HOME » NEWS » District » VATAL NAGARAJ AND SA RA GOVIND WHO CAME TO GHERAO DC OFFICE OF VIJAYAPURA ARRESTED AND RELEASED MVSV HK

ಡಿಸಿ ಕಚೇರಿ ಮುತ್ತಿಗೆಗೆ ಬಂದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಬಂಧಿಸಿ ಬಿಡುಗಡೆ

ನಾಳೆ ಬೆಳಿಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ಸಿಎಂ ಹೊರಡಿಸಿರುವ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶದ ಪ್ರತಿಯನ್ನು ಬಹಿರಂಗವಾಗಿ ಸುಟ್ಟು ಹಾಕುತ್ತೇವೆ.  ಡಿಸೆಂಬರ್​ 5 ರಂದು ರಾಜ್ಯಾದ್ಯಂತ ಬಂದ್ ಯಶಸ್ವಿಯಾಗುತ್ತದೆ.

news18-kannada
Updated:December 1, 2020, 7:10 PM IST
ಡಿಸಿ ಕಚೇರಿ ಮುತ್ತಿಗೆಗೆ ಬಂದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಬಂಧಿಸಿ ಬಿಡುಗಡೆ
ವಾಟಾಳ್ ನಾಗರಾಜ್
  • Share this:
ವಿಜಯಪುರ (ಡಿಸೆಂಬರ್​. 01) : ಕನ್ನಡ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವಿಜಯಪುರಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಆಗಮಿಸುತ್ತಿದ್ದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಮತ್ತು ಬೆಂಬಲಿಗರನ್ನು ಪೊಲೀಸರು ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿ ಗಡಿಯಲ್ಲಿ ತಡೆದು ವಶಕ್ಕೆ ಪಡೆಿದು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ. ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಉಭಯ ನಾಯಕರನ್ನು ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಣ ಅರಸಿದ್ಧಿ ನೇತೃತ್ವದಲ್ಲಿ ಬಸವನ ಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ಮತ್ತು ಸಿಬ್ಬಂದಿ ತಡೆದು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ವಾಗ್ವಾದ ನಡೆಸಿದರು. ನಂತರ ಆಲಮಟ್ಟಿ ಪ್ರವಾಸಿ ಮಂದಿರಕ್ಕೆ ಕರೆದೊಯ್ದರು. ಅಲ್ಲದೇ, ಸ್ವಲ್ಪ ಹೊತ್ತಿನ ನಂತರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಪೊಲೀಸರು ಯಾಕೆ ತಡೆದರು ಎಂಬುದು ಈವರೆಗೆ ಅರ್ಥವಾಗುತ್ತಿಲ್ಲ. ಏಕಾಏಕಿ ಪೊಲೀಸರು ತಮ್ಮನ್ನು ತಡೆದು ಬಂಧಿಸಿದ್ದು, ಅಕ್ಷಮ್ಯ ಅಪರಾಧ. ನ್ಯಾಯಾಲಯದ ಆದೇಶವಿದ್ದರೆ ಅದನ್ನು ತಿಳಿಸಬೇಕಿತ್ತು.  ಆದರೆ, ಏನನ್ನೂ ಹೇಳದೇ ಬಂಧಿಸಿ ಆಲಮಟ್ಟಿ ಅತಿಥಿ ಗ್ರಹಕ್ಕೆ ತಂದು ಬಿಟ್ಟಿದ್ದಾರೆ. ಬಂಧನ ನಮಗೇನೂ ಹೊಸತಲ್ಲ. ಸಾಕಷ್ಟು ಬಾರಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.

ನಾಳೆ ಬೆಳಿಗ್ಗೆ ಬೆಂಗಳೂರಿನಲ್ಲಿ ಮೈಸೂರು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಲಿದೆ. ಸಿಎಂ ಹೊರಡಿಸಿರುವ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶದ ಪ್ರತಿಯನ್ನು ಬಹಿರಂಗವಾಗಿ ಸುಟ್ಟು ಹಾಕುತ್ತೇವೆ.  ಡಿ. 5 ರಂದು ರಾಜ್ಯಾದ್ಯಂತ ಬಂದ್ ಯಶಸ್ವಿಯಾಗುತ್ತದೆ. ಇದಕ್ಕಾಗಿ 1500ಕ್ಕೂ ಹೆಚ್ಚು ಸಂಘಟನೆಗಳು ರೆಡಿಯಾಗಿವೆ.  ಈ ಬಂದ್ ಕನ್ನಡಿಗರ ಸ್ವಾಭಿಮಾನದ ಬಂದ್,  ಕನ್ನಡಿಗರ ಬಂದ್. ಕನ್ನಡಿಗರ ಗೌರವ, ಮರ್ಯಾದೆಯ ಪ್ರಶ್ನೆ ಹಿನ್ನೆಲೆ ಡಿ. 5 ರಂದು ಬಂದ್ ನಡೆಯಲಿದೆ. ಡಿ. 5ರ ನಂತರ ಜೈಲ್ ಚಳವಳಿ ನಡೆಸಲಾಗುವುದು. ಮತ್ತೆ 15 ದಿನಗಳಲ್ಲಿ ವಿಜಯಪುರಕ್ಕೆ ಬರುತ್ತೇನೆ. ಇದು ನನ್ನ ಚಾಲೆಂಜ್. ಎಲ್ಲರ ಕಣ್ಣು ತಪ್ಪಿಸಿ ಬರುತ್ತೇವೆ. ಬಂದು ಚಳವಳಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕನ್ನಡ ಪರ ಹೋರಾಟಗಾರರ ಬಗ್ಗೆ ಯತ್ನಾಳ ಮಾಡಿರುವ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಯಾರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವಿವೇಕಿ. ಓರ್ವ ಮೂರ್ಖ, ಅವನ ಬಗ್ಗೆ ಮಾತನಾಡಿದರೆ ನಾವು ಮೂರ್ಖನಾಗುತ್ತೇನೆ. ಯಾರು ಯತ್ನಾಳ್ ಮತದಾರರು ಗೊತ್ತಿಲ್ಲದೇ ಅವನಿಗೆ ಓಟು ಕೊಟ್ಟಿದ್ದಾರೆ. ಇವನು ದೊಡ್ಡ ನಕಲಿ. ಕನ್ನಡ ಚಳವಳಿಯಲ್ಲಿ ಈತನು ನಕಲಿ. ಜೊತೆಗೆ ಬಾಯಿ, ತಲೆ ಸರಿಯಿಲ್ಲ.  ಒಂಥರ ಹುಚ್ಚ. ಅವನಿಗೆ ಉತ್ತರ ಕೊಡುವುದು ಒಳ್ಳೆಯದಲ್ಲ ಎಂದು ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಅಭಿವೃದ್ಧಿ ಕೆಲಸಗಳು ಹಿಂದೆ ಕಾಗದದ ಮೇಲಿದ್ದವು, ಈಗ ಕಣ್ಣಿಗೆ ಕಾಣುತ್ತಿವೆ: ಡಿಸಿಎಂ ಅಶ್ವತ್ಥನಾರಾಯಣ

ಸಾ ರಾ ಗೋವಿಂದು ಮಾತನಾಡಿ, ಸರಕಾರಕ್ಕೆ ಎಲ್ಲ ಅಸ್ತ್ರಗಳಿವೆ. ಬೇಕಾದ ರೀತಿಯಲ್ಲಿ ಬಲಪ್ರಯೋಗ ಮಾಡಬಹುದು. ಆದರೆ, ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಹತ್ತಿಕ್ಕಲು ತೀರ್ಮಾನ ಮಾಡಿದ್ದರೆ ಅದು ನಿಮ್ಮ ಭ್ರಮೆ. ನಾನು 35 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಈ ರೀತಿ ದೌರ್ಜನ್ಯವನ್ನು ಎಂದೂ ನೋಡಿರಲಿಲ್ಲ. ಕನ್ನಡಿಗರೆಲ್ಲ ಒಟ್ಟಾಗಲು ನೀವು ಅವಕಾಶ ಕಲ್ಪಿಸಿ ಕೊಟ್ಟಿದ್ದೀರಿ ಎಂದು ತಿಳಿಸಿದರು.
Youtube Video
ಎರಡು ಬೈ ಎಲೆಕ್ಷನ್ ಗೆಲ್ಲಲು ಮರಾಠಿ ಅಭಿವೃದ್ಧಿ ನಿಗಮ ಮಾಡಿದ್ದೀರಿ. ನಿನ್ನೆ ಬೆಳಗಾವಿಯಲ್ಲಿ ಮರಾಠಿ ಮಹಿಳೆಯರು ಸಮಾವೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಿಗಮ ಬೇಡ. 2 ಎ ಕೆಟಗರಿಗೆ ಸೇರಿಸಿ. ಕನ್ನಡಿಗರು, ಮರಾಠಿಗರು ಒಂದಾಗಿರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಹೋರಾಟ ಮರಾಠಿಗರ ವಿರುದ್ಧ ಅಲ್ಲ. ಮರಾಠ ಪ್ರಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಮರಾಠ ಅಭಿವೃದ್ಧಿ ನಿಗಮ ಮಾಡಲು ಬಿಡುವುದಿಲ್ಲ ಎಂದು ಸಾ. ರಾ. ಗೋವಿಂದು ತಿಳಿಸಿದರು.
Published by: G Hareeshkumar
First published: December 1, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories