news18-kannada Updated:November 19, 2020, 8:13 AM IST
ವಿಜಯಪುರ ಪೊಲೀಸ್
ವಿಜಯಪುರ, ನ. 19- ಗುಮ್ಮಟ ನಗರಿಯ ಜನ ಬೆಚ್ಚಿ ಬಿದ್ದಿದ್ದಾರೆ. ಕೇವಲ 15 ದಿನಗಳಲ್ಲಿ ನಡೆದ ಎರಡನೇ ಶೂಟೌಟ್ ಪ್ರಕರಣ ಪೊಲೀಸರೂ ಬೆಚ್ಚಿ ಬೀಳುವಂತೆ ಮಾಡಿದೆ. ನ. 2 ರಂದು ಭೀಮಾ ತೀರದ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಫೈರಿಂಗ್ ಮತ್ತು ಈ ಸಂದರ್ಭದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೋಂದು ಶೂಟೌಟ್ ನಡೆದಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ವಿಡಿಎ ಕಾಂಪ್ಲಕ್ಸ್ ಬಳಿ ಶೂಟೌಟ್ ನಡೆದಿದೆ. ಈ ಘಟನೆಯಲ್ಲಿ ಜೆಸಿಬಿ ಮಾಲಿಕ ಬುದ್ದು ಉರ್ಫ್ ಪದ್ದು ರೂಪಸಿಂಗ್ ರಾಠೋಡ ಎಂಬ 32 ವರ್ಷದ ಯುವಕ ಗಾಯಗೊಂಡಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮತ್ತು ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಗಾಯಗೊಂಡು ವಿಜಯಪುರದ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ದು ಉರ್ಫ್ ಬುದ್ದು ರಾಠೋಡ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಈ ಘಟನೆಯಲ್ಲಿ ಗಾಯಗೊಂಡಿರುವ ಪದ್ದು ಉರ್ಫ್ ಬುದ್ದು ರಾಠೋಡ ಎದೆಯ ಬಲಙಾಗಕ್ಕೆ ಗಾಯವಾಗಿದ್ದು, ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಭಾಗಿಯಾದ ತುಳಸಿರಾಮ ಹರಿಜನ ಈ ಹಿಂದೆ ಪ್ರಕರಣವೊಂದರಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಆರೋಪಿಯ ಬಂಧನಕ್ಕೆ ಪೊಲೀಸರ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಲಿ ಕಂಟೇನರ್ಗಳಲ್ಲಿ ಸುಸಜ್ಜಿತ ಐಸಿಯು, ಬೆಂಗಳೂರಿನಲ್ಲಿ ತಯಾರಾಗಿದೆ ಅತ್ಯದ್ಭುತ ಚಿಕಿತ್ಸಾ ಘಟಕ!
ಈ ಮಧ್ಯೆ, ಯುವಕ ಬುಧವಾರ ಸೋಮದೇವರಹಟ್ಟಿಗೆ ಮದುವೆಗೆ ತೆರಳಿದ್ದ. ಮಧ್ಯಾಹ್ನ ವಿಜಯಪುರಕ್ಕೆ ವಾಪಸ್ ಬಂದಿದ್ದಾನೆ. ಈ ಘಟನೆ ಯಾವ ಕಾರಣಕ್ಕೆ ಆಯಿತು ಎಂಬುದು ಗೊತ್ತಿಲ್ಲ. ಬುದ್ಧು ಉರ್ಫ್ ಪದ್ದು ರಾಠೋಡ ಯಾರೊಂದಿಗೂ ವೈರತ್ವ ಹೊಂದಿರಲಿಲ್ಲ. ಅಲ್ಲದೇ, ಆತನ ಮೇಲೆ ಯಾರು ಗುಂಡು ಹಾರಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಗಾಯಾಳುವಿನ ದೊಡ್ಡಪ್ಪ ಪಾಂಡು ಮಾದು ರಾಠೋಡ ಮತ್ತು ಗಾಯಾಳುವಿನ ಅಣ್ಣ ಲಕ್ಷ್ಮಣ ರೂಪಸಿಂಗ್ ರಾಠೋಡ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಈ ಸುದ್ದಿ ತಿಳಿದ ಬಿಜೆಪಿ ಮುಖಂಡ ವಿಜುಗೌಡ ಎಸ್. ಪಾಟೀಲ, ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಅದೃಷ್ಠವಶಾತ್ ಗಾಯಾಳು ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾನೆ. ವಿಜಯಪುರದಲ್ಲಿ ಈ ರೀತಿ ಗುಂಡಿನ ದಾಳಿ ನಡೆಯುತ್ತಿರುವುದನ್ನು ನೋಡಿದರೆ ಬಿಹಾರ ನೆನಪಿಗೆ ಬರುತ್ತಿದೆ. ವಿಜಯಪುರ ಪೊಲೀಸರು ಕೂಡಲೇ ಇಂಥ ಘಟನೆಗಳನ್ನು ತಪ್ಪಿಸಲು ಮತ್ತು ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಯುಷ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತಿನ್ ಅಗರವಾಲ ಮಾತನಾಡಿ, ಗಾಯಾಳುವಿಗೆ ಎದೆಯ ಬಲಭಾಗಕ್ಕೆ ಗುಂಡು ತಗಲುಲಿದ್ದು, ರಾತ್ರಿ ಶಸ್ಸ್ತಚಿಕಿತ್ಸೆ ಮಾಡಿ ಗುಂಡನ್ನು ಹೊರ ತೆಗೆಯಲಾಗುವುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಗಾಯಾಳು ಅಪಾಯದಿಂದ ಪಾರಾಗಿದ್ದಾನೆ. ಶಸ್ತ್ರ ಚಿಕಿತ್ಸೆಯ ನಂತರ ಆರೋಗ್ಯ ಮತ್ತಷ್ಟು ಸುಧಾರಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಸವನಾಡಿನಲ್ಲಿ ಜೆಡಿಎಸ್ ಶಾಸಕನಿಗೆ ಜೀವ ಬೆದರಿಕೆ; ತಮಗೆ ಜೀವಹಾನಿಯಾದರೆ ಸರ್ಕಾರವೇ ಹೊಣೆ ಎಂದ ಚವ್ಹಾಣಅಜ್ಞಾತ ಸ್ಥಳದಿಂದ ಆರೋಪಿಯಿಂದ ವಿಡಿಯೋ ಬಿಡುಗಡೆ:
ಈ ನಡುವೆ, ಈ ಘಟನೆಯ ಆರೋಪಿ ತುಳಸಿರಾಮ ಹರಿಜನ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ತಾನು ಗುಂಡು ಹಾರಿಸಲು ಕಾರಣವೇನು ಎಂಬುದರ ಕುರಿತು ಮಾಹಿತಿ ನೀಡಿದ್ದಾನೆ. ಖಾದ್ರಿ ವಕೀಲರ ಕಾರ್ ಡೆಕೋರೇಶನ್ ಗೆ ಕರೆದಿದ್ದರು. ಅಲ್ಲಿಗೆ ಹೋಗಿ ಕುಳಿತಿದ್ದೆ. ಅಲ್ಲಿ ಸ್ನೇಹಿತರೊಂದಿಗೆ ತಮಾಷೆ ಮಾಡುತ್ತಿದ್ದಾಗ ಕಾರಿನಲ್ಲಿ ಬಂದ ಏಳೆಂಟು ಜನರು ಮತ್ತು ಬೈಕಿನಲ್ಲಿ ಬಂದ ಮತ್ತಷ್ಟು ಜನರು ಒಳಗೆ ನುಗ್ಗಲು ಯತ್ನಿಸಿದರು. ಆಗ, ಖಾದ್ರಿ ವಕೀಲರ ತಮ್ಮ ಒಳಗೆ ಹಾಕಿ ರಕ್ಷಣೆ ನೀಡಿದರು. ಆದರೂ, ಒಳಗೆ ನುಗ್ಗಿ ಬಂದ ಕೆಲವರು ಎದೆಯ ಮೇಲಿನ ಅಂಗಿ ಹಿಡಿದು ಕೊಲ್ಲಲು ಮುಂದಾದರು. ಆಗ, ಸಾಮಾನು ತೆಗೆದು ಲೋಡ್ ಮಾಡಿ ಗುಂಡು ಹಾರಿಸಿದೆ ಎಂದು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾನೆ.
ಒಟ್ಟಾರೆ ನ. 2 ರಂದು ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ಧಾಳಿ ಮರೆಯುವ ಮುನ್ನವೇ ವಿಜಯಪುರ ಜಿಲ್ಲೆಯಲ್ಲಿ ಮತ್ತೋಂದು ಶೂಟೌಟ್ ನಡೆದಿರುವುದು ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬೀಳುವಂತಾಗಿದೆ. ಅಷ್ಟೇ ಅಲ್ಲ, ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ವಿಜಯಪುರ ಜಿಲ್ಲೆಯ ಪೊಲೀಸರಿಗೂ ಸವಾಲಾಗಿವೆ.
ವರದಿ: ಮಹೇಶ ವಿ. ಶಟಗಾರ
Published by:
Vijayasarthy SN
First published:
November 19, 2020, 8:13 AM IST