ವಿಜಯಪುರ ಯುವಕನ ಸಾವು ಪ್ರಕರಣ; ಪೋಷಕರು, ಪೊಲೀಸರ ಹೇಳಿಕೆ ಬೇರೆ ಬೇರೆ, ಹಾಗಾದರೆ ಸತ್ಯಾಂಶವೇನು?

ಘಟನೆ ಸಂಬಂಧ ಪೋಷಕರು ನೀಡುತ್ತಿರುವ ಹೇಳಿಕೆ ಹಾಗೂ ಪೊಲೀಸರ ಹೇಳಿಕೆ ಸಾಕಷ್ಟು ವೈರುಧ್ಯದಿಂದ ಕೂಡಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಸಂದರ್ಭದಲ್ಲಿ ಯುವಕನೊಬ್ಬ ಸಾವಿಗೀಡಾದ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ವಾಸ್ತವಾಂಶ ಬಹಿರಂಗಪಡಿಸಬೇಕು.

news18-kannada
Updated:June 27, 2020, 6:34 PM IST
ವಿಜಯಪುರ ಯುವಕನ ಸಾವು ಪ್ರಕರಣ; ಪೋಷಕರು, ಪೊಲೀಸರ ಹೇಳಿಕೆ ಬೇರೆ ಬೇರೆ, ಹಾಗಾದರೆ ಸತ್ಯಾಂಶವೇನು?
ಮೃತ ಯುವಕ ಸಾಗರ ಛಲವಾದಿ.
  • Share this:
ವಿಜಯಪುರ (ಜೂ. 27); ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದ ಬಳಿ ತೆರಳಿದ್ದ ಯುವಕನೊಬ್ಬ ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಬಳಿ ನಡೆದಿದೆ. ಘಟನೆ ಬಗ್ಗೆ ಪೊಲೀಸರ ಹಲ್ಲೆಯಿಂದಲೇ ತಮ್ಮ ಮಗ ಸತ್ತಿದ್ದಾನೆ ಎಂದು ಪೋಷಕರು ಆರೋಪಿಸಿದರೆ, ಯುವಕನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಇದರಿಂದಲೇ ಈತ ಸತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಎಸ್​ಎಸ್​ಎಲ್​​ಸಿ ಪರೀಕ್ಷಾ ಕೇಂದ್ರದ ಬಳಿ ನಡೆದ ಈ ಘಟನೆ ತೀವ್ರ ಸಂಚಲನ ಸೃಷ್ಟಿಸಿದೆ. ಘಟನೆ ಬಳಿಕ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಹರಿಹಾಯ್ದಿವೆ. ಇದೀಗ ಈ ಪ್ರಕರಣ ಒಂದು ಹಂತಕ್ಕೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವಿಜಯಪುರ ಎಸ್ಪಿ ಅನುಪಮ ಅಗರವಾಲ ಅವರು ಸಂಪೂರ್ಣ ಮಾಹಿತಿ ಪಡೆದು, ಯುವಕನ ಪೋಷಕರಿಗೆ ಘಟನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಯುವಕನ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ಇಂದು ಬೆಳಗ್ಗೆ ಕಾನಾಳ ಗ್ರಾಮದ 19 ವರ್ಷದ ಯುವಕ ಸಾಗರ ಶಿವಪ್ಪ ಚಲವಾದಿ ತನ್ನ ತಂಗಿಯನ್ನು ಪರೀಕ್ಷೆಗೆ ಬಿಡಲು ಹೂವಿನ ಹಿಪ್ಪರಗಿಯ ವಿಶ್ವಚೇತನ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ. ಪರೀಕ್ಷಾಸಂದರ್ಭದಲ್ಲಿ ಈತ ನಕಲು ಪೂರೈಸಲು ಪರೀಕ್ಷಾ ಕೇಂದ್ರದ ಕಡೆಗೆ ಹೋಗಿದ್ದಾನೆ ಎಂದು ಭಾವಿಸಿದ ಪೊಲೀಸರು ಈತನ ಬೆನ್ನು ಹತ್ತಿದ್ದಾರೆ. ಆಗ ಯುವಕ ಬೈಕ್​ನಲ್ಲಿ ಹೋಗಿದ್ದಾನೆ. ಆದರೂ, ಬೆನ್ನು ಬಿಡದ ಪೊಲೀಸರು ಈತನಿಗೆ ಒಂದೆರಡು ಲಾಠಿ ಏಟು ಕೊಟ್ಟಿದ್ದಾರೆ. ಆಗ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಲ್ಲಿದ್ದವರು ಯುವಕನನ್ನು ಹೂವಿನ ಹಿಪ್ಪರಗಿ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.  ಅಲ್ಲಿ ವೈದ್ಯರು ಯುವಕನ ಆರೋಗ್ಯ ಗಂಭೀರವಾಗಿರುವುದರಿಂದ ಬಸವನ ಬಾಗೇವಾಡಿ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆ ಯುವಕನನ್ನು ತಾಲೂಕಾಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಆತ ಸಾವಿಗೀಡಾಗಿದ್ದಾನೆ. ಈತನ ಸಾವಿಗೆ ಪೊಲೀಸರೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಯುವಕನ ತಂದೆ ಶಿವಪ್ಪ ಚಲವಾದಿ ಪೊಲೀಸರು ಬೀಸಿದ ಲಾಠಿ ಏಟಿನಿಂದಲೇ ನಮ್ಮ ಮಗ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಯುವಕನ ಮಾವ ಮತ್ತು ಪ್ರತ್ಯಕ್ಷದರ್ಶಿ ಶಿವಪ್ಪ ತಾನು ಹಾಗೂ ಸಾಗರ ಇಬ್ಬರೂ ಬೈಕಿನಲ್ಲಿ ಪರೀಕ್ಷಾ ಕೇಂದ್ರದ ಎದುರು ಮಠದ ಬಳಿ ಹೊರಟಿದ್ದೆವು. ನಾವೇನೂ ಕಾಪಿ ಕೊಡಲು ಹೋಗಿರಲಿಲ್ಲ. ಈ ಸಂದರ್ಭದಲ್ಲಿ ಬೈಕ್ ತಡೆದ ಪೊಲೀಸ್ ಈ ಕಡೆ ಯಾಕೆ ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ಆಗ ನಾವು ಈ ಯುವಕನಿಗೆ ಹುಷಾರಿಲ್ಲ ಹೊರಟಿದ್ದೇವೆ ಅಂತ ಹೇಳಿದೆ. ಈ ಕಡೆ ಯಾಕೆ ಹೊರಟಿದ್ದೀರಿ ಎಂದು ಪೊಲೀಸ್ ಪ್ರಶ್ನಿಸಿ ಬೈಕಿನ ಹೆಡಲೈಟ್​ಗೆ ಪೊಲೀಸ್ ಕಾನ್​ಸ್ಟೇಬಲ್​ ಒಬ್ಬರು ಹೊಡೆದರು. ಆಯ್ತು ಸರಿ ಅಂತ ವಾಪಸ್ ಬೈಕ್ ಟರ್ನ್ ಮಾಡುವಾಗ ಪೊಲೀಸ್ ಆ ಯುವಕನ ಬೆನ್ನಿಗೆ ಲಾಠಿಯಿಂದ ಹೊಡೆದ. ಬೈಕಿನಿಂದ ಕೆಳಗೆ ಬಿದ್ದೆವು. ತಕ್ಷಣ ಯುವಕನನ್ನು ಮೊದಲು ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದೇವು. ಅಲ್ಲಿನ ವೈದ್ಯರು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಘಟನೆಯ ಮಾಹಿತಿ ತಿಳಿದ ವಿಜಯಪುರ ಎಸ್ಪಿ ಅನುಪಮ ಅಗರವಾಲ, ಬಸವನ ಬಾಗೇವಾಡಿಗೆ ದೌಡಾಯಿಸಿದ್ದಾರೆ. ಅಲ್ಲದೇ, ಯುವಕನ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ತಮ್ಮ ಮಗ ಕಾಪಿ ಕೊಡಲು ಹೋಗಿರಲಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಯುವಕನ ಕುಟುಂಬಸ್ಥರು ವಿಜಯಪುರ ಎಸ್ಪಿ ಅನುಪಮ ಅಗರವಾಲ ಅವರಿಗೆ ಆಗ್ರಹಿಸಿದ್ದಾರೆ. ಅಲ್ಲಿಂದ ಬಸವನ ಬಾಗೇವಾಡಿ ಪೊಲೀಸ್ ಠಾಣೆಗೆ ತೆರಳಿದ ಎಸ್ಪಿ ಅಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ಯುವಕನ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ. ಈ ಘಟನೆಯ ಬಗ್ಗೆ ಯುವಕನ ಪೋಷಕರು ಮಾಹಿತಿ ಪಡೆದಿದ್ದಾರೆ. ಯುವಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಇದೆ.  ಘಟನೆ ವೇಳೆ ಯುವಕ ಗಾಬರಿಯಾಗಿ ಬಿದ್ದಿದ್ದಾನೆ. ಮೇಲ್ನೋಟಕ್ಕೆ  ಹೃದಯ ಕಾಯಿಲೆಯಿಂದ ಸಾವನ್ನಪ್ಪಿದ್ಧ ಎಂದು ತಿಳಿದು ಬಂದರೂ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.ಇದನ್ನು ಓದಿ: ವಿಜಯಪುರ ಯುವಕನ ಸಾವು ಪ್ರಕರಣ: ಪೊಲೀಸರ ಹಲ್ಲೆಯಿಂದಲೇ ಸಾವನ್ನಪ್ಪಿದ ಸಾಗರ ಕಾಂಬಳೆ?

ಈ ಮಧ್ಯೆ ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾನಾ ಸಂಘಟನೆಗಳ ಕಾರ್ಯಕರ್ತರು ಬಸವನ ಬಾಗೇವಾಡಿ ಪಟ್ಟಣದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ್ದಾರೆ. ಘಟನೆ ಸಂಬಂಧ ಪೋಷಕರು ನೀಡುತ್ತಿರುವ ಹೇಳಿಕೆ ಹಾಗೂ ಪೊಲೀಸರ ಹೇಳಿಕೆ ಸಾಕಷ್ಟು ವೈರುಧ್ಯದಿಂದ ಕೂಡಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಸಂದರ್ಭದಲ್ಲಿ ಯುವಕನೊಬ್ಬ ಸಾವಿಗೀಡಾದ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ವಾಸ್ತವಾಂಶ ಬಹಿರಂಗಪಡಿಸಬೇಕು.
First published: June 27, 2020, 6:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading