ಕಾರವಾರ(ಜುಲೈ.17): ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಎಂಟು ನೂರರ ಗಡಿಯತ್ತ ಸಾಗಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆ ಜನರ ಆತಂಕಕ್ಕೆ ಕಾರಣವಾಗಿದ್ರೆ ಇನ್ನೊಂದೆಡೆ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರ ಪತ್ತೆ ಹಚ್ಚುವ ಕಾರ್ಯವನ್ನ ಚುರುಕುಗೊಳಿಸಲು ಜಿಲ್ಲಾಡಳಿತ ಹೊಸ ಪ್ಲ್ಯಾನ್ ಒಂದನ್ನ ರೂಪಿಸಿದೆ.
ಕರಾವಳಿಯಲ್ಲಿ ಒಂದೆಡೆ ವರುಣನ ಆರ್ಭಟ ದಿನದಿಂದ ದಿನಕ್ಕೆ ಜೋರಾಗುತ್ತಿದ್ರೆ ಇನ್ನೊಂದೆಡೆ ಮಹಾಮಾರಿ ಕೊರೋನಾ ತನ್ನ ಆರ್ಭಟವನ್ನ ಮುಂದುವರೆಸಿದೆ. ಇನ್ನು ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಒಂದೇ ತಿಂಗಳ ಅವಧಿಯಲ್ಲಿ ಐದು ನೂರು ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಬಹುತೇಕ ಎಲ್ಲಾ ತಾಲೂಕು ಗಳಲ್ಲೂ ಕೊರೋನಾ ಸೋಂಕು ವ್ಯಾಪಿಸುತ್ತಿದ್ದು, ಇದೀಗ ಜಿಲ್ಲಾಡಳಿತಕ್ಕೂ ಸಹ ಇದು ತಲೆನೋವು ತಂದೊಡ್ಡಿದೆ. ಈ ನಿಟ್ಟಿನಲ್ಲಿ ಸೋಂಕು ವ್ಯಾಪಿಸುವುದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಇದೀಗ ಕೊರೋನಾ ಪತ್ತೆಗೆ ಪರೀಕ್ಷೆಗಳನ್ನ ಹೆಚ್ಚಿಸಲು ಮುಂದಾಗಿದೆ.
ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕೋವಿಡ್-19 ವಾರ್ಡ್ ನಿರ್ಮಾಣವಾದ ಬೆನ್ನಲ್ಲೇ ಕೊರೊನಾ ಪರೀಕ್ಷೆಗೆ ಲ್ಯಾಬ್‌ನ್ನು ಸಹ ನಿರ್ಮಾಣ ಮಾಡಲಾಗಿದೆ. ಜೂನ್ 1 ರಿಂದ ಲ್ಯಾಬ್ ಕಾರ್ಯನಿರ್ವಹಿಸುತ್ತಿದ್ದು ಒಂದು ತಿಂಗಳ ಅವಧಿಯಲ್ಲಿ 3600 ಕೊರೋನಾ ಪರೀಕ್ಷೆಗಳನ್ನ ಯಶಸ್ವಿಯಾಗಿ ನಡೆಸಲಾಗಿದೆ. ಇನ್ನು ಕೊರೋನಾ ಪರೀಕ್ಷೆಗಳ ವೇಗವನ್ನ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದ್ದು, ಗಂಟಲ ದ್ರವಗಳ ಮಾದರಿಗಳನ್ನ ಪರೀಕ್ಷೆ ಮಾಡಲು ಮೂರು ವಿಭಾಗಗಳನ್ನ ಅನುಸರಿಸಲು ಮುಂದಾಗಲಾಗುತ್ತಿದೆ.
ಮೊದಲನೇಯದಾಗಿ ಮೃತರ ಗಂಟಲುದ್ರವದ ಮಾದರಿಗಳ ಪರೀಕ್ಷೆಗಳನ್ನ ಎರಡೇ ಗಂಟೆಗಳಲ್ಲಿ ಮಾಡಿ ವರದಿ ನೀಡಲು ನಿರ್ಧರಿಸಲಾಗಿದೆ. ಎರಡನೇಯದಾಗಿ ಪೊಲೀಸ್ ಠಾಣೆ, ವೈದ್ಯರು, ಬ್ಯಾಂಕುಗಳು, ಸರ್ಕಾರಿ ಕಛೇರಿಗಳಂತಹವುಗಳ ಮಾದರಿಗಳ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ತುರ್ತು ಅಗತ್ಯತೆಯನ್ನ ಗಮನದಲ್ಲಿರಿಸಿ ಪರೀಕ್ಷೆಗಳನ್ನ ವಿಂಗಡಣೆ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ.
ಉಳಿದಂತೆ 60 ವರ್ಷ ಮೇಲ್ಪಟ್ಟವರ ಗಂಟಲು ದ್ರವ ಮಾದರಿಗಳ ಪರೀಕ್ಷೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಈ ಮೂಲಕ ಸೋಂಕು ಪತ್ತೆಯಾದ ಸಂದರ್ಭದಲ್ಲಿ ವೃದ್ಧರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.
ಇನ್ನು ಹೆಚ್ಚು ಪರೀಕ್ಷೆಗಳನ್ನ ಮಾಡಿದ ಸಂದರ್ಭದಲ್ಲಿ ಸೋಂಕಿನ ಪತ್ತೆ ಕಾರ್ಯವೂ ಸಹ ಶೀಘ್ರದಲ್ಲಿ ಆಗುವುದರಿಂದ ಸೋಂಕು ಹೆಚ್ಚು ವ್ಯಾಪಿಸದಂತೆ ಹಾಗೂ ಸಾವು ಸಂಭವಿಸದಂತೆ ತಡೆಯಲು ಇದರಿಂದ ಸಹಾಯವಾಗಲಿದೆ ಎನ್ನುವುದು ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಪೊಲೀಸರಿಗೆಂದೇ ವಿಶೇಷ ಕೋವಿಡ್ ಕಂಟ್ರೋಲ್ ರೂಂ
ಇನ್ನು ಈಗಾಗಲೇ ರೋಗ ಲಕ್ಷಣ ರಹಿತ ಕೊರೋನಾ ಸೋಂಕಿತರಿಗೆ ಜಿಲ್ಲೆಯ ಆಯಾ ತಾಲೂಕುಗಳಲ್ಲೇ ಚಿಕಿತ್ಸೆಯನ್ನ ನೀಡುವುದಕ್ಕೂ ಸಹ ಆಸ್ಪತ್ರೆಗಳಲ್ಲಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಈ ಮೂಲಕ ಸೋಂಕಿನ ಲಕ್ಷಣಗಳನ್ನ ಹೊಂದಿರುವವರನ್ನ ಮಾತ್ರ ಜಿಲ್ಲಾ ಕೇಂದ್ರಕ್ಕೆ ಕರೆತರುವ ಮೂಲಕ ಆಸ್ಪತ್ರೆ ಮೇಲೆ ಬೀಳುವ ಹೊರೆಯನ್ನ ಕಡಿಮೆ ಮಾಡಲು ಜಿಲ್ಲಾಡಳಿತ ಸಿದ್ಧವಾಗಿದ್ದು ಇದಕ್ಕೆ ಸಾರ್ವಜನಿಕರೂ ಸಹ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ತಾಲೂಕಿಗೆ 30 ರಂತೆ ಸರಾಸರಿ ಕೊರೋನಾ ಸೋಂಕಿತರು ಇದ್ದು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳೂ ಸೇರಿ 2,500 ಬೆಡ್‌ಗಳು ಚಿಕಿತ್ಸೆಗೆ ಲಭ್ಯವಿವೆ. ಹೀಗಾಗಿ ಜಿಲ್ಲೆಯ ಕೊರೋನಾ ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ