ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ತನಿಖೆ ಚುರುಕಾಗಿ ನಡೆಯುತ್ತಿರುವಂತೆಯೇ ಅವರು ಗ್ರಾಮ ಪಂಚಾಯಿತಿ ಚುನಾವಣೆಗೂ ಸಿದ್ದತೆ ನಡೆಸಿದ್ದಾರೆ. ಕೋಲಾರದ ಜಂಗಾಲಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಅವರು ಆಯೋಜಿಸಿದ್ದ ಸಭೆಯಲ್ಲಿ ವೇಮಗಲ್, ಕ್ಯಾಲನೂರು, ನರಸಾಪುರ ಗ್ರಾಮದ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳನ್ನ ಮುಂದಿಟ್ಟು ಮತ ಕೇಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನ ಮುಖಂಡರುಗಳಿಗೆ ವಹಿಸಿದ್ದು, ಎಲ್ಲಾ ಪಂಚಾಯ್ತಿಯಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೈ ಕಾಲು ಹಿಡಿದು, ದುಂಬಾಲು ಬಿದ್ದಾದರೂ ಕಾಂಗ್ರೆಸ್ ಟಿಕೆಟ್ ಪಡೆಯಬೇಕು: ವರ್ತೂರು ಪ್ರಕಾಶ್
ಕಳೆದ ವಿಧಾನಸಭೆ ಚುನಾವಣೆ ವೇಳೆ ‘ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್, ಇದೀಗ ಮತ್ತೆ ಕಾಂಗ್ರೆಸ್ ಸೇರುವ ಮಾತನ್ನಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ವರ್ತೂರು ಪ್ರಕಾಶ್, ಇದೀಗ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರ ಬಳಿ ಕೈ ಕಾಲು ಹಿಡಿದಾದರೂ ಕೋಲಾರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಕೋಲಾರ ವಿಧಾನಸಭೆ ಕಾಂಗ್ರೆಸ್ ಟಿಕೆಟ್ ಪಡೆಯಲು ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರು ಕೈ ಕಾಲು ಹಿಡಿಯುತ್ತೇನೆ. ಕಳೆದ ಮೂರು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಗೆ ಬೆಂಬಲ ನೀಡಿದ್ದೇನೆ. ಮುಂದೆ ಕೆಎಚ್ ಮುನಿಯಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಜೊತೆಗೆ ಇರುತ್ತೇನೆ. ಕಳೆದ ಬಾರಿಯೂ ಟಿಕೆಟ್ಗಾಗಿ ಮನವಿ ಮಾಡಿದ್ದೆ. ಈ ಬಾರಿಯೂ ಕೈ ಟಿಕೆಟ್ಗಾಗಿ ಮನವಿ ಮಾಡುವೆ. ಅದಕ್ಕೆ ಎಲ್ಲಾ ಮುಖಂಡರನ್ನ ಒಮ್ಮೆ ಕೈ ನಾಯಕರ ಬಳಿ ಕರೆದುಕೊಂಡು ಹೋಗಿ ದುಂಬಾಲು ಬಿದ್ದು ಕೇಳುವೆ ಎಂದು ಅವರು ಕಾರ್ಯಕರ್ತರು, ಮುಖಂಡರ ಎದುರು ಮತ್ತೊಮ್ಮೆ ಕಾಂಗ್ರೆಸ್ ಸೇರುವ ಆಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೆಡಿಎಸ್ ಹುಟ್ಟಿರುವುದೇ ಹಳ್ಳಿಗಳಿಂದ; ಗ್ರಾ.ಪಂ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ: ಎ ಮಂಜು
ಎರಡು ದಿನದಲ್ಲಿ ಕಿಡ್ನಾಪ್ ಕೇಸ್ ಆರೋಪಿಗಳ ಬಂಧನ - ವರ್ತೂರು ವಿಶ್ವಾಸ
ನವೆಂಬರ್ 25 ರಂದು ನಡೆದಿರುವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ, ಇಬ್ಬರನ್ನ ಕೋಲಾರ ಪೊಲೀಸರು ಬಂದಿಸಿದ್ದು, ಉಳಿದ ಪ್ರಮುಖ ಆರೋಪಿಗಳ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವರ್ತೂರು ಪ್ರಕಾಶ್, ಎರಡು ಮೂರು ದಿನದಲ್ಲಿ ಎಲ್ಲಾ ಆರೋಪಿಗಳು ಸಿಗುವ ಮಾಹಿತಿ ಪೊಲೀಸ್ ಇಲಾಖೆಯಿಂದಲೇ ಸಿಕ್ಕಿದೆ. ನೂರಕ್ಕೆ ನೂರು ಇದು ಬೆಂಗಳೂರಿನ ನುರಿತ ಕಿಡ್ನಾಪರ್ಸ್ ಮಾಡಿರುವ ಕೃತ್ಯ. ನನಗೆ ಇದರಿಂದ ಪ್ರಚಾರವಂತೂ ಸಿಕ್ಕಿತು. ಕಿಡ್ನಾಪ್ ಮಾಡಿದ ಪುಣ್ಯಾತ್ಮರಿಗೆ ಧನ್ಯವಾದ ಹೇಳಬೇಕು ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದರು.
ವರದಿ: ರಘುರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ