• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ವರ್ಚುವಲ್ ಕಾರ್ಯಕ್ರಮ ಮೂಲಕ ಚಾಲನೆ

ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ವರ್ಚುವಲ್ ಕಾರ್ಯಕ್ರಮ ಮೂಲಕ ಚಾಲನೆ

ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಉದ್ಘಾಟನೆಗೆ ನಡೆದ ಕಾರ್ಯಕ್ರಮ

ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಉದ್ಘಾಟನೆಗೆ ನಡೆದ ಕಾರ್ಯಕ್ರಮ

220 ಕೋಟಿ ರೂ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ವಿಜಯಪುರದ ವಿಮಾನ ನಿಲ್ದಾಣದ ಕಾಮಗಾರಿಯನ್ನು ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಿವಿಧ ಸಂಸದರು ಶಿವಮೊಗ್ಗದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

  • Share this:

ವಿಜಯಪುರ: ಬಸವನಾಡು ವಿಜಯಪುರ ಜನರ ಬಹುದಿನಗಳ ಕನಸು ನನಸಾಗುವ ದಿನಗಳು ಹತ್ತಿರ ಬರುತ್ತಿವೆ. ಇದಕ್ಕೆ ಇಂಬು ನೀಡುವಂತೆ ಸಿಎಂ ಬಿ. ಎಸ್. ಯಡಿಯೂರಪ್ಪ ಬುರಣಾಪುರ ಬಳಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಿವಮೊಗ್ಗದಿಂದ ವರ್ಚ್ಯೂವಲ್ ಕಾರ್ಯಕರ್ಮದ ಮೂಲಕ ಚಾಲನೆ ನೀಡಿದರು. ಇತ್ತ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹಾಗೂ ಡಾ. ದೇವಾನಂದ ಚವ್ಹಾಣ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ವಿಜಯಪುರ ವಿಮಾನ ನಿಲ್ದಾಣ ಕೇವಲ ಶ್ರೀಮಂತರ ಓಡಾಟಕ್ಕೆ ನಿರ್ಮಿಸಲಾಗುತ್ತಿಲ್ಲ. ಇದರಿಂದ ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು. 


ಲೋಕೋಪಯೋಗಿ ಇಲಾಖೆ ಒಟ್ಟು ರೂ. 220 ಕೋಟಿ ಅನುದಾನದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣವಾಗಲಿದೆ. 2008 ರಲ್ಲಿ ಅಂದು ಸಿಎಂ ಆಗಿದ್ದ ಬಿ. ಎಸ್. ಯಡಿಯೂರಪ್ಪ ಅವರು ವಿಜಯಪುರ, ಕಲಬುರ್ಗಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವಿಮಾನ ನಿಲ್ದಾಣಗಳಿಗೆ ಅಡಿಗಲ್ಲು ನೆರವೇರಿಸಿದ್ದರು. ಈಗ ಮತ್ತೆ ಅವರೇ ಈ ವಿಮಾನ ನಿಲ್ದಾಣಕ್ಕೆ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ್ದು, ಸಿಎಂಗೆ ವಿಜಯಪುರ ಜಿಲ್ಲೆಯ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಇದನ್ನೂ ಓದಿ: Justice Rama Jois Death - ಮಾಜಿ ರಾಜ್ಯಪಾಲ ನ್ಯಾ| ರಾಮಾಜೋಯಿಸ್ ನಿಧನ


ವಿಮಾನ ನಿಲ್ದಾಣ ವಿಜಯಪುರ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದು, ಕನಸಾಗಿ ಉಳಿದಿತ್ತು. ಇಂದು ಈ ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆತಿದ್ದು, 1974 ರಿಂದ ಪದೇ ಪದೇ ಸಮೀಕ್ಷೆ ಮತ್ತು ಖರ್ಚು ವೆಚ್ಚ ವರದಿ ಸಲ್ಲಿಸುವಲ್ಲಿಯೇ ದಣಿದು ಹೋಗಿದ್ದ ಲೋಕೋಪಯೋಗಿ ಅಧಿಕಾರಿಗಳಿಗೆ ಇಂದು ಸಮಾಧಾನ ಸಿಕ್ಕಂತಾಗಿದೆ.  ಒಟ್ಟು 727 ಎಕರೆ ಜಮೀನಿನಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ತಾವು ಕೇಂದ್ರ ಸರಕಾರದ ವಿಮಾನಯಾನ ಸಚಿವರಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದಾಗ ವಿಮಾನ ನಿಲ್ದಾಣದ ಕಟ್ಟಡ, ರನ್ ವೇ ಮತ್ತು ಇತರೆ ಕಾಮಗಾರಿಗಳನ್ನು ರಾಜ್ಯ ಸರಕಾರದಿಂದಲೇ ಸ್ವಂತ ಖರ್ಚಿನಲ್ಲಿ ನಿರ್ಮಿಸುವಂತೆ ತಿಳಿಸಿದ್ದರು. ಅದರಂತೆ ರಾಜ್ಯ ಸರಕಾರದ ಅನುದಾನದಲ್ಲಿ ಪ್ರಥಮ ಹಂತದಲ್ಲಿ ಒಟ್ಟು ರೂ. 95 ಕೋ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ಕೇಂದ್ರ ಸರಕಾರ 20 ವರ್ಷಗಳ ಹಿಂದೆಯೇ ವಿಜಯಪುರ ಜಿಲ್ಲೆ ತೋಟಗಾರಿಕಾ ಜಿಲ್ಲೆ ಎಂದು ಘೋಷಣೆ ಮಾಡಿತ್ತು.  ಉತ್ತಮ ಹವಾಮಾನ, ಭೂಮಿ, ನೀರು, ತೋಟಗಾರಿಕೆ ಕ್ಷೇತ್ರ ಮತ್ತು ನೀರಾವರಿ ಹೊಂದಿರುವುದರಿಂದ ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಉತ್ತರ ಕರ್ನಾಟಕದಲ್ಲಿಯೇ ಮುಂಚೂಣಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಲಿದೆ ಎಂದು ತಿಳಿಸಿದ ಗೋವಿಂದ ಕಾರಜೋಳ, ಈ ವಿಮಾನ ನಿಲ್ದಾಣದ ಸ್ಥಾಪನೆಯಿಂದ ಈ ಭಾಗದ ಭೂಮಿಗೆ ಹೆಚ್ಚಿನ ಮಹತ್ವ ಬರಲಿದೆ.  ಈ ನಿಲ್ದಾಣಕ್ಕಾಗಿ ಭೂಮಿ ನೀಡಿದ ಅಲಿಯಾಬಾದ, ಬುರಣಾಪುರ ಮತ್ತು ಮದಭಾವಿ ಗ್ರಾಮಗಳ ರೈತರಿಗೂ ಕೂಡ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದ ಅ;ರು, ಕೇಂದ್ರ ಸರಕಾರದಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಜಾರಿ ಕುರಿತು ಮಾಹಿತಿ ನೀಡಿದರು.


ಈ ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಅವರು, ವಿಮಾನ ನಿಲ್ದಾಣದ ಕಾಮಗಾರಿಗಳ ಬಗ್ಗೆ ವಿವರ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿ, ನಿಗದಿತ ಅವಧಿಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣವಾಗಿ ಈ ಭಾಗದ ಜನರಿಗೆ ಸಹಕಾರಿಯಾಗಲಿ ಎಂದು ಹಾರೈಸಿದರು.


ಇದನ್ನೂ ಓದಿ: Bangalore Crime | ಆಸ್ತಿಗಾಗಿ ಅಪ್ಪನನ್ನೇ ಕೊಲ್ಲಲು ಸುಪಾರಿ ನೀಡಿದ ಮಗ; ಕೊನೆಗೂ ಸೆರೆ ಸಿಕ್ಕ ಹಂತಕರು


ಈ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣಕ್ಕೆ ಶ್ರಮಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರಿಗೆ ಕ್ರೇನ್ ಮೂಲಕ ಬೃಹದಾಕಾರದ ಹಾರ ಹಾಕಿ ಬೆಳ್ಳಿ ಗದೆ ನೀಡುವ ಮೂಲಕ ಸಾರ್ವಜನಿಕರು ಗೌರವಿಸಿದರು.  ಅಲ್ಲದೇ, ರೈತರು ತಮ್ಮ ಎತ್ತಿನ ಗಾಡಿಗಳ ಮೇಲೆ ಕೇಸರಿ ಧ್ವಜ ಹಾಕಿಕೊಂಡು ಎತ್ತಿನ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಅವರ ಭಾವಚಿತ್ರ ಚಿತ್ರಿಸಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದರು.


ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ(ಸಾಸನೂರ), ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಧಾನ ಪರಿಷತ ಸದಸ್ಯ ಅರುಣ ಶಹಾಪೂರ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮದಬಾವಿ ಗ್ರಾ. ಪಂ. ಅಧ್ಯಕ್ಷ ಚೇತನ ಬಗಲಿ, ಐನಾಪೂರ ಗ್ರಾ. ಪಂ. ಅಧ್ಯಕ್ಷ ಯಲ್ಲಕ್ಕ ವಂಬಾಸೆ, ಅಲಿಯಾಬಾದ ಗ್ರಾ. ಪಂ. ಅಧ್ಯಕ್ಷ ರಾವಣ ಹಕ್ಕೆ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ. ಎಸ್. ಕೃಷ್ಣಾರೆಡ್ಡಿ, ಮೂಲಸೌಲಭ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪೀಲ್ ಮೋಹನ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿ. ಪಂ. ಪ್ರಭಾರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಬಿ. ಬಿ. ಪಾಟೀಲ, ಮುಖ್ಯ ಅಭಿಯಂತರ ಎಸ್. ಎಸ್. ಪಾಟೀಲ, ಅಧೀಕ್ಷಕ ಅಭಿಯಂತರ ಬಿ. ವೈ. ಪವಾರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಆರ್. ಕೆ. ಮುಜುಮದಾರ, ಕಾಮಗಾರಿ ಗುತ್ತಿಗೆದಾರ ಎಸ್. ಎಸ್. ಆಲೂರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


ವರದಿ: ಮಹೇಶ ವಿ. ಶಟಗಾರ

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು