• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್; ಕೋಲಾರ ಪೊಲೀಸರಿಂದ ಪ್ರಮುಖ ಆರೋಪಿ ಬಂಧನ

ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್; ಕೋಲಾರ ಪೊಲೀಸರಿಂದ ಪ್ರಮುಖ ಆರೋಪಿ ಬಂಧನ

ಬಂಧಿತ ಕವಿರಾಜ್

ಬಂಧಿತ ಕವಿರಾಜ್

ಮಾಜಿ ಸಚಿವ ವರ್ತೂರು ಬಿಡುಗಡೆಗೆ ಒತ್ತಾಯಿಸಿ ಪಡೆದಿದ್ದ 48 ಲಕ್ಷ ಹಣದಲ್ಲಿ ಅರ್ಧದಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಉಳಿದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆ ಬಗ್ಗೆ ಇನ್ನು ನಿಖರ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

  • Share this:

ಕೋಲಾರ; ನವೆಂಬರ್ 25 ರಂದು ಕೋಲಾರ ಬೆಗ್ಲಿಹೊಸಹಳ್ಳಿ ಬಳಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾರು ಅಡ್ಡಗಟ್ಟಿದ್ದ 2 ಕಾರುಗಳಲ್ಲಿದ್ದ 8 ಮಂದಿ ದುಷ್ಕರ್ಮಿಗಳು,  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ವರ್ತೂರು ಪ್ರಕಾಶ್ ಹಾಗೂ ಚಾಲಕ ಸುನೀಲ್ ಅವರನ್ನ ಕಿಡ್ನಾಪ್ ಮಾಡಿದ್ದರು. ಬಳಿಕ ನಯಾಜ್ ಎನ್ನುವವರಿಂದ 48 ಲಕ್ಷ ಹಣ ನೀಡಿದ ಬಳಿಕ, ವರ್ತೂರು ಪ್ರಕಾಶ್‍ರನ್ನು ಬಿಡುಗಡೆ ಮಾಡಿದ್ದಾಗಿ ಘಟನೆ ನಡೆದ ನಾಲ್ಕು ದಿನಗಳ ನಂತರ ವರ್ತೂರು ಪ್ರಕಾಶ್ ಬೆಂಗಳೂರಿನ ಬೆಳ್ಳಂದೂರಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತಮ್ಮ ಕಾರು ಪತ್ತೆಯಾದ ನಂತರ ದೂರು ನೀಡಿದ್ದರು.


ಬಳಿಕ ಕಿಡ್ನಾಪ್ ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ಪ್ರಕರಣ ಕೋಲಾರಕ್ಕೆ ವರ್ಗಾವಣೆ ಆಯಿತು, ಕೂಡಲೇ ಎಚ್ಚೆತ್ತುಕೊಂಡ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಆರೋಪಿಗಳ ಪತ್ತೆಗೆ 25 ಮಂದಿ ಅಧಿಕಾರಿಗಳ 4 ತಂಡಗಳನ್ನು ತನಿಖೆಗೆ ನೇಮಿಸಿದ್ದರು. ಸತತ 15 ದಿನಗಳ ಕಾರ್ಯಾಚರಣೆ ನಂತರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ರಮುಖ ಆರೋಪಿ ಕವಿರಾಜ್ ಬಂಧನ


ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್​ಗೆ ಸಂಬಂಧಿಸಿದಂತೆ, ಕಿಡ್ನಾಪ್ ರುವಾರಿ ಕವಿರಾಜ್ ಎಂಬಾತನನ್ನು ಪೊಲೀಸರು ತಮಿಳುನಾಡಿನ ಮದುರೈ ಸಮೀಪದ ಗ್ರಾಮವೊಂದರಲ್ಲಿ ಬಂದಿಸಿದ್ದಾರೆ. ಇಂದು ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆರೋಪಿ ಕವಿರಾಜ್ ಗೆ, ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡಿವೈಎಸ್ಪಿ ಸಾಹಿಲ್ ಬಾಂಗ್ಲಾ ಸಮ್ಮುಖದಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ನಂತರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.


ಆರೋಪಿ ಕವಿರಾಜ್ ತಮಿಳುನಾಡಿನ ಹೊಸೂರು ನಿವಾಸಿಯಾಗಿದ್ದು, ಆರೋಪಿ ಭೂಗತ ಪಾತಕಿ ರವಿಪುಜಾರಿ ಶಿಷ್ಯನಾಗಿದ್ದ ಎಂದು ತಿಳಿದುಬಂದಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ರವಿಪೂಜಾರಿ ಜೊತೆಗೆ ಕವಿರಾಜ್ ವಿರುದ್ದವೂ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ವಿವಿಧ ಠಾಣೆಯಲ್ಲಿ 10 ಕೇಸ್ ಗಳಿದ್ದು ರೌಡಿಶೀಟರ್ ಕೂಡ ಆಗಿದ್ದಾನೆಂದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಹಣಕ್ಕಾಗಿಯೇ ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿರೊದಾಗಿ ಕೋಲಾರ ಎಸ್ಪಿಯವರು ಮಾಹಿತಿ ನೀಡಿದ್ದು, ಉಳಿದ ಆರೋಪಿಗಳನ್ನು ಎರಡು ದಿನದಲ್ಲಿ ಬಂಧಿಸುವುದಾಗಿ ತಿಳಿಸಿದ್ದಾರೆ.


ಇದನ್ನು ಓದಿ: ಬಸವ ನಾಡಿಗೆ ಕೇಂದ್ರ ಪ್ರವಾಹ ಅಧ್ಯಯನ ತಂಡ ಭೇಟಿ; ಹಾನಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ ಜಿಲ್ಲಾಧಿಕಾರಿ


ತಮ್ಮ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ ಬಂಧನದ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ವರ್ತೂರು ಪ್ರಕಾಶ್, ಆರೋಪಿ ಕವಿರಾಜ್ ಗೆ ಭೂಗತ ಲೋಕದ ನಂಟಿದೆ. ಹಣಕ್ಕಾಗಿಯೇ ನಾಲ್ಕೈದು ಜನರನ್ನು ಸೇರಿಸಿಕೊಂಡು ನನ್ನ ಕಿಡ್ನಾಪ್ ಮಾಡಿದ್ದರು. ಹಣಕ್ಕಾಗಿಯೇ ನನ್ನ ಕಿಡ್ನಾಪ್ ಮಾಡಿದ್ದು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆ. ಇಂತಹ ದೇಶದ್ರೋಹದ ಕೆಲಸ ಮಾಡಿದ ಆರೋಪಿ ಬಂಧಿಸಿದ ಪೊಲೀಸರಿಗೆ ಧನ್ಯವಾದ ಎಂದು ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು.


ಒಟ್ಟಿನಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್‍ನ ಪ್ರಮುಖ ಆರೋಪಿ ಬಂದನವಾಗಿದೆ. ಮಾಜಿ ಸಚಿವ ವರ್ತೂರು ಬಿಡುಗಡೆಗೆ ಒತ್ತಾಯಿಸಿ ಪಡೆದಿದ್ದ 48 ಲಕ್ಷ ಹಣದಲ್ಲಿ ಅರ್ಧದಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಉಳಿದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆ ಬಗ್ಗೆ ಇನ್ನು ನಿಖರ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

First published: