HOME » NEWS » District » VIDHYAGAMA PLANNING WILL START FOR RURAL STUDENTS FUTURE SAYS MINISTER SURESH KUMAR RHHSN NCHM

ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಯೋಜನೆ ಪುನರಾರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಈಗಾಗಲೆ ನವೆಂಬರ್ 21 ರಂದು ರಾಜ್ಯದ ತಾಂತ್ರಿಕ ಸಲಹಾ ಸಮಿತಿಯೊಡನೆ ಚರ್ಚೆ ನಡೆಸಲಾಗಿದೆ. ಮತ್ತೆ ಈ ತಿಂಗಳ ಕೊನೆಯ ವಾರದಲ್ಲಿ  ಚರ್ಚಿಸಿ ಅವರ ಸಲಹೆ, ಮಾರ್ಗದರ್ಶನದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

news18-kannada
Updated:December 16, 2020, 5:27 PM IST
ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಯೋಜನೆ ಪುನರಾರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್
  • Share this:
ಬೆಂಗಳೂರು: ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದಲೇ ವಿದ್ಯಾಗಮ ಯೋಜನೆ ಪುನರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಆನ್ ಲೈನ್ ತರಗತಿಗಳಿಗೆ ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಆಂಡ್ರಾಯ್ಡ್ ಮೊಬೈಲ್ ಗಳ ಕೊರತೆ ಹೀಗೆ ಹಲವಾರು ಸಮಸ್ಯೆಗಳನ್ನು  ಎದುರಿಸುತ್ತಿದ್ದಾರೆ. ಹಾಗಾಗಿ ನಗರಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು  ವಿದ್ಯಾಗಮ ಯೋಜನೆಯನ್ನು ಸುಧಾರಿತ ಕ್ರಮಗಳೊಂದಿಗೆ ಮತ್ತೆ ಆರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿದ್ಯಾಗಮ ಆರಂಭವನ್ನು ಶಾಲೆಗಳ ಆರಂಭ ಎಂದು ಯಾರೂ ಭಾವಿಸಬಾರದು. ಕಲಿಕೆ ನಿರಂತರವಾಗಿಬೇಕು ಎಂಬ ದೃಷ್ಟಿಯಿಂದ ಈ ವಿದ್ಯಾಗಮ ಯೋಜನೆ ಪುನಾರಂಭಿಸಲಾಗಿದೆ. ವಿದ್ಯಾಗಮ ಯೋಜನೆ ಪ್ರಾರಂಭಿಸಲು ಮಕ್ಕಳ  ಪೋಷಕರಿಂದ ಬೇಡಿಕೆ ಬಂದಿತ್ತು. ಅಲ್ಲದೆ ಸ್ವಲ್ಪ ಬದಲಾವಣೆ ಮಾಡಿ ವಿದ್ಯಾಗಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಶಿಕ್ಷಕ ವಲಯದಲ್ಲೂ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿ ಕೆಲವು ಸುಧಾರಿತ ಕ್ರಮಗಳೊಡನೆ ಈ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ ಎಂದರು.

ಈ  ಬಾರಿ  ವಿದ್ಯಾಗಮ ಯೋಜನೆ ಕೇವಲ ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿಲ್ಲ. ಖಾಸಗಿ ಶಾಲೆಗಳು ಸಹ 1 ರಿಂದ 10ನೇ ತರಗತಿವರೆಗೆ ವಿದ್ಯಾಗಮ ಮಾಡಲು ಅವಕಾಶವಿದೆ. ಇದು ಯಾವ ವಿದ್ಯಾರ್ಥಿಗೂ ಕಡ್ಡಾಯವಲ್ಲ. ತಂದೆ-ತಾಯಿ ಒಪ್ಪಿಗೆ ಕೊಟ್ಟರೆ ಮಾತ್ರ ವಿದ್ಯಾರ್ಥಿಗಳು ಬರಬಹುದು. ಅವರು ಮಾಸ್ಕ್ ಹಾಕಿಕೊಂಡು ಬರಬೇಕು. ಅವರಿಗೆ ಆರೋಗ್ಯದಲ್ಲಿ ತೊಂದರೆಗಳಿದ್ದರೆ ಅವರು ಗುಣಮುಖರಾಗುವವರೆಗು ಬರುವಂತಿಲ್ಲ ಎಂದು ಸಚಿವರು ತಿಳಿಸಿದರು.

ಇದನ್ನು ಓದಿ: ಬೆಂಗಳೂರಿನ ಶಾಂತಿನಗರದ ಅಧಿಪತ್ಯಕ್ಕಾಗಿ ಡಾನ್ ಲಿಂಗರಾಜ್ ಕೊಲೆ; ಹತ್ಯೆಯ ಹಿಂದಿದೆ ರೋಚಕ ಕಥೆ

ಈ ಹಿಂದೆ ಮಕ್ಕಳಿದ್ದಲ್ಲಿಗೇ ಹೋಗಿ ಶಿಕ್ಷಕರು ಹೋಗಿ ಮರದ ಕೆಳಗೆ, ಮನೆಯ ಹಜಾರ, ದೇವಸ್ಥಾನದ ಆವರಣ ಮೊದಲಾದ ಕಡೆ ವಿದ್ಯಾಗಮ ಮಾಡುತ್ತಿದ್ದರು. ಆದರೆ ಅಲ್ಲಿ ಕೆಲವು ಸೌಲಭ್ಯಗಳು ಇರುತ್ತಿರಲಿಲ್ಲ. ಹಾಗಾಗಿ  ಈ ಬಾರಿ ಶಾಲಾವರಣದಲ್ಲೇ ಮಾಡುವಂತೆ ಬದಲಾವಣೆ ಮಾಡಲಾಗಿದೆ. ಪ್ರತಿದಿನ ವಿದ್ಯಾಗಮ ನಡೆಯುವುದಿಲ್ಲ. ದಿನಾ ಬಿಟ್ಟು ದಿನ ನಡೆಯಲಿದ್ದು, ಯಾವ ಕ್ಲಾಸ್ ಗೆ ಯಾವತ್ತು, ಎಷ್ಟು ಅವಧಿ ಎಂಬುದನ್ನು ಸಹ ನಿಗಧಿಪಡಿಸಲಾಗಿದೆ. ಆನ್ ಲೈನ್ ಶಿಕ್ಷಣಕ್ಕಿಂತ ವಿದ್ಯಾಗಮ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯ ಕೇಳಿಬಂದಿದೆ. ಆದರೂ ಅನುಕೂಲವಿರುವ ಕಡೆ ಆನ್ ಲೈನ್ ಶಿಕ್ಷಣ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.

ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಈಗಾಗಲೆ ನವೆಂಬರ್ 21 ರಂದು ರಾಜ್ಯದ ತಾಂತ್ರಿಕ ಸಲಹಾ ಸಮಿತಿಯೊಡನೆ ಚರ್ಚೆ ನಡೆಸಲಾಗಿದೆ. ಮತ್ತೆ ಈ ತಿಂಗಳ ಕೊನೆಯ ವಾರದಲ್ಲಿ  ಚರ್ಚಿಸಿ ಅವರ ಸಲಹೆ, ಮಾರ್ಗದರ್ಶನದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.ವರದಿ; ಎಸ್.ಎಂ.ನಂದೀಶ್ 
Published by: HR Ramesh
First published: December 16, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories