ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೂರ್ಣಗೊಂಡು ವರ್ಷ ಕಳೆದರೂ ಉಪಯೋಗಕ್ಕೆ ಸಿಗುತ್ತಿಲ್ಲ ಶುದ್ಧ ನೀರಿನ ಘಟಕ

ಮುಗಿದ ಘಟಕಗಳಲ್ಲಿ ನೀರು ಪೂರೈಕೆ ಆರಂಭಗೊಳ್ಳದೆಯೇ ವರ್ಷಗಳು ಕಳೆದಿದೆ. ಅಲ್ಲದೆ ಘಟಕಕ್ಕೆ ನೀರಿನ ಸಂಪರ್ಕವನ್ನೂ ಯಾರು ಕಲ್ಪಿಸಬೇಕು ಎನ್ನುವ ಬಗ್ಗೆಯೂ ಗೊಂದಲ ನಿರ್ಮಾಣವಾಗಿದೆ.

ಶುದ್ದ ನೀರಿನ ಘಟಕ

ಶುದ್ದ ನೀರಿನ ಘಟಕ

  • Share this:
ಮಂಗಳೂರು(ಆಗಸ್ಟ್​. 19): ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಪರಿಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಉದ್ಧೇಶದಿಂದ ರಾಜ್ಯ ಸರಕಾರ ಶುದ್ಧನೀರು ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಬರುವ ಈ ಯೋಜನೆಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ರಾಜ್ಯದೆಲ್ಲೆಡೆ ಅನುಷ್ಠಾನಗೊಳಿಸುತ್ತಿದೆ. ಆದರೆ, ಈ ಯೋಜನೆಯ ಅನುಷ್ಠಾನದಲ್ಲಾಗುತ್ತಿರುವ ವಿಳಂಬ ಹಾಗೂ ಅನಗತ್ಯ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿರುವ ಈ ಘಟಕಗಳು ಇಂದು ಪಾಳು ಬೀಳುವ ಸ್ಥಿತಿಯಲ್ಲಿದೆ. ರಾಜ್ಯದ ಪ್ರತಿಯೊಬ್ಬನೂ ಪರಿಶುದ್ಧ ನೀರನ್ನು ಕುಡಿಯಲು ಕೊಡುವ ಉದ್ಧೇಶದಿಂದ ರಾಜ್ಯ ಸರಕಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಶುದ್ಧ ನೀರು ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಪ್ರತಿ ಗ್ರಾಮ ಪಂಚಾಯತ್ ಗೆ ಕನಿಷ್ಟ ಒಂದರಂತೆ ಇಂಥ ಘಟಕಗಳನ್ನು ಸ್ಥಾಪಿಸಿ ಆ ಗ್ರಾಮದ ಜನರಿಗೆ ಶುದ್ಧ ನೀರು ಕೊಡುವುದು ಸರಕಾರದ ಉದ್ಧೇಶವೂ ಆಗಿದೆ. ಪ್ರತಿ ಘಟಕಕ್ಕೆ ಯೋಜನೆ ಆರಂಭವಾಗುವ ವರ್ಷ 5.88 ಲಕ್ಷ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು, ಇದೀಗ ಈ ಘಟಕಗಳಿಗೆ 13 ಲಕ್ಷಕ್ಕೂ ಮಿಕ್ಕಿದ ವೆಚ್ಚ ತಗಲುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 120 ಇಂತಹ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟಕಗಳಿವೆ. ಆದರೆ ಇವೆಲ್ಲವು ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಈ ಘಟಕದ ಕೆಲಸ ಆರಂಭವಾಗಿ ಒಂದು ವರ್ಷಗಳೂ ಕಳೆದರೂ ಘಟಕದ ಕೆಲಸ ಮಾತ್ರ ಮುಗಿದಿಲ್ಲ. ಇನ್ನು ಮುಗಿದ ಘಟಕಗಳಲ್ಲಿ ನೀರು ಪೂರೈಕೆ ಆರಂಭಗೊಳ್ಳದೆಯೇ ವರ್ಷಗಳು ಕಳೆದಿದೆ. ಅಲ್ಲದೆ ಘಟಕಕ್ಕೆ ನೀರಿನ ಸಂಪರ್ಕವನ್ನೂ ಯಾರು ಕಲ್ಪಿಸಬೇಕು ಎನ್ನುವ ಬಗ್ಗೆಯೂ ಗೊಂದಲ ನಿರ್ಮಾಣವಾಗಿದೆ.

ಗ್ರಾಮ ಪಂಚಾಯತ್ ನ ಅರ್ಧ ಇಂಚಿನ ಪೈಪ್ ಮೂಲಕ ಈ ಘಟಕಕ್ಕೆ ನೀರು ಪೂರೈಕೆ ಮಾಡುವುದು ಸಾಧ್ಯವಿಲ್ಲದ ಕಾರಣ ಘಟಕದ ಪಕ್ಕದಲ್ಲೇ ಬೋರ್ ವೆಲ್ ನಿರ್ಮಿಸುವುದು ಉತ್ತಮ ಎಂದು ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಸಂತ್ ಹೇಳುತ್ತಾರೆ.

ಜಿಲ್ಲೆಯ ಸುಮಾರು 120 ಇಂತಹ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಹಲವು ಘಟಕಗಳು ನಾದುರಸ್ತಿ ಹಾಗೂ ಉಪಯೋಗಿಸಲು ಯೋಗ್ಯವಲ್ಲದ ಕಾರಣ ಎಲ್ಲಾ ಘಟಕಗಳನ್ನು ದುರಸ್ತಿ ಮಾಡಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ. 78 ಘಟಕಗಳನ್ನು ಗ್ರಾಮ ಪಂಚಾಯತ್ ಗೆ ಒಪ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇನ್ನುಳಿದವುಗಳ ಕಾಮಗಾರಿಯನ್ನು ಟೆಂಡರ್ ವಹಿಸಿರುವಂತಹವರು ಅರ್ಧಕ್ಕೆ ಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಈ ಟೆಂಟರ್ ಗಳನ್ನು ರದ್ದು ಮಾಡಲಾಗಿದ್ದು, ಇವರಿಗೆ ಹಣ ಪಾವತಿ ಮಾಡುವುದಿಲ್ಲ ಎನ್ನುವ ವಿಚಾರವನ್ನೂ ತಿಳಿಸಲಾಗಿದೆ.

ಇದನ್ನೂ ಓದಿ : ಚಾಕು ತೋರಿಸಿ ಬೈಕ್ ನಲ್ಲೇ ಕಿಡ್ನ್ಯಾಪ್ ; ಪೊಲೀಸರಿಂದ ಇಬ್ಬರು ಅಪಹರಣಕಾರರ ಬಂಧನ

ಎಲ್ಲಾ ಘಟಕಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತಹ ಸ್ಥಿತಿಗೆ ತರಲಾಗುತ್ತಿದ್ದು, ಆ ಬಳಿಕ ಘಟಕಗಳನ್ನು ಆಯಾಯ ಪಂಚಾಯತ್ ಗಳಿಗೆ ವಹಿಸಿಕೊಡಲಾಗುವುದು. ಘಟಕದ ನಿರ್ವಹಣೆಗೆ ಸರಕಾರದ ವತಿಯಿಂದಲೇ 3 ಸಾವಿರ ರೂಪಾಯಿಗಳನ್ನೂ ನೀಡುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಸೆಲ್ವಮಣಿ ಹೇಳುತ್ತಾರೆ.

ಸರಕಾರ ಈ ಯೋಜನೆ ಆರಂಭಿಸಿ ಏಳೆಂಟು ವರ್ಷಗಳು ಕಳೆದರೂ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಘಟಕಗಳು ಸಮರ್ಪಕವಾಗಿ ಕಾರ್ಯಾರಂಭಿಸಿಲ್ಲ. ಶುದ್ಧ ನೀರಿನ ಘಟಕವನ್ನು ಅಗತ್ಯವಿಲ್ಲದ ಕಡೆಗಳಲ್ಲಿ ನಿರ್ಮಿಸಿರುವುದು ಈ ಘಟಕದ ಕಡೆಗೆ ಜನ ಸುಳಿಯದಂತೆ ಮಾಡಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಮಿನರಲ್ ವಾಟರ್ ಕಂಪನಿಗಳ ಲಾಭಿಯೂ ಯೋಜನೆ ಸಫಲವಾಗದಂತೆ ಕೆಲಸ ಮಾಡುತ್ತಿವೆ ಎನ್ನುವ ಆರೋಪವು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
Published by:G Hareeshkumar
First published: