ವಿಜಯಪುರ(ಡಿಸೆಂಬರ್. 03): ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಯಾರೂ ನಕಲಿ ಕನ್ನಡ ಪರ ಸಂಘಟನೆಗಳಿಗೆ ಹೆದರಬೇಡಿ. ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಫಲಗೊಳಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜನರಿಗೆ ಅಭಯ ನೀಡಿದ್ದಾರೆ. ಡಿ. 5 ರ ಕರ್ನಾಟಕ ಬಂದ್ ವಿರೋಧಿಸಿ ನಡೆದ ನಾನಾ ಸಂಘಟನೆಗಳು ಮತ್ತು ಸಮಾಜಗಳ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಬೆಂಬಲವಾಗಿ ಈ ಸಭೆ ನಡೆಸಲಾಗುತ್ತಿದೆ. ಇಂದು ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಡೆಯುತ್ತಿದೆ. ಸವರ್ಣಿಯರು-ದಲಿತರು, ಕನ್ನಡಿಗರು,-ಮರಾಠಿಗರನ್ನು, ಮಂಗಳೂರಿನಲ್ಲಿ ಮಾರವಾಡಿಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಕನ್ನಡ ಪರ ಹೋರಾಟಗಾರರಲ್ಲಿ ಕೆಲವರಿಗೆ ಕನ್ನಡವೇ ಬರಲ್ಲ. ಈಗ ಮೊದಲ ಹಂತದಲ್ಲಿ ನಮ್ಮ ಬೆಂಬಲಿಗರು ಈ ಸಂಘಟನೆಗಳ ವಿರುದ್ಧ ಜನಜಾಗೃತಿ ಮಾಡುತ್ತಿದ್ದಾರೆ. ಎರಡು ಮತ್ತು ಮೂರನೇ ಹಂತ ಮಾಡಿದರೆ ನಕಲಿ ಹೋರಾಟಗಾರರು ನೇಣು ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದರು.
ವಿಜಯಪುರ ಅಷ್ಟೇ ಅಲ್ಲ, ಇಡೀ ಕರ್ನಾಟಕದ ಜನತೆ ಈ ಬಂದ್ ವನ್ನು ಸಂಪೂರ್ಣ ವಿಫಲ ಮಾಡಿ ನಮ್ಮ ಶಕ್ತಿ ತೋರಿಸುವ ಮೂಲಕಗ ನಕಲಿ ಹೋರಾಟಗಾರರಿಗೆ ಬುದ್ದಿ ಕಲಿಸೋಣ ಎಂದು ಸಂದೇಶ ನೀಡುವುದಾಗಿ ತಿಳಿಸಿದರು.
ಮರಾಠ ಸಮಾಜವನ್ನು ಮರಾಠಿ ಶಬ್ದದ ಮೂಲಕ ಒಡೆಯುವ ಕುತಂತ್ರ ರಾಜ್ಯದಲ್ಲಿ ನಡೆದಿದೆ. ಮಂಗಳೂರ - ಉಡುಪಿಯಲ್ಲಿ ಮಾರವಾಡಿಗಳನ್ನು ವ್ಯಾಪಾರ ಮಾಡದಂತೆ ಹೊರ ಹಾಕುವ ದೇಶ ವಿರೋದಿ ಮತ್ತು ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ದೇಶದಲ್ಲಿ ನಡೆದಿದೆ. ಬರಿ ಹೊಂದಾಣಿಕೆ ರಾಜಕಾರಣ ಮಾಡುತ್ತ ಹೋದರೆ ಅಯೋಗ್ಯರಿಗೆ ಅವಕಾಶ ನೀಡಿದಂತಾಗುತ್ತೆ. ನನ್ನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಇವರು ಬಳಸಿರುವ ಕನ್ನಡವನ್ನು ನೋಡಿದರೆ ಇವರು ಕನ್ನಡಿಗರಿಗೆ ಹುಟ್ಟಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಎಂದರು.
ಬೆಂಗಳೂರಿನಲ್ಲಿ ಅಂಗಡಿಕಾರರಿಗೆ, ಫ್ಯಾಕ್ಟರಿಯವರೊಂದಿಗೆ ಮಾಮೂಲಿ ಫಿಕ್ಸ್ ಮಾಡಿಕೊಂಡು, ಐಷಾರಾಮಿ ಬಂಗಲೇ, ಕಾರುಗಳಲ್ಲಿ ದುಡಿಯದೇ ಜೀವನ ಸಾಗಿತ್ತಾರೆ. ನನಗೆ ಅವಕಾಶ ಸಿಕ್ಕರೆ ನಕಲಿ ಕನ್ನಡ ಪರ ಸಂಘಟನೆಗಳನ್ನು ಬಂದ್ ಮಾಡಿಸುತ್ತೇನೆ. ನಿಜವಾದ ಕನ್ನಡ ಸಂಘಟನೆಗಳಿಗೆ ಅನುದಾನ ಕೊಡುವ ವ್ವವಸ್ಥೆ ಮಾಡುತ್ತೇನೆ. ಒಳ್ಳೆಯ ಕಾಲ ಬಂದೇ ಬರುತ್ತೆ ಎಂದು ಯತ್ನಾಳ ಕಿಡಿ ಕಾರಿದರು.
ನನ್ನ ಪ್ರತಿಕೃತಿ ಸುಟ್ಟಿದ್ದಾರೆ. ಇದರಿಂದ ನನ್ನ ಆಯುಷ್ಯ 10 ವರ್ಷ ಹೆಚ್ಚಾಗಲಿದೆ. ನನ್ನ ವಿರುದ್ಧ ಪ್ರತಿಭಟನೆ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಪಡೆದಿದ್ದಾರೆ. ಅಲ್ಲಿಯೂ ಶುದ್ಧ ಕನ್ನಡ ಶಬ್ದ ಬಳಸಲಾಗದ ಇವರು ಕನ್ನಡ ಪರ ಹೋರಾಟಗಾರರು. ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳುತ್ತಾರೆ. ಆದರೆ, ಬಹಳಷ್ಟು ಜನರಿಗೆ ಬುದ್ಧಿ ಭ್ರಮಣೆ ಮಾಡುವ ಶಕ್ತಿ ನನಗಿದೆ. ಕನ್ನಡದ ಹೋರಾಟಕ್ಕಾಗಿ ವಾಟಾಳ್ 2 ಕೋಟಿ ರೂ ಕೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ 5 ರಿಂದ 10 ಮತ ಪಡೆದು ವಾಟಾಳ ನನ್ನ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಡಿ. 5ರ ನಂತರ ವಾಟಾಳ್ ಕೂಡ ಮೂಲೆ ಗುಂಪಾಗುತ್ತಾರೆ ಎಂದು ಯತ್ನಾಳ ಭವಿಷ್ಯ ನುಡಿದರು.
ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಕಮಲ ಅರಳಲಿದೆ ; ಡಿಸಿಎಂ ಅಶ್ವತ್ಥನಾರಾಯಣ
ನಾನು ಮರಾಠಿಗರಿಗೆ ಹುಟ್ಟಿದ್ದೇನೆ ಎಂದು ಟೀಕಿಸುತ್ತಿದ್ದಾರೆ. ಹೌದು ನಾನು ಮರಾಠಿಗರಿಗೆ ಹುಟ್ಟಿದ್ದೇನೆ. ನನ್ನೂರು ಯತ್ನಾಳ ಮಹಾರಾಷ್ಟ್ರದ ಗಡಿಯಲ್ಲಿದೆ. ಮಹಾರಾಷ್ಟ್ರದಲ್ಲಿ ನನ್ನದೊಂದ ಹೊಲವಿದೆ. ನೀನು ಯಾರಿಗೆ ಹುಟ್ಟಿದ್ದೀಯಾ? ಕ್ರಾಸ್ ಬ್ರೀಡಾ? ನಮಗೆ ಮೊದಲು ದೇಶ ಮುಖ್ಯ. ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ಹತ್ತಿಕ್ಕಲು ಹಿಂದೂಗಳೆಲ್ಲ ಒಗ್ಗಟ್ಟಿನಿಂದ ಇರಲು ಈ ಬಂದ್ ವಿರೋಧಿಸಲಾಗುತ್ತಿದೆ. ಇಲಿಗೆ ಬಾಂಬ್ ಕಟ್ಟಿ ಬ್ರಿಟಿಷರ ಕಚೇರಿ ಸ್ಪೋಟಿಸಿದ ಸ್ವತಂತ್ರ ಹೋರಾಟಗಾರನ ಬಗ್ಗೆ ಹೇಳಿದಾಗ ಕೆಲವು ಶಾಸಕರು ಗಾಬರಿಯಾಗಿದ್ದರು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹೆಸರು ಹೇಳದೆ ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸ್ಮರಿಸಿದ ಅವರು, ಈಗ ಎಲ್ಲರಿಗೂ ಆ ಸ್ವತಂತ್ರ ಹೋರಾಟಗಾರನ ಬಗ್ಗೆ ಗೊತ್ತಾಗಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ