HOME » NEWS » District » VIJAYAPURA POLICE ARREST SUPARI KILLERS FOR MURDERING ERANNA GOTYALA MVSV SNVS

ಆಸ್ಟ್ರೇಲಿಯಾದಿಂದ ಬಂದಿದ್ದವನ ಕೊಲೆ ರಹಸ್ಯ ಭೇದಿಸಿದ ಪೊಲೀಸರು; ಸುಪಾರಿ ಹಂತಕರು ಅಂದರ್

ಫೆ. 14ರಂದು ವಿಜಯಪುರ ಜಿಲ್ಲೆಯ ಕೊಲ್ಹಾರದ ಕೃಷ್ಣಾ ನದಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿದ್ದ ಈರಣ್ಣ ಗೋಟ್ಯಾಳ ಅವರನ್ನ ಕೊಲೆ ಮಾಡಿದವರು, ಕೊಲೆ ಮಾಡಿಸಿದವರ ಜಾಡು ಹಿಡಿದು ಪೊಲೀಸರು ಬಂಧಿಸಿದ್ದಾರೆ.

news18-kannada
Updated:March 11, 2021, 11:32 AM IST
ಆಸ್ಟ್ರೇಲಿಯಾದಿಂದ ಬಂದಿದ್ದವನ ಕೊಲೆ ರಹಸ್ಯ ಭೇದಿಸಿದ ಪೊಲೀಸರು; ಸುಪಾರಿ ಹಂತಕರು ಅಂದರ್
ಈರಣ್ಣ ಗೋಟ್ಯಾಳರನ್ನ ಕೊಲೆ ಮಾಡಿದವರ ಬಂಧನ
  • Share this:
ವಿಜಯಪುರ: ಇದು ಅನಾಥವಾಗಿ ಸಿಕ್ಕಿದ್ದ ವ್ಯಕ್ತಿಯೊಬ್ಬನ ಕೊಲೆಯನ್ನು ಪೊಲೀಸರು ಭೇದಿಸಿದ ಒಂದು ಪ್ರಕರಣ… ವಾರಸುದಾರರು ಇಲ್ಲವೆಂದು ಅಂತ್ಯಕ್ರಿಯೆ ನೆರವೇರಿಸಿದ್ದ ಪೊಲೀಸರು ಕೊನೆಗೂ ಆ ವ್ಯಕ್ತಿ ಯಾರು ಮತ್ತು ಆತನನ್ನು ಯಾರು ಮತ್ತು ಏಕೆ ಕೊಲೆ ಮಾಡಿದ್ದಾರೆ ಎಂಬುದನ್ನು ಕೊನೆಗೂ ಭೇದಿಸಿದ್ದು, ಸುಪಾರಿ ಹಂತಕರನ್ನು ಅಂದರ್ ಮಾಡಿದ್ದಾರೆ. ಕೊಲೆಗೆ ಬೆಲೆಯೇ ಇಲ್ಲದ ಜಿಲ್ಲೆ ಎಂಬ ಅಪಖ್ಯಾತಿಗೆ ಈಗ ಗುಮ್ಮಟ ನಗರಿ ಜಿಲ್ಲೆ ಸಾಕ್ಷಿಯಾಗುತ್ತಿದೆ.  ಸದಾ ಒಂದಿಲ್ಲೋಂದು ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆಯುವ ವಿಜಯಪುರ ಜಿಲ್ಲೆಯಲ್ಲಿ ಈಗ ವ್ಯಕ್ತಿಯೊಬ್ಬ ಸ್ವಂತ ಅಕ್ಕನ ಗಂಡನನ್ನೆೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಅಕ್ಕ ದೂರದ ಆಸ್ಟ್ರೇಲಿಯಾದಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದರೆ, ಆಕೆಯನ್ನು ಅಲ್ಲಿಯೇ ಬಿಟ್ಟು ಬಂದಿದ್ದ ಭಾವನನ್ನು ಈ ವ್ಯಕ್ತಿ ಸುಪಾರಿ ಹಂತಕರ ಮೂಲಕ ಖಲ್ಲಾಸ್ ಮಾಡಿಸಿದ್ದಾನೆ. ಈ ಹಿಂದೆ ಅನಾಥವಾಗಿ ಸಿಕ್ಕಿದ್ದ ಶವವನ್ನು ಅಂತ್ಯಸಂಸ್ಕಾರ ನೆರವೇರಿಸಿದ್ದ ಪೊಲೀಸರಿಗೆ ಈಗ ಇದೊಂದು ಸುಪಾರಿ ಕೊಲೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಅನಾಥ ಶವದ ಪತ್ತೆಗೆ ಕ್ರಮ ಕೈಗೊಂಡಿದ್ದ ಪೊಲೀಸರಿಗೆ ಈ ಕೊಲೆಯ ಸಂಬಂಧ ಆರು ಜನ ಆರೋಪಿಗಳು ಸಿಕ್ಕಿದ್ದು, ಇದೊಂದು ಸುಪಾರಿ ಕೊಲೆ ಎಂಬುದನ್ನು ವಿಜಯಪುರ ಎಸ್​ಪಿ ಅನುಪಮ ಅಗ್ರವಾಲ ಖಚಿತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ನಿವಾಸಿ 50 ವರ್ಷದ ಈರಣ್ಣ ಗೋಟ್ಯಾಳ ಈ ಮೊದಲು ಆರೋಪಿಯ ಅಕ್ಕಳನ್ನು ವಿವಾಹವಾಗಿ ದೂರದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ. ಆಕೆಯನ್ನು ಅಲ್ಲಿಯೇ ಬಿಟ್ಟು ಭಾರತಕ್ಕೆ ಬಂದಿದ್ದ ಈತ ತಿಕೋಟಾ ಪಟ್ಟಣದ ವಿಧವೆಯೊಬ್ಬಳನ್ನು ಮದುವೆಯಾಗಿದ್ದ. ತಾಂಬಾದಲ್ಲಿದ್ದ ತನ್ನ ಹೊಲ ಮತ್ತು ಕಾಂಪ್ಲೆಕ್ಸ್ ನೋಡಿಗೊಳ್ಳಲು ವಾರಕ್ಕೋಮ್ಮೆ ಬರುತ್ತಿದ್ದ.  11.02.2021 ರಂದು ತಾಂಬಾಕ್ಕೆ ಹೋಗಿ ಬರೋದಾಗಿ ಹೇಳಿ ಬಂದಿದ್ದ ಈರಣ್ಣ ಗೋಟ್ಯಾಳ ವಾಪಸ್ ಮನೆಗೆ ಬಂದಿರಲಿಲ್ಲ. ಆದರೆ ವಿಜಯಪುರ ತಾಲೂಕಿನ ತೊರವಿ ಗ್ರಾಮದ ಹೊರ ಭಾಗದಲ್ಲಿ ಈರಣ್ಣ ಗೋಟ್ಯಾಳ ಬೈಕ್ ಸಿಕ್ಕಿತ್ತು.  ಈ ಹಿನ್ನೆಲೆಯಲ್ಲಿ ಯಾರೋ ಈರಣ್ಣರನ್ನು ಅಪಹರಣ ಮಾಡಿದ್ದಾರೆ ಎಂದು ಈರಣ್ಣನ ಕುಟುಂಬದವರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಪೊಲೀಸರು ಈರಣ್ಣ ಗೋಟ್ಯಾಳ ಪೋಟೋಗಳನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಕೊಟ್ಟಿದ್ದರು.

ಇದನ್ನೂ ಓದಿ: ತೆವಲಿಗೆ ಮಾತನಾಡೋದು ಸುಲಭ, ಆದರೆ, ತಾಕತ್ತಿದ್ದರೆ ಹೋರಾಟ ಮಾಡಿ: ದಿನೇಶ್ ಕಲ್ಲಹಳ್ಳಿ ಸವಾಲು

ಈ ಮಧ್ಯೆ 14,02.2021 ರಂದು ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಹಾರ ಬಳಿ ಕೊರ್ತಿ-ಕೊಲ್ಹಾರ ಸೇತುವೆಯ ಬಳಿ ಕೃಷ್ಣಾ ನದಿಯಲ್ಲಿ ಒಂದು ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಶವವನ್ನು ಎರಡು ದಿನಗಳ ಕಾಲ ಇಟ್ಟ ಪೊಲೀಸರು ನಂತರ ಅನಾಥ ಶವವೆಂದು ಸರಕಾರಿ ನಿಯಮದಂತೆ ಅಂತ್ಯಕ್ರಿಯೆ ನಡೆಸಿದ್ದರು. ಅಂತ್ಯಕ್ರಿಯೆಗೂ ಮುನ್ನ ತೆಗೆಯಲಾದ ಫೋಟೋಗಳನ್ನು ಕೊಲ್ಹಾರಕ್ಕೆ ಬಂದಿದ್ದ ಈರಣ್ಣ ಗೋಟ್ಯಾಳನ ಎರಡನೇಯ ಪತ್ನಿಯ ಸಹೋದರರಿಗೆ ಪೊಲೀಸರು ತೋರಿಸಿದ್ದರು.  ಪೊಲೀಸ್ ಠಾಣೆಯಲ್ಲಿದ್ದ ಕೊಲೆಯಾದ ವ್ಯಕ್ತಿಯ ಬಟ್ಟೆಗಳು, ಮೈಮೇಲಿನ ಆಭರಣ ಮತ್ತು ಶವದ ಪೋಟೋಗಳನ್ನು ನೋಡಿದ ಅವರು ಇದು ಈರಣ್ಣ  ಗೋಟ್ಯಾಳ ಶವವೆಂದು ಗುರುತು ಹಚ್ಚಿದ್ದರು. ಯಾವಾಗ ಈ ಶವದ ಕುಟುಂಬಸ್ಥರು ಈರಣ್ಣ ಗೋಟ್ಯಾಳನ ಶವದ ಗುರುತು ಹಚ್ಚಿದರೋ ಆಗಲೇ ಇದು ಸಹಜ ಸಾವಲ್ಲ, ಕೊಲೆ ಎಂದು ತನಿಖೆ ಕೈಗೊಂಡಿದ್ದರು.

ಹೀಗೆ ಕೊಲ್ಹಾರದ ಬಳಿಯ ಕೃಷ್ಣಾ ನದಿಯಲ್ಲಿ ಸಿಕ್ಕ ಶವ ಈರಣ್ಣ ಗೋಟ್ಯಾಳನದ್ದು ಎಂದು ಖಚಿತ ಪಟ್ಟ ಕೂಡಲೇ ವಿಜಯಪುರ ಗ್ರಾಮೀಣ ವೃತ್ತದ ಇನ್ಸಪೆಕ್ಟರ್ ಸಂಗಮೇಶ ಪಾಲಭಾವಿ, ಸಬ್ ಇನ್ಸಪೆಕ್ಟರ್ ಆನಂದ ಠಕ್ಕಣವರ ಮತ್ತು ಸಿಬ್ಬಂದಿ ತನಿಖೆಯನ್ನು ಚುರುಕುಗೊಳಿಸಿದರು. ಕೊಲೆಯಾದ ಈರಣ್ಣ ಗೋಟ್ಯಾಳಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮತ್ತು ಮಕ್ಕಳನ್ನು ಆತ ಮೂರು ವರ್ಷಗಳ ಹಿಂದೆ ಆಷ್ಟ್ರೇಲಿಯಾದಲ್ಲಿಯೇ ಜಗಳ ಮಾಡಿ ಬಿಟ್ಟು ಬಂದಿದ್ದ. ಇಲ್ಲಿನ ಸ್ವಂತ ಗ್ರಾಮ ತಾಂಬಾದಲ್ಲಿ ಜಮೀನು, ಕಾಂಪ್ಲೆಕ್ಸ್ ಬಿಸಿನೆಸ್ ಎಂದು ಇದ್ದು ಬಿಟ್ಟಿದ್ದ. ಇಲ್ಲಿಯೇ ಈಗಾಗಲೇ ಒಂದು ಹೆಣ್ಣು ಮಗುವಿರುವ ವಿಧವೆಯನ್ನು ಎರಡನೇಯ ಮದುವೆಯಾಗಿ ಮತ್ತೋಂದು ಹೆಣ್ಣು ಮಗುವಿನ ತಂದೆಯೂ ಆಗಿದ್ದ. ಆಸ್ಟ್ರೇಲಿಯಾದಲ್ಲಿದ್ದ ಮೊದಲ ಪತ್ನಿ ಹಾಗೂ ಮಕ್ಕಳ ಸಂಪರ್ಕವನ್ನೇ ಕಡಿದುಕೊಂಡು ಬಿಟ್ಟಿದ್ದ. ಈತ ಆಸ್ಟ್ರೇಲಿಯಾದಲ್ಲಿರುವಾಗ ಇವರ 38 ಎಕರೆ ಜಮೀನು ಹಾಗೂ ವ್ಯವಹಾರಗಳನ್ನು ಮೊದಲ ಪತ್ನಿ ಸಹೋದರ ಮಲ್ಲಿಕಾರ್ಜುನ ಖರಾಟ ನೋಡಿಕೊಳ್ಳುತ್ತಿದ್ದ. ಯಾವಾಗ ಈರಣ್ಣ ಗೋಟ್ಯಾಳ ಇಲ್ಲಿಗೆ ಬಂದರೋ ಆಗ ಜಮೀನು ಮತ್ತು ಇತರೆ ವ್ಯವಹಾರಗಳನ್ನು ಸ್ವತಃ ಈರಣ್ಣ ಗೋಟ್ಯಾಳನೇ ನೋಡಿಕೊಳ್ಳಲಾರಂಭಿಸಿದ. ಇದು ಸಹಜವಾಗಿಯೇ ಮಲ್ಲಿಕಾರ್ಜುನ ಖರಾಟ್​ಗೆ ಸಿಟ್ಟು ತರಿಸಿದೆ. ಭಾವನ ಜಮೀನು ಹಾಗೂ ವ್ಯವಹಾರಗಳಿಂದ ಆಗತ್ತಿದ್ದ  ಲಾಭ ಸಿಗದಂತಾಗಿದೆ. ಅಷ್ಟೇ ಅಲ್ಲ, ತನ್ನ ಅಕ್ಕನಿಗೆ ತಾವು ಬಳುವಳಿಯಾಗಿ ನೀಡಿದ್ದ 4 ಎಕರೆ ಜಮೀನನ್ನೂ ಕೂಡ ಆತ ಬಿಟ್ಟು ಕೊಡದೇ ಕಾಡತೊಡಗಿದ್ದ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಸಂಚಾರಿ ಗ್ರಂಥಾಲಯ ಪ್ರಾರಂಭ ಮಾಡಲು ಹೊಸ ಚಿಂತ‌ನೆ

ಮಲ್ಲಿಕಾರ್ಜುನ ಖರಾಟ ತನಗೆ ಆದಾಯ ತರುತ್ತಿದ್ದ ಹೊಲಗಳ ಉಳಿಮೆ ಇಲ್ಲವಾಗಿ ಸಂಕಷ್ಟದಲ್ಲಿದ್ದ. ಇದರಿಂದ ಸಿಟ್ಟಾದ ಆತ ಈ ವಿಚಾರವನ್ನು ತನ್ನ ಸ್ನೇಹಿತ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಸಂಜೀವಕುಮಾರ ಮ್ಯಾಳೇಸಿ ಜೊತೆಗೆ ಹಂಚಿಕೊಂಡ. ಆಗ ಆತ ಹಣ ಕೊಟ್ಟರೆ ತಾನು ಮತ್ತು ತನ್ನ ಸ್ನೇಹಿತರು ಸೇರಿ ನಿಮ್ಮ ಭಾವನನ್ನು ಕೊಲೆ ಮಾಡುತ್ತೇವೆ ಎಂದು ಹೇಳಿದ್ದ. ಇದಕ್ಕೆ ಒಪ್ಪಿದ ಮಲ್ಲಿಕಾರ್ಜುನ ಖರಾಟ ರೂ. 10 ಲಕ್ಷಕ್ಕೆ ಸುಪಾರಿ ನೀಡಿ ಈರಣ್ಣ ಗೋಟ್ಯಾಳನನ್ನು ಕೊಲೆ ಮಾಡೋಕೆ ಡೀಲ್ ಕುದುರಿಸಿದ. ಹೀಗೆ ಈರಣ್ಣ ಗೋಟ್ಯಾಳನನ್ನು ಕೊಲೆ ಮಾಡೋಕೆ ಮಲ್ಲಿಕಾರ್ಜುನ ಕರಾಟನಿಂದ ಸುಫಾರಿ ಪಡೆದ ತಂಡ ಈರಣ್ಣನ ಗೋಟ್ಯಾಳನನ್ನು ಕೊಲೆ ಮಾಡೋಕೆ ಸ್ಕೆಚ್  ಹಾಕಿದ್ದರು.ಫೆ. 11 ರಂದು ಈರಣ್ಣ ಗೋಟ್ಯಾಳ ತಾಂಬಾದಿಂದ ತಿಕೋಟಾ ಪಟ್ಟಣಕ್ಕೆ ಹೋಗುವಾಗ ಸ್ವಿಫ್ಟ್ ಕಾರಿನಿಂದ ಆತನ ಬೈಕಿಗೆ ಡಿಕ್ಕಿ ಹೊಡೆಸಿ ಜಗಳ ತೆಗೆಯಿದ್ದಾರೆ. ನಂತರ ಅದೇ ಸ್ವಿಪ್ಟ್ ಕಾರಿನಲ್ಲಿ ಆತನನ್ನ ಅಪಹರಣ ಮಾಡಿ ಕಲಬುರಗಿ ಜಿಲ್ಲೆಯ ಅಫಜಲಪುರಕ್ಕೆ ತೆರಳಿದ್ದಾರೆ.  ಮರುದಿನ ದಿನ ಮತ್ತೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜೈನಾಪುರ ಕ್ರಾಸ್ ಬಳಿಯ ಜಮೀನಿನಲ್ಲಿ ಟವೆಲ್ ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಮತ್ತೊಂದು ಸ್ವಿಫ್ಟ್ ಕಾರಿನಲ್ಲಿ ಹಾಕಿಕೊಂಡು ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿನ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲಿಂದ ನದಿಗೆ ಎಸೆದು ಪರಾರಿಯಾಗಿದ್ದಾರೆ.  ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಮೊದಲು ಎರಡನೇಯ ಪತ್ನಿ ಮೇಲೆ ಸಂಶಯ ಮಾಡಿ ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: ಬಿಲ್ವಪತ್ರೆಗಳ ವನ; ಇಡೀ ದೇಶದಲ್ಲಿ ಒಂದೇ ಕಡೆ ಅತಿಹೆಚ್ಚು ಬಿಲ್ವಪತ್ರೆ ಇರೋದು ಚಿಕ್ಕಮಗಳೂರಲ್ಲಿ

ನಂತರ ಮೊದಲನೇ ಪತ್ನಿ ಮತ್ತು ಕುಟುಂಬದವರ ಕುರಿತು ತನಿಖೆ ನಡೆಸಿದಾಗ ಮೊದಲ ಪತ್ನಿಯ ಸಹೋದರನೇ ಸುಫಾರಿ ನೀಡಿ ಕೊಲೆ ಮಾಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ. ಕೂಡಲೇ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇಡೀ ಕೊಲೆಯ ರಹಸ್ಯವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ತಾಂಬಾ ನಿವಾಸಿ ಮಲ್ಲಿಕಾರ್ಜುನ ಖರಾಟ, ಕಲಬುರಗಿ ಜಿಲ್ಲೆಯ ಅಫಜಲಪುರದ ಸಂಜೀವಕುಮಾರ ಮ್ಯಾಳೇಸಿ, ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಸಮೀರ ಆಲಮೇಲ, ಭಾಗವಾನ, ಕಲಬುರಗಿ ಜಿಲ್ಲೆ ಅಫಜಲಪುರದ ಪ್ರಶಾಂತ ನಿಂಬಿತೋಟ, ನಬೀಸಾಬ್ ವಣಕಿಹಾಳ ಅವರನ್ನು ಬಂಧಿಸಿದ್ದಾರೆ. ಅಲ್ಲದೇ, ಈ ಕೊಲೆಗಾಗಿ ಮಲ್ಲಿಕಾರ್ಜನ ಕರಾಟ ರೂ. 10 ಲಕ್ಷ ಸುಪಾರಿ ನೀಡಿರುವುದು ಪತ್ತೆಯಾಗಿದ್ದು, ರೂ. 5 ಲಕ್ಷ ಹಣವನ್ನು ನೀಡಿರುವುದು ಪತ್ತೆಯಾಗಿದೆ. ಅಲ್ಲದೇ, ಆರೋಪಿಗಳ ಬಳಿಯಿದ್ದ ರೂ. 78300 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಬಂಧಿತರು ಕೃತ್ಯಕ್ಕೆ ಬಳಸಿದ ಎರಡು ಸ್ವಿಫ್ಟ್ ಕಾರನ್ನು ಸೀಜ್ ಮಾಡಿದ್ದಾರೆ.  ಎಲ್ಲಾ ಆರು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವಿಜಯಪುರ ಎಸ್ಪಿ ಅನುಒಮ ಅಗ್ರವಾಲ ತಿಳಿಸಿದ್ದಾರೆ.

ಒಟ್ಟಾರೆ ಆಸ್ತಿ ಆಸೆಗಾಗಿ ಭಾವವನ್ನೇ ಬಾಮೈದ ಸುಪಾರಿ ನಿಡಿ ಖತಂ ಮಾಡಿಸಿದ್ದು ಮಾತ್ರ ದುರಂತವಾಗಿದೆ. ಮೊದಲ ಪತ್ನಿ ಹಾಗೂ ಮಕ್ಕಳು ದೂರದ ಆಸ್ಟ್ರೇಲಿಯಾದಲ್ಲಿದ್ದರೆ, ಇತ್ತ ಎರಡನೇಯ ಪತ್ನಿ ಎರಡನೇಯ ಬಾರಿ ವಿಧವೆಯಾದಂತಾಗಿದೆ. ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೊಲೆಯಾದ ಈರಣ್ಣ ಗೋಟ್ಯಾಳ, ದೂರದ ಆಸ್ಟ್ರೇಲಿಯಾದಲ್ಲಿ ಫ್ಲ್ಯಾಟ್ ಹೊಂದಿದ್ದಾನೆ. ಕ್ಯಾಬ್ ಗಳನ್ನೂ ಬಾಡಿಗೆಗೆ ಬಿಟ್ಟಿದ್ದಾನೆ. ಆತನ ಮೊದಲ ಪತ್ನಿ ಅನಸೂಯಾ ತನ್ನ ಮಕ್ಕಳಿಗೆ ಬರುವ ವಿದ್ಯಾರ್ಥಿ ವೇತನದಲ್ಲಿ ಜೀವನ ನಡೆಸುತ್ತಿದ್ದಾಳೆ. ಈಗ ಆಕೆ, ಅಲ್ಲಿ ಸಂಕಷ್ಟದಲ್ಲಿದ್ದರೆ, ಈತನ ಎರಡನೇ ಪತ್ನಿ ವಿಜಯಪುರ ಜಿಲ್ಲೆಯಲ್ಲಿ ತೊಂದರೆಗೆ ಸಿಲುಕುವಂತಾಗಿದೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: March 11, 2021, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories