HOME » NEWS » District » VIJAYAPURA DISTRICT GRAMA PANCHAYATH ELECTIONS DETAILS MVSV SNVS

ವಿಜಯಪುರದಲ್ಲಿ ಗ್ರಾ.ಪಂ. ಚುನಾವಣೆ ವಿವರ; 11 ಗ್ರಾ.ಪಂ.ಗಳಿಗೆ ಚುನಾವಣೆ ಯಾಕಿಲ್ಲ ಗೊತ್ತಾ?

ವಿಜಯಪುರ ಜಿಲ್ಲೆಯ 212 ಗ್ರಾಮ ಪಂಚಾಯತಿ ಪೈಕಿ 201 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಡಿ. 22 ಮತ್ತು 27ರಂದು ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ. 30ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

news18-kannada
Updated:December 1, 2020, 7:32 AM IST
ವಿಜಯಪುರದಲ್ಲಿ ಗ್ರಾ.ಪಂ. ಚುನಾವಣೆ ವಿವರ; 11 ಗ್ರಾ.ಪಂ.ಗಳಿಗೆ ಚುನಾವಣೆ ಯಾಕಿಲ್ಲ ಗೊತ್ತಾ?
ವಿಜಯಪುರ ಜಿಲ್ಲೆಯ ಒಂದು ಗ್ರಾ.ಪಂ. ಕಾರ್ಯಾಲಯ
  • Share this:
ವಿಜಯಪುರ: ಬಹು ನಿರೀಕ್ಷಿತ ಗ್ರಾಮ ಪಂಚಾಯಿತಿಗಳ ಚುನಾವಣೆ ದಿನಾಂಕ ನಿಗದಿಯಾಗಿದೆ. ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಯ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ನಿನ್ನೆ ಪ್ರಕಟಿಸಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕೂಡ ಈ ಹಿಂದೆಯೇ ಕೊರೊನಾ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದರು.  ಅಲ್ಲದೇ, ಚುನಾವಣೆಗೆ ಬೇಕಾದ ಎಲ್ಲ ಮಾಹಿತಿಯನ್ನೂ ನೀಡಿದ್ದರು. ಇದೀಗ ಮೊದಲ ಹಂತದಲ್ಲಿ ವಿಜಯಪುರ ಉಪವಿಭಾಗ(ಸಬ್ ಡಿವಿಷನ್)ದ ಎಂಟು ತಾಲೂಕುಗಳ 111 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದೆ. 

ಕೊರೊನಾ ಹಿನ್ನೆಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಈ ಬಾರಿ ಒಟ್ಟು 212 ಗ್ರಾ. ಪಂ. ಗಳಲ್ಲಿ 201 ಗ್ರಾ. ಪಂ. ಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ.  11 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯುತ್ತಿಲ್ಲ. ಬಸವ ನಾಡಿನಲ್ಲಿ ಒಟ್ಟು 12 ತಾಲೂಕುಗಳಿದ್ದು, ಪ್ರತಿಯೊಂದು ತಾಲೂಕುಗಳಿಗೆ ಪ್ರತ್ಯೇಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ತಾಲೂಕುಗಳು:

ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಿಜಯಪುರ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ.  ಈ ಚುನಾವಣೆಗೆ ಡಿ. 11ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ಡಿ. 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.14 ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಡಿ. 22 ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಾದರೆ ಡಿ. 24 ರಂದು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಡಿ. 30 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Grama Panchayat Elections: ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ; ಡಿ. 22 ಮತ್ತು 27ಕ್ಕೆ ಮತದಾನ

ಮೊದಲ ಹಂತದಲ್ಲಿ ಮತದಾನದ ತಾಲೂಕುವಾರು ಮಾಹಿತಿ:

ವಿಜಯಪುರ ತಾಲೂಕಿನಲ್ಲಿ ಒಟ್ಟು 17 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 168 ಮತಗಟ್ಟೆಗಳನ್ನು ತೆರೆಯಲಾಗುವುದು.  ಈ ತಾಲೂಕಿನಲ್ಲಿ 60569 ಪುರುಷ, 57321 ಮಹಿಳಾ ಮತ್ತು 12 ಜನ ಇತರೆ ಮತದಾರರು ಸೇರಿದಂತೆ ಒಟ್ಟು 117902 ಮತದಾರರಿದ್ದಾರೆ. ಬಬಲೇಶ್ವರ ತಾಲೂಕಿನ 15ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, ಸುಗಮ ಮತದಾನಕ್ಕಾಗಿ 155 ಮತಗಟ್ಟೆಗಳನ್ನು ತರೆಯಲಾಗುತ್ತಿದೆ.  ಈ ಚುನಾವಣೆಯಲ್ಲಿ 50194 ಪುರುಷ, 48931 ಮಹಿಳಾ ಮತ್ತು 4 ಜನ ಇತರೇ ಸೇರಿದಂತೆ 99129 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.ತಿಕೋಟಾ ತಾಲೂಕಿನಲ್ಲಿ ಒಟ್ಟು 14 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 132 ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, 49305 ಪುರುಷ, 46026 ಮಹಿಳಆ ಮತ್ತು 4 ಇತರೆ ಸೇರಿದಂತೆ ಒಟ್ಟು 95335 ಮತದಾರರಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ ಒಟ್ಟು 15 ಗ್ರಾ. ಪಂ. ಗಳಿಗೆ ಮತದಾನ ನಡೆಯಲಿದ್ದು, 144 ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಇಲ್ಲಿ 52596 ಪುರುಷ, 48820 ಮಹಿಳಾ ಮತ್ತು 22 ಇತರೆ ಸೇರಿದಂತೆ ಒಟ್ಟು-101438 ಮತದಾರರಿದ್ದಾರೆ. ಕೋಲ್ಹಾರ ತಾಲೂಕಿನಲ್ಲಿ ಈ ಸಲ 8 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 60 ಗಟ್ಟೆಗಳನ್ನು ತೆರೆಯಲಾಗುತ್ತಿದ್ದು, 25249 ಪುರುಷ ಮತ್ತು 24180 ಮಹಿಳೆಯರು ಸೇರಿದಂತೆ ಒಟ್ಟು 49429 ಮತದಾರರು ತಮ್ಮ ಓಟು ಹಾಕಲಿದ್ದಾರೆ. ನಿಡಗುಂದಿ ತಾಲೂಕಿನಲ್ಲಿಯೂ ಒಟ್ಟು 8 ಗ್ರಾ. ಪಂ. ಗಳಿದ್ದು, ಒಟ್ಟು 61 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 20725 ಪುರುಷ, 19868 ಮಹಿಳಾ ಮತ್ತು 2 ಇತರೆ ಸೇರಿದಂತೆ ಒಟ್ಟು 40595 ಮತದಾರರಿದ್ದಾರೆ.

ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 20 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, 166 ಮತಗಟ್ಟೆಗಳಿದ್ದು, 54303 ಪುರುಷ ಮತ್ತು 51381 ಮಹಿಳೆ ಹಾಗೂ 16 ಇತರೆ ಸೇರಿದಂತೆ ಒಟ್ಟು 105700 ಮತದಾರರಿದ್ದಾರೆ. ತಾಳಿಕೋಟಿ ತಾಲೂಕಿನಲ್ಲಿ ಒಟ್ಟು 14 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, 123 ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, 43683 ಪುರುಷ ಮತ್ತು 41595 ಮಹಿಳಾ ಹಾಗೂ 3 ಇತರೆ ಮತದಾರರು ಸೇರಿದಂತೆ ಒಟ್ಟು 85281 ಮತದಾರರಿದ್ದಾರೆ.

ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ತಾಲೂಕುಗಳು:

ವಿಜಯಪುರ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಇಂಡಿ, ಚಡಚಣ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ.  ಈ ಚುನಾವಣೆಗೆ 16.12.2020 ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ. 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ. 19ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಡಿ. 27 ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಾದರೆ 29 ರಂದು ನಡೆಸಲು ಅವಕಾಶ ಕಲ್ಪಿಸಲಾಗಿದೆ.  ಡಿ. 30 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ; ಸಿಎಂ ಬಿಎಸ್ ಯಡಿಯೂರಪ್ಪ

ಎರಡನೇ ಹಂತದಲ್ಲಿ ಮತದಾನ - ತಾಲೂಕುವಾರು ಮಾಹಿತಿ:

ಇಂಡಿ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ ಒಟ್ಟು 38 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು, 324 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ.  ಈ ತಾಲೂಕಿನಲ್ಲಿ 113393 ಪುರುಷ, 105506 ಮಹಿಳೆ ಮತ್ತು 17 ಇತರೆ ಸೇರಿದಂತೆ ಒಟ್ಟು 218916 ಮತದಾರರಿದ್ದಾರೆ.

ಚಡಚಣ ತಾಲೂಕಿನಲ್ಲಿ ಒಟ್ಟು 13 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 129 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 46615 ಪುರುಷ ಮತ್ತು 42525 ಮಹಿಳೆ ಮತ್ತು 3 ಇತರೆ ಸೇರಿದಂತೆ ಒಟ್ಟು 89143 ಮತದಾರರಿದ್ದಾರೆ.

ಸಿಂದಗಿ ತಾಲೂಕಿನಲ್ಲಿ ಒಟ್ಟು 25 ಗ್ರಾ. ಪಂ. ಗಳಿದ್ದು, ಒಟ್ಟು 219 ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಈ ಬಾರಿ 76955 ಪುರುಷ ಮತ್ತು 71383 ಮಹಿಳೆ ಹಾಗು 19 ಇತರೆ ಸೇರಿದಂತೆ ಒಟ್ಟು 148357 ಮತದಾರರಿದ್ದಾರೆ.

ದೇವರ ಹಿಪ್ಪರಗಿ ತಾಲೂಕಿನಲ್ಲಿ ಈ ಬಾರಿ ಒಟ್ಟು 14 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 130 ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಈ ಸಲ 45522 ಪುರುಷ, 42714 ಮಹಿಳೆಯರು ಮತ್ತು 6 ಇತರೆ ಸೇರಿದಂತೆ ಒಟ್ಟು 88242 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಹೀಗೆ ಒಟ್ಟು 12 ತಾಲೂಕುಗಳ ನಾನಾ 201 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯುತ್ತಿದ್ದು, ಆಕ್ಜಿಲರಿ ಸೇರಿದಂತೆ ಒಟ್ಟು 1811 ಮತಗಟ್ಟೆಗಳನ್ನು ತರೆಯಲು ನಿರ್ಧರಿಸಲಾಗಿದೆ.  ಈ ಚುನಾವಣೆಯಲ್ಲಿ 639109 ಪುರುಷ, 600250 ಮಹಿಳಾ ಮತ್ತು 108 ಇತರೆ ಸೇರಿದಂತೆ ಒಟ್ಟು 1239467 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

11 ಗ್ರಾ. ಪಂ. ಗಳಿಗೆ ಚುನಾವಣೆಯಿಲ್ಲ- ಕಾರಣವೇನು ಗೊತ್ತಾ?

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ನಾನಾ 11 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯುತ್ತಿಲ್ಲ.  ಬಬಲೇಶ್ವರ ಗ್ರಾ. ಪಂ. ಅವಧಿ 2021 ಕ್ಕೆ ಮುಗಿಯುತ್ತದೆ.  ಅಲ್ಲದೇ, ಈ ಗ್ರಾ. ಪಂ. ಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.

ನಿಡಗುಂದಿ ತಾಲೂಕಿನ ಯಲಗೂರ ಹಾಗೂ ಬಳಬಟ್ಟಿ ಗ್ರಾ. ಪಂ. ಗಳ ಅವಧಿ 2023 ಕ್ಕೆ ಮಗಿಯುತ್ತದೆ. ಕೋಲ್ಹಾರ ತಾಲೂಕಿನ ಅರಷಣಗಿ, ಸಿದ್ಧನಾಥ ಆರ್.ಸಿ ಗ್ರಾಮ ಪಂಚಾಯತಿಗಳ ಪೈಕಿ ನಿಡಗುಂದಿ ತಾಲೂಕಿನ ಎರಡು ಗ್ರಾಮಗಳನ್ನು ಕೋಲ್ಹಾರ ತಾಲ್ಲೂಕಿಗೆ ಸೇರ್ಪಡೆ ಮಾಡಲು ಸರಕಾರ ಅಧಿಸೂಚನೆ ಹೊರಡಿಸಿದ ಕಾರಣ ಪುನರ್ ವಿಂಗಡಣೆ ಮಾಡಬೇಕಾಗಿದೆ.

ಸಿಂದಗಿ ತಾಲೂಕಿನ ಚಾಂದಕವಟೆ, ಯರಗಲ್ ಬಿ. ಕೆ. ಗುತ್ತರಗಿ ಮತ್ತು ಬಳಗನಾನೂರ ಗ್ರಾ. ಪಂ. ಪೈಕಿ ಹೊಸ ಆಲಮೇಲ ತಾಲೂಕು ರಚನೆಯಿಂದಾಗಿ ಈ ಗ್ರಾ. ಪಂ. ಗಳನ್ನು ಪುನರ್ ವಿಂಗಡಣೆ ಮಾಡಬೇಕಾಗಿದೆ.

ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾ. ಪಂ. ಅವಧಿ 2023 ಕ್ಕೆ ಮುಗಿಯುತ್ತದೆ.  ಈ ಹಿನ್ನೆಲೆಯಲ್ಲಿ 11 ಗ್ರಾ. ಪಂ. ಗಳಿಗೆ ಚುನಾವಣೆ ನಡೆಯುತ್ತಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: December 1, 2020, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories