ವಿಜಯಪುರ(ಅಕ್ಟೋಬರ್. 27): ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಖರೀದಿ ಈಗ ಮತ್ತೆ ಚುರುಕು ಪಡೆದುಕೊಂಡಿದೆ. ದ್ವಿಚಕ್ರ ವಾಹನ ಮಾರಾಟಗಾರ ಪ್ರದೀಪ ಪಾಟೀಲ ಪ್ರಕಾರ, ಕೊರೋನಾ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಮೂರು ತಿಂಗಳು ಸಂಪೂರ್ಣ ಸ್ಥಗಿತಗೊಂಡಿದ್ದ ದ್ವಿಚಕ್ರ ವಾಹನಗಳ ಮಾರಾಟ ಅನಲಾಕ್ ಬಳಿಕ ಮತ್ತೆ ವೇಗ ಪಡೆದುಕೊಂಡಿತ್ತು. ನಂತರ ಸಪ್ಟೆಂಬರ್ ತಿಂಗಳಲ್ಲಿ ಅಧಿಕ ಮಾಸ ಹಾಗೂ ಬಿಎಸ್ 6 ತಂತ್ರಜ್ಞಾನ ಆಧರಿತ ವಾಹನಗಳ ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಸಪ್ಟೆಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಹಿನ್ನಡೆಯಾಗಿತ್ತು. ಈಗ ಮತ್ತೆ ಬಿಎಸ್ 4 ತಂತ್ರಜ್ಞಾನ ಆಧರಿತ ವಾಹನಗಳ ನೋಂದಣಿಗೆ ಈ ತಿಂಗಳು ಅವಕಾಶ ನೀಡಿದ್ದರಿಂದ ಮಾರಾಟ ಹೆಚ್ಚಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಪ್ರತಿ ತಿಂಗಳು 125 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದೆ. ಆದರೆ, ಈಗ ಈ ಮಾರಾಟದಲ್ಲಿ ಶೇ. 25 ರಷ್ಟು ವೃದ್ಧಿಯಾಗಿದ್ದು, ಈಗ ಪ್ರತಿ ತಿಂಗಳು ಸುಮಾರು 150 ಕ್ಕಿಂತಲೂ ಹೆಚ್ಚು ಬೈಕ್ಗಳು ಮಾರಾಟವಾಗುತ್ತಿವೆ. ಅಲ್ಲದೇ, ಈ ಅಂಕಿ-ಸಂಖ್ಯೆ ಬೇರೆ ಕಂಪನಿಗಳ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಇನ್ನೂ ಹೆಚ್ಚಾಗುತ್ತದೆ ಎಂದು ಪ್ರದೀಪ ಪಾಟೀಲ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
ಈ ಮಧ್ಯೆ ಟ್ರ್ಯಾಕ್ಟರ್ ಮಾರಾಟದಲ್ಲಿಯೂ ಈಗ ವ್ಯಾಪಕ ವೃದ್ಧಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಟ್ರ್ಯಾಕ್ಟರ್ ಮಾರಾಟ ಶೇ. 50 ರಷ್ಟು ಹೆಚ್ಚಳವಾಗಿದೆ. ಈ ಮುಂಚೆ ಪ್ರತಿ ತಿಂಗಳು 20 ಟ್ರ್ಯಾಕ್ಟರ್ ಮಾರಾಟ ಮಾಡುತ್ತಿದ್ದೇವು. ಈಗ ಪ್ರತಿ ತಿಂಗಳು ಸರಾಸರಿ 30 ಟ್ರ್ಯಾಕ್ಟರ್ ಮಾರಾಟವಾಗುತ್ತಿವೆ. ಕೊರೋನಾ ಲಾಕ್ ಡೌನ್ ನಂತರ ಗ್ರಾಮೀಣ ಭಾಗದತ್ತ ಬಂದಿರುವ ಯುವ ಜನತೆ ಕೃಷಿಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಕೃಷಿ ಕಾರ್ಮಿಕರೂ ಲಾಕ್ ಡೌನ್ ನಿಂದಾಗಿ ಮನೆಯಲ್ಲಿದ್ದಿದ್ದರಿಂದ ಕಾರ್ಮಿಕರ ಕೊರತೆ ನೀಗಿಸಲು ಯುವ ರೈತರು ಟ್ರ್ಯಾಕ್ಟರ್ ನತ್ತ ಮುಖ ಮಾಡಿದ್ದಾರೆ. ಇದು ಟ್ರ್ಯಾಕ್ಟರ್ ಮಾರಾಟ ಹೆಚ್ಚಳವಾಗಲು ಕಾರಣವಾಗಿವೆ. ಅದರಲ್ಲೂ ಸಣ್ಣ ಟ್ರ್ಯಾಕ್ಟರ್ ಮಾರಾಟ ಹೆಚ್ಚಾಗಿದೆ ಎಂದು ಟ್ರ್ಯಾಕ್ಟರ್ ಮಾರಾಟಗಾರ ಅರುಣ ಮಾಚಪ್ಪನವರ ಹೇಳುತ್ತಾರೆ.
ಮತ್ತೊಬ್ಬ ಟ್ರ್ಯಾಕ್ಟರ್ ಮಾರಾಟಗಾರ ಸಚಿನ ಗುಚ್ಚೆಟ್ಟಿ ಹೇಳುವಂತೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಉತ್ತಮವಾಗಿದೆ. ಕೃಷಿ ಚಟುವಟಿಕೆಗಳೂ ಹೆಚ್ಚಾಗಿವೆ. ಕಳೆದ ವರ್ಷ ವಿಜಯಪುರ ಜಿಲ್ಲೆಯಲ್ಲಿ ಸುಮಾರು 1600 ಟ್ರ್ಯಾಕ್ಟರ್ ಮಾರಾಟವಾಗಿದ್ದವು. ಈಗ ಈಗ ಅಕ್ಟೋಬರ್ ವರೆಗೆಯೇ 1700 ರಿಂದ 1800ರ ವರೆಗೆ ಟ್ರ್ಯಾಕ್ಟರ್ ಮಾರಾಟವಾಗಿದ್ದು ಗಮನಾರ್ಹವಾಗಿದೆ ಎನ್ನುತ್ತಿದ್ದಾರೆ.
ಈ ಮಧ್ಯೆ ಹೊಸ ದ್ವಿಚಕ್ರ ವಾಹನ ಖರೀದಿಸಿದ ವ್ಯಾಪಾರಿ ಮತ್ತು ರೈತರೂ ಆಗಿರುವ ಕಾಖಂಡಕಿ ಗ್ರಾಮದ ಅಶೋಕ ಶಿವಪ್ಪ ತಿಮಶೆಟ್ಟಿ, ದಸರಾ ಮತ್ತು ದೀಪಾವಳಿ ಹಿಂದೂಗಳ ಪಾಲಿಗೆ ಪವಿತ್ರ ಹಬ್ಬ. ಈ ದಿನ ವಾಹನಗಳ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಮುಂಚೆ ನಾವೆಲ್ಲ ಸಾರ್ವಜನಿಕ ವಾಹನಗಳಲ್ಲಿ ಅಂದರೆ ಬಸ್, ಟಂಟಂ, ಟೆಂಪೊಗಳಲ್ಲಿ ಸಂಚರಿಸುತ್ತಿದ್ದೇವು. ಆದರೆ, ಲಾಕ್ ಡೌನ್ ಮುಗಿದ ಬಳಿಕವೂ ಕೊರೋನಾ ಸೋಂಕು ಹೆಚ್ಚಾಗಿದ್ದರಿಂದ ಸಾರ್ವಜನಿಕ ವಾಹನಗಳಲ್ಲಿ ಓಡಾಡಲು ಜನ ಹಿಂದೇಟು ಹಾಕತೊಡಗಿದರು. ಅಲ್ಲದೇ, ಒಬ್ಬೊಬ್ಬರಾಗಿಯೇ ಪ್ರಯಾಣದ ಕಡೆ ಮುಖ ಮಾಡಿದ್ದರಿಂದ ದ್ವಿಚಕ್ರ ವಾಹನಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮುಂಚೆ ರೈತರು ಮತ್ತು ಸಾರ್ವಜನಿಕರು ಸೈಕಲ್ ಮೇಲೆ ತಿರುಗಾಡುತ್ತಿದ್ದರು. ಈಗ ಅದರ ಬದಲಾಗಿ ಬೈಕ್ ಗಳು ಬಂದು ದಶಕಗಳೇ ಕಳೆದಿವೆ. ಆದರೂ, ಕೂಡ ಜನ ತಮ್ಮ ಕುಟುಂಬ ಸದಸ್ಯರೊಂದಿಗೆ ಬೈಕ್ ಗಳಲ್ಲಿಯೇ ಸಂಚಾರಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಸರಕಾರ ಇದನ್ನು ಪ್ರೋತ್ಸಾಹಿಸಲು ತೆರಿಗೆಯನ್ನು ಕಡಿತಗೊಳಿಸಬೇಕು. ವಿನಾಕಾರ ದಂಡ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಳೆ ಪರಿಹಾರ ಚೆಕ್ ನಲ್ಲೂ ದಲ್ಲಾಳಿಗಳ ಕಮಾಲ್; ಪ್ರತಿ ಚೆಕ್ ಗೆ 500-1000 ರೂ ಕಮಿಷನ್
ಹೀಗಾಗಿ ಕೊರೋನಾದಿಂದ ಮೂರು ತಿಂಗಳು ಮಾರಾಟ ಸ್ಥಗಿತವಾಗಿದ್ದರೂ, ನಂತರ ಈಗ ಅಟೋಮೊಬೈಲ್ ಉದ್ಯಮ ಅದರಲ್ಲೂ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದ್ದು, ಮಾರಾಟಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈಗ ದಸರಾ ಮತ್ತು ದೀಪಾವಳಿ ಹಬ್ಬವೂ ಇರುವುದರಿಂದ ಮತ್ತು ಹಿಂದೂಗಳ ಪಾಲಿಗೆ ಈ ಹಬ್ಬಗಳು ವಿಶೇಷವಾಗಿವೆ. ಅಲ್ಲದೇ, ಈ ಸಂದರ್ಭದಲ್ಲಿಯೂ ವಾಹನಗಳ ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದು ನಾನಾ ವಾಹನಗಳ ಮಾರಾಟಕ್ಕೆ ಮತ್ತು ಖರೀದಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ