ಐತಿಹಾಸಿಕ ನಗರದಲ್ಲಿ ಸಮರ್ಪಕ ರಸ್ತೆ, ತ್ಯಾಜ್ಯ ವಿಲೇವಾರಿ, ಸೌಂದರ್ಯೀಕರಣಕ್ಕೆ ಗಮನ ನೀಡಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ದೆಹಲಿ ಬಳಿಕ ಭಾರತದಲ್ಲಿ ಅತಿ ಹೆಚ್ಚು ಪ್ರಾಚೀನ ಸ್ಮಾರಕಗಳನ್ನ ಹೊಂದಿರುವ ವಿಜಯಪುರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಕರೆ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಣದೀಪ್, ವಿವಿಧ ಕ್ರಮಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ

ವಿಜಯಪುರ ಜಿಲ್ಲಾಧಿಕಾರಿ ಕಚೇರಿ

  • Share this:
ವಿಜಯಪುರ: ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ವಿಜಯಪುರ ನಗರದಲ್ಲಿ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ಮಹಾನಗರದ ಸೌಂದರ್ಯೀಕರಣಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನ ನೀಡಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಾನಾ ಅಭಿವೃದ್ಧಿ, ಪ್ರವಾಹ ಮತ್ತು ಮಳೆ ಹಾನಿ ಕುರಿತು ಪರಿಶೀಲನೆ ಹಾಗೂ ಕೋವಿಡ್-19 ತಡೆಗಟ್ಟಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ದೆಹಲಿಯ ಬಳಿಕ ಅತೀ ಹೆಚ್ಚು ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ನಗರ ವಿಜಯಪುರ. ಇಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಬೇಕು.  ಮುಖ್ಯ ರಸ್ತೆಗಳ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಗಮನ ವಹಿಸಬೇಕು ಎಂದು ಸೂಚನೆ ನೀಡಿದರು.

ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಈ ನಗರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಯಾಗಬೇಕಿದೆ.  ಕ್ರಿಯಾಯೋಜನೆ ರೂಪಿಸಿ ಪ್ರಮುಖವಾಗಿರುವ ಅಥಣಿ ರಸ್ತೆ, ಸೋಲಾಪೂರ ರಸ್ತೆ, ಬಾಗಲಕೋಟ ಮತ್ತು ಸಿಂದಗಿ ಕಡೆಗೆ ಹೋಗುವಂತಹ ರಸ್ತೆಗಳು ಆಂತರಿಕ ರಸ್ತೆಗಳಿಗೆ ಸಂಪರ್ಕ ಹೊಂದಿವೆ.  ಇಂಥ ರಸ್ತೆಗಳ ಸುಧಾರಣೆಗೆ ಗಮನ ನೀಡಬೇಕು.  ಇದಕ್ಕೆ ಅಗತ್ಯವಾಗಿರುವ ಅನುದಾನದ ಒದಗಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು.  ಅದರಲ್ಲಿಯೂ ಬೃಹತ್ ಪ್ರಮಾಣದ ಮೂಲಸೌಕರ್ಯ ಕಲ್ಪಿಸುವಂತಹ ಕಾರ್ಯಗಳ ಅಡಿಯಲ್ಲಿ ಪ್ಯಾಕೆಜ್ ರೂಪದಲ್ಲಿ ಅನುದಾನ ತರಲು ಪ್ರಯತ್ನಿಸಲಾಗುವುದು.  ಸರಕಾರಕ್ಕೆ ಮಹಾನಗರ ಪಾಲಿಕೆಯಿಂದ ಸಲ್ಲಿಸಲಾದ ಪ್ರಸ್ತಾವನೆಗಳ ಬಗ್ಗೆಯೂ ಗಮನಕ್ಕೆ ತರುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Viral - ಸೂಪರ್ ಕಾಪ್​ನೊಳಗೊಬ್ಬ ಗಾಯಕ – KSRP ಎಡಿಜಿಪಿ ಅಲೋಕ್ ಕುಮಾರ್ ಹಾಡು ಈಗ ವೈರಲ್

ಪ್ರಾಚೀನ ಸ್ಮಾರಕಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರವಾಸೋದ್ಯಮ ಅಧಿಕಾರಿಗಳು ಕೂಡ ವಿಶೇಷ ರೀತಿಯಲ್ಲಿ ಚಿಂತನೆ ನಡೆಸಿ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಹ ಸಲ್ಲಿಸಬೇಕು.  ಭಾರತೀಯ ಪುರಾತತ್ವ ಸರ್ವೇಕಷ್ಣಾ ಇಲಾಖೆಯಿಂದ ತಾಂತ್ರಿಕ ಅನುಮೋದನೆ ಪಡೆಯಬೇಕೆಂದು ತಿಳಿಸಿದ ಡಿ. ರಂದೀಪ, ವಿಜಯಪುರ ನಗರದ ಸ್ವಚ್ಛತೆ, ವೈಯಕ್ತಿಕ ಶೌಚಾಲಯಗಳ ನಿರ್ವಹಣೆ, ಘನ ತ್ಯಾಜ್ಯಗಳ ನಿರ್ವಹಣೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸುಂದರ ನಗರ ರೂಪಿಸಲು ಸಾಧ್ಯ ಎಂದು ತಿಳಿಸಿದರು.

ಘನ ತ್ಯಾಜ್ಯಗಳ ಮತ್ತು ಕಸ ನಿರ್ವಹಣೆಗೆ ಏಕೀಕೃತ ನಿಯಂತ್ರಣ ವ್ಯವಸ್ಥೆ ಜಾರಿಗೆ ಕ್ರಮಕೈಗೊಳ್ಳಬೇಕು.  ತೆರಿಗೆ ಬಾಕಿ ವಸೂಲಾತಿಗೆ ಮತ್ತು ಸಂಗ್ರಹಕ್ಕೆ ಗಮನ ನೀಡುವಂತೆ ತಿಳಿಸಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಅರಣ್ಯ ಭೂಮಿ ಗುರುತಿಸಲು ಪ್ರಯತ್ನಿಸಬೇಕು.  ಇಕೋ ಟೂರಿಸ್‍ಂ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು.  ಅರಣ್ಯ ಅಧಿಕಾರಿಗಳು ಅರಣ್ಯೀಕರಣ ಮತ್ತು ಇಕೋ ಟೂರಿಸ್‍ಂ ಕುರಿತು ಪಿಪಿಟಿ ಮೂಲಕ ವರದಿ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ವಿಜಯಪುರ ನಗರದ ಸಮೀಪ ಬುರಾಣಾಪೂರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣ ಕಾಮಗಾರಿಯ ಪ್ಯಾಕೆಜ್ ಕ್ಕೆ ಟೆಂಡರ್ ಏಜೆನ್ಸಿ ನಿಗದಿಯಾಗಿದ್ದು, ಪೂರ್ವ ಚಟುವಟಿಕೆಗಳು ಆರಂಭಗೊಂಡಿರುವುದು ಸಂತಸದ ವಿಚಾರ.  ಅದೇ ರೀತಿ ಈ ಹಿಂದೆ ಬೇಸಿಗೆ ಕಾಲದಲ್ಲಿ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಯು ಕ್ರಮೇಣ ನೀರಿನ ಕೊರತೆಯಿಂದ ಹೊರಬರುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅನುಭವ ಮಂಟಪ ಬಸವತತ್ವ ಸಾರಬೇಕು ವಿನಃ ಸನಾತನ ಚಿಂತನೆಗಳನ್ನಲ್ಲ; ಸಿದ್ದರಾಮಯ್ಯ

ಕ್ರೀಡಾ ಇಲಾಖೆ ವ್ಯಾಪ್ತಿಯ ಸೈಕಲಿಂಗ್ ವೆಲೋಡ್ರೋಮ್ ನಿರ್ಮಾಣ ಮಾಡಲು ವಿಳಂಬ ಮತ್ತು ಈ ಹಿಂದಿನ ಏಜೆನ್ಸಿ ಕಾಮಗಾರಿಗೆ ನಿರಾಕರಿಸುತ್ತಿರುವುದರಿಂದ ನಿಯಮಾವಳಿಯಂತೆ ಈ ಏಜೆನ್ಸಿಯನ್ನು ರದ್ದುಪಡಿಸಿ, ಬಾಕಿ ಅನುದಾನ ವಸೂಲಾತಿ ಮಾಡಿ ನೂತನ ಟೆಂಡರ್ ಕರೆಯುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಕ್ರೀಡಾಧಿಕಾರಿಗಳಿಗೆ ಡಿ. ರಂದೀಪ್ ಸೂಚನೆ ನೀಡಿದರು.

ಇತ್ತೀಚೆಗೆ ಭೀಮಾನದಿ ವ್ಯಾಪ್ತಿಯಲ್ಲಿ ಬಂದಿದ್ದ ಪ್ರವಾಹ ಮತ್ತು ಅತೀವೃಷ್ಟಿಯಿಂದ ಹಾನಿಯಾದ ಕುರಿತು ಸಮಗ್ರ ವರದಿಯೊಂದಿಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಬೇಕು.  ಹೆಚ್ಚಿನ ಜೀವ ಆಗದಂತೆ ರಕ್ಷಣಾ ಕ್ರಮಗಳ ಬಗ್ಗೆ ಪೂರ್ವ ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಬೇಕು.  ಭೀಮಾನದಿ ಪ್ರವಾಹ ಕುರಿತಂತೆ ಮುನ್ನೆಚ್ಚರಿಕಾ ವ್ಯವಸ್ಥೆ ಸದೃಢಗೊಳಿಸಬೇಕು.  ಪರಿಹಾರಕ್ಕಾಗಿ ಮಂಜೂರಾದ ಅನುದಾನ, ಪರಿಹಾರ ನೀಡಿದ ಬಗ್ಗೆ ದಾಖಲೀಕರಣ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಇದನ್ನೂ ಓದಿ: ಗವಿಮಠದ ಅಜ್ಜನ ಜಾತ್ರೆಯ ತೇರೆಳೆಯೋದು ಪಕ್ಕಾ; ಮೂರೇ ದಿನಕ್ಕೆ ಸೀಮಿತವಾಗಲಿದೆಯಾ ಜಾತ್ರಾ ಮಹೋತ್ಸವ!?

ಕೋವಿಡ್ ಹಿನ್ನೆಲೆ ಇತರೆ ಲಸಿಕಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಆಗದಂತೆ ನಿಗಾ ವಹಿಸಬೇಕು. ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸದ ಜೊತೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಯಬೇಕು. ಕೋವಿಡ್ ರೋಗಿಗಳಿಗೆ ಇರುವಂತಹ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳ ಮತ್ತು ಹೋಮ್ ಐಸೋಲೇಶನ್‍ಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಿದರು.
ಅಲ್ಲದೇ, ನಾನಾ ಇಲಾಖೆಗಳಿಗೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಬಾಕಿ ಉಳಿದ ಪ್ರಸ್ತಾವನೆಗಳ ಬಗ್ಗೆ ತಮ್ಮ ಗಮನಕ್ಕೆ ತರುವಂತೆ ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಡಿ. ರಂದೀಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಕೋವಿಡ್ -19 ಡ್ರೈ ರನ್ ಪೂರ್ವಾಭ್ಯಾಸ, ಪ್ರವಾಹ ಹಾನಿ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: