ವಿಜಯಪುರ (ಮಾ. 16): ಬಿಜೆಪಿ ದೇಶಭಕ್ತರನ್ನು ಗುತ್ತಿಗೆ ಹಿಡಿದಿದ್ದು, ಆ ಪಕ್ಷದ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ. ಬಿಜೆಪಿ ಪಕ್ಷವನ್ನು ತೊರೆದು ಹಲವಾರು ಮಾಜಿ ಸೈನಿಕರು ಈಗ ಕಾಂಗ್ರೆಸ್ ಪಕ್ಷವನ್ನು ಸೇರಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ವಿಜಯಪುರ ಜಿಲ್ಲೆಯ ಬಬಲೇಶ್ವರದ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನೂರಾರು ಕಾರ್ಯಕರ್ತರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಬಿಜೆಪಿ ಕುರಿತು ಆಶಾವಾದ ಹೊಂದಿದ್ದ ಬಹುತೇಕರಿಗೆ ಇಂದು ಭ್ರಮನಿರಸನವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದಲೇ ಆರಂಭವಾಗಿದೆ. ಇಲ್ಲಿನ ಪ್ರತಿ ಹಳ್ಳಿ, ಹಳ್ಳಿಯಿಂದ ನಿಷ್ಠಾವಂತ ಕ್ರಿಯಾಶೀಲ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ. ಅವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಅವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಈ ಭಾಗದಲ್ಲಿ ಬೇಸಿಗೆಯಲ್ಲಿ ರೈತರು ತಮ್ಮ ದ್ರಾಕ್ಷಿ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಂದು ಗ್ರಾಮದಲ್ಲಿ ರೂ. 10 ಕೋ. ಟ್ಯಾಂಕರ್ ನೀರಿಗಾಗಿ ಖರ್ಚು ಮಾಡುತ್ತಿದ್ದರು. ಆದರೆ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಜಾರಿಯಾದ ಮೇಲೆ ಈ ಭಾಗದಲ್ಲಿ ಟ್ಯಾಂಕರ್ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿದೆ. ಈಗ ರೈತರು ನೆಮ್ಮದಿಯಿಂದ ಇದ್ದಾರೆ. ಈ ನೀರಾವರಿ ಕಾರ್ಯಗಳನ್ನು ಮೆಚ್ಚಿಯೇ ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
(ವರದಿ: ಮಹೇಶ ವಿ. ಶಟಗಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ