ವಿಜಯಪುರ ಜಿ. ಪಂ. ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಇಬ್ಬರು ಡಿಸಿಎಂ, ಐವರು ಶಾಸಕರ ಜೊತೆಗೂಡಿ ಬಿಜೆಪಿ ಕಾರ್ಯತಂತ್ರ

ಬಿಜೆಪಿ ನಾಯಕರು ನಿನ್ನೆಯಿಂದ ಬಾಗಲಕೋಟೆ ಜಿಲ್ಲೆಯ ರೆಸಾರ್ಟ್ ನಲ್ಲಿ ಹೆಣೆದಿರುವ ಕಾರ್ಯತಂತ್ರ ಯಶಸ್ವಿಯಾಗುವುದೋ ಅಥವಾ ಸುಮಾರು 15 ದಿನಗಳ ಮುಂಚೆಯೇ ತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರ ತಂತ್ರ ಫಲಿಸುವುದೋ ಎಂಬುದು ಕುತೂಹಲ ಕೆರಳಿಸಿದೆ. 

news18-kannada
Updated:June 30, 2020, 1:39 PM IST
ವಿಜಯಪುರ ಜಿ. ಪಂ. ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಇಬ್ಬರು ಡಿಸಿಎಂ, ಐವರು ಶಾಸಕರ ಜೊತೆಗೂಡಿ ಬಿಜೆಪಿ ಕಾರ್ಯತಂತ್ರ
ವಿಜಯಪುರ ಜಿಲ್ಲಾ ಪಂಚಾಯತ್ ಕಾರ್ಯಾಲಯ
  • Share this:
ವಿಜಯಪುರ, (ಜೂ. 30): ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಭಾರಿ ಹಗ್ಗ ಜಗ್ಗಾಟ ನಡೆಯುತ್ತಿದೆ.

ಬಿಜೆಪಿಯಿಂದ ಹತ್ತಳ್ಳಿ ಸದಸ್ಯ ಭೀಮಾಶಂಕರ ಬಿರಾದಾರ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ಸಿನಿಂದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರ ಪರಮಾಪ್ತ ಸೋಮನಾಥ ಕಳ್ಳಿಮನಿ ಅವರ ಪತ್ನಿ ಸುಜಾತಾ ಸೋಮನಾಥ ಕಳ್ಳಿಮನಿ ಅಭ್ಯರ್ಥಿಯಾಗಿದ್ದಾರೆ. ಒಟ್ಟು 42 ಜನ ಸದಸ್ಯರಿರುವ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯ 20, ಕಾಂಗ್ರೆಸ್ಸಿನ 18, ಜೆಡಿಎಸ್ ನ 3 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ.  ಕಾಂಗ್ರೆಸ್ ಸದಸ್ಯ ಶಿವಯೋಗೆಪ್ಪ ನೇದಲಗಿ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಅತೀ ಹೆಚ್ಚು ಸ್ಥಾನ ಹೊಂದಿದ್ದರೂ ಬಿಜೆಪಿ ಕಳೆದ ಎರಡು ಅವಧಿಯಲ್ಲಿ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ ಈ ಹಿನ್ನೆಲೆಯಲ್ಲಿ ಈಗ ಬಾಕಿ ಇರುವ 7 ತಿಂಗಳ ಅವಧಿಗಾದರೂ ಅಧ್ಯಕ್ಷ ಸ್ಥಾನ ಗಿಟ್ಟಿಸಬೇಕು ಎಂದು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ.  ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿೆಜೆಪಿ ಅಧಿಕಾರದಲ್ಲಿರುವುದರಿಂದ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.

ಖುದ್ದು ಇಬ್ಬರು ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಖಾಡಕ್ಕಿಳಿದಿದ್ದು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ.  ಶಾಸಕರಾದ ಸೋಮನಗೌಡ ಬಿ. ಪಾಟೀಲ ಸಾಸನೂರ, ಎ. ಎಸ್. ಪಾಟೀಲ ನಡಹಳ್ಳಿ ಮತ್ತು ಬಸನಗೌಡ ರಾ. ಪಾಟೀಲ ಯತ್ನಾಳ ಕೂಡ ಈಗ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ.

ಪೊಲೀಸರಲ್ಲಿ ಹೆಚ್ಚಾದ ಕೊರೋನಾ ಸೋಂಕು; ಎಲ್ಲಾ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಜಿಪಿ ಸೂಚನೆ

ಈ ಮಧ್ಯೆ ಬಿಜೆಪಿಯ 20 ಜನ ಸದಸ್ಯರಲ್ಲಿ ನಾಲ್ಕು ಜನ ಕಾಂಗ್ರೆಸ್ ನಾಪತ್ತೆಯಾಗಿದ್ದು, ಕಾಂಗ್ರೆಸ್ ಪಾಳೆಯ ಸೇರಿದ್ದಾರೆ ಎನ್ನಲಾಗಿದೆ.  ಸಿಂದಗಿ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಮಹಾಂತಗೌಡ, ಬಿಂದುರಾಯ ಮತ್ತು ದೇವರ ಹಿಪ್ಪರಗಿ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಮಟ್ಟಿ, ಜ್ಯೋತಿ ಅಸ್ಕಿ ಕಾಂಗ್ರೆಸ್ ಪಾಳೆಯ ಸೇರಿದ್ದಾರೆ ಎನ್ನಲಾಗಿದೆ.  ಇದು ಬಿಜೆಪಿ ಪಾಳೆಯಕ್ಕೆ ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದೆ.  ಈ ನಾಲ್ಕೂ ಜನರನ್ನು ಕರೆತರುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಖುದ್ದಾಗಿ ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಮತ್ತು ದೇವರ ಹಿಪ್ಪರಗಿ ಹಾಲಿ ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ ಅವರಿಗೆ ಕರೆ ಮಾಡಿದ್ದಾರೆ.

ನೀವು ಟಿಕೆಟ್ ನೀಡಿ ಆರಿಸಿ ತಂದ ಸದಸ್ಯರನ್ನು ನಿಮ್ಮ ಕೈಯಲ್ಲಿ ಹಿಡಿದು ಇಟ್ಟುಕೊಳ್ಳದಿದ್ದರೆ ಹೇಗೆ? ನಿಮ್ಮ ರಾಜಕೀಯ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ ಎಂದು ಖಡಕ್ಕಾಗಿ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿವೆ.  ಇದು ರಮೇಶ ಭೂಸನೂರ ಮತ್ತು ಸೋಮನಗೌಡ ಬಿ. ಪಾಟೀಲ ಸಾಸನೂರ ಅವರನ್ನು ಕಂಗೆಡುವಂತೆ ಮಾಡಿದೆ.ಇತ್ತ ಯತ್ನಾಳ ಬೆಂಬಲಿಗರ ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ಸದಸ್ಯ ಮಂಗಾನವರ, ನಿನ್ನೆ ಬಿಜೆಪಿ ಪಾಳೆಯದಿಂದ ತಪ್ಪಿಸಿಕೊಂಡು ಬಂದು ಮತ್ತೆ ಕಾಂಗ್ರೆಸ್ ಪಾಳೆಯ ಸೇರಿಕೊಂಡಿದ್ದಾರೆ.  ಬಿಜೆಪಿಯಿಂದ ನಾಲ್ಕು ಜನ ಸದಸ್ಯರು ಕಾಂಗ್ರೆಸ್ ಪಾಳೆಯ ಸೇರಿರುವ ಮಧ್ಯೆಯೇ, ಕಾಂಗ್ರೆಸ್ಸಿನ ಮೂರು ಜನ ಸದಸ್ಯರು ಬಿಜೆಪಿ ಪಾಳೆಯಕ್ಕೆ ಸೇರಿದ್ದಾರೆ.

ಕಾಂಗ್ರೆಸ್ಸಿನ ಇಬ್ಬರು ಮಾಜಿ ಅಧ್ಯಕ್ಷರಾದ ಉಮೇಶ ಕೋಳಕೂರ ಮತ್ತು ಶಿವಯೋಗೆಪ್ಪ ನೇದಲಗಿ ಮತ್ತು ಸದಸ್ಯ ಭೈರಗೊಂಡ ಬಿಜೆಪಿ ಗುಂಪು ಸೇರಿದ್ದಾರೆ.  ಉಮೇಶ ಕೋಳಕೂರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹರಡಿದ್ದು, ಈ ಕುರಿತ ರಾಜೀನಾಮೆ ಪತ್ರ ಹರಿದಾಡುತ್ತಿದೆ.

ಬಿಜೆಪಿ ಅಭ್ಯರ್ಥಿ ಭೀಮಾಶಂಕರ್ ಬಿರಾದಾರ


ಜೆಡಿಎಸ್ ನ ಮೂರು ಜನ ಸದಸ್ಯರಲ್ಲಿ ಒಬ್ಬರು ಬಿಜೆಪಿ ಬೆಂಬಲಿಸುವ ಸಾದ್ಯತೆಗಳಿದ್ದು, ಇನ್ನಿಬ್ಬರು ಕಾಂಗ್ರೆಸ್ ಪಾಳೆಯಕ್ಕೆ ಹೋಗುವ ನಿರೀಕ್ಷೆಗಳಿವೆ.  ಇನ್ನು ಪಕ್ಷೇತರ ಸದಸ್ಯ ಗುರುರಾಜ ಪಾಟೀಲ ವಿಜಯಪುರ ನಗರ ಬಿಜೆಪಿ ಶಾಸಕ ಯತ್ನಾಳ ಆಪ್ತರಾಗಿದ್ದಾರೆ.  ಅವರು ಗುರುರಾಜ ಪಾಟೀಲ ನಡೆ ಕುತೂಹಲ ಕೆರಳಿಸಿದೆ.

ಇತ್ತ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ನಾನಾ ಪಟ್ಟುಗಳನ್ನು ಹೆಣೆದಿದೆ.  ಮಾಜಿ ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ ಮತ್ತು ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಈಗ ಒಗ್ಗಟ್ಟಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಸೋಮನಾಥ ಕಳ್ಳಿಮನಿ ಪರ ಭರ್ಜರಿ ಕಾರ್ಯತಂತ್ರ ರೂಪಿಸಿದ್ದಾರೆ.  ಸದ್ಯಕ್ಕೆ ಬಿಜೆಪಿಯಲ್ಲಿರುವ ಸುಮಾರು ಇನ್ನಿಬ್ಬರು ಸದಸ್ಯರು ಕೊನೆ ಘಳಿಗೆಯಲ್ಲಿ ತಮ್ಮ ಪಾಳೆಯಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.

ಬಿಜೆಪಿ ನಾಯಕರು ನಿನ್ನೆಯಿಂದ ಬಾಗಲಕೋಟೆ ಜಿಲ್ಲೆಯ ರೆಸಾರ್ಟ್ ನಲ್ಲಿ ಹೆಣೆದಿರುವ ಕಾರ್ಯತಂತ್ರ ಯಶಸ್ವಿಯಾಗುವುದೋ ಅಥವಾ ಸುಮಾರು 15 ದಿನಗಳ ಮುಂಚೆಯೇ ತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರ ತಂತ್ರ ಫಲಿಸುವುದೋ ಎಂಬುದು ಕುತೂಹಲ ಕೆರಳಿಸಿದೆ.

 

ಒಟ್ಟಾರೆ ಇಂದು ಮಧ್ಯಾಹ್ನ 4 ಗಂಟೆಗೆ ವಿಜಯಪುರ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading