ವಿಜಯಪುರ (ನ. 14): ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಸವ ನಾಡಿನ ವಿಜ್ಞಾನಿಗೆ ಅಮೇರಿಕದಿಂದ ಗೌರವ ಸಿಕ್ಕಿದೆ. ವಿಜಯಪುರ ಜಿಲ್ಲೆಯ ಈ ವಿಜ್ಞಾನಿ ಈವರೆಗೆ ಮಾಡಿದ ಸಾಧನೆಯ ಪ್ರತೀಕವಾಗಿ ಈ ಗೌರವ ಪ್ರಾಪ್ತವಾಗಿದ್ದು ಹೆಮ್ಮೆಯ ವಿಷಯವಾಗಿದೆ. ಜಗತ್ತಿನ ಒಂದು ಲಕ್ಷ ವಿಜ್ಞಾನಿಗಳ ಪೈಕಿ ವಿಜಯಪುರ ಮೂಲದ ಡಾ. ಎಸ್. ಕೆ. ಕುಲಕರ್ಣಿ ಅವರಿಗೆ 132ನೇ ಸ್ಥಾನ ಸಿಕ್ಕಿದ್ದು, ಭಾರತೀಯರ ಪೈಕಿ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ. ಔಷಧ ಶಾಸ್ತ್ರ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ವಿಜಯಪುರ ಮೂಲದ ಡಾ. ಶ್ರೀನಿವಾಸ ಕುಲಕರ್ಣಿಯವರಿಗೆ ಜಗತ್ತಿನ ಶ್ರೇಷ್ಠ ವಿಜ್ಞಾನಿ ಎಂಬ ಗೌರವ ದೊರೆತಿದೆ.
ಅಮೇರಿಕೆಯ ಸ್ಟ್ಯಾನ್‍ಪೊರ್ಡ್ ವಿಶ್ವವಿದ್ಯಾಲಯ ಪ್ರತಿ ವರ್ಷವೂ ಮಾದರಿ ಹಾಗೂ ಸೈಟೇಶನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸುತ್ತದೆ. ಅಲ್ಲದೇ, ಸಾಧನೆಯನ್ನು ಪರಿಗಣಿಸಿ ಗೌರವಿಸುತ್ತದೆ. ಡಾ. ಶ್ರೀನಿವಾಸ ಕುಲಕರ್ಣಿ ಅವರು ಔಷಧೀಯ ಶಾಸ್ತ್ರದ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ಇನ್ನೂ ಹೆಚ್ಚಿನ ನೆರೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ: ಸಿಎಂ ಯಡಿಯೂರಪ್ಪ
ಡಾ. ಶ್ರೀನಿವಾಸ ಕೆ. ಕುಲಕರ್ಣಿ ಅವರು 505 ಸಂಶೋಧನಾ ಪ್ರಕಟಣೆಗಳು, 13 ಸಾವಿರಕ್ಕೂ ಹೆಚ್ಚು ಉಲ್ಲೇಖಗಳು ಮತ್ತು 61ಕ್ಕೂ ಹೆಚ್ಚು ಫಾರ್ಮುಲಾಗಳನ್ನು ಔಷಧೀಯ ಶಾಸ್ತ್ರದಲ್ಲಿ ರಚಿಸಿದ್ದಾರೆ. ಜಗತ್ತಿನ ಶ್ರೇಷ್ಠ ಒಂದು ಲಕ್ಷ ವಿಜ್ಞಾನಿಗಳಲ್ಲಿ 132ನೇ ಕ್ರಮಾಂಕವನ್ನು ಇವರು ಗಳಿಸಿದ್ದಾರೆ. ಅಲ್ಲದೇ, ಭಾರತದಲ್ಲಿ ಈ ವರ್ಷ ಇಷ್ಟೋಂದು ಅಂಕ ಗಳಿಸಿದ ಮೊದಲ ವಿಜ್ಞಾನಿಯಾಗಿದ್ದಾರೆ.
ಫಾರ್ಮಕಾಲಜಿ ಸಂಶೋಧನೆಯಲ್ಲಿ ಇವರ ಸಾಧನೆ ಅಪಾರವಾಗಿದೆ. ಅಷ್ಟೇ ಅಲ್ಲ, ಡಾ. ಶ್ರೀನಿವಾಸ ಕುಲಕರ್ಣಿ ಜಾಗತಿಕ ಮಾನ್ಯತೆಯುಳ್ಳ ವಿಜ್ಞಾನಿಗಳಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ 30ಕ್ಕೂ ಹೆಚ್ಚು ಸಂಶೋಧಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಐದು ಸಂಶೋಧನೆಗಳಿಗೆ ಪೇಟೆಂಟ್ ಲಭಿಸಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ದೀಪಾವಳಿ ಸಂಭ್ರಮ; ಕೋವಿಡ್ ಭಯವಿಲ್ಲದೆ ಮಾರುಕಟ್ಟೆಗಳಲ್ಲಿ ಜನಜಂಗುಳಿ; ಹೂ ದುಬಾರಿ
ಈ ಹಿಂದೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ. ಡಾ. ಶ್ರೀನಿವಾಸ ಕುಲಕರ್ಣಿ ಅವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದವರು. ಸದ್ಯ ಬೆಳಗಾವಿಯಲ್ಲಿ ನೆಲೆಸಿರುವ ಇವರು ವಿಜಯಪುರದ ಪ್ರತಿಷ್ಠಿತ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಹಾಗೂ ಬಿಎಲ್ಡಿಇ ಫಾರ್ಮಸಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ.
ಡಾ. ಶ್ರೀನಿವಾಸ ಕುಲಕರ್ಣಿ ಅವರ ಸಾಧನೆಗೆ ಮಾಜಿ ಸಚಿವ ಮತ್ತು ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಹಾಗೂ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ