ಮೂವರು ಉಗ್ರರನ್ನು ಕೊಂದು ವೀರಮರಣವಪ್ಪಿದ ವಿಜಯಪುರದ ಯೋಧ ಕಾಶಿರಾಯ

ಮೂರು ದಿನಗಳ ಹಿಂದೆ, ಜುಲೈ 2ರಂದು ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರದ ಯೋಧ ಕಾಶಿರಾಯ ಹುತಾತ್ಮರಾಗಿದ್ದರು. ಅವರ ಸ್ವಗ್ರಾಮದಲ್ಲಿ ನಿನ್ನೆ ನಡೆದ ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಮಂದಿ ಸೇರಿದ್ದರು.

ವಿಜಯಪುರದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ

ವಿಜಯಪುರದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ

 • Share this:
  ವಿಜಯಪುರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ (44 ವರ್ಷ) ಹುತಾತ್ಮರಾಗಿದ್ದಾರೆ. ತಾಯ್ನಾಡಿಗಾಗಿ ಹೋರಾಡಿದ ಕೆಚ್ಚೆದೆಯ ಗಂಡುಗಲಿಯ ಮೃತದೇಹ ನಿನ್ನೆ ಭಾನುವಾರ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಸ್ವಗ್ರಾಮ ಉಕ್ಕಲಿಗೆ ಆಗಮಿಸಿತ್ತು. ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ್ರು ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆ ಮಡಿದ್ರು. ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಬಳಿಕ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಜಾಗೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯರು, ಮಠಾಧೀಶರು ಸೇರಿದಂತೆ ಅಧಿಕಾರಿ ವರ್ಗ ಹಾಜರಿತ್ತು. ಉಕ್ಕಲಿ ಗ್ರಾಮದ ಕಾಶೀರಾಯ ಬೊಮ್ಮನಹಳ್ಳಿ (44) ಅವರಿಗಾಗಿ ಕರುನಾಡೇ ಕಂಬನಿ ಮಿಡಿದಿತ್ತು.

  ಮೂರು ದಿನಗಳ ಹಿಂದೆ, ಜುಲೈ 2ರಂದು ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಕಾಶಿರಾಯ ಹುತಾತ್ಮರಾಗಿದ್ದರು. ರಕ್ಷಕ್ ಕಾರ್ಯಾಚರಣೆಯ ವೇಳೆ ಉಗ್ರರ ಗುಂಡು ಎದೆಗೆ ತಾಗಿ ವೀರಮರಣ ಅಪ್ಪಿದ್ದರು. ಭಾನುವಾರ ಅವರ ಪಾರ್ಥಿವ ಶರೀರ ಸ್ವಗ್ರಾಮ ಉಕ್ಕಲಿಗೆ ಆಗಮಿಸಿದ ವೇಳೆ ಜೈಕಾರಗಳೊಂದಿಗೆ ಸಾವಿರಾರು ಭಕ್ತ ಸಮೂಹ ಸೇರಿ ಸ್ವಾಗತಿಸಿದರು. ಇದೇ ವೇಳೆ ಮನೆ ಮಗನನ್ನ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟರು. ಕಳೆದ ಗುರುವಾರವಷ್ಟೆ ಕರೆ ಮಾಡಿ ಮಾತಾಡಿದ್ದ ಯೋಧ, ಶುಕ್ರವಾರ ಹುತಾತ್ಮನಾಗಿರೊ ಸುದ್ದಿ ಬಂದಿತ್ತು. ಯೋಧ ಕಾಶೀರಾಯನಿಗೆ ಮದುವೆಯಾಗಿ 8 ವರ್ಷ ಕಳೆದಿದ್ದು, 7 ವರ್ಷದ ಪುತ್ರಿ, 5 ವರ್ಷ ಮಗನಿದ್ದಾನೆ. ಯೋಧನ ಪತ್ನಿ ಸಂಗೀತಾ, ತಾಯಿ ಶಾಂತಾಬಾಯಿ ಆಕ್ರಂದನ ಮುಗಿಲು ಮುಟ್ಟಿತ್ತು,ಕಣ್ಣೀರು ಹೊಳೆಯಂತೆ ಹರಿಯುತ್ತಿತ್ತು.

  ಅಪ್ಪಟ ದೇಶ ಪ್ರೇಮಿಯಾಗಿದ್ದ ಯೋಧ ಕಾಶೀರಾಯ ಸರ್ವಿಸ್ ನಲ್ಲಿ 15 ವರ್ಷ ಕಳೆದಿದ್ದರು. ಉಗ್ರರ ಸೆದೆಬಡೆಯುವ ಛಲ ಹೊಂದಿದ್ದ ಯೋಧ ಊರಿಗೆ ಬಂದಾಗಲು ಉಗ್ರರನ್ನ ಬಿಡೋಲ್ಲ ಹೊಡೆದು ಬಿಸಾಕ್ತೀನಿ ಎನ್ನುತ್ತಿದ್ದನಂತೆ. ನಾನು ಹಾಗೇ ಸಾಯೊಲ್ಲ, ಉಗ್ರರನ್ನ ಹೊಡೆದೇ ಸಾಯುತ್ತೇನೆ ಎನ್ನುತ್ತಿದ್ದ ಕಾಶೀರಾಯ, ಕೊನೆಗೆ ಮೂವರು ಉಗ್ರರನ್ನ ಹೊಡೆದು ಹುತಾತ್ಮನಾದ ಎಂದು ಕಾಶೀರಾಯನ ಅಪ್ಪಟ ದೇಶಭಕ್ತಿಯನ್ನ ನೆನೆದು ತಂದೆ ಶಂಕ್ರಪ್ಪ ಕಣ್ಣೀರಿಟ್ಟಿದ್ದಾರೆ.

  ಇದನ್ನೂ ಓದಿ: PUC Results - ಜುಲೈ 31ರೊಳಗೆ ದ್ವಿತೀಯ ಪಿಯುಸಿ ಫಲಿತಾಂಶ; ಅಂಕಕ್ಕೆ ನಿಗದಿಯಾದ ಮಾನದಂಡ ಇದು

  ಯೋಧ ಕಾಶೀರಾಯ ತನ್ನ ಮಗನಿಗೂ ಭಗತ್‌ಸಿಂಗ್ ಎಂದು ಹೆಸರಿಟ್ಟು ದೇಶಾಭಿಮಾನ ಮರೆದಿದ್ದನ್ನು ಕುಟುಂಬಸ್ಥರು ನೆನೆದರು. ಅಗಸ್ಟ್ 15, ಜನವರಿ 26ರ ಸಂದರ್ಭದಲ್ಲೇ ರಜೆ ಮೇಲೆ ಊರಿಗೆ ಬರುತ್ತಿದ್ದ ವೀರಯೋಧ, ತನ್ನ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದರು. ಇನ್ನು ಕಳೆದ ಗುರುವಾರ ಕರೆ ಮಾಡಿದ್ದ ವೇಳೆ ಉಗ್ರರ ಹುಡುಕಾಟಕ್ಕೆ ಹೋಗ್ತಿದ್ದೀವಿ. ಯಾವಾಗ ಕರೆ ಬರುತ್ತೊ ಆಗ ಹೋಗಬೇಕು. ಮುಂದಿನ ವಾರವೇ ರಜೆ ಹಾಕಿ ಊರಿಗೆ ಬರಲಿದ್ದೇನೆ ಎಂದು ಯೋಧ ಕಾಶೀರಾಯ ಹೇಳಿದ್ದರಂತೆ. ಇದೆಲ್ಲವನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ರು.

  ವೀರಯೋಧನ ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಜನ್ರು ಆಗಮಿಸಿ ಭಾಗವಹಿಸಿದ್ದರು. 1986, ಜೂನ್ 30ರಂದು ಜನಿಸಿದ ಕಾಶೀರಾಯ್ ಶಂಕ್ರಪ್ಪ ಬೊಮ್ಮನಹಳ್ಳಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಕ್ಕಲಿ ಗ್ರಾಮದಲ್ಲಿ ಮುಗಿಸಿದರು. ಬಳಿಕ ಪಿಯುಸಿ ಕಾಮರ್ಸ್ ಅನ್ನು ವಿಜಯಪುರದಲ್ಲಿ ಮುಗಿಸಿದ್ದರು. ನಂತ್ರದಲ್ಲಿ 2005 ರಲ್ಲಿ ಸೇನೆಗೆ ಆಯ್ಕೆಯಾಗಿ 2006 ರಲ್ಲಿ ಸೇನೆ ಸೇವೆಗೆ ಸೇರಿದ್ದರು. ಬೆಂಗಳೂರಿನ MRG ಸೆಂಟರ್ ನಲ್ಲಿ ಎರಡೂವರೆ ವರ್ಷ ಮೊದಲ ಸೇವೆ ಸಲ್ಲಿಸಿದ ಬಳಿಕ ಪಟಿಯಾಲ(ಪಂಜಾಬ್) 3 ವರ್ಷ ಸೇವೆ. ಜಮ್ಮುವಿನ ಪುಲ್ವಾಮಾದಲ್ಲಿ 3 ವರ್ಷ ಸೇವೆ. ಬಡಿಯಾಂಡಾ( ಪಂಜಾಬ್) 2 ವರ್ಷ ಸೇವೆ ಮತ್ತೆ ವಾಪಸ್ ಜಮ್ಮು ಪುಲ್ವಾಮಾದ 44RRನಲ್ಲಿ(ರಾಷ್ಟೀಯ ರೈಫಲ್) ವಾಲೇಂಟರಿ ತೆಗೆದುಕೊಂಡು ಸೇವೆ ಸಲ್ಲಿಸುತ್ತಿದ್ರು. ಸುಮಾರು 9-10 ಬಾರಿ ಉಗ್ರರ ಜೊತೆಗಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹೆಮ್ಮೆ ಇವರದ್ದಾಗಿತ್ತು.

  ಇದನ್ನೂ ಓದಿ: HDK vs Sumalatha - ಕೆಆರ್​ಎಸ್ ಡ್ಯಾಂ ಗೇಟಿಗೆ ಸುಮಲತಾರನ್ನ ಅಡ್ಡಡ್ಡ ಮಲಗಿಸಿದ್ರೆ ಬಿಗಿಯಾಗುತ್ತೆ ಎಂದ ಹೆಚ್​ಡಿಕೆ ಹೇಳಿಕೆಗೆ ಮಂಡ್ಯ ಸಂಸದೆ ತಿರುಗೇಟು

  ಮಗನನ್ನು ಸ್ಟ್ರಾಂಗ್ ಆಗಿ ಮಾಡು. ಅವನನ್ನೂ ಸೇನೆಗೆ ಸೇರಿಸೋಣ ಎಂದು ತನ್ನ ಕುಟುಂಬ ಸದಸ್ಯರಿಗೆ ಕಾಶೀರಾಯ ಹೇಳುತ್ತಿದ್ದರಂತೆ. ಹೀಗಾಗಿ ಮಗನನ್ನು ಗಟ್ಟಿಯಾಗಿಸಿ ಸೇನೆಗೆ ಸೇರಿಸುತ್ತೇನೆ ಎಂದು ಅಂತ್ಯಕ್ರಿಯೆ ವೇಳೆ ಯೋಧನ ಪತ್ನಿ ಸಂಗೀತಾ ಶಪಥ ಮಾಡಿದ್ರು. ದೇಶದ್ರೋಹಿಗಳ ವಿರುದ್ಧ ಸದಾ ಕೆಚ್ಚೆದೆಯಿಂದ ಹೋರಾಡುತ್ತಿದ್ದ ವೀರಯೋಧನ ಎದೆಗೆ ಉಗ್ರರ ಗುಂಡು ತಾಗಿತ್ತು. ತಾನು ಹೇಳಿಕೊಳ್ಳುತ್ತಿದ್ದ ರೀತಿಯಲ್ಲೇ ಉಗ್ರಗಾಮಿಗಳೊಂದಿಗೆ ಹೋರಾಡುತ್ತಲೇ ವೀರಮರಣವನ್ನಪ್ಪಿದ್ದ ಯೋಧ ಕಾಶೀರಾಯನ ನೆನಪು ಅಮರವಾಗಿರಲಿದೆ.

  ಯೋಧನ ಅಂತ್ಯಕ್ರಿಯೆಯಲ್ಲಿ ಗಣ್ಯರು, ಅಧಿಕಾರಿಗಳು ಭಾಗಿಯಾದರು. ಯರನಾಳ ವಿರಕ್ತಮಠ ಸಂಗನಬಸವ ಸ್ವಾಮಿಜೀ, ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಬಿಜೆಪಿ ಮಾಜಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ್ ಮನಗೂಳಿ, ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್ ರಿಂದ ಅಂತಿಮ ನಮನ ಸಲ್ಲಿಸಿದರು.

  ವರದಿ:‌ ಗುರುರಾಜ್ ಗದ್ದನಕೇರಿ
  Published by:Vijayasarthy SN
  First published: