ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯಪುರ ಯೋಧ ಶಿವಾನಂದ ಅಂತ್ಯಕ್ರಿಯೆ

ಯೋಧನ ಪಾರ್ಥಿವ ಶರೀರ

ಯೋಧನ ಪಾರ್ಥಿವ ಶರೀರ

ಅಂತ್ಯಕ್ರಿಯೆಗೂ ಮುನ್ನ ಬಿಎಸ್‌ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಹುತಾತ್ಮ ಯೋಧನ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು

  • Share this:

ವಿಜಯಪುರ(ಸೆಪ್ಟೆಂಬರ್​. 02) : ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮನಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ  ಶಿವಾನಂದ ಬಡಿಗೇರ್ ಅಂತ್ಯಕ್ರಿಯೆ ಯೋಧನ ಸ್ವಗ್ರಾಮ ಬಸರಕೋಡ ಗ್ರಾಮದಲ್ಲಿ ನಡೆಯಿತು. 


ಬಿಎಸ್‌ಎಫ್ ಯೋಧನಾಗಿದ್ದ ಶಿವಾನಂದ ಬಡಿಗೇರ ಎಲೆಕ್ರ್ಟಿಕಲ್ ವಿಭಾಗದಲ್ಲಿ ಎಲೆಕ್ಟ್ರಿಕ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ರವಿವಾರ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಲ್ಲಿ ಯೋಧ ಹುತಾತ್ಮನಾಗಿದ್ದ. ಇಂದು ವಿಜಯಪುರ ಜಿಲ್ಲೆಯ ತಂಗಡಗಿ, ಮುದ್ದೇಬಿಹಾಳ ಮಾರ್ಗವಾಗಿ ಯೋಧನ ಪಾರ್ಥಿವ ಶರೀರವನ್ನು ಬಸರಕೋಡ ಗ್ರಾಮಕ್ಕೆ ತರಲಾಯಿತು.


ಈ ಸಂದರ್ಭದಲ್ಲಿ ಗ್ರಾಮದ ರಸ್ತೆ ಬದಿಗಳಲ್ಲಿ ಮತ್ತು ಮನೆಗಳ ಮಾಳಿಗೆಗಳ ಮೇಲೆ ನಿಂತಿದ್ದ ಜನರು ಹಾಗೂ ನೆರೆದ ಅಪಾರ ಜನಸ್ತೋಮ ಯೋಧನ ನಿಧನಕ್ಕೆ ಕಂಬನಿ ಮಿಡಿಯಿತು. ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಇದಕ್ಕೂ ಮುದ್ದೇಬಿಹಾಳದಲ್ಲಿ ಸಾರ್ವಜನಿಕರು ರಸ್ತೆ ಬದಿ ನಿಂತು ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.


14 ವರ್ಷಗಳ ಹಿಂದೆ ಬಿಎಸ್‌ಎಫ್ ಸೇರಿದ್ದ ಯೋಧ ತಮ್ಮ ವೃತ್ತಿ ಜೀವನದಲ್ಲಿ ಮೊದಲು ಬಾಂಗ್ಲಾದೇಶ, ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು. ಒಂದೂವರೆ ವರ್ಷದ ಹಿಂದಷ್ಟೇ ತಾಳಿಕೋಟಿ ತಾಲೂಕಿನ ತುಂಬಗಿಯ ಪುಷ್ಪಾ ಎಂಬುವರ ಜೊತೆಗೆ ವಿವಾಹವಾಗಿದ್ದರು.


ಕೆಲ ಕಾಲ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ಸಿ. ದೇಸಾಯಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮುದ್ದೇಬಿಹಾಳ ತಹಶೀಲ್ದಾರ್ ಕೂಡ ಅಂತಿಮ ನಮನ ಸಲ್ಲಿಸಿದರು.


ಇದನ್ನೂ ಓದಿ : ಬೀದರ್ : ಉಕ್ರೇನ್​​​ಗೆ ಓದಲು ಹೋದ ವಿದ್ಯಾರ್ಥಿ ಅನುಮಾನಾಸ್ಪದ ಸಾವು : ಮಾಹಿತಿ ಸಿಗದೆ ಪೋಷಕರ ಗೋಳಾಟ


ಯೋಧನ ಪಾರ್ಥಿವ ಶರೀರದ ಜೊತೆ ಆಗಮಿಸಿದ್ದ ಬಿಎಸ್‌ಎಫ್ ಯೋಧರು ಯೋಧನ ಶವಪೆಟ್ಟಿಗೆಯ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ನೀಡುತ್ತಿದ್ದಂತೆ ಯೋಧನ ಕುಟುಂಬಸ್ಥರ ಆಕ್ರಂದನ ಮತ್ತಷ್ಟು ಹೆಚ್ಚಾಯಿತು. ಅಲ್ಲಿ ಸೇರಿದ್ದ ಜನರು ಅವರನ್ನು ಸಮಾಧಾನ ಪಡಿಸಿದರು.


ಈ ಸಂದರ್ಭದಲ್ಲಿ ಅಂತ್ಯಕ್ರಿಯೆಗೂ ಮುನ್ನ ಬಿಎಸ್‌ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಹುತಾತ್ಮ ಯೋಧನ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಧಾರ್ಮಿಕ ಸಂಪ್ರದಾಯದಂತೆ ಸಾವಿರಾರು ಜನರ ಸಮ್ಮುಖದಲ್ಲಿ ಹುತಾತ್ಮ ಯೋಧನ ಶಿವಾನಂದ ಬಡಿಗೇರ ಅಂತ್ಯಕ್ರಿಯೆ ನೆರವೇರಿಸಲಾಯಿತು.

Published by:G Hareeshkumar
First published: