ವಿಜಯಪುರದಲ್ಲಿದೆ ಶಿಕ್ಷಕನ ದೇವಸ್ಥಾನ : ಕಳೆದ 65 ವರ್ಷಗಳಿಂದ ಪ್ರತಿನಿತ್ಯ ನಡೆಯುತ್ತಿದೆ ಪೂಜೆ

ಜನ ಪ್ರತಿನಿತ್ಯ ತಮ್ಮ ಮನೆಯಲ್ಲಿರುವ ರೇವಣ ಸಿದ್ದೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಯೇ ಮನೆಯಿಂದ ಹೊರ ಬರುತ್ತಾರೆ. ಇವರ ಹೆಸರಿನಲ್ಲಿಯೇ ಉದ್ಯೋಗ ನಡೆಸುತ್ತಾರೆ. ಯಾವುದೇ ಕಾರ್ಯ ಶುಭಾರಂಭಕ್ಕೂ ಇಲ್ಲಿ ರೇವಣ ಸಿದ್ಧೇಶ್ವರ ಶಿವಶರಣರಿಗೆ ಪೂಜೆ ಸಲ್ಲಿಸುತ್ತಾರೆ

ಶಿಕ್ಷಕನ ದೇವಸ್ಥಾನ

ಶಿಕ್ಷಕನ ದೇವಸ್ಥಾನ

  • Share this:
ವಿಜಯಪುರ(ಸೆಪ್ಟೆಂಬರ್​. 04): ಭಾರತ ಗುರುಪರಂಪರೆಗೆ ಹೆಸರುವಾಸಿ. ಇತ್ತೀಚಿನ ದಿನಗಳಲ್ಲಿ ಚಿತ್ರ ನಟ, ನಟಿಯರ, ರಾಜಕಾರಣಿಗಳ ಹೆಸರಿನಲ್ಲಿ ಮಂದಿರ ನಿರ್ಮಾಣವಾಗಿವೆ. ಆದರೆ, ಇದೆಲ್ಲಕ್ಕಿಂತ ಮಿಗಿಲಾದ ಮತ್ತು ಇಡೀ ಗ್ರಾಮವೇ ಆರಾಧಿಸುವ ದೇವಸ್ಥಾನವೊಂದು ವಿಜಯಪುರ ಜಿಲ್ಲೆಯ ಅಥರ್ಗಾ ಗ್ರಾಮದಲ್ಲಿದೆ. ಕಳೆದ 65 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ದೇವಸ್ಥಾನದಲ್ಲಿ ಇಂದಿಗೂ ಪ್ರತಿನಿತ್ಯ ಪೂಜೆ, ಭಜನೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ಇಲ್ಲಿರುವ ಕನ್ನಡ ಹೆಣ್ಮು ಮಕ್ಕಳ ಶಾಲೆಯಲ್ಲಿಯೂ ಪ್ರತಿದಿನ ಪೂಜೆ ನಡೆಯುತ್ತದೆ. ಈ ಶಾಲೆಗೆ ಬರುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಪ್ರತಿದಿನ ತರಗತಿ ಆರಂಭಕ್ಕೂ ಮುನ್ನ ಪುಟ್ಟ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಕೈಮುಗಿದು ಪ್ರಾರ್ಥಿಸುತ್ತಾರೆ. ರೇವಣಸಿದ್ಧೇಶ್ವರ ನಾಮಸ್ಮರಣೆ ಮಾಡುತ್ತಾರೆ. ಈ ಶಾಲೆಗೆ ಯಾರೇ ಬರಲಿ ಇಲ್ಲಿರುವ ದೇವಸ್ಥಾನಕ್ಕೆ ತೆರಳಿ ಕೈ ಮುಗಿದೇ ಮುಂದಿನ ಕಾರ್ಯ ಕೈಗೊಳ್ಳುತ್ತಾರೆ. ಈ ಶಾಲೆಯಲ್ಲಿ ಕಲಿಯಲು ಮಕ್ಕಳು ಹೆಮ್ಮೆ ಪಟ್ಟರೆ, ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ತಮ್ಮ ಸುದೈವ ಎನ್ನುವುದು ಶಾಲೆಯ ಶಿಕ್ಷಕರು. ಇದಕ್ಕೆಲ್ಲ ಕಾರಣ ರೇವಣ ಸಿದ್ಧೇಶ್ವರ ಶಿಕ್ಷಕರು.

1922ರಲ್ಲಿ ಅಥರ್ಗಾಕ್ಕೆ ಆಗಮಿಸಿದ ರೇವಣ ಸಿದ್ಧೇಶ್ವರ್ ಮೂಲತ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ಅವರು ಇಲ್ಲಿ ಸಲ್ಲಿಸಿದ ಮೂರು ವರ್ಷಗಳ ಸೇವೆಯಲ್ಲಿ ಮಾಡಿದ ಸಾಮಾಜಿಕ ಕೆಲಸ ಕಾರ್ಯಗಳು ಇಂದಿಗೂ ಮನೆ ಮಾತಾಗಿವೆ. ಗ್ರಾಮಸ್ಥರಲ್ಲಿದ್ದ ಅಂಧಶ್ರದ್ಧೆ, ಮೌಢ್ಯಾಚರಣೆ, ಕಂದಾಚಾರಗಳನ್ನು ಹೋಗಲಾಡಿಸಿ, ಮನೆಮನಗಳಿಗೆ ತೆರಳಿ ಮಕ್ಕಳನ್ನು ಶಾಲೆಗಳಿಗೆ ಕರೆ ತಂದು ಅಕ್ಷರ ಕ್ರಾಂತಿ ಮೂಡಿಸಿದ್ದರು.

ಕೇವಲ ಶಿಕ್ಷಕರಾಗಿರದೇ ಸಮಾಜ ಸೇವೆಯ ಮೂಲಕ ಬಹುಮುಖ ಪ್ರತಿಭೆಯಂತೆ ಗ್ರಾಮಸ್ಥರಿಗೆ ಸಕಲ ಕ್ಷೇತ್ರಗಳಲ್ಲಿಯೂ ಮಾರ್ಗದರ್ಶಕರಾಗಿದ್ದರು. ಹೀಗಾಗಿ ಅವರೊಬ್ಬ ದೇವಮಾನವ ಎಂದೇ ಗೌರವ ನೀಡುವ ಇಲ್ಲಿನ ಗ್ರಾಮಸ್ಥರು ರೇವಣ ಸಿದ್ಧೇಶ್ವರ ಹೆಸರಿನಲ್ಲಿನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಅಲ್ಲದೇ, ಅವರು ಕಲಿಸುತ್ತಿದ್ದ ಶಾಲೆಯಲ್ಲಿ ಪುಟ್ಟ ಗುಡಿಯೊಂದನ್ನೂ ನಿರ್ಮಿಸಿ ಗೌರವ ಸಲ್ಲಿಸುತ್ತಿದ್ದಾರೆ ಎನ್ನುತ್ತಾರೆ ಅಥರ್ಗಾ ವಿರಕ್ತ ಮಠಾಧೀಶ ಶ್ರೀ ಮುರುಘ ರಾಜೇಂದ್ರ ಸ್ವಾಮೀಜಿ.

ಬಹತೇಕ ದೇಶದಲ್ಲಿ ನಿರ್ಮಿಸಲಾಗಿರುವ ಶಿಕ್ಷಕನ ಪ್ರಥಮ ದೇವಸ್ಥಾನ ಇದಾಗಿದೆ ಎಂದೇ ಹೇಳಬಹುದಾಗಿದೆ. ಇಲ್ಲಿ ಜನ ಪ್ರತಿನಿತ್ಯ ತಮ್ಮ ಮನೆಯಲ್ಲಿರುವ ರೇವಣ ಸಿದ್ದೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಯೇ ಮನೆಯಿಂದ ಹೊರ ಬರುತ್ತಾರೆ. ಇವರ ಹೆಸರಿನಲ್ಲಿಯೇ ಉದ್ಯೋಗ ನಡೆಸುತ್ತಾರೆ. ಯಾವುದೇ ಕಾರ್ಯ ಶುಭಾರಂಭಕ್ಕೂ ಇಲ್ಲಿ ರೇವಣ ಸಿದ್ಧೇಶ್ವರ ಶಿವಶರಣರಿಗೆ ಪೂಜೆ ಸಲ್ಲಿಸುತ್ತಾರೆ.

ಇದನ್ನೂ ಓದಿ : ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಫೇಸ್​​ಬುಕ್​​ ಮೂಲಕ ವಂಚನೆ : ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ತಮ್ಮೂರ ಉದ್ಧಾರಕ ರೇವಣ ಸಿದ್ದೇಶ್ವರ ಹೆಸರನ್ನು ಚಿರಸ್ಥಾಯಿ ಮಾಡಿರುವ ಅಥರ್ಗಾ ಗ್ರಾಮಸ್ಥರು, ಅವರ ಹೆಸರಿನಲ್ಲಿ ವರ್ಷಾಚರಣೆ ನಡೆಸುತ್ತಾರೆ. 1925 ರ ಫೆಬ್ರವರಿ 23 ರಂದು ರೇವಣ ಸಿದ್ಧೇಶ್ವರರು ಅಥರ್ಗಾ ಗ್ರಾಮದಲ್ಲಿಯೇ ಇಹಲೋಕ ತ್ಯಜಿಸಿದ ಮೇಲೆ ಅವರ ಪಾರ್ಥಿವ ಶರೀರವನ್ನು ಮನಗೂಳಿಗೆ ಕಳುಹಿಸದೇ ಅಥರ್ಗಾ ಗ್ರಾಮಸ್ಥರು ಅವರು ದೀಕ್ಷೆ ಪಡೆದ ವಿರಕ್ತ ಮಠದ ಆವರಣದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿ ಮಂದಿರ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲ, ಮಹಾಶಿವರಾತ್ರಿ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಗ್ರಾಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ರೇವಣ ಸಿದ್ದೇಶ್ವರ ಅವರ ಭಾವಚಿತ್ರವಿದ್ದು, ತಪ್ಪದೆ ಪೂಜೆ ಸಲ್ಲಿಸುತ್ತಾರೆ. ಅವರ ಹೆಸರಿನಲ್ಲಿಯೇ ಉದ್ಯೋಗ ಆರಂಭಿಸುವ ಅಥರ್ಗಾ ಗ್ರಾಮದ ಜನ ಯಶಸ್ಸನ್ನೂ ಕಂಡಿದ್ದಾರೆ.
Published by:G Hareeshkumar
First published: