ತಾಳಿ, ಕಿವಿ ಬೆಂಡೋಲೆ ಮಾರಿ ತವರಿಗೆ ಹೊರಟವರ ಗೋಳು; ಮೂರು ಬಾರಿ ಕ್ವಾರಂಟೈನ್​ನಿಂದ ಕಂಗೆಟ್ಟ ಶ್ರಮಿಕರು

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕೂಡ ಈ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಧಾನ್ಯಗಳನ್ನು ವಿತರಿಸಿ ನೆರವಿಗೆ ಧಾವಿಸಿದ್ದಾರೆ. ಈಗ ಇಲ್ಲಿಯೂ ಕ್ವಾರಂಟೈನ್ ಮುಗಿಸಿದ ಈ ಬಡ ಕುಟುಂಬಗಳು ತಮ್ಮೂರಿಗೆ ಮರಳಿವೆ.

ಶ್ರಮಿಕ ಜನರಿಗೆ ಅನ್ನಾಹಾರ ನೀಡುತ್ತಿರುವ ಶಾಸಕ ನಡಹಳ್ಳಿ

ಶ್ರಮಿಕ ಜನರಿಗೆ ಅನ್ನಾಹಾರ ನೀಡುತ್ತಿರುವ ಶಾಸಕ ನಡಹಳ್ಳಿ

  • Share this:
ವಿಜಯಪುರ(ಮೇ 29): ಇದು ಒಂದಲ್ಲ, ಎರಡಲ್ಲ, ಮೂರು ಬಾರಿ ಕ್ವಾರಂಟೈನ್ ಅನುಭವಿಸಿದ ಬಡ ಕಾರ್ಮಿಕರ ಗೋಳಿನ ಕಥೆ. ಹೊಟ್ಟೆಪಾಡಿಗಾಗಿ ಮಹಾರಾಷ್ಚ್ರಕ್ಕೆ ತೆರಳಿದ್ದ ಬಡ ಶ್ರಮಜೀವಿಗಳು ವಿಜಯಪುರ ಜಿಲ್ಲೆಯ ತವರೂರಿಗೆ ಬರಲು ಪಟ್ಟ ವ್ಯಥೆಯ ಕಥೆಯಿದು. 

ಉತ್ತರ ಕರ್ನಾಟಕದಲ್ಲಿ ಗುಳೆ ಎಂಬುದು ಹಿಂದಿನಿಂದ ಬಂದ ಬಳುವಳಿಯಂತಿತ್ತು, ಈ ಭಾಗದಲ್ಲಿರುವ ಬಡತನ, ನಿರುದ್ಯೋಗಕ್ಕೆ ಹಿಡಿದಿ ಕೈಗನ್ನಡಿಯಾಗಿದೆ.  ಹೀಗಾಗಿ ಈ ಭಾಗದ ಜನ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ನಾಲ್ಕಾರು ತಿಂಗಳು ಗುಳೆ ಹೋಗುತ್ತಾರೆ. ಈ ಋತುಮಾನ ಕಾರ್ಮಿಕರು ಅರ್ಥಾತ್ ಶ್ರಮಜೀವಿಗಳು ಈ ಬಾರಿಯೂ ಬೇಸಿಗೆ ಆರಂಭಕ್ಕೂ ಮುಂಚೆಯೆ ಬದುಕಿನ ಬುತ್ತಿ ಹುಡುಕಿಕೊಂಡು ಗುಳೆ ಹೋಗಿದ್ದರು.  ಮಹಾರಾಷ್ಟ್ರ ತಲುಪಿದ ಮೇಲೆ ಕೆಲಸ ಸಿಗುವವರೆಗೆ ಇರಲಿ ಎಂದು ಅಲ್ಪಸ್ವಲ್ಪ ಆಹಾರ ಧಾನ್ಯಗಳನ್ನು ಜೊತೆಯಲ್ಲಿ ಒಯ್ದಿದ್ದರು. ಮಹಾರಾಷ್ಟ್ರದಲ್ಲಿ ಕೆಲಸ ಆರಂಭವಾಗಿ ಒಂದೆರಡು ತಿಂಗಳಾಗುವಷ್ಟರಲ್ಲಿಯೇ ಕೊರೊನಾ ಒಕ್ಕರಿಸಿದೆ. ಭಾರತ ಲಾಕ್​ಡೌನ್ ಆಗಿದ್ದರಿಂದ ತುತ್ತು ಅನ್ನಕ್ಕಾಗಿಯೂ ಪರದಾಡುವಂತಾಗಿದೆ. ಇವರನ್ನು ಕರೆದುಕೊಂಡು ಹೋಗಿದ್ದವರು ಕೈಚೆಲ್ಲಿದ್ದಾರೆ.

ಆಗ ತಾವು ಮೊದಲೇ ತೆಗೆದುಕೊಂಡು ಹೋಗಿದ್ದ ಆಹಾರ ಧಾನ್ಯ ಬಳಸಿ ಪ್ರತಿನಿತ್ಯ ಒಂದು ಹಿಡಿಯಷ್ಟು ಅನ್ನ ತಿಂದು ಬದುಕಿದ್ದಾರೆ. ಇದ್ದ ಆಹಾರ ಧಾನ್ಯಗಳೂ ಖಾಲಿ. ಬೇರೆ ಅನ್ನ ಆಹಾರಕ್ಕೂ ತತ್ವಾರ. ಇಲ್ಲಿದ್ದು ಪ್ರಯೋಜನವಿಲ್ಲ. ತಮ್ಮೂರಿಗೆ ಮರಳಿ ಅಲ್ಲಿಯೇ ಬದುಕಿದರೆ ಬದುಕಿ ಹೊಸ ಜೀವನ ನಡೆಸೋಣ ಎಂದು ಅಲ್ಲಿಂದ ಹೊರಡಬೇಕೆಂದರೆ ಲಾಕ್​ಡೌನ್ ಸಮಸ್ಯೆ ಎದುರಾಗಿದೆ. ತವರೂರಿಗೆ ಮರಳಲು ಹಣವಿಲ್ಲದೆ ಕೊನೆಗೆ ಕೊರಳಲ್ಲಿನ ತಾಳಿ, ಕಿವಿಯಲ್ಲಿನ ಬೆಂಡೋಲೆಗಳನ್ನು ಮಾರಾಟ ಮಾಡಿ ಯಾವುದೋ ವಾಹನ ಹತ್ತಿ ಬಂದಾಗ ಅಲ್ಲಿ ಚೆಕ್ ಪೋಸ್ಟ್​ನಲ್ಲಿ ತಡೆದ ಪೊಲೀಸರು ಇವರನ್ನು 14 ದಿನ ಕ್ವಾರಂಟೈನ್ ಸೆಂಟರ್​ಗೆ ಕಳುಹಿಸಿದ್ದಾರೆ. ಮೊದಲ ಕ್ವಾರಂಟೈನ್ ಮುಗಿಸಿ ಮತ್ತೊಂದು ವಾಹನ ಹತ್ತಿ ಬರುವಾಗ ಎರಡನೇ ಚೆಕ್​ಪೋಸ್ಟ್​ನಲ್ಲಿ ಮತ್ತೆ ತಡೆದ ಅಲ್ಲಿನ ಪೊಲೀಸರು ಇವರನ್ನು ಮತ್ತೆ ಕ್ವಾರಂಟೈನ್ ಸೆಂಟರ್​ಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಮನಬಳಕೆ ವಸ್ತುವಿನಿಂದ ಹೈಟೆಕ್ ಸ್ಮಾರ್ಟ್ ಮಾಸ್ಕ್; ಬೆಲೆಯೂ ಅಗ್ಗ: ಹುಬ್ಬಳ್ಳಿ ಹುಡುಗನ ಪ್ರಯೋಗ

ಲಾಕ್​ಡೌನ್ ಸಡಿಲಿಕೆ ಮತ್ತು ಎರಡನೇ ಬಾರಿ ಕ್ವಾರಂಟೈನ್ ಮುಗಿಸಿ ವಿಜಯಪುರ ಜಿಲ್ಲೆಯ ಧೂಳಖೇಡ ಚೆಕ್​ಪೋಸ್ಟ್ ಮೂಲಕ ತವರು ಜಿಲ್ಲೆಗೆ ಬಂದರೆ ಇಲ್ಲಿಯೂ ಮತ್ತೆ ಇವರನ್ನು ಕ್ವಾರಂಟೈನ್ ಮಾಡಲಾಗಿದೆ. ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಭೇಟಿ ನೀಡಿದಾಗ ಮಹಿಳೆಯರು ತಮ್ಮ ಕಣ್ಣೀರಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಈ ಬಡ ಕುಟುಂಬಗಳು ಋತುಮಾನ ವಲಸಿಗರಾಗಿದ್ದಾರೆ. ಇವರ ಬಳಿ ಈಗ ಹಣ ಬಿಡಿ, ಆಹಾರ ಧಾನ್ಯಗಳೂ ಕೂಡ ಇಲ್ಲ. ಇವರಿಗೆ ಎರಡು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಮತ್ತು ಇತರ ದಿನಸಿಗಳನ್ನು ಸರಕಾರ ನೀಡಬೇಕು ಎಂದು ಸ್ಥಳೀಯ ಮುದ್ದೇಬಿಹಾಲ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್‌ ಸೂಚಿಸಿದರೆ ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಸಿದ್ದ: ರಮೇಶ್ ಜಾರಕಿಹೊಳಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಕೇಂದ್ರ ಸರಕಾರದ ನಿರ್ದೇಶನದಂತೆ ಆತ್ಮನಿರ್ಭರ ಯೋಜನೆಯಡಿ ವಲಸೆ ಕಾರ್ಮಿಕರ ಬಳಿ ಬಿಪಿಎಲ್ ಕಾರ್ಡು ಇಲ್ಲದಿದ್ದರೂ ಪರವಾಗಿಲ್ಲ. ಈ ಕಾರ್ಮಿಕರು ತಾವಿರುವ ಪ್ರದೇಶದ ಸಮೀಪದ ಪಡಿತರ ಅಂಗಡಿಗಳಿಗೆ ತೆರಳಿ ಆಧಾರ ಕಾರ್ಡ್ ತೋರಿಸಿದರೆ ಸಾಕು. ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಪ್ರತಿಯೊಂದು ಕುಟುಂಬಗಳಿಗೆ 2 ಕೆಜಿ ಕಡಲೆಕಾಳು ನೀಡಲಾಗುತ್ತಿದೆ. ಈಗ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದ್ದು, ಜೂನ್ ತಿಂಗಳಲ್ಲಿ ಮೇ ಮತ್ತು ಜೂನ್ ತಿಂಗಳ ನಾಲ್ಕು ಕೆಜಿ ಕಡಲೆಕಾಳು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಅನಕ್ಷರಸ್ಥ ಬಡ ಕುಟುಂಬಗಳಿಗೆ ವಿಜಯಪುರ ಜಿಲ್ಲಾಡಳಿತ ಊಟೋಪಚಾರ ಮಾಡಿದೆ. ಅದರ ಜೊತೆಯಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕೂಡ ಈ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಧಾನ್ಯಗಳನ್ನು ವಿತರಿಸಿ ನೆರವಿಗೆ ಧಾವಿಸಿದ್ದಾರೆ. ಈಗ ಇಲ್ಲಿಯೂ ಕ್ವಾರಂಟೈನ್ ಮುಗಿಸಿದ ಈ ಬಡ ಕುಟುಂಬಗಳು ತಮ್ಮೂರಿಗೆ ಮರಳಿವೆ.

ವರದಿ: ಮಹೇಶ ವಿ. ಶಟಗಾರ

First published: