ವಿಜಯಪುರದಲ್ಲಿ ಫೈರಿಂಗ್ ಪ್ರಕರಣ; ಮತ್ತೆ 5 ಜನರ ಬಂಧನ; ಗಾಯಾಳು ಮಹಾದೇವ ಸಾಹುಕಾರ ಭೈರಗೊಂಡ ಚಿಕಿತ್ಸೆಗೆ ಬೇರೆಡೆಗೆ ಸ್ಥಳಾಂತರ

ಈ ಪ್ರಕರಣದಲ್ಲಿ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಇಂಡಿ ಡಿವೈಎಸ್ಪಿ ಸಂಕದ, 9 ಜನ ಇನ್ಸ್​​ಪೆಕ್ಟರ್ ಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಶ್ರಮ ಪಟ್ಟು 27 ನಾನಾ ಕಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಅಟೋ ಸೇರಿ ನಾನಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನುಪಮ ಅಗ್ರವಾಲ ತಿಳಿಸಿದರು.

ವಿಜಯಪುರ ಪೊಲೀಸರು ಬಂಧಿಸಿರುವ ಐವರು ಆರೋಪಿಗಳು.

ವಿಜಯಪುರ ಪೊಲೀಸರು ಬಂಧಿಸಿರುವ ಐವರು ಆರೋಪಿಗಳು.

  • Share this:
ವಿಜಯಪುರ, (ನ. 07); ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ನಡೆದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ಐದು ಜನರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 7ಕ್ಕೆ ಏರಿದಂತಾಗಿದೆ. ಏತನ್ಮಧ್ಯೆ, ದಾಳಿಯಿಂದ ಗಾಯಗೊಂಡಿರುವ ಭೈರಗೊಂಡ ಅವರನ್ನು ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಅನುಪಮ ಅಗ್ರವಾಲ, ಬಂಧಿತರಲ್ಲಿ ಮೂರು ಜನ ಅತಾಲಟ್ಟಿ ಗ್ರಾಮದವರಾಗಿದ್ದಾರೆ.  25 ವರ್ಷದ ಯಾಸೀನ ರಮಜಾನಸಾಬ ದಂಧರಗಿ ಮತ್ತು ಕರೆಪ್ಪ ಉರ್ಫ ಗೂಳಿ ಮಹಾದೇವ ಸೊನ್ನದ ಹಾಗೂ 34 ವರ್ಷದ ಸಿದ್ಧು ಉರ್ಫ ಸಿದ್ಧರಾಯ ಬಸಪ್ಪ ಬೊಮ್ಮನಜೋಗಿ, ಅಲಿಯಾಬಾದ ಗ್ರಾಮದ 28 ವರ್ಷದ ಸಂಜು ಉರ್ಫ್ ಸಚಿನ ತುಕಾರಾಮ ಮಾನವರ ಹಾಗೂ ಚಡಚಣ ಪಟ್ಟಣದ ರವಿ ಧರೆಪ್ಪ ಬಂಡಿ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನಿನ್ನೆ ಮತ್ತು ಇಂದು ಬೆಳಿಗ್ಗೆ ಬಂಧಿಸಲಾಗಿದೆ.  ಆರೋಪಿಗಳಿಂದ 2 ಕಂಟ್ರಿ ಪಿಸ್ತೂಲ್​ಗಳು, 5 ಜೀವಂತ ಗುಂಡುಗಳು, 4 ಮೊಬೈಲ್ ಗಳು, 1 ಅಟೋರಿಕ್ಷಾ ಮತ್ತು ಒಂದು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾಹುಕಾರ ಭೈರಗೊಂಡ ಕೊಲೆಗೆ ಬಹಳ ದಿನಗಳಿಂದ ಯತ್ನ ನಡೆದಿತ್ತು. ನ. 2 ರಂದು ಕಾತ್ರಾಳ ಬಳಿ ಸತ್ಸಂಗ ಕಾರ್ಯಕ್ರಮದಲ್ಲಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಇದಕ್ಕೂ ಮುಂಚೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿ ಪಾಟೀಲ ನಿಧನರಾದಾಗ ಸಾಹುಕಾರ ಧೂಳಖೇಡಕ್ಕೆ ಬರಬಹುದೆಂದು ಯೋಚಿಸಿ, ಹತ್ಯೆಗೆ ಸ್ಕೆಚ್ ಹಾಕಿದ್ದರು.  ಆದರೆ, ಅಂದು ಸಾಹುಕಾರ ಬೇರೆ ಮಾರ್ಗದ ಮೂಲಕ ಹೋಗಿದ್ದರಿಂದ ಸ್ಕೆಚ್ ವಿಫಲವಾಯಿತು ಎಂದು ಎಸ್ಪಿ ತಿಳಿಸಿದರು.

ಈ ಆರೋಪಿಗಳು ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ನಾಲ್ಕೈದು ಜನ ಸೇರಿ ಈ ಪ್ಲ್ಯಾನ್ ಮಾಡಿದ್ದಾರೆ.  ಇವರಿಗೆ ಲಾಜಿಸ್ಟಿಕ್ ಸಪೋರ್ಟ್ ಇಲ್ಲದೆ ಈ ಕೃತ್ಯ ಎಸಗಲು ಸಾಧ್ಯವಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.  ಈ ಪ್ರಕರಣದಲ್ಲಿ ಈಗ 2 ಪಿಸ್ತೂಲು ಮತ್ತು 5 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ಫೈರಿಂಗ್ ಸಂದರ್ಭದಲ್ಲಿ ಆರೇಳು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈಗಾಗಲೇ ಈ ಮೊದಲು ಬಂಧಿಸಿರುವ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಈಗ ಬಂಧಿಸಲಾಗಿರುವ 5 ಜನರನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಅನುಪಮ ಅಗ್ರವಾಲ ಮಾಹಿತಿ ನೀಡಿದರು.

ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ.  ಬಾಕಿ ಆರೋಪಿಗಳನ್ನು ಹುಡುಕಲು ಪೊಲೀಸರ ತಂಡಗಳು ನಿರತವಾಗಿವೆ.  ಈಗ ಬಂಧಿಸಲಾಗಿರುವ ಐದು ಜನರನ್ನು ಅವರವರ ಮನೆಗಳಿಂದ ಬಂಧಿಸಲಾಗಿದೆ. ಮಡಿವಾಳಯ್ಯ ಹಿರೇಮಠ ಸ್ವಾಮಿ ಈ ಕೃತ್ಯದ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.  ಹುಡುಗರನ್ನು ಸೇರಿಸಿ, ಅವರಿಗೆ ವೆಪನ್ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.  ಅಲ್ಲದೇ, ಇನ್ನೂ ನಾಲ್ಕೈದು ಜನ ದೊಡ್ಡವರ ಪಾತ್ರವೂ ಇದರಲ್ಲಿದೆ ಎಂದು ಅವರು ತಿಳಿಸಿದರು.

ಯಾಸೀನ ದಂಧರಗಿ, ಕರೆಪ್ಪ ಉರ್ಫ್ ಗೂಳಿ ಮಹಾದೇವ ಸೊನ್ನದ ಅವರು ಮಡಿವಾಳಯ್ಯ ಹಿರೇಮಠ ಸ್ವಾಮಿ ಜೊತೆ 10 ವರ್ಷಗಳಿಂದ ಸ್ನೇಹ ಹೊಂದಿದ್ದರು. ಅವರ ಅಂಗಡಿಯಲ್ಲಿರುತ್ತಿದ್ದರು. ಜೊತೆಯಲ್ಲಿ ತಿರುಗಾಡುತ್ತಿದ್ದರು.  ಮೂರ್ನಾಲ್ಕು ದಿನಗಳಿಂದ ಪ್ಲ್ಯಾನ್ ಮಾಡಿದ್ದರು.  ಅ. 30 ರಂದು ಕೊಂಕಣಗಾಂವನಲ್ಲಿ ಧರ್ಮರಾಜ ಚಡಚಣ ಪುಣ್ಯತಿಥಿಯಂದು ಅಲ್ಲಿ ಎಲ್ಲರೂ ಸೇರಿದ್ದರು.  ಅವರ ಕುಟುಂಬದವರೊಂದಿಗೆ ಮಾತನಾಡಿಕೊಂಡು ಬಂದಿದ್ದರು.  ನಂತರ ಈಗ ಬಂಧಿಸಲಾಗಿರುವ 5 ಜನ ಹಾಗೂ ಇನ್ನೂ 10 ರಿಂದ 15 ಜನ ವಿಜಯಪುರದಲ್ಲಿರುವ ಮಡಿವಾಳಯ್ಯ ಹಿರೇಮಠ ಸ್ವಾಮಿ ಆಫೀಸಿನಲ್ಲಿ ರಾತ್ರಿ ಸೇರಿದ್ದರು.  ಯಾರು ಹಲ್ಲೆ ನಡೆಸಬೇಕು? ಯಾರ ಪಾತ್ರ ಏನು ಎಂದು ನಿರ್ಧರಿಸಿದರು.  ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿ ನಸುಕಿನ ಜಾವ ಕಾತ್ರಾಳಗೆ ಹೋಗಿದ್ದರು.  ಅಲ್ಲಿ ಅವರ ಪ್ಲ್ಯಾನ್ ಫೇಲಾಯಿತು.  ನಂತರ ಕನ್ನಾಳ ಕ್ರಾಸ್ ಬಳಿ ದಾಳಿ ಮಾಡಿದರು. ಮೊನ್ನೆ ಚಾಲಕನನ್ನು ಬಂಧಿಸಲಾಗಿತ್ತು.  ಆತನ ಜೊತೆ ಟಿಪ್ಪರ್ ನಲ್ಲಿ ಇಬ್ಬಿಬ್ಬರು ಇದ್ದರು.  ಆ್ಯಕ್ಸಿಡೆಂಟ್ ಆದ ತಕ್ಷಣ ಸಾಹುಕಾರ ಜೊತೆಗಾರರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಸಿದ್ಧು ಬೊಮ್ಮನಜೋಗಿಗೆ ಸೂಚಿಸಲಾಗಿತ್ತು.  ಯಾಸೀನ ದಂಧರಗಿ ಮತ್ತು ಗೂಳಿಗೆ ಈ ಸಂದರ್ಭದಲ್ಲಿ ಮಡಿವಾಳಯ್ಯ ಹಿರೇಮಠ ಸ್ವಾಮಿ ವೆಪನ್ ಕೊಟ್ಟಿದ್ದ.  ಫೈರಿಂಗ್ ಮಾಡಲು ಸೂಚಿಸಲಾಗಿತ್ತು.  ಸಂಜು ಮಾನವರ ಅಟೋದಲ್ಲಿ ಜನರನ್ನು ಕರೆತಂದು ಪೆಟ್ರೋಲ್ ಬಾಂಬ್ ನಿಂದ ದಾಳಿ ನಡೆಸಲು ಸೂಚಿಸಲಾಗಿತ್ತು. ಹೀಗೆ ಪ್ರತಿಯೊಬ್ಬರಿಗೆ ಒಂದೊಂದು ಗುರಿ ನೀಡಲಾಗಿತ್ತು.  ಆ್ಯಕ್ಸಿಡೆಂಟ್ ನಂತರ ಐದಾರು ಜನ ಫೈರಿಂಗ್ ಮಾಡಿದ್ದಾರೆ.  ರವಿ ಬಣಜಿಗ ಎಂಬ ಆರೋಪಿ ಹೊಟೇಲ್ ಇಟ್ಟುಕೊಂಡಿದ್ದು, ಆತ ಧರ್ಮರಾಜ ಚಡಚಣ ಅಭಿಮಾನಿಯಾಗಿದ್ದು, ಐದಾರು ತಿಂಗಳ ಹಿಂದೆ ಈ ತಂಡ ಸೇರಿಕೊಂಡು ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ಅನುಪಮ ಅಗ್ರವಾಲ ತಿಳಿಸಿದರು.

ಇದನ್ನು ಓದಿ: ಶ್ರೀರಂಗಪಟ್ಟಣದ ಬಳಿ ರೌಡಿಶೀಟರ್ ಕಳ್ಳಪಚ್ಚಿ ಹರೀಶ್​ನನ್ನು ಬರ್ಬರವಾಗಿ ಕೊಲೆ ಮಾಡಿದ್ದ 6 ಜನ ಆರೋಪಿಗಳ ಬಂಧನ

ಈ ಪ್ರಕರಣದಲ್ಲಿ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಇಂಡಿ ಡಿವೈಎಸ್ಪಿ ಸಂಕದ, 9 ಜನ ಇನ್ಸ್​​ಪೆಕ್ಟರ್ ಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಶ್ರಮ ಪಟ್ಟು 27 ನಾನಾ ಕಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಅಟೋ ಸೇರಿ ನಾನಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನುಪಮ ಅಗ್ರವಾಲ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿ ನಾರಾಯಣ, ಸಿಪಿಐಗಳಾದ ಬಸವರಾಜ ಮುಕರ್ತಿಹಾಳ, ಮಹಾಂತೇಶ ಧಾಮಣ್ಣವರ, ರವೀಂದ್ರ ನಾಯ್ಕೋಡಿ, ಸುನಿಲ ಕಾಂಬಳೆ, ಸಿ. ಬಿ. ಬಾಗೇವಾಡಿ, ಪಿಎಸ್‌ಐಗಳಾದ ಲಮಾಣಿ, ಅಜೂರ ಸೇರಿದಂತೆ ನಾನಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Published by:HR Ramesh
First published: