ಕೇವಲ ಅರ್ಧ ಕಿಲೋ ತೂಕದ ಮಗುವಿನ ಆಯಸ್ಸು ಗಟ್ಟಿಗೊಳಿಸಿದ ಸರ್ಕಾರಿ ವೈದ್ಯರು

ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರೆಂದರೆ ಮೂಗುಮುರಿಯುವ ಕಾಲಘಟ್ಟದಲ್ಲಿ ವಿಜಯಪುರದ ಸರ್ಕಾರಿ ವೈದ್ಯರು 575 ಗ್ರಾಂ ತೂಕದ ನವಜಾತ ಶಿಶುವನ್ನು ರಕ್ಷಿಸಿ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.

ನವಜಾತ ಶಿಶು ಜೊತೆ ವಿಜಯಪುರದ ಸರ್ಕಾರಿ ವೈದ್ಯರು

ನವಜಾತ ಶಿಶು ಜೊತೆ ವಿಜಯಪುರದ ಸರ್ಕಾರಿ ವೈದ್ಯರು

 • Share this:
  ವಿಜಯಪುರ: ಅವಧಿ ಪೂರ್ವ ಹಾಗೂ ಅತ್ಯಂತ ಕಡಿಮೆ ತೂಕ ಉಳ್ಳ ಶಿಶುಗಳು ಜನಿಸಿದ್ರೆ ಬದುಕುಳಿಯೋದು ತುಂಬಾ ವಿರಳ. ಆದರೆ, ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಜನಿಸಿದ ಹೆಣ್ಣು ಮಗುವೊಂದರ ಆಯಸ್ಸು ಗಟ್ಟಿಯಾಗಿದೆ. ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿಗಳ ಮೊದಲ ಮಗು ಜೂನ್ 15ರಂದು ಮನೆಯಲ್ಲೇ ಜನಿಸಿತ್ತು. ಏಳು ತಿಂಗಳಿಗೆ ಜನಿಸಿದ ಈ ಮಗುವಿನ ತೂಕ ಕೇವಲ 575ಗ್ರಾಂ ಇದ್ದು, ಬದುಕುವ ಚಾನ್ಸ್ ಕಡಿಮೆ ಇದ್ದುದರಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿನ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ SNCU (Special Newborn Care Unit) ನಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ನವಜಾತ ಶಿಶು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದೆ.

  ಜೂನ್ 13 ರಂದು‌ ಹೂವಿನ ಹಿಪ್ಪರಗಿ ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಬಸಮ್ಮ ಚೆಕ್‌ಅಪ್ ಮಾಡಿಸಿದ್ದಾರೆ.‌ ಬಿಳಿಕ 14 ನೇ ತಾರಿಖು ವಿಜಯಪುರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಿದ್ದು, ವೈದ್ಯರು ಮಾತ್ರೆಗಳನ್ನು ‌ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ ಜೂನ್ 15 ರಂದು ಬೆಳಿಗ್ಗೆ ಏಕಾಏಕಿ ನೋವು ಶುರುವಾಗಿ ಹೆರಿಗೆಯಾಗಿದೆ. ಈ ವೇಳೆ ಮನೆಯಲ್ಲಿದ್ದ ಬಸಮ್ಮ ಅವರ ಅತ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.‌ ಬಳಿಕ ಚಿಕಿತ್ಸೆಗಾಗಿ ವಿಜಯಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದು, ಇಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ಮೂಲಕ ಮಗುವನ್ನು ಬದುಕಿಸಿದ್ದಾರೆ.

  ಈ ಮೊದಲು ಮುದ್ದೇಬಿಹಾಳ ತಾಲೂಕಿನ ಭಂಟನೂರ ಗ್ರಾಮದ ಸುನಿತಾ-ಸಂತೋಷ ಚಿಮ್ಮಲಗಿ ಎಂಬ ದಂಪತಿಗೂ ಕೇವಲ 800 ಗ್ರಾಂ ತೂಕ ಉಳ್ಳ ಹೆಣ್ಣು ಮಗುವೊಂದು ಜನಿಸಿತ್ತು. ಏಪ್ರಿಲ್ 15ರಂದು ಜನಿಸಿದ್ದ ಈ ಮಗುವಿಗೆ ಕಳೆದ ಎರಡು ತಿಂಗಳಿನಿಂದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರದಲ್ಲೇ ಆರೈಕೆ ಮಾಡುತ್ತಿದ್ದು, ಮಗು ಚೇತರಿಸಿಕೊಂಡಿದ್ದು ಇದೀಗ 1200 ಗ್ರಾಂ ತೂಕ ಹೊಂದಿ ಆರೋಗ್ಯವಾಗಿದೆ.ಅದಾದ ಬಳಿಕ ಬಸಮ್ಮಳಿಗೆ ಇದೇ ಮೊದಲ ಹೆರಿಗೆ ಇದ್ದು, ಏಳು ತಿಂಗಳ ಗರ್ಭಿಣಿ ಇರುವಾಗಲೇ ಆಕಸ್ಮಿಕವಾಗಿ ಮನೆಯಲ್ಲೇ ಹೆರಿಗೆಯಾಗಿದೆ. ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಅರ್ಧ ಕೇಜಿ ತೂಕದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಿ ಕೊಡುವ ಭರವಸೆ ನೀಡಿರುವ ವೈದ್ಯರ ತಂಡಕ್ಕೆ ತಾಯಂದಿರು ಧನ್ಯವಾದ ಅರ್ಪಿಸಿದ್ದಾರೆ.

  ಇದನ್ನೂ ಓದಿ: ಕಾಸರಗೋಡಿನ ಗ್ರಾಮಗಳ ಹೆಸರುಗಳ ಮಲೆಯಾಳೀಕರಣ: ಕನ್ನಡ ವಿರೋಧಿ ನೀತಿಗೆ ಎಚ್​ಡಿಕೆ, ವಾಟಾಳ್ ಕಿಡಿ!

  ಜಿಲ್ಲಾ ಆಸ್ಪತ್ರೆ ಎಂದ್ರೆ ಮೂಗು ಮೂರಿಯುವವರ ಮಧ್ಯೆ ಇಂತಹ ವಿರಳ ಪ್ರಕರಣಗಳೆರಡನ್ನು ಇಲ್ಲಿನ ವೈದ್ಯರು ಸವಾಲಾಗಿ ಸ್ವೀಕರಿಸಿ ಎರಡು ನವಜಾತ ಹೆಣ್ಣು ಶಿಶುಗಳಿಗೆ ಜೀವದಾತರಾಗಿದ್ದಾರೆ. ಇದ್ದ ಸೌಲಭ್ಯಗಳಲ್ಲೇ ಶಕ್ತಿ ಮೀರಿ ಚಿಕಿತ್ಸೆ ನೀಡಿ ಬದುಕುಳಿಸಿದ ವೈದ್ಯರು ಹಾಗೂ ಅವರ ತಂಡಕ್ಕೆ ಭೇಷ್ ಎನ್ನಲೇಬೇಕು. ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಶರಣಪ್ಪ ಕಟ್ಟಿ, ನವಜಾತು ಶಿಶುಗಳ ತಜ್ಞೆ ಡಾ. ಲಕ್ಷ್ಮೀ ಹಡಲಗಿ, ಎಸ್ ಎನ್ ಸಿ ಯು ಉಸ್ತುವಾರಿ ರಮೇಶ ರಾಠೋಡ ಹಾಗೂ ಶುಶ್ರೂಷಕಿಯರ ಶ್ರಮದಿಂದ ಇಂದು ಅನೇಕ ಬಡ ರೋಗಿಗಳಿಗೆ ಅನುಕೂಲವಾಗಿದೆ.

  ವೈದ್ಯಕೀಯ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಬಹಳಷ್ಟು ಹೆರಿಗೆಗಳು ಏಳು ತಿಂಗಳಿಗೆ ಆಗುತ್ತಿವೆ. ಇದಕ್ಕೆ ಗರ್ಭಿಣಿಯ ಆರೋಗ್ಯ, ಪೌಷ್ಟಿಕ ಆಹಾರದ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಅಲ್ಲದೆ ಈ ರೀತಿ ಅವಧಿಗೂ ಮುನ್ನ ಏಳು ತಿಂಗಳಗೆ ಹೆರಿಗೆಯಾದರೆ ಮಗು ಬದುಕುವ ಸಾಧ್ಯತೆ ಬಹುತೇಕ ಕಡಿಮೆ ಇರುತ್ತದೆ. ಮಗು ಹುಟ್ಟುದ ತಕ್ಷಣ ಅಥವಾ ಹುಟ್ಟಿದ ಐವತ್ತು ಗಂಟೆ ಒಳಗಾಗಿ ಸಾವನಪ್ಪುತ್ತವೆ ಎನ್ನುತ್ತಾರೆ ವೈದ್ಯರು. ಆದರೆ ಈ ಬಸಮ್ಮ ನಾಯ್ಕೊಡಿ ಅವರಿಗೆ ಜನಿಸಿರುವ ಮಗ ಆಯುಷ್ಯ ಗಟ್ಟಿಯಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ. ಜೊತೆಗೆ ಹಾಲು ಸೇವನೆ ಮಾಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇದಕ್ಕೆ ವೈದ್ಯರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಗುರುರಾಜ್ ‌ಗದ್ದನಕೇರಿ
  Published by:Vijayasarthy SN
  First published: