಾರತಮ್ಯ, ಹಾಗೂ ಗ್ರಾಮ ಪಂಚಾಯಿತಿ ರೊಳ್ಳಿಯಾಗಲು ಅಧಿಕಾರಿಗಳ, ಪಕ್ಷದ ರಾಜಕೀಯ ಬೇಜವಾಬ್ದಾರಿ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕೊರೋನಾ ಸಂಕಷ್ಟದಲ್ಲೂ ಆಸರೆಯಾದ ತಾಳಿ ಕಡ್ಡಿ ಪೊರಕೆ ತಯಾರಿಕೆ
ಗ್ರಾಮದ ಮುಖಂಡ ಶಿವಾನಂದ ನಿಂಗನೂರು ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ಹೋಗಿ, ಸಚಿವರು, ಶಾಸಕರನ್ನು ಭೇಟಿಯಾಗಿದ್ದು, ರೊಳ್ಳಿ ಗ್ರಾಮ ಪಂಚಾಯಿತಿ ಆಗಲೇಬೇಕು ಎನ್ನುತ್ತಾರೆ ಮುಖಂಡ ಶಿವಾನಂದ ನಿಂಗನೂರು. ಇನ್ನು ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮ ಹಿಂದೆ ಗ್ರಾಮ ಪಂಚಾಯಿತಿ ಎಂದು ಘೋಷಣೆ ಆಗಿತ್ತು.ಆ ಬಳಿಕ ರಾಜಕೀಯ ಕಾರಣಕ್ಕೆ ಕೆಂದೂರು ಗ್ರಾಮ ಪಂಚಾಯಿತಿಯಾಗಿ ಘೋಷಣೆಯಾಗಿದ್ದಕ್ಕೆ ಕಳೆದ ಚುನಾವಣೆಯನ್ನು ಕುಟಕನಕೇರಿ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಈ ಬಾರಿಯೂ ಚುನಾವಣೆ ಬಹಿಷ್ಕಾರ ಮಾಡಿದ್ದೇವೆ ಎನ್ನುತ್ತಾರೆ ಗ್ರಾಮದ ಮುಖಂಡ ವೀರುಪಾಕ್ಷಪ್ಪ ಹುಲ್ಲೂರು.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಹಳ್ಳಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಜಿದ್ದಾಜಿದ್ದಿಗೆ ನಾಮಪತ್ರ ಸಲ್ಲಿಕೆ ಜೋರಾಗಿದ್ದರೆ ಮತ್ತೊಂದೆಡೆ ಗ್ರಾಮದ ಅಭಿವೃದ್ಧಿ ಕುಂಠಿತವಾಗುತ್ತಿದೆ, ಸ್ವತಂತ್ರ ಗ್ರಾಮ ಪಂಚಾಯಿತಿ ಬೇಡಿಕೆಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ್ದು, ಸರ್ಕಾರ ಜಿಲ್ಲಾಡಳಿತ ಚುನಾವಣೆ ಬಹಿಷ್ಕಾರ ಹಾಕಿದ ಗ್ರಾಮಸ್ಥರ ಮನವೊಲಿಕೆ ಇದೀಗ ಸವಾಲಾಗಿದೆ.
ವರದಿ: ರಾಚಪ್ಪ ಬನ್ನಿದಿನ್ನಿ