ಪುತ್ತೂರು: ಕಳೆದೊಂದು ತಿಂಗಳಿನಿಂದ ಕರಾವಳಿಯ ಒಳನಾಡಿನ ತುಂಬೆಲ್ಲ ನಿರಂತರ ಮಳೆ ಸುರಿಯುತ್ತಿದ್ದು, ಬಿರು ಬೇಸಿಗೆಯ ನಡುವಲ್ಲೇ ಬೈಲು ಪ್ರದೇಶದಲ್ಲಿ ನೀರಿನ ಒರತೆ ಸೃಷ್ಟಿಯಾಗಿದೆ. ಬೇಸಿಗೆ ಮಳೆಯ ನಿರಂತರತೆಯಿಂದಾಗಿ ಸಾಕಷ್ಟು ಪ್ರಮಾಣದ ಲಾಭವೂ ಆಗಿದ್ದು, ಜತೆಯಲ್ಲೇ ಒಂದಷ್ಟು ಪ್ರಮಾಣದ ನಷ್ಟದ ಭೀತಿಯೂ ಎದುರಾಗಿದೆ. ಈ ಬಾರಿ ಏಪ್ರಿಲ್ ಆರಂಭದಿಂದಲೇ ವರುಣ ದರ್ಶನ ಆರಂಭಗೊಂಡಿತ್ತು. ಚಾರ್ಮಾಡಿ, ಶಿರಾಡಿ, ಬಿಸಲೆ, ಸಂಪಾಜೆ ಘಾಟಿ ಪ್ರದೇಶಗಳ ತಪ್ಪಲಿನಲ್ಲಿ ವ್ಯಾಪಕ ಮಳೆಯಾಗಲು ತೊಡಗಿದ ಬಳಿಕ ನಡುವಣ ಪ್ರದೇಶದಲ್ಲೂ ವರ್ಷಧಾರೆ ಆರಂಭಗೊಂಡಿತ್ತು. ಕರಾವಳಿಯ ಮಂಗಳೂರು ಸುತ್ತಮುತ್ತಲು ಕೂಡ ಈ ಬಾರಿ ಸಾಕಷ್ಟು ಪ್ರಮಾಣದ ಮಳೆಯಾಗಿದ್ದು, ಮುಂಗಾರು ಪ್ರವೇಶಕ್ಕೆ ತಿಂಗಳ ಮೊದಲೇ ಇಳೆ ಸಂಪೂರ್ಣ ತಂಪಾಗಿದೆ.
ರಾಜ್ಯದ ಪ್ರಧಾನ ವಾಣಿಜ್ಯ ಬೆಳೆಯಾದ ಅಡಕೆ ಕ್ಷೇತ್ರಕ್ಕೆ ಸಿಂಹಪಾಲು ಕೊಡುಗೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ವರ್ಷಧಾರೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದ ಮೊದಲು ದಿನ ಬಿಟ್ಟು ದಿನ ಬರುತ್ತಿದ್ದ ಮಳೆ ಕಳೆದ 2 ವಾರದಿಂದ ನಿತ್ಯವೂ ರೂಢಿಯಾಗಿದೆ. ಸಾಮಾನ್ಯವಾಗಿ ಜನವರಿಯಲ್ಲಿ ತೋಟಕ್ಕೆ ನೀರು ಹಾಯಿಸುವ ಕೆಲಸ ಆರಂಭಿಸುವ ಅಡಕೆ ಕೃಷಿಕರು ಮೇ ಕೊನೆಯವರೆಗೂ ಈ ಕಾರ್ಯದಲ್ಲಿ ತಲ್ಲೀನರಾಗಿರುತ್ತಾರೆ. ಈ ನಡುವೆ, ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ನೀರು ಪ್ರಕ್ರಿಯೆಗೆ ತೊಡಕಾಗುವುದೂ ನಡೆಯುತ್ತದೆ. ಆದರೆ ಈ ಬಾರಿ ಕಳೆದೊಂದು ತಿಂಗಳಿನಿಂದ ಅಡಕೆ ತೋಟಕ್ಕೆ ನೀರು ಹಾಯಿಸುವ ಅಗತ್ಯವೇ ಇಲ್ಲದಾಗಿದೆ. ಇದರಿಂದಾಗಿ ಮೆಸ್ಕಾಂ ಮೇಲಿನ ಒತ್ತಡವೂ ಕಡಿಮೆಯಾಗಿದೆ. ಒಂದೆಡೆ ವ್ಯಾಪಕ ಮಳೆಯಿಂದ ನೀರಾವರಿ ಸಮಸ್ಯೆ ನಿವಾರಣೆಯಾಗಿದ್ದು, ಜನರ ಕುಡಿಯುವ ನೀರಿನ ಸಮಸ್ಯೆ, ಕೈತೋಟ, ಉದ್ಯಾನಗಳಿಗೆ ನೀರುಣಿಸುವ ಸಮಸ್ಯೆ ಇಲ್ಲವಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೂ ಮತ್ತೊಂದು ಕಡೆ ಈ ವರ್ಷದ ಅಡಕೆ ಇಳುವರಿ ಮೇಲೆ ಹೊಡೆತ ಬೀಳುವ ಆತಂಕ ಮೂಡಿದೆ.
ಇದನ್ನು ಓದಿ: ಕೋವಿಶೀಲ್ಡ್ 12 ವಾರ, ಕೋವ್ಯಾಕ್ಸಿನ್ 6 ವಾರ ಅಂತರದಲ್ಲಿ ಎರಡನೇ ಡೋಸ್; ಕೋವಿಡ್ ಕಾರ್ಯಪಡೆಯ ತೀರ್ಮಾನ
ಮಧ್ಯಾಹ್ನದವರೆಗೆ ಪ್ರಖರ ಬಿಸಿಲಿದ್ದರೆ, ಬಳಿಕ ಇದ್ದಕ್ಕಿದ್ದಂತೆ ಮೋಡ ಆವರಿಸಿಕೊಳ್ಳುತ್ತದೆ. ಸಂಜೆಯಾಗುತ್ತಲೇ ಧಾರಾಕಾರ ಮಳೆಯಾಗುತ್ತದೆ. ಅರ್ಧ ದಿನ ಬೇಸಿಗೆ ಮಾದರಿಯಲ್ಲೇ ಸರಾಸರಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ, ಅಪರಾಹ್ನದ ಹೊತ್ತಿಗೆ ಇಳಿಮುಖವಾಗಿ ಸಂಜೆ ವೇಳೆಗೆ 27 ಅಥವಾ 28 ಡಿಗ್ರಿಗೆ ಕುಸಿಯುತ್ತದೆ. ಈ ಏರಿಳಿತವು ಅಡಕೆ ಮಿಡಿಯ ಪಾಲಿಗೆ ಮಾರಕ ಎನ್ನುತ್ತಿದ್ದಾರೆ ರೈತರು. ಈ ಹವಾಮಾನದಿಂದಾಗಿ ಈ ವರ್ಷ ಇಳುವರಿ ಕಡಿಮೆಯಾದರೂ ಅಚ್ಚರಿಯಿಲ್ಲ. ಕಳೆದ 2 ವರ್ಷಗಳ ಬೇಸಿಗೆಯ ಕೊನೆಯಲ್ಲಿ ಅಡಕೆ ಮಿಡಿಕಾಯಿ ಇದ್ದಕ್ಕಿದ್ದಂತೆ ಕರಟಿ ಬೀಳುವ ಪ್ರಕ್ರಿಯೆ ನಡೆದಿತ್ತು. ಈ ಬಾರಿ ಹವಾಮಾನ ಏರಿಳಿತ ಮಾರಕವಾಗಲಿದೆ ಎನ್ನುತ್ತಿದ್ದಾರೆ ರೈತರು. ಒಂದೇ ರೀತಿಯ ಪ್ರಖರತೆ ಹವಾಮಾನ ಅಡಕೆಗೆ ಉತ್ತಮ. ವಾತಾವರಣದಲ್ಲಿ ಬಿಸಿಲಿದ್ದು, ನೀರುಣಿಸುವ ಪ್ರಮಾಣ ಸರಿಯಾಗಿ ನಡೆದರೆ ಉತ್ತಮ ಫಸಲು ಬರುತ್ತದೆ. ಮಳೆಯಿಂದಾಗಿ ನೀರುಣಿಸುವ ಪ್ರಕ್ರಿಯೆ ಸಮರ್ಪಕವಾದರೂ ವಾತಾವರಣದ ಏರಿಳಿತ ಅಡಕೆಗೆ ಉತ್ತಮವಲ್ಲ. ಕರಾವಳಿಯಲ್ಲಿ ಉತ್ತಮ ಅಡಕೆ ಫಸಲು ಬರಲು ಇಲ್ಲಿನ ಪ್ರಖರ ತಾಪಮಾನವೇ ಕಾರಣ. ಬೇಸಿಗೆಯಲ್ಲಿ ಈ ರೀತಿ ಏರಿಳಿತವಾದರೆ ಅಡಕೆ ಫಸಲಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ