ಈ ಗ್ರಾ.ಪಂ.ಗೆ 27 ವರ್ಷದಿಂದಲೂ ಇಲ್ಲ ಚುನಾವಣೆ; ರಾಯಚೂರಿನಲ್ಲೊಂದು ವಿಶೇಷ ಪಂಚಾಯತಿ

ಗ್ರಾಮಗಳ ಅಭಿವೃದ್ಧಿ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ

ತಿಡಿಗೋಳ  ಗ್ರಾಮ

ತಿಡಿಗೋಳ  ಗ್ರಾಮ

  • Share this:
ರಾಯಚೂರು (ಡಿ.13): ಜಿಲ್ಲೆಯ ಸಿಂಧನೂರು ತಾಲೂಕಿ ತಿಡಿಗೋಳ  ಗ್ರಾಮ ಪಂಚಾಯತಿ ರಚನೆ ಆಗಿ 27 ವರ್ಷಗಳು ಕಳೆದಿವೆ.  25 ಜನ ಸದಸ್ಯರಿರುವ ಈ ಪಂಚಾಯತಿಗೆ ಇದುವರೆಗೂ ಚುನಾವಣೆಯೇ ನಡೆದಿಲ್ಲ ಎಂಬುದು ವಿಶೇಷ. ಪ್ರತಿ ಬಾರಿ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಆದಾಗಲೂ ಇಲ್ಲಿ ಮೀಸಲಾತಿಗೆ ಅನುಗುಣವಾಗಿ 25 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಯಾವೊಂದು ಪಂಚಾಯತಿಯಲ್ಲಿಯೂ ಬಹುಶಃ ಇಷ್ಟು ವರ್ಷಗಳ ಕಾಲ ಅವಿರೋಧವಾಗಿ ಆಯ್ಕೆಯಾಗಿಲ್ಲ. ಇದರಿಂದಲೇ ಈ ಗ್ರಾಮ ವಿಶೇಷವಾಗಿದೆ. ಇದೇ ಕಾರಣಕ್ಕೆ ಇಲ್ಲಿ ಯಾವುದೇ ಪಕ್ಷಗಳಿಗೆ ಚುನಾವಣೆಯಲ್ಲಿ ಅವಕಾಶ ಇರುವುದಿಲ್ಲ. ಗ್ರಾಮಗಳ ಅಭಿವೃದ್ಧಿ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಪಂಚಾಯತಿ ಆಯ್ಕೆಯಾಗುವ ಸಂದರ್ಭದಲ್ಲಿ ಕೂಡ  ಗ್ರಾಮಗಳಲ್ಲಿ ವೈಷಮ್ಯ ಬೆಳೆಯುವುದು ಬೇಡ, ಎಲ್ಲರೂ ಸೌಹಾರ್ದಯುತವಾಗಿರೋಣ ಎಂದು ನಾಲ್ಕು ಗ್ರಾಮಗಳ ಹಿರಿಯರೊಂದಿಗೆ ಮಾತನಾಡಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆ ಮಾಡಿಕೊಂಡು ಬರುತ್ತಿದ್ದಾರೆ.  ಗ್ರಾಮದ ಹಿರಿಯ ಮುಖಂಡರಾದ ಬಂಜೇಗೌಡರು ಈ ನಿಯಮವನ್ನು ಅನಾದಿಕಾಲದಿಂದಲೂ ರೂಪಿಸಿಕೊಂಡು ಬಂದಿದ್ದಾರೆ. ಈಗ ಅವರು ಇಲ್ಲದಿದ್ದರೂ ಗ್ರಾಮಸ್ಥರು ಮಾತ್ರ  ಅವರು ಹಾಕಿಕೊಟ್ಟ ಮಾರ್ಗವನ್ನು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

1993ರಲ್ಲಿ ತಿಡಿಗೋಳ ಗ್ರಾಮ ಪಂಚಾಯತಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದಲೂ ಇಲ್ಲಿ ಪ್ರತಿ ಬಾರಿ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಆದಾಗ, ಗ್ರಾಮದ ಹಿರಿಯರು ಸೇರಿ ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರೆ. ತಿಡಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಿಡಿಗೋಳ ನಿಡಿಗೋಳ, ಕುರಕುಂದ, ಉಪ್ಪಲದೊಡ್ಡಿ, ಕಾನಿಹಾಳ ಗ್ರಾಮಗಳು ಬರುತ್ತವೆ. ಈ ಎಲ್ಲಾ ಗ್ರಾಮಗಳ ಗ್ರಾಮಸ್ಥರ ಐಕ್ಯತಾ ಭಾವ ನಿರ್ಧಾರವೇ ಅವಿರೋಧ ಆಯ್ಕೆಗೆ ಕಾರಣವಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಬೇಡಿಕೆ ಇಲ್ಲದೇ, ಗ್ರಾಮಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು, ಅವಿರೋಧವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ.

ಚುನಾವಣೆ ಎಂದರೆ ಅಲ್ಲಿ ಕಲಹ, ಗದ್ದಲಗಳು ಇರುತ್ತಾರೆ. ಅಲ್ಲದೇ ದಾಯಾದಿಗಳೇ ಪರಸ್ಪರ ಎದುರಾಳಿಗಳಾಗಿರುತ್ತಾರೆ‌. ಅಂತಹದರಲ್ಲಿ ಇಡೀ ಪಂಚಾಯತಿಯ ಸದಸ್ಯರನ್ನು  ಅಭಿವೃದ್ದಿ ಗಮನದಲ್ಲಿಟ್ಟಕೊಂಡು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ತಿಡಿಗೋಳ ಗ್ರಾಮ ಪಂಚಾಯತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಅವಿರೋಧ ಆಯ್ಕೆ ಮಾಡುವ ಗ್ರಾಮ ಪಂಚಾಯತಿಗಳಿಗೆ ಸರಕಾರದಿಂದ ಒಂದು ಕೋಟಿ ವಿಶೇಷ ಅನುದಾನವನ್ನು ಬಹುಮಾನವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಘೋಷಣೆ ಮಾಡಿದ್ದಾರೆ. ಈ ಅನುದಾನವನ್ನು ಈ ಗ್ರಾಮ ಪಂಚಾಯತ್ ಪಡೆಯಲಿದೆ. ಸಿಂಧನೂರು ತಾಲೂಕಿನಲ್ಲಿ ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ‌, ಚುನಾವಣೆಗೆ ಅವಿರೋಧ ಆಯ್ಕೆ ಮಾಡಲು ಈಗಾಗಲೇ ಸಭೆ ನಡೆದಿದೆ. ಈ ಸಭೆಯಲ್ಲಿ ಒಮ್ಮತದ ತೀರ್ಮಾನವಾಗುತ್ತಿದೆ. ಕೊನೆಯ ಗಳಿಗೆಯವರೆಗೂ ಜನರು ಅವಿರೋಧ ಆಯ್ಕೆಯಾಗಲಿ ಎಂದು ಆಶಿಸುತ್ತಿದ್ದಾರೆ.
Published by:Seema R
First published: