ಬಸವನಾಡಿನ ಪೊಲೀಸರ ಕಾರ್ಯಾಚರಣೆ – 2 ಪ್ರತ್ಯೇಕ ಪ್ರಕರಣಗಳಲ್ಲಿ 6 ಜನರ ಬಂಧನ, 4 ಕಂಟ್ರಿ ಪಿಸ್ತೂಲು ವಶ

ವಿಜಯಪುರದ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 4 ಕಂಟ್ರಿ ಪಿಸ್ತೂಲುಗಳನ್ನ ವಶಪಡಿಸಿಕೊಂಡು ಆರು ಮಂದಿಯನ್ನು ಬಂಧಿಸಿದ್ದಾರೆ.

ವಿಜಯಪುರ ಪೊಲೀಸರು

ವಿಜಯಪುರ ಪೊಲೀಸರು

  • Share this:
ವಿಜಯಪುರ: ಬಸವ ನಾಡಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲು ವಹಿವಾಟು ಮತ್ತು ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ಪಿ ಅನುಪಮ ಅಗ್ರವಾಲ ಅವರು ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಉಸ್ತುವಾರಿಯಲ್ಲಿ ಡಿಎಸ್​ಬಿ ಇನ್ಸಪೆಕ್ಟರ್ ಸುನಿಲ ಆರ್. ಕಾಂಬಳೆ ಮತ್ತು ವಿಜಯಪುರ ನಗರದ ಜಲನಗರ ಪಿ ಎಸ್ ಐ ಬಿ. ಎಮ್. ಪವಾರ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದಾರೆ. 

ಮೊದಲ ಪ್ರಕರಣದಲ್ಲಿ ಈ ತಂಡ ಆಲಮೇಲ ಪಟ್ಟಣದಲ್ಲಿ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿದೆ.  ಆಲಮೇಲ ಪಟ್ಟಣದಲ್ಲಿ ಇಂಡಿ ರಸ್ತೆಯಲ್ಲಿರುವ ಐಬಿ ಹತ್ತಿರ ಕಂಟ್ರಿ ಪಿಸ್ತೂಲು ಇಟ್ಟುಕೊಂಡಿದ್ದ 5 ಜನರನ್ನು ಬಂಧಿಸಿ ಮೂರು ಕಂಟ್ರಿ ಪಿಸ್ತೂಲು ಮತ್ತು 10 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆಲಮೇಲ ನಿವಾಸಿಗಳಾದ ಬಂದೇನವಾಜ ಲಾಲಸಾಬ ಸೌದಾಗರ(40), ಸಲೀಂ ಮಹಿಬೂಬಸಾಬ ತಾಂಬೋಳಿ(28), ಅಶೋಕ ಮಹಾದೇವಪ್ಪ ಪೂಜಾರಿ(38), ಮಲ್ಲಿಕಜಾನ ನಬಿಸಾಬ ದೇವರಮನಿ(40), ಕಕ್ಕಳಮೇಲಿ ನಿವಾಸಿ ಮಡಿವಾಳಪ್ಪ ಅಮೀನಪ್ಪ ಡೆಂಗಿ(23) ಅವರನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಐ.ಬಿ. ಮದ್ದರಕಿ, ವೈ. ಎಸ್. ಜಮಖಂಡಿ, ಎಸ್. ಆರ್. ಬಡಚಿ, ಎ. ಎ. ಗದ್ಯಾಳ, ಶಿವಾನಂದ ಎಸ್. ಅಳ್ಳಿಗಿಡದ, ಎಂ. ಎಸ್. ಶಿರೋಳ ಪಾಲ್ಗೋಂಡಿದ್ದರು.  ಈ ಕುರಿತು ಸಿಂದಗಿ ತಾಲೂಕಿನ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bharat Bandh – ಇಂದಿನ ಭಾರತ್ ಬಂದ್​ಗೆ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳಿಂದ ಭಾರೀ ಬೆಂಬಲ

ಮತ್ತೋಂದು ಪ್ರಕರಣದಲ್ಲಿ ವಿಜಯಪುರ ಡಿವೈಎಸ್ಪಿ ಕೆ. ಸಿ. ಲಕ್ಷ್ಮಿನಾರಾಯಣ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಪಿ ಎಸ್‌ ಐ ಆನಂದ ಟಕ್ಕನ್ನವರ ನೇತೃತ್ವದ ತಂಡ ವಿಜಯಪುರ ತಾಲೂಕಿನ ಹಂಚಿನಾಳ ಎಲ್. ಟಿ.-1ರಲ್ಲಿ ಧಾಳಿ ನಡೆಸಿದೆ.

ಈ ಸಂದರ್ಭದಲ್ಲಿ ಕುಮಾರ ಬಿಲ್ಲು ಜಾಧವ(25) ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಳಿ ಮಾರಾಟಕ್ಕೆ ಇಟ್ಟುಕೊಳ್ಳಲಾಗಿದ್ದ ಒಂದು ಕಂಟ್ರಿ ಪಿಸ್ತೂಲು ಮತ್ತು ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇರಾಕಾ ಮನಿ ಕೊಟ್ಟು ಆಮ್ಯಾಲ್ ಬಂದ್‌ ಓಟ್ ಕೇಳ್ರಿ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು

ವಿಜಯಪುರ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಎರಡು ಶೂಟೌಟ್ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಈ ಪ್ರಕರಣಗಳಲ್ಲಿ ಕಂಟ್ರಿ ಪಿಸ್ತೂಲು ಬಳಕೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ.  ವಿಜಯಪುರ ಜಿಲ್ಲೆಯ ಕಂಟ್ರಿ ಪಿಸ್ತೂಲುಗಳ ಹಾವಳಿ ಹೆಚ್ಚಾಗಿದ್ದರೂ ಈವರೆಗೆ ಪೊಲೀಸರಿಗೆ ಮಾತ್ರ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: