HOME » NEWS » District » VIJAYAPURA POLICE ARREST A MAN IN A JEWELRY THEFT CASE MVSV SNVS

Crime News - ಮೊದಲ ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಪೇಚಿಗಿಟ್ಟುಕೊಂಡ ಯುವಕ

ವಿಜಯಪುರದ ಡೋಮನಾಳದ ಲಂಬಾಣಿ ತಾಂಡಾವೊಂದರಲ್ಲಿ ಮನೆಗೆ ನುಗ್ಗಿ 6 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನ ಕಳ್ಳತನ ಮಾಡಿದ್ದ ಒಬ್ಬ ವ್ಯಕ್ತಿಯನ್ನು ಎರಡು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

news18-kannada
Updated:January 21, 2021, 8:46 AM IST
Crime News - ಮೊದಲ ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಪೇಚಿಗಿಟ್ಟುಕೊಂಡ ಯುವಕ
ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು
  • Share this:
ವಿಜಯಪುರ(ಜ. 21): ಇದು ಮಾಡಬಾರದ ಕೆಲಸ ಮಾಡಿ ಇಂಗು ತಿಂದ ಮಂಗನಂತಾದ ಯುವಕನ ಸ್ಟೋರಿ. ಇದೇ ಮೊದಲ ಬಾರಿಗೆ ಈ ಕೆಲಸ ಮಾಡಿ ಮುಂದೇನು ಮಾಡಬೇಕೆಂದೂ ತಿಳಿಯದೇ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಮಾಡಿದ ಕೃತ್ಯದ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿರುವ ಪೊಲೀಸರು ಆತನನ್ನು ಕೃಷ್ಣನ ಜನ್ಮಸ್ಥಾನಕ್ಕೆ ಅಟ್ಟಿದ್ದಾರೆ. ಈ ಘಟನೆ ನಡೆದಿದ್ದು ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯ ಡೋಮನಾಳ ಗ್ರಾಮದಲ್ಲಿ. ಅದೂ ಕೂಡ ರಾತ್ರಿ ವೇಳೆಯಲ್ಲಿ. 

26 ವರ್ಷದ ಯುವಕ ಕಿರಣ ವಾಚು ರಾಠೋಡ ಸುಮಾರು ಎರಡು ತಿಂಗಳ ಹಿಂದೆ ಅಂದರೆ 23.11.2020 ರಂದು ತಾನು ವಾಸಿಸುವ ಡೋಮನಾಳ ಲಂಬಾಣಿ ತಾಂಡಾ ಸಂಖ್ಯೆ 2ರಲ್ಲಿಯೇ ಮಾಡಬಾರದ ಕೆಲಸ ಮಾಡಿದ್ದ. 2020ರ ನವೆಂಬರ್ 23 ರಂದು ಆರೋಪಿ ಕಿರಣ ವಾಚು ರಾಠೋಡ ತಾನು ವಾಸಿಸುವ ತಾಂಡಾದಲ್ಲಿ ಮನೆಯೊಂದಕ್ಕೆ ಕನ್ನ ಹಾಕಿದ್ದ.  ಇಂದು ಸಂ. 7 ರಿಂದ ಮರುದಿನ ಬೆ. 9ರ ವರೆಗೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯ ಬೀಗ ಮುರಿದು ಕನ್ನ ಹಾಕಿದ್ದ ಆರೋಪಿ ಕಿರಣ ವಾಚು ರಾಠೋಡ ಆ ಮನೆಯಲ್ಲಿದ್ದ 53 ಗ್ರಾಂ ಬಂಗಾರದ ತಾಳಿ, 30 ಗ್ರಾಂ ಚಿನ್ನದ ಸರ, 9 ಗ್ರಾಂ ಚಿನ್ನದ ಕಿವಿಯೋಲೆ ಸೇರಿದಂತೆ ಒಟ್ಟು 116 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ.  ಇವುಗಳ ಒಟ್ಟು ಮೌಲ್ಯ ರೂ. 6 ಲಕ್ಷ ಎಂದು ಅಂದಾಜಿಸಲಾಗಿತ್ತು.  ಈ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಕಲಂ 454, 457, 380ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: VK Sasikala: ಬೌರಿಂಗ್ ಆಸ್ಪತ್ರೆಯ ಐಸಿಯುಗೆ ಶಿಫ್ಟ್​ ಆದ ಜಯಲಲಿತಾ ಆಪ್ತೆ ಶಶಿಕಲಾ; ಆರೋಗ್ಯದಲ್ಲಿ ಅಲ್ಪ ಸುಧಾರಣೆ

ಈ ಪ್ರಕರಣದ ಪತ್ತೆಗಾಗಿ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಕೆ. ಸಿ. ಲಕ್ಷ್ಮಿನಾರಾಯಣ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್ಐ ಆನಂದ ಠಕ್ಕಣ್ಣವನವರ, ಆರ್. ಎ. ದಿನ್ನಿ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಈ ಪೊಲೀಸರ ತಂಡ ಇಂದು ಬೆಳಗಿನ ಜಾವ ವಿಜಯಪುರ ನಗರದ ಹೊರವಲಯದ ಭೂತನಾಳ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಕಳ್ಳತನದ ಬಳಿಕ ಈ ಭಾಗದಲ್ಲಿ ಮೊಬೈಲ್ ಕರೆಗಳ ಜಾಲ ಹಿಡಿದ ಪೊಲೀಸರು ನಾನಾ ರೀತಿಯಲ್ಲಿ ತನಿಖೆ ಕೈಗೊಂಡಿದ್ದರು. ಕೊನೆಗೆ ಈತನ ಮೇಲೆ ಸಂಶಯದ ಹಿನ್ನೆಲೆಯಲ್ಲಿ ನಿಗಾ ವಹಿಸಿದ್ದರು.

ಇದನ್ನೂ ಓದಿ: ನೇಪಾಳದಲ್ಲಿ ಪೊಲೀಸ್ ಅಧಿಕಾರಿ ಆಗಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ!

ನಂತರ ವಿಚಾರಣೆ ನಡೆಸಿದ ಪೊಲೀಸರ ಎದುರು ಆರೋಪಿ ಕಿರಣ ವಾಚು ರಾಠೋಡ ತಾನು ಇದೇ ಮೊದಲ ಬಾರಿಗೆ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.  ಅಲ್ಲದೇ, ತಾನು ಕದ್ದಿದ್ದ ಎಲ್ಲ ಚಿನ್ನಾಭರಣವನ್ನು ಸಂಪೂರ್ಣವಾಗಿ ವಾಪಸ್ ಮಾಡಿದ್ದಾನೆ.  ಕಳ್ಳತನ ನಂತರ ಕಳುವು ಮಾಡಿದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಈತ ಹೆದರಿದ್ದಾನೆ. ಎಲ್ಲಿಯಾದರೂ ಮಾರಾಟ ಮಾಡಿದರೆ ತನ್ನನ್ನು ಪೊಲೀಸರು ಬಂಧಿಸಬಹುದು. ಮರ್ಯಾದೆ ಹೋಗಲಿದೆ ಎಂದುಕೊಂಡು ಮನೆಯಲ್ಲಿಯೇ ಎಲ್ಲ ಚಿನ್ನಾಭರಣವನ್ನು ಬಚ್ಚಿಟ್ಟಿದ್ದ. ಬಂಧನದ ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಚ್ಚಿಟ್ಟಿದ್ದ ಸುಮಾರು ರೂ. 6 ಲಕ್ಷ ಮೌಲ್ಯದ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರ ತಂಡಕ್ಕೆ ವಿಜಯಪುರ ಎಸ್ಪಿ ಅನುಪಮ್ ಅಗ್ರವಾಲ ಬಹುಮಾನ ಘೋಷಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: January 21, 2021, 8:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories