news18-kannada Updated:December 11, 2020, 5:15 PM IST
ಉತ್ತರ ಕನ್ನಡ ಜಿಲ್ಲೆಯ ಕೆಎಸ್ಆರ್ಟಿಸಿ ಬಸ್ ಡಿಪೋ.
ಕಾರವಾರ (ಡಿಸೆಂಬರ್ 11): ರಾಜ್ಯದಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಉತ್ತರ ಕನ್ನಡ ಜಿಲ್ಲೆಗೂ ತಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದೆ. ಪರಿಣಾಮ ಬಸ್ ಏರಿ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರು ಬಸ್ ಸಂಚಾರ ಸ್ಥಗಿತವಾಗಿರೋದ್ರಿಂದ ಬಸ್ ನಿಲ್ದಾಣದಲ್ಲೆ ಪರದಾಡುವಂತ ಘಟನೆ ಇಂದು ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಿಂದ ಮುಂಜಾನೆ ಹೊರಡಬೇಕಾಗಿದ್ದ ಬಸ್ ಸಂಚಾರ ಸ್ಥಗಿತವಾಗಿತ್ತು, ಡಿಪೋ ಬಿಟ್ಟು ಬಸ್ ಕದಲಿಲ್ಲ. ಜಿಲ್ಲಾ ಕೇಂದ್ರ ಕಾರವಾರದಿಂದ ಹೊರ ಜಿಲ್ಲೆ ಮತ್ತು ತಾಲೂಕಿಗೆ ಹೊರಡಬೇಕಾಗಿದ್ದ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಸಾರಿಗೆ ನೌಕರರು ಬಸ್ ಏರಲು ಹಿಂದೇಟು ಹಾಕಿದ ಕಾರಣ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಗಿತ್ತು.
ತಮ್ಮ ವಿವಿದ ಬೇಡಿಕೆ ಇಡೇರದ ಹೊರತು ತಾವು ಬಸ್ ಏರಲ್ಲ ಎನ್ನುವ ಕಠಿಣ ನಿರ್ದಾರಕ್ಕೆ ಉದ್ಯೋಗಿಗಳು ಬಂದಿದ್ದರು. ಹಿರಿಯ ಅಧಿಕಾರಿಗಳು ನಿರ್ವಾಹಕ ಮತ್ತು ಚಾಲಕರ ಮನವೋಲಿಸಲು ಪ್ರಯತ್ನಿಸಿದರಾದರೂ ಫಲ ನೀಡಿಲ್ಲ. ಎಲ್ಲಾ ನಿರ್ವಾಹಕ ಮತ್ತು ಚಾಲಕರು ಒಗ್ಗಟ್ಟು ಪ್ರದರ್ಶಿಸಿ ಡಿಪೋ ದಿಂದ ಬಸ್ ಹೊರ ತೆಗೆಯಲು ಮನಸ್ಸು ಮಾಡದೆ ಬಂದ್ ಗೆ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ : ಆಸೀಸ್ ಎದುರು ಕ್ರಿಕೆಟ್ ಅಂಗಳದಲ್ಲೇ ಕ್ರೀಡಾಸ್ಫೂರ್ತಿ ಮೆರೆದ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್
ಏಕಾಏಕಿ ಬಂದ್ಗೆ ಪ್ರಯಾಣಿಕರ ಪರದಾಟ;
ಯಾವುದೇ ಮಾಹಿತಿ ಇಲ್ಲದೆ ಏಕಾಏಕಿಯಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮಾಹಿತಿ ಇಲ್ಲದೆ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಯಾವೊಂದು ಬಸ್ ಕೂಡಾ ಬಸ್ ನಿಲ್ದಾಣದಿಂದ ಬಿಡದೆ ಇದ್ರಿಂದ ಪ್ರಯಾಣಿಕರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸುತ್ತಾಟ ನಡೆಸುವಂತಾಯಿತು. ಇನ್ನು ವಿವಿಧ ತಾಲೂಕಿಗೆ ಉದ್ಯೋಗಕ್ಕಾಗಿ ತೆರಳುವವರು ಸಾಕಷ್ಟು ಪರದಾಟ ನಡೆಸಿದ್ರು, ಇವರ ಜತೆಗೆ ದೂರದೂರದ ಊರುಗಳಿಗೆ ತೆರಳಬೇಕಾದವರು ಕೂಡಾ ಬಸ್ ನಿಲ್ದಾಣದಲ್ಲಿ ಒಂದೆರಡು ತಾಸು ಕಾದು ಕಾದು ಸುಸ್ತಾಗಿ ತಿರುಗಿ ಮನೆ ಸೇರುವಂತಾಗಿತ್ತು. ಇನ್ನು ಕೆಲವರು ಖಾಸಗಿ ವಾಹನವನ್ನು ಆಶ್ರಯಿಸಿಕೊಂಡಿದ್ದರು.
ಕುಟುಂಬದವರೊಂದಿಗೆ ಪ್ರತಿಭಟನೆಗೆ ಇಳಿದ ಸಾರಿಗೆ ನೌಕರರು;ಸಾರಿಗೆ ನೌಕರರು ತಮ್ಮ ಹೆಂಡತಿ ಮಕ್ಕಳೊಂದಿಗೆ ಕಾರವಾರದ ಬಸ್ ನಿಲ್ದಾಣದ ಎದುರುಗಡೆ ಪ್ರತಿಭಟನೆ ನಡೆಸಿದ್ದಾರೆ. ಬಿರುಬಿಸಿಲಿನಲ್ಲಿ ಬಸ್ ನಿಲ್ದಾಣದ ಎದುರುಗಡೆ ಕುಳಿತು ತಮ್ಮನ್ನ ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು. ನಾಲ್ಕೈದು ತಾಸುಗಳ ಕಾಲ ಬಸ್ ನಿಲ್ದಾಣದ ಎದುರುಗಡೆ ತಮ್ಮ ತಮ್ಮ ಕುಟುಂಬದವರ ಜತೆಯಾಗಿ ಸರಕಾರದ ಗಮನ ಸೆಳೆಯಲು ಕಾರವಾರ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ.
Published by:
MAshok Kumar
First published:
December 11, 2020, 5:15 PM IST