• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬಿಎಲ್​ಡಿಇ ಆಸ್ಪತ್ರೆಯ ನವಜಾತ ಶಿಶು ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತೆ; ಈ ಹೆಗ್ಗಳಿಕೆ ಪಡೆದ ರಾಜ್ಯದ ಮೊದಲ ಆಸ್ಪತ್ರೆ

ಬಿಎಲ್​ಡಿಇ ಆಸ್ಪತ್ರೆಯ ನವಜಾತ ಶಿಶು ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತೆ; ಈ ಹೆಗ್ಗಳಿಕೆ ಪಡೆದ ರಾಜ್ಯದ ಮೊದಲ ಆಸ್ಪತ್ರೆ

ಬಿಎಲ್​ಡಿಇ ಆಸ್ಪತ್ರೆಯ ಶಿಶು ವಿಭಾಗ.

ಬಿಎಲ್​ಡಿಇ ಆಸ್ಪತ್ರೆಯ ಶಿಶು ವಿಭಾಗ.

ಈ ಕೇಂದ್ರದಲ್ಲಿ 10 ಅತ್ಯಾಧುನಿಕ ವೆಂಟಿಲೇಟರ್​ಗಳು ಕಾರ್ಯ ನಿರ್ವಹಿಸುತ್ತಿವೆ.  ಅಲ್ಲದೇ, ಹಾಸಿಗೆ ಬದಿಯಲ್ಲಿಯೇ ಎಕೋಕಾರ್ಡಿಯಾಗ್ರಾಫಿ, ಅಲ್ಟ್ರಾ ಸೌಂಡ್ ಇತ್ಯಾದಿ ಆಧುನಿಕ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ತಜ್ಞ ವೈದ್ಯರು ನುರಿತ ಶೂಶ್ರುಷಕ ಸಿಬ್ಬಂದಿ ಹಾಗೂ ವಿಶೇಷ ಪರಿಣಿತ ತಜ್ಞ ವೈದ್ಯರನ್ನು ಒಳಗೊಂಡ ತಂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. 

ಮುಂದೆ ಓದಿ ...
  • Share this:

ವಿಜಯಪುರ (ಜ. 22); ಬಸವ ನಾಡಿನ ಪ್ರತಿಷ್ಠಿತ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಮಾನ್ಯತೆ ದೊರೆತಿದೆ. ಇಲ್ಲಿನ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ನವಜಾತ ಶಿಶುಗಳ ಆರೈಕೆಯಲ್ಲಿ ಗಣನೀಯ ಸಾಧನೆ ಮಾಡಿದ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ ಎಂ ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ “ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆ ಲೇವಲ್-3ಎ”ಮಾನ್ಯತೆ ನೀಡಿದೆ.


ಇಡೀ ಉತ್ತರ ಕರ್ನಾಟಕದಲ್ಲಿ ಇಂಥ ಗೌರವಕ್ಕೆ ಪಾತ್ರವಾದ ಮತ್ತು ಈ ಮಾನ್ಯತೆ ಪಡೆದ ಮೊದಲ ಶಿಶು ಆಸ್ಪತ್ರೆ ಎಂಬ ಖ್ಯಾತಿಗೆ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹೆಗ್ಗಳಿಕೆ ಗಳಿಸಿದೆ. ಈ ಮಾನ್ಯತೆಯಿಂದಾಗಿ ಚಿಕ್ಕಮಕ್ಕಳ ಆರೈಕೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ ವಿದ್ಯಾರ್ಥಿಗಳು ಇಲ್ಲಿ ಫೆಲೋಶಿಪ್ ಪಡೆಯಬಹುದಾಗಿದೆ. ಅಲ್ಲದೇ, ನವಜಾತ ಶಿಶುಗಳ ಆರೈಕೆ, ರಕ್ಷಣೆ, ನವಜಾತ ಶಿಶು ಮರಣ ತಪ್ಪಿಸುವುದು ಮತ್ತಿತರ ನವಜಾತ ಶಿಶು ಸಂಬಂಧಿತ ಉನ್ನತ ಶಿಕ್ಷಣ ತಜ್ಞ ವೈದ್ಯರು ಮತ್ತು ಶೂಶ್ರುಷಕ ಸಿಬ್ಬಂದಿಗೆ ಇಲ್ಲಿ ಸೌಲಭ್ಯ ದೊರೆಯಲಿದೆ.


ಬಿಎಲ್​ಡಿಇ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗ 40 ಹಾಸಿಗೆಗಳ ಎನ್​ಐಸಿಯು ಹೊಂದಿದೆ.  ಅಲ್ಲದೇ, ಇಲ್ಲಿ ಪ್ರತಿವರ್ಷ 1500 ಕ್ಕಿಂತಲೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತಿದ್ದು, ಈ ಮಕ್ಕಳಿಗೆ ಕ್ಲಿಷ್ಟಕರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಶಿಶುಗಳಲ್ಲಿ ಶೇ. 95 ಕ್ಕಿಂತಲೂ ಹೆಚ್ಚು ಶಿಶುಗಳು ಸಂಪೂರ್ಣವಾಗಿ ಗುಣಮುಖ ಹೊಂದಿ ತಾಯಂದಿರ ಮಡಿಲು ಸೇರುತ್ತವೆ. ಈ ಕೇಂದ್ರದಲ್ಲಿ 10 ಅತ್ಯಾಧುನಿಕ ವೆಂಟಿಲೇಟರ್​ಗಳು ಕಾರ್ಯ ನಿರ್ವಹಿಸುತ್ತಿವೆ.  ಅಲ್ಲದೇ, ಹಾಸಿಗೆ ಬದಿಯಲ್ಲಿಯೇ ಎಕೋಕಾರ್ಡಿಯಾಗ್ರಾಫಿ, ಅಲ್ಟ್ರಾ ಸೌಂಡ್ ಇತ್ಯಾದಿ ಆಧುನಿಕ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ತಜ್ಞ ವೈದ್ಯರು ನುರಿತ ಶೂಶ್ರುಷಕ ಸಿಬ್ಬಂದಿ ಹಾಗೂ ವಿಶೇಷ ಪರಿಣಿತ ತಜ್ಞ ವೈದ್ಯರನ್ನು ಒಳಗೊಂಡ ತಂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.


ಇದನ್ನು ಓದಿ: ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೊರೋನಾ ಲಸಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್


ಈ ಎಲ್ಲ ಧನಾತ್ಮಕ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆ ಲೇವೆಲ್ -3 ಎ ಮಾನ್ಯತೆ ದೊರೆಯಲು ಕಾರಣವಾಗಿದೆ ಎಂದು ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಸ್. ವಿ. ಪಾಟೀಲ ಕನಮಡಿ ತಿಳಿಸಿದ್ದಾರೆ. ಅಲ್ಲದೇ ಅಮೆರಿಕಾದ ಟೆಕ್ಸಾಸ್ ಪ್ರಾಂತ್ಯದ ಡಾ. ಪ್ರಕಾಶ ಕಬ್ಬೂರ, ಡಾ. ಸುಮನಾ ನಂಜುಂಡಾಚಾರ್ಯ ನೇತೃತ್ವದ ಟ್ರೇನ್ ಆ್ಯಂಡ್ ಹೆಲ್ಪ್ ಬೇಬಿಸ್ ಸಂಸ್ಥೆ ಬಿಎಲ್​ಡಿಇ ನವಜಾತ ಶಿಶು ಘಟಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜಗತ್ತಿನ ಅತ್ಯಂತ ಪ್ರಭಾವಶಾಲಿ ಮತ್ತು ಮುಂದುವರೆದ ರಾಷ್ಟ್ರದಲ್ಲಿನ ನವಜಾತ ಶಿಶು ಆರೈಕೆ ಮಾದರಿಗಳನ್ನು ಇಲ್ಲಿನ ಸಿಬ್ಬಂದಿಗೆ ತಿಳಿಸಿಕೊಡುವ ಮೂಲಕ ಈ ಭಾಗದ ರೋಗಿಗಳಿಗೆ ಈ ಸೇವೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ.


ಬಿಎಲ್​ಡಿಇ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಈ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ, ಉಪಕುಲಪತಿ ಡಾ. ಎಂ. ಎಸ್. ಬಿರಾದಾರ ಸಂತಸ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣರಾದ ಎಲ್ಲ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

First published: