ಶಿವಮೊಗ್ಗ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶೀಘ್ರ ಚಾಲನೆ; ಸಂಸದ ಬಿ.ವೈ.ರಾಘವೇಂದ್ರ

ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಮಾರ್ಚ್ ಮೊದಲ ವಾರದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆಯಿದೆ. ಸಚಿವರು ಆ ಸಂದರ್ಭದಲ್ಲಿ ರೈಲ್ವೇ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.

ಸಂಸದ ಬಿ ವೈ ರಾಘವೇಂದ್ರ

ಸಂಸದ ಬಿ ವೈ ರಾಘವೇಂದ್ರ

  • Share this:
ಶಿವಮೊಗ್ಗ; ಸಂಚಾರ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗ  ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಕಾಮಗಾರಿಗಳ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗ ನಗರದ ಸವಳಂಗ ರಸ್ತೆ ಮತ್ತು ಕಾಶಿಪುರದಲ್ಲಿ ಹಾಗೂ ಭದ್ರಾವತಿಯಲ್ಲಿ ಒಟ್ಟು 4 ರೈಲ್ವೇ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಸವಳಂಗ ರಸ್ತೆಯಲ್ಲಿ ರೈಲ್ವೇ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣಕ್ಕೆ ಸರ್ಕಾರ 60.76 ಕೋಟಿ ರೂ. ಬಿಡುಗಡೆ ಮಾಡಿದೆ. ಇಲ್ಲಿ ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಕಂಬಗಳ ಸ್ಥಳಾಂತರ ಇತ್ಯಾದಿ ಕಾರ್ಯಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಕಾಶಿಪುರ ರೈಲ್ವೇ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಭದ್ರಾವತಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 49 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಮಾರ್ಚ್ ಒಂದರಂದು ಎಲ್ಲಾ ಕಾಮಗಾರಿಗಳನ್ನು ಆರಂಭಿಸಲು ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಎಲ್ಲಾ ರೈಲ್ವೇ ಸೇತುವೆಗಳ ನಿರ್ಮಾಣ ಕಾರ್ಯವನ್ನು ದಾಖಲೆ ಸಮಯದ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕಾಮಗಾರಿ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲತೆಗಳು ಆಗದಂತೆ ಸೂಕ್ತ ಪರ್ಯಾಯ ರಸ್ತೆಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೈಲ್ವೇ ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ 60 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ. ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಹಳಿ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಥಮ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತದಲ್ಲಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಸ್ವಾಧೀನ ಪ್ರಕ್ರಿಯೆ ಮತ್ತು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಇದನ್ನು ಓದಿ: ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪ

ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಮಾರ್ಚ್ ಮೊದಲ ವಾರದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆಯಿದೆ. ಸಚಿವರು ಆ ಸಂದರ್ಭದಲ್ಲಿ ರೈಲ್ವೇ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರ ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ರೈಲ್ವೇ ಅಧಿಕಾರಿಗಳು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Published by:HR Ramesh
First published: