HOME » NEWS » District » VIJAYAPURA MARYADA HATAYE HINDU BOY AND MUSLIM GIRL KILLED BY GIRLS FAMILY KVD

ಏಕಾಂತದಲ್ಲಿದ್ದ ಪ್ರೇಮಿಗಳು ಸಿಕ್ಕಿಬಿದ್ದಿದ್ದರು.. ಅಂತರ್ ಮತೀಯ ಪ್ರೇಮ ಮರ್ಯಾದಾ ಹತ್ಯೆಯಲ್ಲಿ ಅಂತ್ಯ!

ನಿನ್ನೆ ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ತೋಟಕ್ಕೆ ಕರೆದೊಯ್ದು ಕಟ್ಟಿ ಹಾಕಿ ಥಳಿಸಿದ್ದಾರೆ.

news18-kannada
Updated:June 23, 2021, 7:08 PM IST
ಏಕಾಂತದಲ್ಲಿದ್ದ ಪ್ರೇಮಿಗಳು ಸಿಕ್ಕಿಬಿದ್ದಿದ್ದರು.. ಅಂತರ್ ಮತೀಯ ಪ್ರೇಮ ಮರ್ಯಾದಾ ಹತ್ಯೆಯಲ್ಲಿ ಅಂತ್ಯ!
ಕೊಲೆಯಾದ ಪ್ರೇಮಿಗಳು
  • Share this:
ವಿಜಯಪುರ: ವಿಶ್ವಗುರು ಬಸವಣ್ಣನವರು ಜನ್ಮ ತಾಳಿದ ನೆಲದಲ್ಲಿ‌ ಮರ್ಯಾದಾ ಹತ್ಯೆ ನಡೆದಿದೆ. ದಲಿತ ಹುಡುಗನನ್ನ ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಹುಡುಗಿಯ ತಂದೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮರ್ಯಾದ ಹತ್ಯೆ ಕಂಡು ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ. ಯುವಕನ ತಾಯಿಯೇ ಕಣ್ಣು ಮುಂದೇಯೇ ಇಡೀ ಘಟನೆ ನಡೆದಿದೆ. ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಬಾಲಕಿಯ ತಂದೆ ಹಾಗೂ ಆಕೆಯ ಸಹೋದರ ಸೇರಿ ಮಗಳು ಹಾಗೂ ಆಕೆಯ ಪ್ರಿಯಕರನ್ನು ಭರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಯುವಕ ಬಸವರಾಜ ಬಡಿಗೇರ (19)ಹಾಗೂ ಪಕ್ಕದ ಗ್ರಾಮ ಖಾನಾಪುರದ 18 ವರ್ಷದ ಯುವತಿ ಕೊಲೆಯಾದವರು.

ಯುವತಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯುವತಿಯ ತಂದೆ ಹಾಗೂ ಆತನ ಅಳಿಯಂದಿರೂ ಕಲ್ಲು ಹಾಗೂ ಚಾಕು ಬಳಸಿ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಲಕೇರಿ ಠಾಣೆ ಪೊಲೀಸರು ಬರ್ಬರ ಹತ್ಯೆ ನಡೆಸಿದ ಆರೋಪಿಗಳ ಬಂಧಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಎರಡು ವರ್ಷಗಳ ಹಿಂದೆ ಯುವತಿ ಖಾನಾಪುರ ಗ್ರಾಮದಿಂದ ಸಲಾದಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಗೆ ಬಂದು ವಾಸವಾಗಿದ್ದಳು. ಇದೇ ಗ್ರಾಮದಲ್ಲಿ ಆಟೋ ಚಾಲಕನಾಗಿದ್ದ ಬಸವರಾಜ್ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಆದರೆ ಇವರಿಬ್ಬರ ಪ್ರೇಮಕ್ಕೆ ಯುವತಿ ಮನೆಯವರ ತೀವ್ರ ವಿರೋಧವಿತ್ತು. ಇಷ್ಟಾದರೂ ಆಟೋ ಡ್ರೈವರ್ ಬಸವರಾಜ್ ಹಾಗೂ ಯುವತಿ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಹಿಂದೆ ಮನೆಯವರಿಗೆ ಈ ವಿಚಾರ ತಿಳಿದ ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರ ಪ್ರೇಮ ಪಯಣ ಮುಂದುವರೆದಿತ್ತು.

ಆಗಾಗ ಇಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದರು. ಅದೇ ರೀತಿ ನಿನ್ನೆಯೂ ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿದ್ದಾನೆ. ಬಳಿಕ ಯುವಕನನ್ನು ಗ್ರಾಮದಲ್ಲಿ ಸುತ್ತಾಡಿಸಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮಗನನ್ನು ಬಿಡಲು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಯುವತಿಯ ಅಜ್ಜ, ಆಕೆಯ ಸಹೋದರ ಹಾಗೂ ಮಾವಂದಿರು ಯುವಕನ ತಾಯಿ ಹಾಗೂ ಸಹೋದರನ ಮುಂದೆಯೇ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಯುವತಿಯ ತಂದೆ ಬಂದಗಿಸಾಬ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ನಿಲ್ಲಿಸಲು ಪ್ರೇಮಿಗಳ ಹಿಂದೆ ಹೋದ ಪೊಲೀಸರಿಗೆ ಶಾಕ್​..!

ಬಸವರಾಜ್ ಹಾಗೂ ಯುವತಿ ಒಟ್ಟಿಗೆ ಹೊಲದಲ್ಲಿ‌ ಇರೋ‌ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಕುಪಿತನಾದ ಬಂದಗಿಸಾಬ್ ಮಾರಕಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಅಲ್ಲಿದ್ದ ಯುವಕನ ಸಂಬಂಧಿಕರಿಗೆ ಹೆದರಿಸಿದ್ದಾನೆ. ಅಲ್ಲದೆ ಯುವಕ ಬಸವರಾಜ್ ಬಡಿಗೇರ ಹಾಗೂ ಆತನ ಪುತ್ರಿಯನ್ನು ಥಳಿಸಿದ್ದಾನೆ. ಈ ವೇಳೆ ಬಸವರಾಜ್ ಕುಟುಂಬಸ್ಥರು ಎಷ್ಟೇ ಮನವಿ ಮಾಡಿದರೂ ಕೇಳದೆ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಬಸವರಾಜ್ ಮತ್ತು ಮಗಳ ಮೇಲೆ ಬಂದಗಿಸಾಬ್ ಹಾಗೂ ಆತನ ಅಳಿಯಂದಿರು ಸೇರಿ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾರೆ.

ಈ ಎಲ್ಲ ಘಟನೆಗಳು ಕೊಲೆಯಾದ ಬಸವರಾಜ್ ತಾಯಿ ಮಲ್ಲಮ್ಮ ಹಾಗೂ ಆತನ ಸಹೋದರ ಕಲ್ಯಾಣಕುಮಾರ್ ಮುಂದೆಯೇ ನಡೆದಿದೆ‌. ಘಟನೆ ಕುರಿತು ಯವತಿ ತಂದೆ ಬಂದಗಿಸಾಬ್, ಸಹೋದರ ದಾವಲ್‌ಪಟೇಲ್,  ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್  ಸೇರಿದಂತೆ ಐದು ಜನರ ವಿರುದ್ಧ ಕಲಕೇರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿದರು. ರಾತ್ರಿ ವೇಳೆಯಲ್ಲೇ ಮರಣೋತ್ತರ ಪರೀಕ್ಷೆ ಮಾಡಿ ಯುವತಿಯ ಶವವನ್ನು ಆಕೆಯ ಸಂಬಂಧಿಗಳು ಕೊಂಡೊಯ್ದು ರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಿದರು. ಇಂದು ಯುವಕ ಬಸವರಾಜ್ ಮೃತ ಪಡೆದು ಆತನ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಿದರು.
Published by: Kavya V
First published: June 23, 2021, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories