ವಿಜಯಪುರ ಬಿಜೆಪಿಯಲ್ಲಿ ಆರದ ಕಿಚ್ಚು; ಜಿ.ಪಂ.ನಲ್ಲಿ ಕೈಕೊಟ್ಟ ಸದಸ್ಯರ ವಿರುದ್ಧ ಮುಂದುವರಿದ ಪ್ರತಿಭಟನೆ

ಬಿಜೆಪಿ ಸದಸ್ಯರ ಉಚ್ಛಾಟನೆಯ ಬಳಿಕವೂ ಇಂದೂ ಕೂಡ ಈ ಸದಸ್ಯರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯಪುರ ನಗರ ಹಾಗೂ ಸಿಂದಗಿ ಪಟ್ಟಣಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.  ಅಲ್ಲದೇ, ನಾಲ್ಕೂ ಜನ ಸದಸ್ಯರ ಫೋಟೋವುಳ್ಳ ಫ್ಲೆಕ್ಸ್ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

news18-kannada
Updated:July 27, 2020, 3:54 PM IST
ವಿಜಯಪುರ ಬಿಜೆಪಿಯಲ್ಲಿ ಆರದ ಕಿಚ್ಚು; ಜಿ.ಪಂ.ನಲ್ಲಿ ಕೈಕೊಟ್ಟ ಸದಸ್ಯರ ವಿರುದ್ಧ ಮುಂದುವರಿದ ಪ್ರತಿಭಟನೆ
ವಿಜಯಪುರ ಜಿಪಂ ಅಧ್ಯಕ್ಷ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಬಿಜೆಪಿ ಸದಸ್ಯರ ವಿರುದ್ಧ ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರು.
  • Share this:
ವಿಜಯಪುರ (ಜು.02); ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ವಿಚಾರ ಈಗ ಮತ್ತಷ್ಟು ಕಾವು ಪಡೆದುಕೊಂಡಿದೆ. ವಿಜಯಪುರ ಜಿ.ಪಂ.ನಲ್ಲಿ ಅತೀ ಹೆಚ್ಚು ಸ್ಥಾನ ಹೊಂದಿದ್ದರೂ ಬಿಜೆಪಿಯ ನಾಲ್ಕು ಜನ ಸದಸ್ಯರು ಕಾಂಗ್ರೆಸ್ ಪಾಳಯಕ್ಕೆ ಹಾರಿದ್ದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ.

ನಿನ್ನೆಯಷ್ಟೇ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ನಾಲ್ಕು ಜನ ಸದಸ್ಯರನ್ನು 6 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದ್ದರು. ಅಲ್ಲದೇ, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು.

ಸಿಂದಗಿ ಮತಕ್ಷೇತ್ರದ ಬಿಜೆಪಿ ಸದಸ್ಯರಾದ ಮಹಾಂತಗೌಡ ಪಾಟೀಲ(ಯಂಕಂಚಿ), ಬಿಂದುರಾಯಗೌಡ ಬಿರಾದಾರ (ಮೋರಟಗಿ), ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಸದಸ್ಯರಾದ ಕಲ್ಲಪ್ಪ ಮಟ್ಟಿ(ಇಂಗಳೇಶ್ವರ) ಮತ್ತು ಜ್ಯೋತಿ ಅಸ್ಕಿ(ಕೊಣ್ಣೂರು) ಬಿಜೆಪಿಯಿಂದ ಉಚ್ಛಾಟನೆಗೊಂಡ ಸದಸ್ಯರಾಗಿದ್ದಾರೆ.

ನಿನ್ನೆ ಬಿಜೆಪಿ ಸದಸ್ಯರ ಉಚ್ಛಾಟನೆಯ ಬಳಿಕವೂ ಇಂದೂ ಕೂಡ ಈ ಸದಸ್ಯರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯಪುರ ನಗರ ಹಾಗೂ ಸಿಂದಗಿ ಪಟ್ಟಣಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.  ಅಲ್ಲದೇ, ನಾಲ್ಕೂ ಜನ ಸದಸ್ಯರ ಫೋಟೋವುಳ್ಳ ಫ್ಲೆಕ್ಸ್ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಬಿಜೆಪಿ ಬೆಳಗಾವಿ ವಿಭಾಗದ ಪ್ರಮುಖರಾದ ಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ವಿಜುಗೌಡ ಪಾಟೀಲ ಮತ್ತು ಡಾ. ಸುರೇಶ ಬಿರಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಬೆಳಗಾವಿ ವಿಭಾಗ ಪ್ರಮುಖ ಚಂದ್ರಶೇಖರ ಕವಟಗಿ, ಪಕ್ಷಕ್ಕೆ ದ್ರೋಹ ಬಗೆದವರನ್ನು ಕ್ಷಮಿಸಬಾರದು. ಅವರ ಜಿ.ಪಂ. ಸದಸ್ಯತ್ವ ರದ್ದು ಮಾಡಬೇಕು. ಈಗಾಗಲೇ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಕೆಲವೇ ತಿಂಗಳಲ್ಲಿ ಅವರನ್ನು ಮನೆಗೆ ಕಳುಹಿಸಬೇಕು. ಕಂಡ ಕಂಡಲ್ಲಿ ಅವರಿಗೆ ಛೀ…ಥೂ… ಎಂದು ಉಗಿಯಬೇಕು ಅಂತ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಇವರು ಬಂದರೆ ಧಿಕ್ಕಾರ ಹೇಳಬೇಕು. ಮುಂದಿನ ದಿನಗಳಲ್ಲಿ ಅವರ ಮನೆ ಎದುರು ಧಿಕ್ಕಾರ ಹಾಕಿ, ಪ್ರತಿಭಟನೆ ನಡೆಸಿ, ಕಲ್ಲು ತೂರಾಟ ನಡೆಸುವಂತೆ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.  ಆದರೆ, ನಾವು ಶಾಂತಿಯುತವಾಗಿ ಮತ್ತು ನ್ಯಾಯಯುತವಾಗಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಮಾತನಾಡಿ, ನಿಮ್ಮನ್ನು ಯಾರೂ ಕ್ಷಮಿಸುವುದಿಲ್ಲ. ಮುಂಬರುವ ದಿನಗಳಲ್ಲಿ ನೀವೆಲ್ಲ ತಕ್ಕ ಬೆಲೆ ತೆರಬೇಕಾಗುತ್ತದೆ.  ಪಕ್ಷದ್ರೋಹಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ಮುಂದಿನ 6 ವರ್ಷಗಳ ಕಾಲ ಅವರಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹೋರಾಟ ನಡೆಸುತ್ತೇವೆ.  ಬಿಜೆಪಿ ಕಾರ್ಯಕರ್ತರಾರೂ ಧೃತಿಗೆಡಬೇಡಿ. ನಮ್ಮ ಪಕ್ಷ ನಿರಂತರವಾಗಿ ಹರಿಯುವ ನೀರಿದ್ದಂತೆ. ನಾಲ್ಕೂ ಜನ ಪಕ್ಷದ ವಿರುದ್ಧ ಮತ ಹಾಕುವಲ್ಲಿ ನಮ್ಮ ನಾಯಕರ ಕುಮ್ಮಕ್ಕಿರಬಹುದು. ಅವರು ಹಣಕ್ಕಾಗಿ ಮಾರಿಕೊಂಡಿದ್ದರೆ ಅದು ಅಕ್ಷ್ಯಮ್ಯ ಅಪರಾಧ.  ಮುಂಬರುವ ದಿನಗಳಲ್ಲಿ ನಿಜವಾದ ಕಾರ್ಯಕರ್ತರನ್ನು ಪಕ್ಷ ಗುರುತಿಸಬೇಕು. ಇನ್ನು ಮುಂದೆ ಯಾವುದೇ ಮುಖಂಡರು, ಚುನಾಯಿತಿ ಪ್ರತಿನಿಧಿಗಳು ಆಯ್ಕೆಯಾದ ನಂತರ ಹಣಕ್ಕೆ ಮಾರಾಟ ಮಾಡಿಕೊಂಡರೆ ನಾವು ಸುಮ್ಮನಿರಲ್ಲ. ಸೂಕ್ತ ಹೋರಾಟ ಮಾಡುತ್ತೇವೆ. ಎಲ್ಲರೂ ಅನರ್ಹವಾಗುವವರೆಗೆ ಹೋರಾಟ ಮುಂದುವರೆಸುತ್ತೇವೆ. ಇನ್ನು ಮುಂದೆ ಇಂಥ ಪಕ್ಷದ್ರೋಹಿಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನು ಓದಿ: ಕಲ್ಲು ತೂರಾಟ, ಲಾಠಿ ಚಾರ್ಜ್ ಮಧ್ಯೆ ವಿಜಯಪುರ ಜಿಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು; ಬಿಜೆಪಿ ಸಚಿವರಿಗೆ ಶಾಕ್!

ಬಿಜೆಪಿ ಮುಖಂಡ ವಿಜುಗೌಡ ಎಸ್. ಪಾಟೀಲ ಮಾತನಾಡಿ, ನಮ್ಮ ಸದಸ್ಯರನ್ನು ಕಾಂಗ್ರೆಸ್ಸಿನವರು ಕರೆದುಕೊಂಡು ಹೋಗಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಆ ಸದಸ್ಯರಿಗೆ ಸತತವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ನಮ್ಮ ಸರಕಾರದಿಂದ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಆ ಸದಸ್ಯರು ಸರಕಾರದಿಂದ ಲಾಭ ಪಡೆದು ಕೈ ಕೊಟ್ಟಿದ್ದಾರೆ. ನಾಲ್ಕೂ ಜನರಿಗೆ ರಾಜಕೀಯ ಭವಿಷ್ಯವಿಲ್ಲ. ಅವರು ನಮಗೆ ಮೋಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ನಮ್ಮ ಸರಕಾರವಿದ್ದರೂ ಇನ್ನೂ ಇಲ್ಲಿಯೇ ಇದ್ದಾರೆ. ನಮ್ಮ ಸರಕಾರ ಬಂದು 11 ತಿಂಗಳಾದರೂ ಇವರನ್ನು ವರ್ಗಾವಣೆ ಮಾಡಿಲ್ಲ. ಈ ಅಧಿಕಾರಿ ಹೋದರೂ ಮತ್ತೊಬ್ಬ ಅಧಿಕಾರಿ ಬರುತ್ತಾನೆ. ಇವರೇ ಇರಲಿ ಎಂದು ಸುಮ್ಮನಿದ್ದೇವು. ಆದರೂ ಕೂಡ ಚುನಾವಣೆ ಸಂದರ್ಭದಲ್ಲಿ ಜಿ.ಪಂ. ಬಿಜೆಪಿ ಸದಸ್ಯರು ಒಳಗೆ ಹೋಗಬೇಕಾದರೆ 35 ನಿಮಿಷ ಅವರನ್ನು ತಡೆಗಟ್ಟಿ ಚೆಕ್ ಮಾಡಿ ಒಳಗೆ ಬಿಟ್ಟರು. ಆದರೆ, ಅದೇ ಕಾಂಗ್ರೆಸ್ಸಿನ ಸದಸ್ಯರು ಬರುವಾಗ ದೊಡ್ಡ ಗೂಂಡಾಗಳನ್ನು ಕರೆದುಕೊಂಡು ಬಂದು ದಬ್ಬಾಳಿಕೆ ನಡೆಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಮಧ್ಯೆ ಸಿಂದಗಿಯಲ್ಲಿಯೂ ಈ ಸದಸ್ಯರ ವಿರುದ್ಧ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು.
Published by: HR Ramesh
First published: July 2, 2020, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading