ಕೊರೋನಾ ಚಕ್ರವ್ಯೂಹದಿಂದ ಸಹಜ ಸ್ಥಿತಿಯತ್ತ ಉತ್ತರಕನ್ನಡ; ನಿಧಾನವಾಗಿ ಜಿಲ್ಲೆಯತ್ತ ಮುಖ ಮಾಡುತ್ತಿರುವ ಪ್ರವಾಸಿಗರು

ಈಗ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕೂಡ ಕೊರೋನಾ ಪರೀಕ್ಷೆ ನಡೆಯುತ್ತಿದ್ದು, ನೆಗೆಟಿವ್ ವರದಿಗಳೇ ಹೆಚ್ಚಾಗಿ ಬರುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಆಗಿದೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ನಿಯಂತ್ರಣದತ್ತ ಸಾಗುತ್ತಿದೆ. ಹೀಗೆ ನಿರಂತರವಾಗಿ ನಿಯಂತ್ರಣದ ಹಾದಿ ಹಿಡಿದರೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರಲಿದೆ.

news18-kannada
Updated:August 17, 2020, 4:57 PM IST
ಕೊರೋನಾ ಚಕ್ರವ್ಯೂಹದಿಂದ ಸಹಜ ಸ್ಥಿತಿಯತ್ತ ಉತ್ತರಕನ್ನಡ; ನಿಧಾನವಾಗಿ ಜಿಲ್ಲೆಯತ್ತ ಮುಖ ಮಾಡುತ್ತಿರುವ ಪ್ರವಾಸಿಗರು
ಮುರುಡೇಶ್ವರ ಬೀಚ್
  • Share this:
ಕಾರವಾರ; ಕೊರೋನಾ ಅಂದರೆ ಮೈಲುದ್ದ ಓಡೋಡಿ ಹೋಗುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಜನ ಇತ್ತೀಚೆಗೆ ಕೊರೋನಾದೊಂದಿಗೆ ಬದುಕುವುದನ್ನು ಕಲಿತುಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಇತ್ತೀಚೆಗೆ ಕೊರೋನಾದಿಂದ ನಿಧಾನವಾಗಿ ಹೊರಬರುತ್ತಿದ್ದು ಜಿಲ್ಲೆಯಲ್ಲಿ ಕೆಲವೊಂದು ಚಟುವಟಿಕೆ ಬಿಟ್ಟರೆ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ.

ಕೊರೋನಾ ಮಹಾಮಾರಿ ಜಿಲ್ಲೆಯನ್ನು ಸಂಪೂರ್ಣವಾಗಿ ಹದಗೆಡಿಸಿಬಿಟ್ಟಿತ್ತು. ಪ್ರವಾಸೋದ್ಯಮದಿಂದ ಹಿಡಿದು ಎಲ್ಲ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಬ್ತವಾಗಿ ಜನರ ಬದುಕು ಮೂರಾಬಟ್ಟೆ ಆಗಿದೆ. ಆದರೆ ಈಗ ಜಿಲ್ಲೆಯ ಜನ ಕೊರೋನಾ ಮಹಾಮಾರಿಗೆ ಸೆಡ್ಡು ಹೊಡೆದು ಆರ್ಥಿಕ‌ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರ ಗೋಕರ್ಣಕ್ಕೆ ಪ್ರವಾಸಿಗರ ಆಗಮನ ಶುರುವಾಗಿದೆ. ಕಡಲ ತೀರದಲ್ಲಿ ಪ್ರವಾಸಿಗರು ಕಾಣಿಸುತ್ತಿದ್ದಾರೆ. ಇದರಿಂದ ಎಲ್ಲೋ ಒಂದು ಕಡೆ ಜಿಲ್ಲೆ ಕೊರೋನಾದಿಂದ ಹೊರಬರುವ ಲಕ್ಷಣ ಗೋಚರವಾಗುತ್ತಿದೆ.

ಸಂಖ್ಯೆ ಎಷ್ಟೇ ಬರಲಿ ಭಯ ಮಾತ್ರ ದೂರ

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕ್ಕೆ 50ರ ಮೇಲೆ ಕೊರೋನಾ ಸೋಂಕಿತರ ಸಂಖ್ಯೆ ಕಾಣಿಸಿಕೊಂಡರೂ ಜನರು ಮಾತ್ರ ಕೊರೋನಾ ಮಹಾಮಾರಿಗೆ ಭಯಪಡುತ್ತಿಲ್ಲ. ಕೆಲ ಸೋಂಕಿತರು ಮನೆಯಲ್ಲೇ ಹೋಂ ಐಸೋಲೇಶನ್ ಆಗಿದ್ದಾರೆ. ಇನ್ನು ಕೆಲವರು ಆಸ್ಪತ್ರೆ ಸೇರಿ ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಗುಣಮುಖರಾಗುತ್ತಿರುವವರ ಸಂಖ್ಯೆ ಪ್ರಮಾಣದಲ್ಲೂ ಕೂಡ ಏರಿಕೆ ಕಂಡಿದೆ. ಆರಂಭದಲ್ಲಿ ಕೊರೋನಾ ಅಂದರೆ ಭಯಪಡುತ್ತಿದ್ದ ಜಿಲ್ಲೆಯ ಜನ ಈಗ ಇದೊಂದು ಸಾಮಾನ್ಯ ರೋಗ ಎಂಬ ಭಾವನೆಗೆ ಬಂದಿದ್ದಾರೆ. ಧಾರ್ಮಿಕ ಕಾರ್ಯ ಸೇರಿ ಸದ್ಯ ಸರಕಾರ ಯಾವುದಕ್ಕೆಲ್ಲಾ ನಿಷೇಧ ಹೇರಿದೆಯೋ ಅವುಗಳನ್ನು ಹೊರತುಪಡಿಸಿ ಬಾಕಿ ಅವಕಾಶ ನೀಡಿದ ಎಲ್ಲ ಕಾರ್ಯಚಟುವಟಿಕೆ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಜನ ಕೂಡ ಅದರಂತೆ ತಮ್ಮನ್ನು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನೂ ಉತ್ತರ ಕನ್ನಡ ಜಿಲ್ಲಾಡಳಿತ ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ಹತ್ತಾರು ಯೋಜನೆಯನ್ನು ರೂಪಿಸಕೊಂಡಿದೆ. ಕಳೆದ ತಿಂಗಳವರೆಗೂ ಜಿಲ್ಲೆಯಲ್ಲಿ ದಿನಕ್ಕೆ ಕೇವಲ 300ರಿಂದ400 ಜನರ ಪರೀಕ್ಷೆ ಮಾತ್ರ ನಡೆಯುತ್ತಿತ್ತು. ಆದರೆ ಈಗ ಇದರ ಸಂಖ್ಯಾ ಪ್ರಮಾಣ ಹೆಚ್ಚಿಸಿದ್ದು ದಿನಕ್ಕೆ 1200ರಿಂದ 1500 ರವರೆಗೂ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಮರಣ ಪ್ರಮಾಣದಲ್ಲಿ ಸಂಪೂರ್ಣ ಇಳಿಕೆ ಕಂಡಿದೆ. ಈ ಹಿಂದೆ 300ರಿಂದ 400 ಜನರ ಪರೀಕ್ಷೆ ನಡೆಯುವಾಗಲೂ ಜಿಲ್ಲೆಯಲ್ಲಿ 50ರ ಮೇಲೆ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದರು. ಈಗ ಪರೀಕ್ಷಾ ಪ್ರಮಾಣ ಹೆಚ್ಚಿಗೆ ಮಾಡಿದರೂ ಕೂಡ ಅಷ್ಟೇ ಪ್ರಮಾಣದಲ್ಲಿ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.

ಇದನ್ನು ಓದಿ: ಗಲಭೆಕೋರರ ಬಂಧನಕ್ಕೆ ವಿಶೇಷ ತಂಡಗಳ ರಚನೆ; ಟವರ್ ಡಂಪ್ ಮೂಲಕ‌ ಆರೋಪಿಗಳ‌ ಪತ್ತೆಗೆ ಸಿಸಿಬಿ ಬಲೆ
ಜತೆಗೆ ಈಗ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕೂಡ ಕೊರೋನಾ ಪರೀಕ್ಷೆ ನಡೆಯುತ್ತಿದ್ದು, ನೆಗೆಟಿವ್ ವರದಿಗಳೇ ಹೆಚ್ಚಾಗಿ ಬರುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಆಗಿದೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ನಿಯಂತ್ರಣದತ್ತ ಸಾಗುತ್ತಿದೆ. ಹೀಗೆ ನಿರಂತರವಾಗಿ ನಿಯಂತ್ರಣದ ಹಾದಿ ಹಿಡಿದರೆ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರಲಿದೆ.
Published by: HR Ramesh
First published: August 17, 2020, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading