HOME » NEWS » District » VATHARA SCHOOL HEADMASTER SAYS THERE IS NO MASK NO SANITIZE HK

ಮಾಸ್ಕ್​​​ ಇಲ್ಲ ಸ್ಯಾನಿಟೈಸರ್ ಕೊಡುತ್ತಿಲ್ಲ ; ವಠಾರ ಶಾಲೆಯ ಮುಖ್ಯ ಶಿಕ್ಷಕರ ಗೋಳು

ಸರ್ಕಾರದಿಂದ ಮಾಸ್ಕ್, ಸ್ಯಾನಿಟೈಸರ್ ಏನು ಸಿಗುತ್ತಿಲ್ಲ. ಎಲ್ಲವನ್ನೂ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಮುಖ್ಯಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

news18-kannada
Updated:October 9, 2020, 4:18 PM IST
ಮಾಸ್ಕ್​​​ ಇಲ್ಲ ಸ್ಯಾನಿಟೈಸರ್ ಕೊಡುತ್ತಿಲ್ಲ ; ವಠಾರ ಶಾಲೆಯ ಮುಖ್ಯ ಶಿಕ್ಷಕರ ಗೋಳು
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ
  • Share this:
ಕಲಬುರ್ಗಿ(ಅಕ್ಟೋಬರ್​. 09): ಕೊರೋನಾ ಸಂದಿಗ್ಧತೆಯಲ್ಲಿ ಶಾಲೆ ಆರಂಭಿಸಬೇಕೆ, ಬೇಡವೇ ಎಂಬುದು ಸದ್ಯದ ಮಟ್ಟಿಗೆ ಹಾಟ್ ಚರ್ಚೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿಯೇ ಕಲಬುರ್ಗಿಯಲ್ಲಿ ವಠಾರ ಶಾಲೆಯ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ದೇಶದಲ್ಲಿ ಕೊರೋನಾಗೆ ಮೊದಲ ಬಲಿಯಾದ ಕಲಬುರ್ಗಿ ಜಿಲ್ಲೆಯಲ್ಲಿಯೇ ವಠಾರ ಶಾಲೆಯ ಪರಿಕಲ್ಪನೆ ಮೊದಲ ಬಾರಿಗೆ ಮೂಡಿತ್ತು. ಇದೀಗ ಇದೇ ಜಿಲ್ಲೆಯಲ್ಲಿಯೇ ವಠಾರ ಶಾಲೆಯ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಶಾಲಾ ಮಕ್ಕಳಿಗಾಗಲಿ, ಶಿಕ್ಷಕರಿಗಾಗಲೇ ಸರ್ಕಾರ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡದೇ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಶಾಲೆಗೆ ಶಿಕ್ಷಣ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್ ಏನೂ ನೀಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಸ್ವತಹ ಮಾಶಾಳ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಲಕ್ಕಪ್ಪ ಹಿಟ್ಟಿನ ಬಹಿರಂಗಪಡಿಸಿದ್ದಾರೆ.

ಸರ್ಕಾರದಿಂದ ಮಾಸ್ಕ್, ಸ್ಯಾನಿಟೈಸರ್ ಏನು ಸಿಗುತ್ತಿಲ್ಲ. ಎಲ್ಲವನ್ನೂ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಮುಖ್ಯ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಾಶಾಳ ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಒಂದು ವಾರ ಶಾಲೆಗೆ ರಜೆ ಕೊಡಲಾಗಿದೆ. ಹಿರಿಯ ಅಧಿಕಾರಿಗಳು ಎರಡು ವಾರ ನೀಡಲು ಸೂಚಿಸಿದಲ್ಲಿ ಅದನ್ನು ಪಾಲಿಸುತ್ತೇವೆ. 7ನೇ ತರಗತಿಯ ಇಬ್ಬರು ಹಾಗೂ ಎಂಟನೆಯ ತರಗತಿಯ ಇಬ್ಬರಿಗೆ ಪಾಸಿಟಿವ್ ಬಂದಿದೆ.

ಇನ್ನೂ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಮಾಸಾಳ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಲಕ್ಕಪ್ಪ ಹಿಟ್ಟಿನ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಇದ್ದ ಮುಖ್ಯಗುರುಗಳಿಗೆ ಪಾಸಿಟಿವ್ ಆಗಿತ್ತು. ಅದಾದ ಹಲವು ದಿನಗಳ ನಂತರ ವಿದ್ಯಾರ್ಥಿಗಳಲ್ಲಿ ಕೊರೋನಾ ಬಂದಿದೆ. ಶಿಕ್ಷಣ ಇಲಾಖೆಯಿಂದ ನಮಗೆ ಮಾಸ್ಕ್, ಸ್ಯಾನಿಟೈಸರ್ ಏನೂ ಕೊಟ್ಟಿಲ್ಲ. ಮಾಶಾಳ ಶಾಲೆಯಲ್ಲಿ 836 ಮಕ್ಕಳ ಸಂಖ್ಯೆ ಇವೆ. ಈ ಪೈಕಿ 730 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಸದ್ಯಕ್ಕೆ ವಠಾರ ಶಾಲೆಗಳನ್ನು ಬಂದ್ ಮಾಡಿದ್ದೇವೆ. ಶಿಕ್ಷಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದು ಲಕ್ಕಪ್ಪ ಹಿಟ್ಟಿನ ತಿಳಿಸಿದ್ದಾರೆ.

ಮಾಶಾಳಯ 19 ಕಡೆ ವಠಾರ ಶಾಲೆ ನಡೆಸಲಾಗುತ್ತಿತ್ತು. ನಾಲ್ವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಠಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.

ವಠಾರ ಶಾಲೆ ಆರಂಭಗೊಂಡ ನಂತರ ಶಿಕ್ಷಕರಲ್ಲಿ ಸೋಂಕು ಹೆಚ್ಚಳ :

ಕೊರೋನಾ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಕಲಬುರ್ಗಿ ಜಿಲ್ಲೆಯಲ್ಲಿ ಹಲವು ಶಿಕ್ಷಕರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ. ಸುಮಾರು 25 ಶಿಕ್ಷಕರು ಕೊರೋನಾ ಸೋಂಕಿಗೆ ಗುರಿಯಾಗಿ, ಈ ಪೈಕಿ 11 ಶಿಕ್ಷಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅದರಲ್ಲಿಯೂ ವಠಾರ ಶಾಲೆ, ರಾಜ್ಯ ಸರ್ಕಾರದ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ಬಂದ ನಂತರ ಶಿಕ್ಷಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ಕಲಬುರ್ಗಿ ಜಿಲ್ಲೆ ಪ್ರಾಥಮಿಕ, ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಆರೋಪಿಸಿದ್ದಾರೆ.

ವಠಾರ ಶಾಲೆ ಒಳ್ಳೆಯ ಪರಿಕಲ್ಪನೆ. ಆದರೆ, ಬೀದಿ ಬೀದಿಗಳಲ್ಲಿ, ದೇಗುಲ, ಮಸೀದಿ, ಚರ್ಚ್ ಗಳಲ್ಲಿ ಕಲಿಸಬೇಕೆಂದರೆ ಕಷ್ಟವಾಗುತ್ತೆ. ಶಾಲಾ ಆವರಣದಲ್ಲಿಯೇ ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಿಸಬಹುದು. ಆದರೆ, ಇದೆಲ್ಲಕ್ಕೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಅಗತ್ಯ. ರಾಜ್ಯ ಸರ್ಕಾರ ವಠಾರ ಶಾಲೆ ಆರಂಭಿಸಿ, ವಿದ್ಯಾಗಮ ಯೋಜನೆ ಪ್ರಾರಂಭಿಸಿ ಕೈತೊಳೆದುಕೊಂಡಿದೆ.ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕನಿಷ್ಟ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಿಲ್ಲ. ಕೇಳಿದರೆ ನೀವೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪೋಷಕರಿಂದಲೇ ವಿದ್ಯಾರ್ಥಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಿಸುವಂತೆ ಹೇಳುತ್ತಿದ್ದಾರೆ. ಹೀಗಾದರೆ ನಾವು ಹೇಗೆ ಕೆಲಸ ಮಾಡುವುದು ಎಂದು ಮಲ್ಲಯ್ಯ ಗುತ್ತೇದಾರ ಪ್ರಶ್ನಿಸಿದ್ದಾರೆ. ಮಾಶಾಳ ಘಟನೆ ನಡೆದ ನಂತರವಾದರು ಶಾಲೆ ಪುನರಾರಂಭದ ಕುರಿತು ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮಾಶಾಳ ಶಾಲೆಗೆ ಬಿಇಒ ದೇಗಲಮಡಿ ಭೇಟಿ:

ವಠಾರ ಶಾಲೆಯ ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ನೀಡಿದ್ದಾರೆ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಅಫಜಲಪುರ ಬಿಇಒ ಚಿತ್ರಶೇಖರ ದೇಗಲಮಡಿ ಭೇಟಿ ನೀಡಿ ಶಿಕ್ಷಕರು ಮತ್ತು ಗ್ರಾಮಸ್ಥರ ಜೊತೆ ಚರ್ಚೆ ಮಾಡಿದ್ದಾರೆ.

ಮಾಶಾಳ ಸರ್ಕಾರಿ ಶಾಲೆಯಲ್ಲಿ 800 ಕ್ಕೂ ಅಧಿಕ ಮಕ್ಕಳಿದ್ದು, ಗ್ರಾಮದ 19 ಕಡೆ ವಠಾರ ಶಾಲೆ ನಡೆಸಲಾಗುತ್ತಿತ್ತು. ಶಾಲೆಯ ಮುಖ್ಯೋಪಾಧ್ಯಾಯರಿಗೆ ಪಾಸಿಟಿವ್ ಬಂದ ಹಲವು ದಿನಗಳ ನಂತರ ನಾಲ್ವರು ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಪೋಷಕರು ಆತಂಕಕ್ಕೀಡಾಗುವ ಜೊತೆಗೆ, ಶಿಕ್ಷಕರಲ್ಲಿಯೂ ಆತಂಕ ಮನೆ ಮಾಡಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಶಾಲೆ ತೆರೆಯಬೇಡಿ, ಎಲ್ಲಕ್ಕಿಂತ ಜೀವ ಮುಖ್ಯ ; ಶಿಕ್ಷಣ ಸಚಿವರಿಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

ಈಗಾಗಲೇ ಶಿಕ್ಷಣ ಇಲಾಖೆ ಗ್ರಾಮದ ವಠಾರ ಶಾಲೆಗಳನ್ನು ಬಂದ್ ಮಾಡಿಸಿದೆ. ರಾಜ್ಯ ಸರ್ಕಾರ ಶಾಲೆಗಳನ್ನು ಪುನರಾರಂಭಿಸಬೇಕೆಂಬ ಚಿಂತನೆಯಲ್ಲಿರುವಾಗಲೇ ವಿದ್ಯಾಗಮ ಶಾಲೆಯ ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದರ ಹಿನ್ನೆಲೆಯಲ್ಲಿ ಬಿಇಒ ದೇಗಲಮಡಿ ಶಾಲೆಗೆ ಭೇಟಿ ನೀಡಿ ಮುಖ್ಯಗುರುಗಳು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ.

ಮುಂದಿನ ಕ್ರಮಗಳ ಕುರಿತು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಜೊತೆ ಬಿಇಒ ಚರ್ಚೆ ನಡೆಸಿದರು. ವಠಾರ ಶಾಲೆ ಅಥವಾ ಶಾಲೆಯನ್ನು ಪ್ರಾರಂಭಿಸದಿರುವಂತೆ ಗ್ರಾಮಸ್ಥರು ಈ ವೇಳೆ ಆಗ್ರಹಿಸಿದ್ದಾರೆ.
Published by: G Hareeshkumar
First published: October 9, 2020, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading