ದಾವಣಗೆರೆ: ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಹಾಗೂ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ಒಂದು ವರ್ಷದ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ವಾಗಿ ಆಚರಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ನುಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಭಾಷೆ, ಏಳಿಗೆಗಾಗಿ ದುಡಿದ ಸಾಧಕರನ್ನು ಗೌರವಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಿಯಮಾನುಸಾರ ಸರಳವಾಗಿ ಕನ್ನಡ ರಾಜ್ಯೋತ್ಸವನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು. ಆದರೆ ಮುಂದಿನ ಬಾರಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದು ಆಶಿಸಿದರು.
ಸುಮಾರು 2,500 ವರ್ಷಗಳ ಹಿಂದೆ ಜನಿಸಿದ ಕನ್ನಡವೆಂಬ ಶಿಶು ಇಂದು ಪ್ರಬುದ್ದಳಾಗಿ ಬೆಳೆದಿದ್ದಾಳೆ. ಅನ್ಯ ಭಾಷೆಗಳ ಒಳಹರಿವಿನ ಪರಿಣಾಮ ಅನೇಕ ಸವಾಲುಗಳು ಮುಖಾಮುಖಿಯಾಗಿದ್ದು ಅದನ್ನು ದಿಟ್ಟವಾಗಿ ನಾವೆಲ್ಲ ಎದುರಿಸಬೇಕಾಗಿದೆ. ಜೊತೆಗೆ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡವನ್ನು ಉಳಿಸಿ, ಬೆಳೆಸಿ, ರಕ್ಷಿಸಿ ಎಂಬ ಘೋಷಣೆಗಳು ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಕನ್ನಡ ಸೇನಾನಿಯ ಪ್ರೇರಣೆಯೇ ಭಾಷೆಯ ಉಳಿವಿಗೆ ಹೋರಾಟದ ದೀವಿಗೆಯಾಗಲಿ. ಕನ್ನಡ ನಾನು ಕಂಡ ಅಪ್ರತಿಮ, ಕನ್ನಡ ಸೇನಾನಿಗಳನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವ ಅಗತ್ಯತೆ ಇದ್ದು, ಅವರ ಹೋರಾಟದ ಫಲವಾಗಿಯೇ ಇಂದು ಅಖಂಡ ಕರ್ನಾಟಕವಾಗಿ ಉಳಿದಿರುವುದು ಸಚಿವ ಬೈರತಿ ಬಸವರಾಜು ಹೇಳಿದರು.
ಇದನ್ನೂ ಓದಿ: ಸರ್ಕಾರ ರಚನೆಯಲ್ಲಿ ನಮ್ಮ ಕೊಡುಗೆಯೂ ಇದೆ, 17 ಜನರ ತ್ಯಾಗವೂ ಇದೆ; ವಿವಾದದ ಬಳಿಕ ಎಚ್ಚೆತ್ತ ರೇಣುಕಾಚಾರ್ಯ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕಳೆದ ಸಾಲಿನಲ್ಲಿ ನೆರೆ ಹಾವಳಿಯ ಕಾರಣದಿಂದ ಹಲವು ಕಾರ್ಯಕ್ರಮಗಳ ಮತ್ತು ವಿವಿಧ ಜಯಂತಿಗಳ ಅನುದಾನವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡಲಾಗಿತ್ತು. ಈ ಬಾರಿಯೂ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮಾರ್ಗಸೂಚಿಯನ್ವಯ ಸರಳವಾಗಿ ಆಚರಿಸಲಾಗಿದೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಹಿರಿಯರು ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಳೆದ ಸಾಲಿನ ಮತ್ತು ಪ್ರಸಕ್ತ ಸಾಲಿನ ಸಾಧಕರನ್ನು ಗುರುತಿಸಿ ನವೆಂಬರ್ ಮಾಹೆಯಲ್ಲಿ ಸನ್ಮಾನಿಸುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ರಚಿಸಿ, ಸಾಧಕರನ್ನು ಆಯ್ಕೆ ಮಾಡಿ ಇಂದು ಅವರನ್ನು ಸನ್ಮಾನಿಸುವ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇಂದಿನ ಸನ್ಮಾನಿತರು ಜಿಲ್ಲೆಯ ಹೆಸರನ್ನು ಎತ್ತರಕ್ಕೆ ತೆಗೆದುಕೊಂಡು ಹೋದವರಾಗಿದ್ದು, ನಿಮ್ಮ ಸಾಧನೆ ದೊಡ್ಡದು. ಈ ಸನ್ಮಾನ ಒಂದು ಸಾಂಕೇತಿಕ ಮಾತ್ರ, ಆದರೆ ಸಾಧಕರು ತೃಪ್ತರಾಗುವುದಿಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಿ, ಕೊಡುಗೆ ನೀಡಬೇಕೆಂಬ ಹಂಬಲ ಅವರಲ್ಲಿ ಇದ್ದೇ ಇರುತ್ತದೆ. ಹಾಗೂ ಈ ಸನ್ಮಾನ ಕೂಡ ಅದನ್ನೇ ಸೂಚ್ಯವಾಗಿ ಹೇಳುತ್ತದೆ. ಸನ್ಮಾನಿತರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ಜಿಲ್ಲಾಡಳಿತದ ಪರವಾಗಿ ಎಲ್ಲ ಸನ್ಮಾತರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ ಬಂದ್, ಅತ್ತಿಬೆಲೆ ಗಡಿ ಬಂದ್, ಕಾರ್ಮಿಕರ ಮುಷ್ಕರ, ಕ್ಯಾಬ್ ಚಾಲಕರ ಪ್ರತಿಭಟನೆ
ಸಾಧಕರ ವಿವರ:
ಸಂಗೀತ ಕ್ಷೇತ್ರ: ಶ್ಯಾಮಲಾಬಾಯಿ, ಬಿ.ಪಿ ಯಮನೂರ್ ಸಾಹೇಬ್, ಜಿ.ಎಂ ಚನ್ನರಾಜು
ಸಂಗೀತ/ಜಾನಪದ ಕ್ಷೇತ್ರ: ಮಂಜಪ್ಪ ಬಲ್ಲೂರು, ಜಿ.ಎಂ ರಾಜಪ್ಪ ಪಾಂಡೋಮಟ್ಟಿ, ರುದ್ರಾಕ್ಷಿ ಬಾಯಿ ಸಿ.ಕೆ
ಸಮಾಜ ಸೇವೆ: ಎಂ.ಸಿ. ಚಂದ್ರಪ್ಪ, ವಾಸುದೇವ್ ರಾಯ್ಕರ್, ಸಂತೋಷಕುಮಾರ್ ಎಂ, ರಮಣ ಲಾಲ್ ಪಿ ಸಂಘವಿ.
ಸಾಹಿತ್ಯ ಕ್ಷೇತ್ರ: ಜಿ.ಹೆಚ್ ರಾಜಶೇಖರ್ ಗುಂಡಗಟ್ಟಿ, ಕೆ ಜಿ ಸರೋಜಾ ಎಚ್.ಕೆ ಸತ್ಯಭಾಮ
ಸಂಘ ಸಂಸ್ಥೆಗಳು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ, ಪ್ರೇರಣಾ ಮಹಿಳಾ ಉದ್ಯಮಿಗಳ ಸಂಘ ದಾವಣಗೆರೆ, ಅಕ್ಕಮಹಾದೇವಿ ಮಹಿಳಾ ಸೇವಾ ಸಂಸ್ಥೆ ದಾವಣಗೆರೆ.
ಕೃಷಿ ಕ್ಷೇತ್ರ: ಆಂಜನೇಯ ಅಂದನೂರು, ರಾಘವ ಮಲ್ಲನಾಯ್ಕನಹಳ್ಳಿ
ಕ್ರೀಡಾ ಕ್ಷೇತ್ರ: ಮಂಜು ಮೋಘವೀರ್, ಕೃಷ್ಣ.ಎಸ್, ಮಂಜಪ್ಪ,
ರಂಗಭೂಮಿ ಕ್ಷೇತ: ಬಿ. ಉಮಾಶ್ರಿ, ಕೆ. ವೀರಸ್ವಾಮಿ, ತಿಪ್ಪೇಶ್‍ರಾವ್ ಚವ್ಹಣ್, ಚಂದ್ರಪ್ಪ.
ಇತರೆ: ಮುರುಗೇಂದ್ರಪ್ಪ ಶಿಕ್ಷಣ ಕ್ಷೇತ್ರದಲ್ಲಿ, ಅಮ್ಜದ್ ಅಲಿ ಇವರು ಕನ್ನಡಪರ ಹೋರಾಟ ಮಂಡಲಿಯಲ್ಲಿ, ಮಂಜುನಾಥ ಕಾಡಜ್ಜಿ ಇವರು ಪತ್ರಿಕೆಯಲ್ಲಿ, ಹೆಚ್ ಎಂ ಪಿ ಕುಮಾರ್ ಇವರು ಎಲೆಕ್ಟ್ರಾನಿಕ್ ಮಾಧ್ಯಮದ ನ್ಯೂಸ್ 18 ಕನ್ನಡ ವಾಹಿನಿ. ವಿಜಯ್ ಜಾಧವ್ ಇವರು ಛಾಯಾಗ್ರಾಹಕ, ಉಜ್ಜನಪ್ಪ ಇವರು ಸಂಕಿರ್ಣ ಕ್ಷೇತ್ರದಲ್ಲಿ ಹಾಗೂ ಸಂತೋಷ್‍ಕುಮಾರ್ ಕುಲಕರ್ಣಿ ಚಿತ್ರಕಲೆಯಲ್ಲಿ ಮತ್ತು ಮಾಧವಿ ಡಿ.ಕೆ ನೃತ್ಯ ಕಲೆಯಲ್ಲಿ ಸಾಧನೆ ಮಾಡಿ ಸನ್ಮಾನಿತರಾದವರು.
ಇದನ್ನೂ ಓದಿ: ನೆಲಮಂಗಲದಲ್ಲಿ ವಿನ್ಟ್ಯಾಕ್ ಕಂಪನಿಯ ತ್ಯಾಜ್ಯ ಕೆರೆಗೆ; ಪ್ರಾಣಿ-ಪಕ್ಷಿಗಳ ಜೀವಕ್ಕೆ ಕಂಟಕ
ಕಾರ್ಯಕ್ರಮದಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಶಾಸಕರು ಹಾಗೂ ಕೆಎಸ್‍ಡಿಸಿ ಅಧ್ಯಕ್ಷರು ಮತ್ತು ನಿರ್ದೇಶಕರಾದ ಮಾಡಾಳು ವಿರೂಪಾಕ್ಷಪ್ಪ, ಜಿ.ಪಂ.ಅಧ್ಯಕ್ಷೆ ದೀಪಾ ಜಗದೀಶ್, ದೂಢಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಎಸ್‍ಪಿ ರಾಜೀವ್, ಎಸಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಢಾ ಆಯುಕ್ತ ಕುಮಾರಸ್ವಾಮಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸನ್ಮಾನಿತರ ಅಭಿಮಾನಿಗಳು ಇದ್ದರು. ಸುಮಾ ಜಯಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಹೆಚ್ ಎಂ ಪಿ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ