ಭಾರತಕ್ಕೆ ರಫೇಲ್ ಯುದ್ಧ ವಿಮಾನ ಬಂತು ; ವಿಜಯಪುರ ಸೈನಿಕ ಶಾಲೆಗೆ ಅತೀವ ಸಂತಸ ತಂತು ಯಾಕೆ ಗೊತ್ತಾ?

ತೀವ್ರ ಕುತೂಹಲ ಕೆರಳಿಸಿದ್ದ ರಫೇಲ್ ಯುದ್ಧ ವಿಮಾನದ ಆಗಮನ ಪೂರ್ಣವಾಗಿದ್ದು, ಈ ಯುದ್ಧ ವಿಮಾನಗಳ ಪೈಲಟ್ ಗಳ ತಂಡದಲ್ಲಿ ವಿಜಯಪುರ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದ್ದ ವಿಂಗ್ ಕಮಾಂಡರ್ ಅರುಣ್ ಕುಮಾರ್ ಭಾರತಕ್ಕೆ ರಫೇಲ್​​ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದಾರೆ

ವಿಜಯಪುರ ಸೈನಿಕ ಶಾಲೆ

ವಿಜಯಪುರ ಸೈನಿಕ ಶಾಲೆ

  • Share this:
ವಿಜಯಪುರ(ಜು. 29): ಫ್ರಾನ್ಸ್ ನಲ್ಲಿ ನಿರ್ಮಿಸಲಾಗಿರುವ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಈ ವಿಚಾರ ವಿಜಯಪುರ ಸೈನಿಕ ಶಾಲೆಗೆ ಅತೀ ಹೆಚ್ಚು ಸಂತಸ ತಂದಿದೆ. ಬಹುನಿರೀಕ್ಷಿತ ಈ ಯುದ್ಧ ವಿಮಾನಗಳು ಇಡೀ ದೇಶಕ್ಕೆ ಸಂತಸ ತಂದಿದ್ದರೆ, ಭಾರತದ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ಆತಂಕ ತಂದಿವೆ. ಭಾರತೀಯ ವಾಯುಪಡೆ ಮತ್ತು ಭದ್ರತಾ ಪಡೆಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಈ ಯುದ್ಧ ವಿಮಾನಗಳ ಖರೀದಿ ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಸದ್ದು ಮಾಡಿತ್ತು. ಕೊನೆಗೂ ಈ ಯುದ್ಧ ವಿಮಾನಗಳು ಭಾರತಿಯರ ಸೇನಾಪಡೆಗೆ ಸೇರಿದ್ದು, ಈಗ ದೇಶದ ಜನ ಹೆಮ್ಮೆ ಪಡುವಂತೆ ಮಾಡಿದೆ.

ಅದರಲ್ಲಿಯೂ ಈ ವಿಚಾರ ಬಸವನಾಡು ವಿಜಯಪುರ ಸೈನಿಕ ಶಾಲೆಗೆ ಅತೀವ ಸಂತಸ ಉಂಟು ಮಾಡಲು ಕಾರಣ ಫೈಟರ್ ಪೈಲಟ್ ವಿಂಗ್ ಕಮಾಂಡರ್ ಅರುಣ್ ಕುಮಾರ್. ಫ್ರಾನ್ಸ್ ನಿಂದ ಈ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದ ನಾಲ್ಕು ಜನ ಫೈಟರ್ ಪೈಲಟ್ ಗಳಲ್ಲಿ ಈ ಅರುಣ್ ಕುಮಾರ್ಕೂಡ ಒಬ್ಬರು. ಇದು ವಿಜಯಪುರ ಸೈನಿಕ ಶಾಲೆಯ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸಿದೆ.ಈ ಅರುಣ್ ಕುಮಾರ್ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿ. 1995ರ ರಿಂದ 2001ರ ವರೆಗೆ ವಿಜಯಪುರ ಸೈನಿಕ ಶಾಲೆಯಲ್ಲಿ ಓದಿದ ಈ ವಿದ್ಯಾರ್ಥಿ 2002ರಲ್ಲಿ (ಎನ್ ಡಿ ಎ) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ಪಾಸು ಮಾಡಿ ವಾಯುಸೇನೆ ಸೇರಿದ್ದಾರೆ.35 ವರ್ಷದ ಅರುಣ್ ಕುಮಾರ್ ಮೂಲತಃ ಬಿಹಾರದವರಾಗಿದ್ದು, ಇವರ ತಂದೆ ಎನ್. ಪ್ರಸಾದ ಬೆಂಗಳೂರಿನಲ್ಲಿ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು. ಈ ಹಿನ್ನೆಯಲ್ಲಿ ಇವರು ವಿಜಯಪುರ ಸೈನಿಕ ಶಾಲೆಯಲ್ಲಿ ಓದಲು ಅವಕಾಶಲ ಸಿಕ್ಕಿತ್ತು. ಈ ವಿಚಾರ ಈಗ ವಿಜಯಪುರ ಸೈನಿಕ ಶಾಲೆಯಲ್ಲಿ ಸಂತಸದ ವಾತಾವರಣಕ್ಕೆ ಕಾರಣವಾಗಿದೆ.ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಾಚಾರ್ಯ ಕ್ಯಾ. ವಿನಯ್ ತಿವಾರಿ, ವಿಂಗ್ ಕಮಾಂಡರ್ ಅರುಣ್ ಕುಮಾರ್ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರ.

2002ರಲ್ಲಿ ಎನ್ ಡಿ ಎ ಗೆ ಆಯ್ಕೆಯಾಗಿ ಫೈಟರ್ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ. 1995 ರಿಂದ 2001ರ ವರೆಗೆ ಅರುಣ್ ಕುಮಾರ್ ವಿಜಯಪುರ ಸೈನಿಕ ಶಾಲೆಯಲ್ಲಿ ಓದಿದ್ದಾರೆ. ನಂತರ 2002ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಇವರ ತಂದೆ ಬೆಂಗಳೂರಿನಲ್ಲಿ ವಾಯುಪಡೆಯಲ್ಲಿ ಸೇವೆ ಸಲ್ಲಿಸುವಾಗ ಅರುಣ್ ಕುಮಾರ್ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿದ್ದರು. ಅರುಣಕುಮಾರ್ ಅವರನ್ನು ಖುದ್ದಾಗಿ ಭೇಟಿಯಾಗಿಲ್ಲ. ಆದರೆ, ಅವರ ಬಗ್ಗೆ ಕೇಳಿದ್ದೇನೆ. ಅವರು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲನಾಗಿದ್ದರು. ಇದು ವಿಜಯಪುರ ಸೈನಿಕ ಶಾಲೆ, ನಮಗೆಲ್ಲರಿಗೂ ಸಂತಸದ ವಿಚಾರ. ಈ ದಿನ ಫ್ರಾನ್ಸ್ ನಲ್ಲಿ ನಿರ್ಮಿಸಲಾಗಿರುವ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಆಗಮಿಸುತ್ತಿದೆ. ರಫೇಲ್ ಯುದ್ಧ ವಿಮಾನಗಳನ್ನು ತರುತ್ತಿರುವವರಲ್ಲಿ ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಅರುಣ್ ಕುಮಾರ್ ಕೂಡ ಒಬ್ಬರಾಗಿರುವುದು ಹೆಮ್ಮೆಯ ವಿಷಯ ಎಂದು ಕ್ಯಾಪ್ಟನ್ ವಿನಯ್ ತಿವಾರಿ ಹರ್ಷ ವ್ಯಕ್ತಪಡಿಸಿದ್ದಾರೆ.ಅರುಣ್ ಕುಮಾರ್​ ಅವರಿಗೆ ಪಾಠ ಮಾಡಿದ ಇದೇ ಶಾಲೆಯ ಶಿಕ್ಷಕ ರಾಮಮೂರ್ತಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುವ ಎಂಬಂತೆ ಅರುಣ್ ಕುಮಾರ್ ಅವರಲ್ಲಿರುವ ಪ್ರತಿಭೆಯನ್ನು ಅಂದೇ ಗುರುತಿಸಿದ್ದೇವೆ. ವಿದ್ಯಾಭ್ಯಾಸದಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಎತ್ತಿದ ಕೈ.ಒಂದು ರೀತಿಯಲ್ಲಿ ಆತ ಎಲ್ಲ ವಿಭಾಗಗಳಲ್ಲಿ ಆಲ್​​ರೌಂಡರ್ ಆಗಿದ್ದ. ನಿನ್ನೆ ಈತ ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ತರುತ್ತಿರುವ ವಿಷಯ ತಿಳಿದು ಇಡೀ ಸೈನಿಕ ಶಾಲೆಯ ಆವರಣದಲ್ಲಿ ಸಂತಸದ ವಾತಾವರಣವಿದೆ. ಆತ ಈಗ ಭಾರತಕ್ಕೆ ಬಂದ ವಿರಮಿಸಿದ ಮೇಲೆ, ಆತನೊಂದಿಗೆ ಮಾತನಾಡಿ ಶುಭ ಕೋರುವುದಾಗಿ ರಾಮಮೂರ್ತಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.ಇದೇ ವೇಳೆ, ಅರುಣ್​​ ಕುಮಾರ್ ಜೊತೆ ಸೈನಿಕ ಶಾಲೆಯಲ್ಲಿಯಲ್ಲಿಯೇ ಓದಿರುವ ಆತನ ಸ್ನೇಹಿತ ಡಾ. ಪ್ರವೀಣ ಬಗಲಿ, ಅರುಣ್ ಕುಮಾರ್ ಬಾಲ್ಯದಿಂದಲೂ ಸೇನೆ ಸೇರುವ ಹಂಬಲ ಹೊಂದಿದ್ದ. ಅದಕ್ಕಾಗಿ ಶತಪ್ರಯತ್ನ ಮಾಡುತ್ತಿದ್ದ. ಆತ ವಿಜಯನಗರ ಸದನದಲ್ಲಿ ವಾಸಿಸುತ್ತಿದ್ದ. ನಾವೆಲ್ಲ ಕ್ರೀಡೆಗಳತ್ತ ಹೆಚ್ಚಿನ ಆಸಕ್ತಿ ವಹಿಸಿದ್ದರೆ, ಆತ ಸೈನಿಕ ತರಬೇತಿಯತ್ತ ಹೆಚ್ಚು ಉತ್ಸುಕನಾಗಿದ್ದ.

ಇದನ್ನೂ ಓದಿ :  ಸಚಿವ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ನಾಯಕರ ಮೊರೆ ಹೋದ ಶಶಿಕಲಾ ಜೊಲ್ಲೆ

ಆತನ ತಂದೆ ಬಿಹಾರದವರಾಗಿದ್ದರಿಂದ ಮತ್ತು ಹೊರ ರಾಜ್ಯದ ಕೋಟಾದಲ್ಲಿ ಅರುಣಕುಮಾರ್ ವಿಜಯಪುರ ಸೈನಿಕ ಶಾಲೆಗೆ ಸೇರಿದ್ದ. ನಂತರ ಮೊದಲ ಪ್ರಯತ್ನದಲ್ಲಿಯೇ ಎನ್ ಡಿ ಎ ಪರೀಕ್ಷೆ ಪಾಸು ಮಾಡಿ ತನ್ನ ಕನಸನ್ನು ನನಸು ಮಾಡಿಕೊಂಡ ಎಂದರು.

ಸೈನಿಕ ಶಾಲೆ ಸೇರಿದ ಆರಂಭದಲ್ಲಿ ಆತನಿಗೆ ಕನ್ನಡ ಬರುತ್ತಿರಲಿಲ್ಲ. ಹೀಗಾಗಿ ಬೇರೆಯವರೊಂದಿಗೆ ಬೆರೆಯಲು ಸಂಕೋಚ ವ್ಯಕ್ತಪಡಿಸುತ್ತಿದ್ದ. ನಂತರ ನಮ್ಮೆಲ್ಲರೊಡನೆ ಬೆರೆತು ಕನ್ನಡವನ್ನೂ ಕಲಿತ.  ಈಗ ಸ್ನೇಹಿತ ರಫೆಲ್ ಯುದ್ಧ ವಿಮಾನಕ್ಕೆ ಸಾರಥಿಯಾಗಿರುವುದು ತಮಗೆಲ್ಲ ಸಂತಸ ಮೂಡಿಸಿದೆ ಎಂದು ವಿಜಯಪುರ ಸೈನಿಕ ಶಾಲೆಯಲ್ಲಿ ಅರುಣ್​​ ಕುಮಾರ್ ಜೊತೆ ಸಹಪಾಠಿಯಾಗಿದ್ದ ಡಾ. ಪ್ರವೀಣ ಬಗಲಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
Published by:G Hareeshkumar
First published: