ವಿಜಯಪುರದಲ್ಲಿ ಭರ್ತಿಯಾದ ಆಸ್ಪತ್ರೆಗಳು; ಹಾಸಿಗೆ ಸಿಗದೆ ರೋಗಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದ ಸಂಬಂಧಿಕರು!

ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಖುದ್ದಾಗಿ ರೋಗಿ ಇರುವ ಕಾರಿನ ಬಳಿ ತೆರಳಿ ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ಮಾತನಾಡುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಈಗ ರೋಗಿಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿಯ ಸಂಕಷ್ಟ ಆಲಿಸುತ್ತಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ.

ರೋಗಿಯ ಸಂಕಷ್ಟ ಆಲಿಸುತ್ತಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ.

  • Share this:
ವಿಜಯಪುರ (ಜು.10); ಗುಮ್ಮಟ ನಗರಿಯಲ್ಲಿಯೂ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ ರೋಗಿಯನ್ನು ಸಂಬಂಧಿಕರು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದಿದ್ದು, ಕೊರೋನಾ ಸಂಕಷ್ಟ ಕಾಲದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಈವರೆಗೆ ಬೆಂಗಳೂರಿನಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೇ ರೋಗಿಗಳು ಪರದಾಡುವುದು ಸಾಮಾನ್ಯವಾಗಿತ್ತು. ಇದೀಗ ವಿಜಯಪುರ ಜಿಲ್ಲೆಯ ಜನತೆಗೆ ಇಲ್ಲಿನ ಪರಿಸ್ಥಿತಿ ಕಂಡು ಆತಂಕ ಮೂಡಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ 54 ವರ್ಷದ ವ್ಯಕ್ತಿಗೆ ನಿನ್ನೆ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದೊಯ್ಯಲು ಸೂಚಿಸಿದ್ದರು. ರೋಗಿಯ ಸಂಬಂಧಿಕರು ಆ ವ್ಯಕ್ತಿಯನ್ನು ಕಾರಿನಲ್ಲಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆ, ಅಲ್‌ ಅಮೀನ್ ಆಸ್ಪತ್ರೆ, ವೇದಾಂತ ಆಸ್ಪತ್ರೆ, ಯಶೋದರಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ.  ನಂತರ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಿದ ಇವರಿಗೆ ಅಲ್ಲಿಯೂ ಬೆಡ್ ಖಾಲಿ ಇಲ್ಲ ಎಂಬ ಉತ್ತರ ಸಿಕ್ಕಿದೆ. ಇದರಿಂದ ಕಂಗಾಲಾದ ರೋಗಿಯ ಸಂಬಂಧಿಕರು ರೋಗಿಯೊಂದಿಗೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಖುದ್ದಾಗಿ ರೋಗಿ ಇರುವ ಕಾರಿನ ಬಳಿ ತೆರಳಿ ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ಮಾತನಾಡುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಈಗ ರೋಗಿಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 85 ಹೈ ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಬೆಡ್ ಗಳಿವೆ. ಈಗಾಗಲೇ ಸಾಕಷ್ಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಕಾಯಿಲೆಗಳೂ ಕೊರೋನಾ ಎಂದು ಜನ ತಪ್ಪಾಗಿ ಭಾವಿಸುವುದು ಬೇಡ. ಅಸ್ತಮಾ, ನೆಗಡಿಯಂಥ ಕಾಯಿಲೆಗಳಿಂದಲೂ ಉಸಿರಾಟದ ಸಮಸ್ಯೆಯಾಗುತ್ತದೆ. ಈ ರೋಗಿಗೆ ಕೊರೋನಾ ಸೋಂಕಿನ ಲಕ್ಷಣವಿರಲಿಲ್ಲ. ಅಲ್ಲಿನ ವೈದ್ಯರ ಮೇಲೆ ರೋಗಿಯ ಸಂಬಂಧಿಕರಿಗೆ ವಿಶ್ವಾಸ ಬಂದಿಲ್ಲ. ದಾಖಲು ಮಾಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಆಗ ಸಾಧ್ಯವಿಲ್ಲ ಎಂದಾಗ ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ಸಾರ್ವಜನಿಕರೂ ಕೂಡ ವೈದ್ಯರ ಸಲಹೆಯನ್ನು ಕೇಳಬೇಕು. ಅದೇ ರೀತಿ, ಸರಕಾರಿ ಮತ್ತು ಖಾಸಗಿ ವೈದ್ಯರೂ ಕೂಡ ಮಾನವೀಯತೆಯಿಂದ ಕೆಲಸ ಮಾಡಬೇಕು.  ಬೆಡ್ ಖಾಲಿ ಇಲ್ಲ ಎಂದು ಸುಳ್ಳು ಹೇಳಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಸುಸಜ್ಜಿತವಾಗಿ ಸಿದ್ದವಾಗುತ್ತಿದೆ 10 ಸಾವಿರ ಹಾಸಿಗೆ ಸಾಮರ್ಥ್ಯದ ಬಿಐಇಸಿ ಕೋವಿಡ್ ಕೇರ್ ಸೆಂಟರ್

ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿಯೂ ಕೊರೋನಾ ಭಯ ಹೆಚ್ಚಾಗಿದ್ದು, ಜನ ಕೂಡ ಆತಂಕದಲ್ಲಿದ್ದಾರೆ. ವೈದ್ಯರಿಗೂ ಕೂಡ ಕೊರೋನಾ ಸೋಂಕು ತಗುಲಿರುವುದರಿಂದ ಅವರೂ ಕೂಡ ಕೆಲಸ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವುಗಳ ಮಧ್ಯೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಈಗ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅಲ್ಲಿಯೂ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಬೆಡ್ ಗಳು ಬಹುತೇಕ ಭರ್ತಿಯಾಗುತ್ತಿವೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಬೇರೆ ಕಡೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ರೋಗಿಗಳೂ ಕೂಡ ಕೊರೋನಾ ಆತಂಕ ಹೆಚ್ಚಾಗಿರುವುದರಿಂದ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿರುವುದು ಹೊಸ ತಲೆನೋವು ತಂದಿದೆ.
Published by:HR Ramesh
First published: