ಮೈಸೂರಿನಿಂದ ರೋಹಿಣಿ ಸಿಂಧೂರಿ ಎತ್ತಂಗಡಿ: ಸರ್ಕಾರದ ನಡೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಡಿಸಿಯ ವರ್ಗಾವಣೆ ಯಾವ ಕಾರಣಕ್ಕೆ ಮಾಡಬೇಕಿತ್ತು..? ಇದರ ಹಿನ್ನಲೆ ಏನು? ಈ ರೀತಿ ತಮ್ಮ ಇಚ್ಚಾನುಸಾರ ವರ್ಗಾವಣೆ ಮಾಡೋದು ಅತ್ಯಂತ ಅಗೌರವ ಹಾಗೂ ಅಪಾಯದ ಬೆಳವಣಿಗೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ವಾಟಾಳ್ ನಾಗರಾಜ್.

ವಾಟಾಳ್ ನಾಗರಾಜ್.

 • Share this:
  ಮೈಸೂರು (ಜೂನ್ 07); ಸಂಸದ ಪ್ರತಾಪ್ ಸಿಂಹ ಅವರ ಜೊತೆಗಿನ ನಿರಂತರ ಜಟಾಪಟಿಯಿಂದಾಗಿ ಮೈಸೂರು ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದರು. ಅಲ್ಲದೆ, ಅವರು ಸ್ವಿಮಿಂಗ್​ ಪೂಲ್​ ನಿರ್ಮಿಸಿದ್ದ ವಿಚಾರದ ತನಿಖೆಗೂ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಇದರ ಬೆನ್ನಿಗೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಅವರನ್ನು ಶನಿವಾರ ತಡರಾತ್ರಿ ಮೈಸೂರಿ ನಿಂದ ಮುಜರಾಯಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ರಾಜಕೀಯ ಪ್ರೇರಿತ ಎಂದು ಹಲವರು ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಪ್ರತಾಪ್ ಸಿಂಹ ಅವರ ಕಾರಣಕ್ಕೆ ಈ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ಎತ್ತಂಗಡಿ ಮಾಡಲಾಗಿದೆ ಎಂದು ಕಿಡಿಕಾರುತ್ತಿದ್ದಾರೆ. ಈ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ.

  ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್, "ಡಿಸಿಯ ವರ್ಗಾವಣೆ ಯಾವ ಕಾರಣಕ್ಕೆ ಮಾಡಬೇಕಿತ್ತು..? ಇದರ ಹಿನ್ನಲೆ ಏನು? ಈ ರೀತಿ ತಮ್ಮ ಇಚ್ಚಾನುಸಾರ ವರ್ಗಾವಣೆ ಮಾಡೋದು ಅತ್ಯಂತ ಅಗೌರವ ಹಾಗೂ ಅಪಾಯದ ಬೆಳವಣಿಗೆ. ಮೈಸೂರು ಆಡಳಿತಕ್ಕೆ ರೋಹಿಣಿ ಸಿಂಧೂರಿಯಂತಹ ಅಧಿಕಾರಿ ಬೇಕು" ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಶನಿವಾರ ತಡರಾತ್ರಿ ಮೈಸೂರಿನಿಂದ ವರ್ಗಾವಣೆಯಾದ ರೋಹಿಣಿ ಸಿಂಧೂರಿ ಮೈಸೂರಿನ ಜನತೆಗೆ ಧನ್ಯವಾದ ಹೇಳಿದ್ದಾರೆ. ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭಾವುಕರಾದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದರು.

  ಏನ್ ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಯಾವುದೋ ಅಧಿಕಾರಿಯನ್ನ ತೆಗೆಸಿ ಮಿಷನ್ ಮುಗಿಯಿತು ಅಂದುಕೊಳ್ಳೋದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆ, ಯಾವ ಸಂಸ್ಥೆಯಲ್ಲಿ ಆದರೂ ವ್ಯವಸ್ಥೆ ಸರಿ ಮಾಡೋಕೆ ಆಗೋಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಭೂ ಮಾಫೀಯಾಗೆ ಬಲಿಯಾದ್ರಾ? ಅನ್ನೋ ಪ್ರಶ್ನೆಗೆ ರೋಹಿಣಿ ಸಿಂಧೂರಿ ನೋ ಕಾಮೆಂಟ್ ಎಂದರು. ಕೊನೆಯಲ್ಲಿ ಥ್ಯಾಂಕ್ಯೂ ಮೈಸೂರು ಎಂದು ಹೇಳಿ ಮೈಸೂರಿನಿಂದ ನಿರ್ಗಮಿಸಿದರು. ನಿನ್ನೆ ಕೂಡ ರೋಹಿಣಿ ಸಿಂಧೂರಿ ಮಾಧ್ಯಮ ಪ್ರಕಟಣೆ ಮೂಲಕ ಮೈಸೂರಿನ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಮಾಡಬಹುದಾದಷ್ಟು ಉತ್ತಮ ಕೆಲಸವನ್ನು ಮಾಡಿದ್ದೇನೆ. ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

  ಇದನ್ನೂ ಓದಿ: ಕೇಂದ್ರ ಸರ್ಕಾರ ಟ್ವಿಟರ್​ ವಿರುದ್ಧ ಹೋರಾಡುವ ಬದಲು ಎಲ್ಲರಿಗೂ ಲಸಿಕೆ ನೀಡಲು ಮುಂದಾಗಲಿ: ಎನ್​ಸಿಪಿ ಛೀಮಾರಿ!

  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್​ ಅವರನ್ನು ರಾಜ್ಯ ಸರ್ಕಾರ ಶನಿವಾರ ತಡರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆ ಮೂಲಕ ಇಬ್ಬರು ಐಎಎಸ್​ ಅಧಿಕಾರಿಗಳ ಕಿತ್ತಾಟಕ್ಕೆ ಅಂತ್ಯ ಕಾಣಿಸಿತ್ತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

  ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್​ ಅವರನ್ನು ನೇಮಿಸಲಾಗಿದ್ದು, ನಿನ್ನೆ ಅಧಕಾರ ಸ್ವೀಕರಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು, ಅವರೂ ಸಹ ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ.

  ಇದನ್ನೂ ಓದಿ: NASA: ನಾಸಾದ ಚಂದ್ರಯಾನಕ್ಕೆ ಬೆನ್ನೆಲುಬಾದ ಭಾರತೀಯ ಮೂಲದ ಸುಭಾಷಿಣಿ ಅಯ್ಯರ್

  ಕೋವಿಡ್ ನಿಯಂತ್ರಣ ಮಾಡುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್​​ ಮೇಲೆ ಆರೋಪ ಮಾಡಿದ್ದರು. ಡಿಸಿ ಆರೋಪಕ್ಕೆ ಬೇಸತ್ತಿದ್ದ ಶಿಲ್ಪಾನಾಗ್​ ರಾಜೀನಾಮೆ ಸಲ್ಲಿಸಿ, ರೋಹಿಣಿ ಸಿಂಧೂರಿ ಕಾರ್ಯವೈಖರಿಯನ್ನು ಖಂಡಿಸಿದ್ದರು. ಬಳಿಕ ಇಬ್ಬರ ನಡುವೆ ವಾಗ್ಯುದ್ಧ ನಡೆದಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದಿದ್ದರು.

  ಇವರಿಬ್ಬರ ಜಗಳ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಇಬ್ಬರನ್ನೂ ಎತ್ತಂಗಡಿ ಮಾಡಿತ್ತು. ಸರ್ಕಾರದ ನಿರ್ಧಾರದಿಂದ ಬೇಸರಗೊಂಡಿದ್ದ ರೋಹಿಣಿ ಸಿಂಧೂರಿ, ನಿನ್ನೆ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿ, ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಆದರೆ ಸಿಎಂ ಯಡಿಯೂರಪ್ಪ ಬಿಲ್​ ಕುಲ್ ಆಗಲ್ಲ ಎಂದು ಹೇಳಿದ್ದರು. ಹೀಗಾಗಿ ರೋಹಿಣಿ ಬರಿಗೈಯಲ್ಲಿ ವಾಪಸ್ಸಾಗಿದ್ದರು.
  Published by:MAshok Kumar
  First published: