ದಶಕಗಳಿಂದ ಇಂಥ ಮಳೆ ಕಂಡಿಲ್ಲ; ತಂತಾನೆ ಉಕ್ಕುತ್ತಿರುವ ಕೊಳವೆಬಾವಿಗಳು; ಬರದ ನಾಡಿನವರ ಆನಂದಬಾಷ್ಪ

ಸತತ ಮಳೆಯಿಂದ ಬರದನಾಡು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಐದಾರು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್​ವೆಲ್​ಗಳಲ್ಲಿ ನೀರು ಉಕ್ಕುತ್ತಿದ್ದು ರೈತರಲ್ಲಿ ಹರ್ಷ ಮನೆಮಾಡಿದೆ.

ನೀರು ಉಕ್ಕೇರುತ್ತಿರುವ ಕೊಳವೆಬಾವಿ

ನೀರು ಉಕ್ಕೇರುತ್ತಿರುವ ಕೊಳವೆಬಾವಿ

  • Share this:
ಚಿಕ್ಕಮಗಳೂರು: ಸತತ ಮಳೆಯಿಂದ ಬರದನಾಡು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ (Kadur taluk of Chikkamagaluru district) ಐದಾರು ಗ್ರಾಮಗಳಲ್ಲಿ ಅಂತರ್ಜಲ (Underground water) ಮಟ್ಟ ಹೆಚ್ಚಾಗಿ ಬೋರ್ ವೆಲ್ ಗಳಲ್ಲಿ (Borewells) ನೀರು ಉಕ್ಕುತ್ತಿದ್ದು ರೈತರಲ್ಲಿ ಹರ್ಷ ಮನೆಮಾಡಿದೆ. ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಎಂತಹದ್ದೇ ಮಳೆ ಬಂದ್ರು ಈ ಊರಿನ ನೀರಿನ ಬವಣೆ ಮಾತ್ರ ತಪ್ಪುತ್ತಿರಲಿಲ್ಲ, ಭೂಮಿಯ ಧಗೆ ತಣ್ಣಗಾಗ್ತಿರಲಿಲ್ಲ. ಜನ ಹನಿ ನೀರಿಗೂ ಹಾಹಾಕಾರ ಅನುಭವಿಸ್ತಿದ್ರು. ನೀರಿಲ್ಲದೆ ಜಾನುವಾರುಗಳನ್ನ ಗುಡ್ಡಕ್ಕೆ ಹೊಡೆಯುತ್ತಿದ್ದರು, ಹೋದಷ್ಟು ದರಕ್ಕೆ ಮಾರುತ್ತಿದ್ದರು. ಆದ್ರೆ, ಈ ವರ್ಷ ಮಳೆಗಾಲದಲ್ಲಿ ಮಳೆ ಬರಲಿಲ್ಲ. ಚಳಿಗಾಲದಲ್ಲಿ ಬಿದ್ದ ಮಳೆಗೆ ಬರದ ತವರ ಜನರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಬೆಳೆಗಳು ಮಳೆಯಲ್ಲಿ ಕೊಚ್ಚಿ ಹೋಗಿದೆ. ಆದರೆ, ರೈತರ ಮೊಗದಲ್ಲಿ ನಗೆಯನ್ನೂ ಈ ಮಹಾಮಳೆ ತರಿಸಿದೆ. ಇತಿಹಾಸದಲ್ಲಿ ಕಂಡು-ಕೇಳರಿಯದ ಮಳೆಗೆ ವರ್ಷಗಳಿಂದ ನಿಂತಿದ್ದ ಬೋರ್‍ವೆಲ್‍ಗಳಲ್ಲಿ ನೀರು ಉಕ್ಕುತ್ತಿದೆ. ಇದು ಮಲೆನಾಡಿಗೂ ಸೆಡ್ಡು ಹೊಡೆದು ಬಯಲುಸೀಮೆ ಮಳೆ ಕಥೆ.

ಕಡೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ವಾರ್ಷಿಕ ಸರಾಸರಿ ಮಳೆ ಬೀಳೋದು ತೀರಾ ಕಡಿಮೆ. ಆದ್ರೆ, ಈ ವರ್ಷ ಚಳಿಗಾಲದಲ್ಲಿ ಇಡೀ ಕಡೂರೇ ಕೊಚ್ಚಿ ಹೋಗುವಂತಹಾ ಮಳೆ ಸುರಿದಿದೆ. ಕೆರೆಗಳು ಕೋಡಿ ಬಿದ್ದಿವೆ. ಹೊಲ-ಗದ್ದೆ, ತೋಟಗಳು ಜಲಾವೃತಗೊಂಡಿವೆ. ಕಡೂರು ತಾಲೂಕಿನಾದ್ಯಂತ ಕಳೆದೆರಡು ತಿಂಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಂತರ್ಜಲ ವೃದ್ಧಿಯಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ವರ್ಷಗಳಿಂದ ನಿಂತಿದ್ದ ಬೋರ್‍ವೆಲ್‍ಗಳಲ್ಲಿ ತಂತಾನೆ ಉಕ್ಕುವಂತೆ ಅಂತರ್ಜಲ ಪ್ರವಹಿಸುತ್ತಿದೆ. ಮೋಟರ್ ಆನ್ ಮಾಡದಿದ್ರು ಕೂಡ ನೀರು ಉಕ್ಕಿ ಹರಿಯುತ್ತಿದೆ. ನಾಲ್ಕೈದು ದಶಕಗಳಿಂದ ಕೃಷಿಯಲ್ಲಿದ್ದರೂ ಇಂತಹಾ ದೃಶ್ಯವನ್ನ ಜೀವಮಾನದಲ್ಲಿ ಕಂಡಿರಲಿಲ್ಲ. ಈ ದೃಶ್ಯ ನೋಡಿ ಖುಷಿಯಾಯ್ತು ಅಂತಿದ್ದಾರೆ ಕಡೂರಿನ ರೈತರು.

ಬೋರ್​ವೆಲ್ ಹಾಕುವುದೇ ನಿಷೇಧವಾಗಿತ್ತು:

ಕಾಫಿನಾಡಲ್ಲಿ ಮಳೆ ಅಂದಾಕ್ಷಣ ತಟ್ಟನೆ ನೆನಪಾಗೋದೆ ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್. ಪುರ, ಶೃಂಗೇರಿಯ ಮಳೆ. ಆದ್ರೆ, ತರೀಕೆರೆ, ಕಡೂರು, ಅಜ್ಜಂಪುರದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ. ಅದರಲ್ಲೂ ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರೋ ತಾಲೂಕು. ಇಲ್ಲಿನ ಜನ ಜಾನುವಾರು, ಬೆಳೆಗಳಿಗೆ ಬಹುತೇಕ ಬೋರ್‍ವೆಲ್‍ಗಳ ನೀರನ್ನೇ ಆಶ್ರಯಿಸಿದ್ದರು. ನೀರಿಗಾಗಿ 1300 ರಿಂದ 1800 ಅಡಿವರೆಗೂ ಕೊರಿಸಿದರೂ ನೀರು ಬರುವುದಿಲ್ಲ. ಕೆಲವರು 2000 ಅಡಿಗೂ ಕೈಹಾಕಿ ಸಾಲಗಾರರಾಗಿದ್ದರು. ಅಂತರ್ಜಲ ಕೈ ಕೊಟ್ಟಿದ್ದರಿಂದ ಇತ್ತೀಚೆಗೆ ತಾಲೂಕಿನಲ್ಲಿ ಬೋರ್ ಕೊರೆಸುವುದನ್ನೇ ನಿಷೇಧಿಸಲಾಗಿತ್ತು.

ಇದನ್ನೂ ಓದಿ: Karnataka Weather Today: ನಾಳೆಯಿಂದ 3 ದಿನ ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ: ಹೊರಬರುವ ಮುನ್ನ ಹುಷಾರ್​..!

ನೀರೋ ನೀರು…

ಎಷ್ಟೋ ಮಳೆಗಾಲಗಳು ಕಳೆದಿವೆ. ಆದರೆ, ಕೆರೆ-ಕಟ್ಟೆಗಳಿಗೆ ಮಾರುದ್ದ ನೀರು ಬಂದಿರಲಿಲ್ಲ. ನೀರಿಲ್ಲದೆ ಒಣಗಿ ನಿಂತಿದ್ದ ಕೆರೆಗಳು ನುಂಗಣ್ಣರ ಪಾಲೂ ಆಗಿತ್ತು. ಆದ್ರೆ, ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಈಗ ಎಲ್ಲೆಂದರಲ್ಲಿ ನೀರೋ...ನೀರು. ಹೊಲ-ಗದ್ದೆಗಳಲ್ಲಿ ನೀರು ನಿಂತಿದ್ದು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರಾಗಿ ಸಂಪೂರ್ಣ ಮುಳುಗಿದ್ದು, ಮೆಕ್ಕೆ ಜೋಳ, ಈರುಳ್ಳಿ, ಆಲೂಗೆಡ್ಡೆ, ಟೊಮೊಟೊ ಯಾವುದೂ ಉಳಿಯದಂತೆ ಕೊಚ್ಚಿ ಹೋಗಿದೆ.

ಇದನ್ನೂ ಓದಿ: Rain Effect: ಬೆಳೆಗಾರರ ಕೈಗೆಟುಕದ ದ್ರಾಕ್ಷಿ.. ಹಣ್ಣಿನ ಜೊತೆ ರೈತರ ನೆಮ್ಮದಿಯನ್ನು ಆಪೋಷನ ಪಡೆದ ವರುಣ

ಒಟ್ಟಾರೆ, ದಶಕಗಳಿಂದ ಕಾಣದ ಮಳೆ ಕಂಡ ಕಡೂರಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಅದು ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಜನರಿಗೆ ಮಳೆ ಕಂಡು ಖುಷಿ ಪಡ್ಬೇಕೋ, ಬೆಳೆ ನಾಶ ಕಂಡು ಕಣ್ಣೀರಿಡ್ಬೇಕೋ ಗೊತ್ತಾಗ್ತಿಲ್ಲ.

ಈ ಮಧ್ಯೆಯೂ ಸತ್ತ ಬೋರ್‍ಗಳಿಗೆ ಮರುಜೀವ ಬಂದಿರೋದು ಕಡೂರಿಗರಿಗೆ ಸಂತಸ ತಂದಿದೆ. ಕಡೂರಿನ ದೋಗೆಹಳ್ಳಿ, ಬಂಟಗನಹಳ್ಳಿ, ಸಖರಾಯಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನೂರಾರು ಬೋರ್‍ಗಳು ಉಕ್ಕುತ್ತಿದ್ದು ಜನ ಫುಲ್ ಖುಷಿಯಾಗಿದ್ದಾರೆ. ಜನರ ಆ ಖುಷಿ ಹಾಗೇ ಇರಲಿ ಅನ್ನೋದು ನಮ್ಮ ಬಯಕೆ ಕೂಡ.

ವರದಿ: ವೀರೇಶ್ ಹೆಚ್ ಜಿ
Published by:Vijayasarthy SN
First published: