• Home
  • »
  • News
  • »
  • district
  • »
  • ಗ್ರಾ.ಪಂ. ಚುನಾವಣೆ: ಮತ ಎಣಿಕೆ ವೇಳೆ ಆಘಾತಕ್ಕೊಳಗಾಗಿ ಸಾವಪ್ಪಿದ್ದ ಅಭ್ಯರ್ಥಿಗೆ ವಿಜಯಮಾಲೆ

ಗ್ರಾ.ಪಂ. ಚುನಾವಣೆ: ಮತ ಎಣಿಕೆ ವೇಳೆ ಆಘಾತಕ್ಕೊಳಗಾಗಿ ಸಾವಪ್ಪಿದ್ದ ಅಭ್ಯರ್ಥಿಗೆ ವಿಜಯಮಾಲೆ

ವಿಜಯಪುರದಲ್ಲಿ ಮೃತಪಟ್ಟ ಅಭ್ಯರ್ಥಿ ಹಫೀಜ್ ಹಾಗೂ ಗೆಲುವು ಸಾಧಿಸಿದ ಶಾಸಕರ ಸಹೋದರಿ

ವಿಜಯಪುರದಲ್ಲಿ ಮೃತಪಟ್ಟ ಅಭ್ಯರ್ಥಿ ಹಫೀಜ್ ಹಾಗೂ ಗೆಲುವು ಸಾಧಿಸಿದ ಶಾಸಕರ ಸಹೋದರಿ

ಮತ ಎಣಿಕೆ ವೇಳೆ ಆಘಾತಕ್ಕೊಳಗಾಗಿ ಸಾವಪ್ಪಿದ ಅಭ್ಯರ್ಥಿಗೆ ಒಲಿದ ಚುನಾವಣೆ ಗೆಲುವು; ಜೆಡಿಎಸ್ ಶಾಸಕ ದೇವಾನಂದ ಚವ್ಹಾಣರ ಸಹೋದರಿಗೆ ಗೆಲುವು; ಲಾಟರಿಯಲ್ಲಿ ಗೆದ್ದವರು, ಒಂದು ಮತದಿಂದ ಗೆದ್ದವರು, ಪೊಲೀಸಪ್ಪನಿಗೆ ಗೆಲುವು ಹೀಗೆ ಹಲವು ವೈಶಿಷ್ಟ್ಯಗಳು ವಿಜಯಪುರದ ಗ್ರಾ.ಪಂ. ಚುನಾವಣೆಯಲ್ಲಿ ಇವೆ.

ಮುಂದೆ ಓದಿ ...
  • Share this:

ವಿಜಯಪುರ, ಡಿ. 31: ಗ್ರಾಮ ಪಂಚಾಯಿತಿ ಚುನಾವಣೆ ವಿಜಯಪುರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಫಲಿತಾಂಶ ಏರಿಳಿತದಿಂದ ಅಘಾತಕ್ಕೊಳಗಾದ ಅಭ್ಯರ್ಥಿ ಸತ್ತ ಬಳಿಕ ಜಯ ಗಳಿಸಿದ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಾ. ನಂ. 1ರ ಅಭ್ಯರ್ಥಿ ಹಫೀಜ್ ಅಹ್ಮದ್ ಕುರೇಶಿ ನಿನ್ನೆ ಇಂಡಿಯಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರಕ್ಕೆ ಆಮಗಿಸಿದ್ದರು. ರಾತ್ರಿ ಮತ ಎಣಿಕೆ ಮುಂದುವರೆದಿತ್ತು. ಈ ಸಂದರ್ಭದಲ್ಲಿ ಮತ ಎಣಿಕೆ ಟೆನ್ಶನ್ ತಂದಿತ್ತು. ತಮ್ಮ ಆಯ್ಕೆಗೆ ಬೇಕಿರುವ ಮತಗಳು ಏರಿಳಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಅಘಾತಗೊಂಡಿದ್ದಾರೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮತ ಎಣಿಕೆ ಕೇಂದ್ರದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.


ಆದರೆ, ಅಭ್ಯರ್ಥಿ ಹಫೀಜ್ ಅಹ್ಮದ್ ಕುರೇಶಿ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ. ಹಫೀಜ್ ಅಹ್ಮದ್ ಕುರೇಶಿ ನಿಧನದ ಬಳಿಕ ಫಲಿತಾಂಶ ಪ್ರಕಟವಾಗಿದೆ.  ಈ ಫಲಿತಾಂಶದಲ್ಲಿ ಹಫೀಜ್ ಅಹ್ಮದ ಕುರೇಶಿಗೆ 533 ಮತ ಸಿಕ್ಕು ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಅಭ್ಯರ್ಥಿಗೆ 457 ಮತಗಳು ಬಂದಿವೆ.


ಹಫೀಜ್ ಅಹ್ಮದ ಕುರೇಶಿ ಈಗಾಗಲೇ ಒಂದು ಬಾರಿ ಗ್ರಾ. ಪಂ. ಅಧ್ಯಕ್ಷರಾಗಿದ್ದರು.  ಅಲ್ಲದೇ, ಒಂದು ಬಾರಿ ಸದಸ್ಯರೂ ಆಗಿದ್ದರು.  ಈಗ 3ನೇ ಬಾರಿ ಸ್ಪರ್ಧಿಸಿದ್ದರು.  ಆದರೆ, ಮತ ಎಣಿಕೆ ಸಂದರ್ಭದಲ್ಲಿ ಫಲಿತಾಂಶದ ಏರಿಳಿತ ಅವರ ಎದೆ ಬಡಿತ ಹೆಚ್ಚಿಸಿ ಟೆನ್ಶನ್ ನಿಂದಾಗಿ ಅಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಘಟನೆ ಅವರ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಅಘಾತ ಉಂಟು ಮಾಡಿದೆ.


ಇದನ್ನೂ ಓದಿ: ಬಿಜೆಪಿಯ ಕೃಷಿಪರ ನೀತಿಗೆ ರೈತರ ಬೆಂಬಲ ಇರುವುದಕ್ಕೆ ಗ್ರಾ.ಪಂ. ಚುನಾವಣೆ ಗೆಲುವು ಸಾಕ್ಷಿ: ಸಿಎಂ ಯಡಿಯೂರಪ್ಪ


ಅಕ್ಕನ ವಿರುದ್ಧ ಗೆದ್ದ ಜೆಡಿಎಸ್ ಶಾಸಕರ ಸಹೋದರಿ:


ಬಸವ ನಾಡಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ತಾಂಡಾ ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ಇಲ್ಲಿ ಮತದಾರರು ಈ ಬಾರಿ ಅಕ್ಕನ ಬದಲಿಗೆ ತಂಗಿಗೆ ಜೈ ಎಂದಿದ್ದಾರೆ.


ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಅವರ ಇಬ್ಬರು ಸಹೋದರಿಯರು ಹಿಟ್ಟಿನಹಳ್ಳಿ ಗ್ರಾ. ಪಂ. ಗೆ ಪರಸ್ಪರ ವಿರುದ್ಧ ಸ್ಪರ್ಧಿಸಿದ್ದರು.  ಈ ಚುನಾವಣೆಯಲ್ಲಿ ತಂಗಿ ಕಸ್ತೂರಿಬಾಯಿ ದೊಡಮನಿ ತಮ್ಮ ಸ್ವಂತ ಅಕ್ಕ ನೀಲಾಬಾಯಿ ಅಂಗಡಿ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ. ತಂಗಿ ಕಸ್ತೂರಿಬಾಯಿ ದೊಡಮನಿಗೆ 342 ಮತಗಳು ಬಂದಿದ್ದರೆ, ಅಕ್ಕ ನೀಲಾಬಾಯಿ ಅಂಗಡಿಗೆ 246 ಮತ ಬಂದಿವೆ.  ಇಬ್ಬರೂ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಅವರ ಒಡಹುಟ್ಟಿದ ಖಾಸಾ ಅಕ್ಕಂದಿರಾಗಿದ್ದಾರೆ.


ನೀಲಾಬಾಯಿ ಅಂಗಡಿ ಮೂರು ಬಾರಿ ಗ್ರಾ. ಪಂ. ಸದಸ್ಯೆ, 2 ಬಾರಿ ಅಧ್ಯಕ್ಷೆಯಾಗಿದ್ದರು.  ಕಸ್ತೂರಿಬಾಯಿ ದೊಡಮನಿ ಒಂದು ಬಾರಿ ಸಿಂದಗಿ ತಾ. ಪಂ. ಉಪಾಧ್ಯಕ್ಷರಾಗಿದ್ದರು.  ಈ ಬಾರಿ ಇಲ್ಲಿನ ಮತದಾರರು ತಂಗಿಗೆ ಜೈ ಎಂದಿದ್ದಾರೆ.


ಇದನ್ನೂ ಓದಿ: ಕರ್ನಾಟಕದ ಅಘನಾಶಿನಿ ಜೌಗು ಮತ್ತು ಮ್ಯಾಂಗ್ರೋವ್​ನ್ನು ರಾಮ್ಸರ್ ಕನ್ವೆನ್ಷನ್​ಗೆ ಸೇರಿಸಲು ಆಗ್ರಹ


ಲಾಟರಿಯಲ್ಲಿ ಗೆದ್ದ ಅಭ್ಯರ್ಥಿಗಳು:


ಈ ಮಧ್ಯೆ ಫಲಿತಾಂಶದಲ್ಲಿ ಸಮಮತ ಪಡೆದ ಇಬ್ಬರು ಅಭ್ಯರ್ಥಿಗಳು ಲಾಟರಿಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಓರ್ವ ಅಭ್ಯರ್ಥಿ ಹಗಲು ಹೊತ್ತಿನಲ್ಲಿ ಜಯ ಗಳಿಸಿದರೆ, ಮತ್ತೋಬ್ಬರು ಮಧ್ಯರಾತ್ರಿ ಗೆಲುವು ಸಾಧಿಸಿದ್ದಾರೆ.


ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾ. ಪಂ. ಚುನಾವಣೆಯಲ್ಲಿ 2ನೇ ವಾರ್ಡಿನ ಇಬ್ಬರು ಅಭ್ಯರ್ಥಿಗಳಿಗೆ 311 ಸಮಾನ ಮತಗಳು ಬಂದಿದ್ದವು.  ಆಗ ಚೀಟಿ ಎತ್ತುವ ಮೂಲಕ ಲಾಟರಿ ನಡೆಸಿ ಅಭ್ಯರ್ಥಿಯ ಆಯ್ಕೆ ನಡೆಯಿತು.  ಈ ಲಾಟರಿಯಲ್ಲಿ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು.  ರಾವುತಪ್ಪ ಆಲೂರ ಸೋಲಬೇಕಾಯಿತು.


ಒಂದು ಮತದ ಅಂತರದಲ್ಲಿ ಗೆದ್ದ ಅಭ್ಯರ್ಥಿ:


ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂ ಮಲಘಾಣ ಗ್ರಾ. ಪಂ. 2 ನೇ ವಾರ್ಡಿನಲ್ಲಿ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತದ ಅಂತರದಿಂದ ಗೆದ್ದು ಬೀಗಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ರವಿಂದ್ರ ಲಕ್ಷ್ಮಣ ಕಲಗುರ್ಕಿ 110 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಮಹಾಂತೇಶ ಅಂಬಿಗೇರ ತಲಾ 109 ಮತಗಳನ್ನು ಪಡೆದರು.  ಹೀಗಾಗಿ ರವೀಂದ್ರ ಲಕ್ಷ್ಮಣ ಕಲಗುರ್ಕಿ ಗೆಲುವು ಸಾಧಿಸಿದರು.


ಖಾಕಿ ಬಳಿಕ ಖಾದಿ ತೊಟ್ಟ ಅಭ್ಯರ್ಥಿ ಗೆಲುವು:


ಖಾಕಿಯಿಂದ ನಿವೃತ್ತಿಯಾದ ಎಎಸ್ಐ‌ ಈಗ ಗ್ರಾ. ಪಂ.‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾ. ಪಂ. ಗೆ ನಡೆದ ಚುನಾವಣೆಯಲ್ಲಿ ನಿವೃತ್ತ ಎಎಸ್ಐ ಸದಾಶಿವ ಭತಗುಣಕಿ ಆಯ್ಕೆಯಾಗಿದ್ದಾರೆ.  350 ಮತ ಪಡೆದು ಆಯ್ಕೆಯಾದ ಸದಾಶಿವ ಭತಗುಣಕಿ ವಿಜಯಪುರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಚಾಮರಾಜನಗರದ ಫಲಾನುಭವಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ರಾಷ್ಟ್ರೀಯ ಪುರಸ್ಕಾರ


ಮತ ಎಣಿಕೆ ಕೇಂದ್ರಕ್ಕೆ ಕುಡಿದು ಬಂದು ರಂಪಾಟ ಮಾಡಿದ ಗೆದ್ದ ಅಭ್ಯರ್ಥಿ:


ಈ ಮಧ್ಯೆ ಚುನಾವಣೆಯಲ್ಲಿ ಗೆಲುವ ಸಾಧಿಸಿದ ಹುಮ್ಮಸ್ಸಿನಲ್ಲಿ ಅಭ್ಯರ್ಥಿಯೊಬ್ಬರು ಕಂಠಪೂರ್ತಿ ಕುಡಿದು ಬಂದು ಮತ ಎಣಿಕೆ ಕೇಂದ್ರದಲ್ಲಿ ರಂಪಾಟ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.


ಹಣಮಾಪೂರ ಗ್ರಾ. ಪಂ. ಬಳೂತಿ ಆರ್. ಸಿ. ಮತಕ್ಷೇತ್ರದ ವಿಜೇತ ಅಭ್ಯರ್ಥಿ ವಿಜೇತ ಅಭ್ಯರ್ಥಿ ರಾವುತಪ್ಪ ಶಿವಪ್ಪ ಮಟ್ಟಿಹಾಳ ಕುಡಿದ ಮತ್ತಿನಲ್ಲಿ ಬಂದು ರಂಪಾಟ ಮಾಡಿದ್ದಾರೆ.  ಗೆಲುವಿನ ನಂತರ ಸಹಿ ಮಾಡಿ ಆಯ್ಕೆ ಪ್ರಮಾಣ ಪತ್ರ ಲು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅಭ್ಯರ್ಥಿ ಕುಡಿದ ಮತ್ತಿನಲ್ಲಿ ಕೊರಳಿಗೆ ಹಾರಗಳನ್ನು ಹಾಕಿಕೊಂಡು ಬಂದು ಮನಬಂದಂತೆ ವರ್ತಿಸಿದ್ದಾರೆ.  ಮತ ಎಣಿಕೆ ಕೇಂದ್ರದಲ್ಲಿ ಬಂದು ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ಜೊತೆ ವಾಗ್ವಾದ ಕೂಡ ಮಾಡಿದ್ದಾರೆ.  ನಂತರ ಸಹಿ ಮಾಡಿ ಪ್ರಮಾಣ ಪತ್ರ ಪಡೆದುಕೊಂಡು ತೆರಳಿದ್ದಾರೆ.  ಈ ಸಂದರ್ಭದಲ್ಲಿ ಅಭ್ಯರ್ಥಿಯನ್‌ನು ಪೊಲೀಸರು ಸಮಜಾಯಿಷಿ ಮತ ಎಣಿಕೆ ಕೇಂದ್ರದಿಂದ ಹೊರಗೆ ಕಳುಹಿಸಿದ್ದಾರೆ.


ಗೆದ್ದವರಿಂದ ಸೋತವರ ಮೇಲೆ ಹಲ್ಲೆ ಆರೋಪ:


ಈ ಮಧ್ಯೆ ಸೋತ ಅಭ್ಯರ್ಥಿ ಮತ್ತು ಅವರ ಕುಟುಂಬಸ್ಥರ ಮೇಲೆ ಗೆದ್ದವರ ಗೆದ್ದವರಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಡುಮುಕನಾಳ ಗ್ರಾಮ ಪಂಚಾಯಿತಿಿಯ ನಂದರಗಿ ಗ್ರಾಮದಲ್ಲಿ ನಡೆದಿದೆ.


ನಂದರಗಿ ಗ್ರಾಮದ ವಾ. ಸಂ. 2ರಲ್ಲಿ ಶಿವಪ್ಪ ಕನಾಳ ಸ್ಪರ್ಧಿಸಿದ್ದರು.  ಚುನಾವಣೆಯಲ್ಲಿ ಇವರಿಗೆ ಸೋಲಾಗಿದೆ.  ನಿನ್ನೆ ರಾತ್ರಿ ಶಿವಪ್ಪ ಕನಾಳ ನ ವಿರುದ್ಧ ಜಯಭೇರಿ ಬಾರಿಸಿದ್ದ ಚಂದ್ರಕಾಂತ ನಂದಗೊಂಡ, ಬೆಂಬಲಿಗರು ಶಿವಪ್ಪ ತನಾಳ ಮನೆ ಮುಂದೆ ಪಟಾಕಿ ಹಚ್ಚಿದ್ದರು.  ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದು ಸೋತ ಅಭ್ಯರ್ಥಿಯ ಮನೆಯವರು ಹೇಳಿದ್ದಾರೆ.  ಆಗ ಗೆದ್ದ ಅಭ್ಯರ್ಥಿಗಳ ಬೆಂಬಲಿಗರಿಂದ ಸೋತವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.


ಇದನ್ನೂ ಓದಿ: ಸಿಎಂ ಕಾರ್ಯವೈಖರಿ ವಿರುದ್ಧ ಶಾಸಕ ಯತ್ನಾಳ್ ಮತ್ತೊಮ್ಮೆ ಅಸಮಾಧಾನ; ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ಗೆ ಪತ್ರ


ಪರಾಜಿತ ಅಭ್ಯರ್ಥಿ ಶಿವಪ್ಪ ಕನಾಳ, ರಾಯಪ್ಪ ಕನಾಳ, ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ, ಭೀಮಕ್ಕ ಕನಾಳ ಮೇಲೆ ಗೆದ್ದ ಅಭ್ಯರ್ಥಿಗಳಾದ ಚಂದ್ರಕಾಂತ ನಂದಗೊಂಡ, ಅಪ್ಪುಗೌಡ ಪಾಟೀಲ, ಲಕ್ಷ್ಮಣ ಘೋರ್ಪಡೆ ಬೆಂಬಲಿಗರಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಚಡಚಣ ತಾಲೂಕಾಸ್ಪತ್ರೆಗೆ ದಾಖಲಾಗಿದ್ದಾರೆ.  ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಪ್ರವಾಸಿ ತಾಣಗಳಲ್ಲಿ ನಿರ್ಬಂಧಗಳಿಲ್ಲ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ.


ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳು, ಆಲಮಟ್ಟಿಯ ಪ್ರವಾಸಿ ಸ್ಥಳಗಳು ಸೇರಿದಂತೆ ಎಲ್ಲಿಯೂ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.  ಎಂದಿನಂತೆ ಹಗಲು ಹೊತ್ತಿನಲ್ಲಿ ಇಲ್ಲಿನ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ತೆರೆದಿರುತ್ತವೆ ಎಂದು ತಿಳಿಸಿದ್ದಾರೆ.


ಆದರೆ, ಸಾರ್ವಜನಿಕರು ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.  ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ನಿಷೇಧಾಜ್ಞೆಯ ವಿಧಿಸಲೂ ಕೂಡ ಯಾರೂ ಬೇಡಿಕೆ ಇಟ್ಟಿಲ್ಲ ಎಂದು ಪಿ. ಸುನೀಲ ಕುಮಾರ ತಿಳಿಸಿದ್ದಾರೆ.


ವರದಿ: ಮಹೇಶ ವಿ. ಶಟಗಾರ

Published by:Vijayasarthy SN
First published: