ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆಗೆ ಬ್ರೇಕ್; ಪ್ರವಾಸಿಗರಿಗೆ ನಿರಾಸೆ, ಪ್ರವಾಸೋದ್ಯಮದ ಮೇಲೆ ಭಾರಿ ಹೊಡೆತ!

ಮೂರನೆ ಅಲೆಯನ್ನ ಆರಂಭದಲ್ಲಿ ನಿಯಂತ್ರಣಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಉತ್ತರ ಕನ್ನಡ ಜಿಲ್ಲಾಡಳಿತ ಕೈ ಗೊಂಡಿರುವ ಕ್ರಮದಿಂದ ಆರಂಭದಲ್ಲೆ ಹೊಟೇಲ್ ಮಾಲೀಕರು ಮತ್ತು ಹೋಂ‌ಸ್ಟೇ ಮಾಲಿಕರು ಪ್ರವಾಸಿಗರಿಲ್ಲದೆ ಕಂಗಾಲಾಗಿದ್ದಾರೆ.

ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ (ಸಂಗ್ರಹ ಚಿತ್ರ)

ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ (ಸಂಗ್ರಹ ಚಿತ್ರ)

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಪ್ರವಾಸಿಗರ ಸ್ವರ್ಗ ಅಂತಾನೆ ಕರೆಯಿಸಿಕೊಳ್ಳುವ ದಾಂಡೇಲಿ ಜಲಸಾಹಸ ಕ್ರೀಡೆಯಿಂದಲೇ ಪ್ರಸಿದ್ಧಿ ಪಡೆದಿದೆ.  ಆದರೆ ಕೋವಿಡ್ ಮೂರನೆ ಅಲೆಯ ನಿಯಂತ್ರಣಕ್ಕೆ ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲ ಜಲಸಾಹಸ ಕ್ರಿಡೆ ನಿಷೇಧ ಮಾಡಿದ್ದು ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೋಯಿಡಾ ಗಣೇಶಗುಡಿಯಲ್ಲಿ ಈ ಸಂದರ್ಭದಲ್ಲಿ ಪ್ರವಾಸಿಗರು ಸಾಕಷ್ಟು ಪ್ರಮಾಣದಲ್ಲಿ ಇರುತ್ತಿದ್ರು. ಆದ್ರೆ ಈಗ ಉತ್ತರ ಕನ್ನಡ ಜಿಲ್ಲಾಡಳಿತ ಕೋವಿಡ್ ಮೂರನೆ ಅಲೆಗೆ ಆರಂಭದಲ್ಲೆ ನಿಯಂತ್ರಣಕ್ಕೆ ತರಬೇಕೆಂಬ ಉದ್ದೇಶ ದಿಂದ ಕಾಳಿ ನದಿಯಲ್ಲಿ ನಡೆಯುತ್ತಿದ್ದ ಜಲಸಾಹಸ ಕ್ರಿಡೆಯನ್ನ ಸಂಪೂರ್ಣ ನಿಷೇಧಿಸಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಇನ್ನು ಹೊರ ರಾಜ್ಯದಿಂದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗನಿಗು ಕೂಡಾ ಆರ್​ ಟಿ .ಪಿ.ಸಿ.ಆರ್ ಕಡ್ಡಾಯವಾಗಿದ್ರಿಂದ ಬರುವ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಮೂಗು ಮುರಿಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ದಾಂಡೇಲಿ ಸೇರಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನೆಲಕಚ್ಚಿದೆ. ಈಗ ಮೂರನೇ ಅಲೆ ನಿಯಂತ್ರಣಕ್ಕೆ ಬಾರದೆ ಇದ್ರೆ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಭಾರಿ ಪೆಟ್ಟು ಬೀಳಲಿದೆ.

ಎರಡನೇ ಅಲೆಯ ನಂತರ ಚೇತರಿಕೆ ಕಾಣುತ್ತಿರುವಾಗಲೆ ಆಘಾತ

ಕೋವಿಡ್ ಎರಡನೇ ಅಲೆಯ ನಂತರ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಭಾರೀ ಚೇತರಿಕೆ ಹಾದಿ ಕಂಡಿತ್ತು. ಆದರೆ ಈಗ ಮೂರನೆ ಅಲೆಯ ಕರಿನೆರಳು ಪ್ರವಾಸೋದ್ಯಮದ ಮೇಲೆ ಬಿದ್ದಿದೆ. ಮತ್ತೆ ಪ್ರವಾಸೋದ್ಯಮ ನೆಲಕಚ್ಚುವ ಹಂತಕ್ಕೆ ತಲುಪಿದೆ. ಕೋವಿಡ್ ಮೂರನೆ ಅಲೆ ತನ್ನ  ಪ್ರಭಾವ ಹೆಚ್ಚಿಸಿಕೊಂಡರೆ ಹೊಟೇಲ್ ಮಾಲೀಕರು, ಮತ್ತು ಕಾರ್ಮಿಕ ವರ್ಗ ಏಕ ಕಾಲದಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ಈಗಾಗಲೇ ಒಂದು ಮತ್ತು ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿ ಹಿಂಡಿಹಿಪ್ಪೆಯಾದ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಈಗ ಮತ್ತೆ ಮತ್ತೆ ಚೇತರಿಕೆ ಕಾಣದೆ ಇದ್ರೆ ಉದ್ಯಮ ನಂಬಿರುವ ಅದೇಷ್ಟೊ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ.

ಇದನ್ನು ಓದಿ: 50 ಲಕ್ಷ ಮೌಲ್ಯದ 68 ಆ್ಯಪಲ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರ ಬಂಧಿಸಿದ ಮಂಗಳೂರು ಪೊಲೀಸರು

ಮೂರನೆ ಅಲೆ ತಡೆಯಲು ಕಟ್ಟುನಿಟ್ಟಾಗಿ ಕ್ರಮ

ಮೂರನೆ ಅಲೆಯನ್ನ ಆರಂಭದಲ್ಲಿ ನಿಯಂತ್ರಣಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಉತ್ತರ ಕನ್ನಡ ಜಿಲ್ಲಾಡಳಿತ ಕೈ ಗೊಂಡಿರುವ ಕ್ರಮದಿಂದ ಆರಂಭದಲ್ಲೆ ಹೊಟೇಲ್ ಮಾಲೀಕರು ಮತ್ತು ಹೋಂ‌ಸ್ಟೇ ಮಾಲಿಕರು ಪ್ರವಾಸಿಗರಿಲ್ಲದೆ ಕಂಗಾಲಾಗಿದ್ದಾರೆ. ಮುಂದೆ ಸರಕಾರ ಲಾಕ್ ಡೌನ್ ಗೆ ಕೈ ಹಾಕಿದ್ದೆ ಆದಲ್ಲಿ ಹೊಟೇಲ್ ಮಾಲೀಕರು ಮತ್ತು ಕಾರ್ಮಿಕರು ಮತ್ತಷ್ಟು ಕುಸಿತ ಕಾಣಲಿದ್ದಾರೆ. ಹೊರ ರಾಜ್ಯದ ಪ್ರವಾಸಿಗರನ್ನ ಹೆಚ್ಚಾಗಿ ನೆಚ್ಚಿಕೊಂಡಿರುವ ಇಲ್ಲಿನ ಹೋಂ‌ಸ್ಟೇ ಮತ್ತು ರೆಸಾರ್ಟ್‌ ಮಾಲೀಕರು ಈಗ ಹೊರ ರಾಜ್ಯದ ಪ್ರವಾಸಿಗರು ಇಲ್ಲದೆ ಆರ್ಥಿಕವಾಗಿ ಕುಸಿತ ಕಂಡಿದ್ದಾರೆ. ಈ ಮಧ್ಯೆ ಕಾಳಿ ನದಿಯಲ್ಲಿ ನಡೆಯುತ್ತಿದ್ದ ಜಲಸಾಹಸ ಕ್ರೀಡೆಗೆ  ಬ್ರೇಕ್ ಬಿದ್ದಿರೋದು ಗಾಯದ‌ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.
Published by:HR Ramesh
First published: