ಕೋಲಾರ(ಮಾ. 28): ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಪಕ್ಷದ ವಿರುದ್ದವಾಗಿ, ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿ, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಬೇಕೆಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಆಗ್ರಹಿಸಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವರ್ತೂರು ಪ್ರಕಾಶ್, ಜೆಡಿಎಸ್ ಜೊತೆಗೆ ಕೈ ಜೋಡಿಸಬಾರದು ಎಂದು ಕೈ ನಾಯಕರು ಹೇಳಿದ್ದಾರೆ. ಆದರೆ ಕೋಲಾರದಲ್ಲಿ ಬೇರೆಲ್ಲ ಪಕ್ಷದೊಂದಿಗೆ ಕೈ ಜೋಡಿಸಿರುವ ಮುನಿಯಪ್ಪ, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಿದರೆ, ನಿಷ್ಟಾವಂತ ಕಾರ್ಯಕರ್ತರು ಬೆಳೆಯುತ್ತಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಕೋಲಾರದಲ್ಲಿ ನನಗೆ ವಿರೋಧವಾಗಿ ಮೂರು ಪಕ್ಷಗಳು ಒಂದಾಗಿವೆ. ನನ್ನನ್ನು ಕಾಂಗ್ರೆಸ್ಗೆ ಸೇರಿಸಲು ಕೆ.ಎಚ್. ಮುನಿಯಪ್ಪ ಬಿಡುತ್ತಿಲ್ಲ. ಕೆ.ಎಚ್ ಹಿಂದೆ ಜಿಲ್ಲೆಯಲ್ಲಿ ಯಾವ ಶಾಸಕರೂ ಇಲ್ಲ. ಈತನ ಹಿಂದೆ ಇಂದಿರಾ ಗಾಂಧಿ ಕಾಲದಿಂದಲೂ ಬಂದಿರುವ ಮುಸ್ಲಿಮರ ವೋಟು ಮಾತ್ರ ಇದೆ. ತಾಕತ್ತಿದರೆ ಹಳ್ಳಿಗಳಲ್ಲಿ ವೋಟ್ ಪಡೆಯಲಿ ನೋಡೋಣ. ಕಾಂಗ್ರೆಸ್ನಿಂದ ಕೆ.ಹೆಚ್ ಮುನಿಯಪ್ಪ ಅವರನ್ನು ಉಚ್ಚಾಟನೆ ಆಗಲೇಬೇಕು. ಈ ತರಹದ ಮನಸ್ಥಿತಿ ಇರುವ ಇನ್ನೂ ಕೆಲವರನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲೇಬೇಕು. ಆಗಲೇ ಚಿಂತಾಮಣಿ ತಾಲೂಕಿನ ಸುಧಾಕರ್ ಹಾಗೂ ನಾನು ಕಾಂಗ್ರೆಸ್ಗೆ ಬರಲು ಅವಕಾಶ ಸಿಗುತ್ತೆ ಎಂದು ಮುನಿಯಪ್ಪ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ವರ್ತೂರು ಪ್ರಕಾಶ್, ಕ್ರಮಕ್ಕೆ ಆಗ್ರಹಿಸಿದರು.
ಇದನ್ನೂ ಓದಿ: ಭಾರತದ ‘ಜನತಾ ಕರ್ಫ್ಯೂ’ ಇಡೀ ವಿಶ್ವಕ್ಕೆ ನೀಡಿತ್ತು ಪ್ರೇರಣೆ: ಮನ್ ಕೀ ಬಾತ್ನಲ್ಲಿ ಪ್ರಧಾನಿ ಹೇಳಿಕೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆ.ಎಚ್ ಮುನಿಯಪ್ಪ ಡಾ. ಸುಧಾಕರ್ ಪರವಾಗಿ ಚುನಾವಣೆ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಡಿ. ಸುಧಾಕರ್ ಪರವಾಗಿ ಕೆಲಸ ಮಾಡಿದ್ದರಿಂದ ಬಿಜೆಪಿ ಗೆಲುವು ಸುಲಭವಾಯಿತು. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹೈಕಮಾಂಡ್ಗೆ ಕೆಎಚ್ ಮುನಿಯಪ್ಪ ವಿರುದ್ದ ದೂರು ನೀಡಿದ್ದಾರೆ. ವಿಡಿಯೋ ಹಾಗೂ ಆಡಿಯೋ ಸಮೇತ ಹೈ ಕಮಾಂಡ್ಗೆ ದೂರು ತಲುಪಿದೆ. ಹೀಗಾಗಿ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್ ನಲ್ಲಿ ಇದ್ದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷವೇ ಸರ್ವನಾಶ ಆಗುತ್ತೆ. ಮತ್ತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ. ಲೋಕಸಭಾ ಚುನಾವಣೆಗೂ ಮುನ್ನ ಕೆ.ಎಚ್ ಮುನಿಯಪ್ಪ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: Coronavirus: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ನಾಳೆ ಸಿಎಂ ನೇತೃತ್ವದಲ್ಲಿ ಸಭೆ; ಟಫ್ ರೂಲ್ಸ್ ಜಾರಿ ಸಾಧ್ಯತೆ
ಹತಾಶೆಗೊಳಗಾದರೆ ಮಾಜಿ ಸಚಿವರು?
ಈಗಾಗಲೇ ವರ್ತೂರು ಪ್ರಕಾಶ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡವೇ ಬೇಡ ಎಂದು ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದ್ದು, ಅದಕ್ಕೆ ಹೈ ಕಮಾಂಡ್ ಸಹ ಒಪ್ಪಿಲ್ಲ ಎಂದೂ ತಿಳಿಸಿದ್ದಾರೆ. ಹೀಗಾಗಿ ಮೇಲಿಂದ ಮೇಲೆ ಕೆಎಚ್ ಮುನಿಯಪ್ಪ ವಿರುದ್ದ ಹೇಳಿಕೆ ನೀಡುತ್ತಿರುವ ವರ್ತೂರು ಪ್ರಕಾಶ್, ಇಷ್ಟು ದಿನ ಕೆಎಚ್ ಮುನಿಯಪ್ಪ ನಮ್ಮ ಹಿತೈಷಿಗಳು ಎನ್ನುತ್ತಿದ್ದರು. ಆದರೀಗ ವರ್ತೂರು ವರಸೆ ಬದಲಾಗಿದ್ದು ಏಕಾಏಕಿ ಕಾಂಗ್ರೆಸ್ ಪಕ್ಷದಿಂದಲೇ ಕೆಎಚ್ ಅವರನ್ನ ಉಚ್ಚಾಟನೆ ಮಾಡಬೇಕೆಂದು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ವರದಿ: ರಘುರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ