ವಿಜಯಪುರ ಜಿ.ಪಂ. ಅಧ್ಯಕ್ಷರ ಚುನಾವಣೆ: ಬಿಜೆಪಿ ಆಯ್ತು, ಈಗ ಕಾಂಗ್ರೆಸ್​ನಿಂದ ಮೂವರು ಸದಸ್ಯರ ಉಚ್ಛಾಟನೆ- ಪ್ರತಿಭಟನೆ

ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಮತ್ತು ಕಾಂಗ್ರೆಸ್ನ ಮೂವರು ವಿಪ್ ಉಲ್ಲಂಘಿಸಿ ವೋಟ್ ಹಾಕಿದ್ದರು. ಈಗ ಎರಡೂ ಪಕ್ಷಗಳು ಉಚ್ಛಾಟನೆಯ ಕ್ರಮ ಕೈಗೊಂಡಿವೆ.

news18-kannada
Updated:July 4, 2020, 3:08 PM IST
ವಿಜಯಪುರ ಜಿ.ಪಂ. ಅಧ್ಯಕ್ಷರ ಚುನಾವಣೆ: ಬಿಜೆಪಿ ಆಯ್ತು, ಈಗ ಕಾಂಗ್ರೆಸ್​ನಿಂದ ಮೂವರು ಸದಸ್ಯರ ಉಚ್ಛಾಟನೆ- ಪ್ರತಿಭಟನೆ
ವಿಜಯಪುರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರ ಪ್ರತಿಭಟನೆ
  • Share this:
ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಈಗ ಉಚ್ಛಾಟನೆ, ಹೋರಾಟ ಪರ್ವ ಆರಂಭವಾಗಿದೆ. ವಿಪ್ ಉಲ್ಲಂಘಿಸಿದವರನ್ನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಉಚ್ಛಾಟನೆ ಮಾಡಿ ಪರಸ್ಪರ ಎಚ್ಚರಿಕೆಯ ಸಂದೇಶಗಳನ್ನ ರವಾನಿಸಿವೆ.

ಈ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮತ್ತು ಕಾಂಗ್ರೆಸ್ಸಿನ ಮೂರು ಜನ ಸದಸ್ಯರು ವಿಪ್ ಉಲ್ಲಂಘಿಸಿ ಮತದಾನ ಮಾಡಿದ್ದರು. ಜಿ, ಪಂ. ನಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿದ್ದರೂ ಸತತ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ ನಾಲ್ಕು ಜನ ಸದಸ್ಯರನ್ನು ಉಚ್ಛಾಟಿಸಿ ಪ್ರತಿಭಟನೆ ನಡೆಸಿತ್ತು. ಅದೇ ರೀತಿ ಈ ಚುನಾವಣೆಯಲ್ಲಿ ಕಾಂಗ್ರೆಸ್​ನಲ್ಲಿ ಉಚ್ಛಾಟನೆ ಕಾರ್ಯವಾಗಿದೆ.

ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷರಾದ ಉಮೇಶ ಕೋಳಕೂರ (ಬಬಲೇಶ್ವರ), ಶಿವಯೋಗೆಪ್ಪ ನೇದಲಗಿ(ಸಾಲೋಟಗಿ) ಮತ್ತು ಶಿವಾನಂದ ಸಾಹುಕಾರ ಭೈರಗೊಂಡ(ಹಲಸಂಗಿ) ಅವರನ್ನು ಈಗ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಎಚ್. ಆಲಗೂರ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ನಿನ್ನೆ ಪ್ರೊ. ರಾಜು ಎಚ್. ಆಲಗೂರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಪ್ ಉಲ್ಲಂಘಿಸಿದ ಮೂರು ಜನ ಕಾಂಗ್ರೆಸ್ ಸದಸ್ಯರ ವಿರುದ್ಧ ಪ್ರತಿಭಟನೆ ನಡೆಸಿದರು. ವಿಜಯಪುರ ನಗರದ ಅಂಬೇಡ್ಕರ್ ಚೌಕಿನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮೂರೂ ಜನ ಸದಸ್ಯರ ಭಾವಚಿತ್ರವಿರುವ ಫ್ಲೆಕ್ಸ್ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೂರು ತಿಂಗಳು ಹಗಲಿರುಳು ಶ್ರಮಿಸಿದ್ದ ಗ್ರಾಮಾಂತರ ಜಿಲ್ಲಾಧಿಕಾರಿಗೆ ಸೋಂಕು; 120 ಮಂದಿಗೂ ಪರೀಕ್ಷೆ

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ರಾಜು ಎಚ್. ಆಲಗೂರ, ಮುಂದಿನ ದಿನಗಳಲ್ಲಿ ಯಾರೂ ಪಕ್ಷದ್ರೋಹದ ಕೆಲಸ ಮಾಡಬಾರದು ಎಂಬ ಎಚ್ಚರಿಕೆ ನೀಡಲು ಈಗ ಮೂರು ಜನ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಿ ಈಗ ಪ್ರತಿಭಟನೆ ನಡೆಸಲಾಗಿದೆ. ಬಿಜೆಪಿ ಈಗ ಆಪರೇಶನ ಕಮಲ ಆರಂಭಿಸಿದೆ. ಈವರೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದೆ. ಈಗ ನಡೆದಿದ್ದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ. ಇದು ಬಿಜೆಪಿಯ ಅವನತಿಗೆ ಸಾಕ್ಷಿಯಾಗಿದೆ.  ಜನ ಇದನ್ನು ಗಮನಿಸುತ್ತಿದ್ದಾರೆ. ಇವರ ಅಧಿಕಾರದ ದಾಹಕ್ಕೆ ಮುಂಬರುವ ದಿನಗಳಲ್ಲಿ ಕಡಿವಾಣ ಬೀಳಲಿದೆ. ಕಾಂಗ್ರೆಸ್ ಮತ್ತೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಮಧ್ಯೆ ಪಕ್ಷದ್ರೋಹ ಮಾಡಿರುವ ಮೂರೂ ಜನ ಸದಸ್ಯರ ವಿರುದ್ಧ ಕಾನೂನು ಹೋರಾಟ ನಡೆಸುವ ಕುರಿತು ಕೆಪಿಸಿಸಿ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಇದನ್ನೂ ಓದಿ: ಒಂದೇ ತಿಂಗಳಲ್ಲಿ ವಿಜಯಪುರದ ಜಲನಗರ ಪೊಲೀಸ್ ಠಾಣೆ 2ನೇ ಬಾರಿ ಸೀಲ್​ಡೌನ್; ಇಬ್ಬರೂ ಪಿಎಸ್ಐ ಕ್ವಾರಂಟೈನ್

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಅಬ್ದುಲ್ ಹಮೀದ ಮುಶ್ರಿಫ್, ಕಾಂಗ್ರೆಸ್ ಯುವ ಘಟಕದ ಜಿಲ್ಲಾಧಕ್ಷ ಖಾದರ, ಕಾಂಗ್ರೆಸ್ ಮುಖಂಡರಾದ ಟಪಾಲ್ ಎಂಜಿನಿಯರ್, ಡಾ. ಗಂಗಾಧರ ಸಂಬಣ್ಣಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.ಮೊನ್ನೆ ಬಿಜೆಪಿ ಕೂಡ ವಿಪ್ ಉಲ್ಲಂಘಿಸಿದ ನಾಲ್ಕು ಜನ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಿತ್ತು. ಅಲ್ಲದೇ, ವಿಜಯಪುರ ನಗರ ಶಿವಾಜಿಚೌಕ್, ಸಿಂದಗಿ ಮತ್ತು ನಿಡಗುಂದಿಗಳಲ್ಲಿ ಪ್ರತಿಭಟನೆ ನಡೆಸಿತ್ತು. ಈಗ ಕಾಂಗ್ರೆಸ್ ಕೂಡ ತನ್ನ ಮೂರು ಜನ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ, ಪ್ರತಿಭಟನೆ ನಡೆಸಿದೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: July 4, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading