HOME » NEWS » District » UTTARA KANNADA PEOPLES OUTRAGE AGAINST FOREST DEPARTMENT HK

ನಿರ್ಬಂಧಿತ ಅಕೇಶಿಯಾ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ ; ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶ

ಇತರೆ ಗಿಡಗಳು ಸುಲಭವಾಗಿ ಬೆಳೆಯಬಹುದಾದ ಪ್ರದೇಶದಲ್ಲೂ ಅರಣ್ಯ ಇಲಾಖೆ ಅಕೇಶಿಯಾ ವನ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

news18-kannada
Updated:July 16, 2020, 8:30 AM IST
ನಿರ್ಬಂಧಿತ ಅಕೇಶಿಯಾ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ ; ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶ
ಅಕೇಶಿಯಾ
  • Share this:
ಕಾರವಾರ(ಜುಲೈ.16): ಮತ್ತೆ ಜಿಲ್ಲೆಯಲ್ಲಿ ಅಕೇಶಿಯಾ ವಿರುದ್ಧ ಕೂಗು ಎದ್ದಿದೆ. ಮಳೆಗಾಲ ಪ್ರಾರಂಭವಾದ ತಕ್ಷಣ ಅರಣ್ಯ ಇಲಾಖೆ ವಿವಿಧೆಡೆ ಗಿಡಗಳ ನಾಟಿ ಆರಂಭಿಸಿದೆ. ಆದರೆ, ಸರ್ಕಾರ ಭಾಗಶಃ ನಿರ್ಬಂಧಿಸಿರುವ ಅಕೇಶಿಯಾ ಏಕಜಾತಿಯ ನೆಡು ತೋಪಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಇದಕ್ಕೆ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಭಟ್ಕಳ, ಗೋಕರ್ಣ ಹಾಗೂ ಶಿರಸಿಯಲ್ಲಿ ಜನರು ಈಗಾಗಲೇ ಅಕೇಶಿಯಾ ನಾಟಿ ವಿರೋಧಿಸಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇತರೆ ಗಿಡಗಳು ಸುಲಭವಾಗಿ ಬೆಳೆಯಬಹುದಾದ ಪ್ರದೇಶದಲ್ಲೂ ಅರಣ್ಯ ಇಲಾಖೆ ಅಕೇಶಿಯಾ ವನ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

300 ಹೆಕ್ಟೇರ್ ನಾಟಿ :

ಹಳಿಯಾಳ ವಿಭಾಗದಲ್ಲಿ  4.59, ಹೊನ್ನಾವರದಲ್ಲಿ 402.07, ಕಾರವಾರದಲ್ಲಿ 45. 44, ಶಿರಸಿಯಲ್ಲಿ 159.52, ಯಲ್ಲಾಪುರದಲ್ಲಿ 3.51 ಸೇರಿ 615.13 ಹೆಕ್ಟೇರ್‌ನಷ್ಟು ಅಕೇಶಿಯಾ ಪ್ಲಾಂಟೇಶನ್ ಅರಣ್ಯ ಭೂಮಿಯಲ್ಲಿದೆ. ಮತ್ತೆ ಈ ಬಾರಿಯೂ ಪ್ರಮುಖವಾಗಿ ಜಿಲ್ಲೆಯ ಹೊನ್ನಾವರ ಹಾಗೂ ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 300 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ 4.8 ಲಕ್ಷಕ್ಕೂ ಅಧಿಕ ಅಕೇಶಿಯಾ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಇದುವರೆಗೆ ಅಕೇಶಿಯಾ ಪ್ಲಾಂಟೇಶನ್ ಇಲ್ಲದ ಪ್ರದೇಶಗಳನ್ನೂ ಹೊಸದಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿರುವುದು ಜನರ ಆಕ್ಷೇಪಕ್ಕೆ ಮೂಲ ಕಾರಣ ಎನ್ನಲಾಗಿದೆ.

ಗ್ರಾಮ ಪಂಚಾಯತ್​​ನಲ್ಲಿ ನಿರ್ಣಯ :

ಕುಮಟಾ ತಾಲೂಕಿನ ಹಿರೇಗುತ್ತಿ ವಲಯದ ಜೂಗಾ, ಅಗ್ರಗೋಣ, ಹೊಸ್ಕೇರಿ, ಬೇಲೆಕಾನ,  ಸಗಡಗೇರಿ, ಮಾದನಗೇರಿ, ಅಂಬುಕೋಣ, ದೇವಿಗದ್ದೆ ಅರಣ್ಯದಲ್ಲಿ ಅಕೇಶಿಯಾ ಮರಗಳನ್ನು ಕಟಾವು ಮಾಡಲಾಗಿತ್ತು. ಅದರಲ್ಲಿ ಮತ್ತೆ ಅಕೇಶಿಯಾ ಹಾಕಬಾರದು ಎಂದು ಸ್ಥಳೀಯ ಗ್ರಾಮ ಪಂಚಾಯತ್​​ಗಳು ನಿರ್ಣಯ ಮಾಡಿದ್ದವು. ಆದರೆ, ಅದಕ್ಕೆ ಬೆಲೆ ಇಲ್ಲದಂತೆ ಮತ್ತೆ ಅಕೇಶಿಯಾ ಗಿಡಗಳನ್ನು ಹಾಕಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಅರಣ್ಯಾಧಿಕಾರಿಗಳು ಹೇಳುವುದೇನು...?ಶೇ. 25ಕ್ಕಿಂತ ಕಡಿಮೆ ಅರಣ್ಯವಿರುವ ಲ್ಯಾಟರೈಟ್ ಕಲ್ಲುಗಳಿರುವ ಬೋಳು ಗುಡ್ಡದಲ್ಲಿ ಮಾತ್ರ ಅಕೇಶಿಯಾ ಬೆಳೆಸಬಹುದು ಎಂದು 2011 ರ ಅರಣ್ಯ ಇಲಾಖೆಯ ಸುತ್ತೋಲೆಯೊಂದು ಹೇಳುತ್ತದೆ. 2017 ಇನ್ನೊಂದು ಸುತ್ತೋಲೆಯಲ್ಲಿ  ಹೊಸದಾಗಿ ಯಾವುದೇ ಪ್ರದೇಶದಲ್ಲಿ ಅಕೇಶಿಯಾ ಬೆಳೆಸದಂತೆ ಸೂಚಿಸಲಾಗಿದೆ. ಉತ್ತರ ಕನ್ನಡದ ಗ್ರಾಮೀಣ ಜನ ಕಾಡಿನ ಮೇಲೆ ಅವಲಂಬಿಸಿದ್ದಾರೆ. ನಾವು ಅಲ್ಪಸ್ವಲ್ಪವೂ ಅಕೇಶಿಯಾ ಬೆಳೆಸದಿದ್ದರೆ, ಜನ ಮುಖ್ಯ ಅರಣ್ಯದತ್ತ ಕಟ್ಟಿಗೆಗಾಗಿ ಹೋಗುತ್ತಾರೆ. ಕನಿಷ್ಠ ಉರುವಲು ಕಟ್ಟಿಗೆ, ಬೇಲಿ ಗುಟ್ಟಕ್ಕಾದರೂ ಅಕೇಶಿಯಾ ಬೇಕು ಎಂಬುದು ಅರಣ್ಯಾಧಿಕಾರಿಗಳು ಹೇಳುವ ಮಾತು.

ಜನರ ವಿರೋಧವೇಕೆ..?

1972 ರಲ್ಲಿ ಮಲೆನಾಡಿನಲ್ಲಿ ಅಕೇಶಿಯಾ ನಾಟಿ ಪ್ರಾರಂಭಿಸಲಾಯಿತು. ಅರಣ್ಯ ಇಲಾಖೆ ದಟ್ಟ ಸಹಜ ಅರಣ್ಯದಲ್ಲೂ ಅಕೇಶಿಯಾ ಬೆಳೆಸುತ್ತಿದೆ. ವೇಗವಾಗಿ ಬೆಳೆಯುವ ಈ ಸಸ್ಯದಿಂದ ಅಂತರ್ಜಲ ಬತ್ತುತ್ತದೆ. ಇದರಿಂದ ಬರಗಾಲ ಉಂಟಾಗುತ್ತಿದೆ.

ಇದನ್ನೂ ಓದಿ: ಕಾರವಾರ ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನಿಸುವ ಗುಡ್ಡಗಳು

ಇತರ ಹಣ್ಣಿನ ಅಥವಾ ಅರಣ್ಯದ ಸಸ್ಯಗಳ ಸಹಜವಾಗಿ ಬೆಳೆಯಲು ಅಕೇಶಿಯಾ ಅವಕಾಶ ನೀಡದ ಕಾರಣ  ಕಾಡಂಚಿನ ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತದೆ ಎಂಬುದು ಗ್ರಾಮೀಣ ಭಾಗದ ಜನರ ಅಭಿಪ್ರಾಯ.

ಒಮ್ಮೆ ಕಟಾವು ಮಾಡಿದ ಪ್ರದೇಶದಲ್ಲಿ ಮತ್ತೆ ಅಕೇಶಿಯಾ ಬೆಳೆಸದಂತೆ ನಾವು ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿದ್ದೆವೆ. ಆದರೂ ಅರಣ್ಯ ಇಲಾಖೆ ಮಾತ್ರ ಮತ್ತೆ ಅಕೇಶಿಯಾ ಮೋಹ ಬಿಡುತ್ತಿಲ್ಲ ಎಂದು ಜಿಲ್ಲೆಯ ಗೋಕರ್ಣ ಅಗ್ರಗೋಣ ಕರಾವಳಿ ಸಮಾಜ ಸೇವಾ ಸಂಘಟನೆಯ ಬಳಗದ ಸದಸ್ಯರು ಹೇಳುತ್ತಾರೆ.
Published by: G Hareeshkumar
First published: July 16, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories