• Home
 • »
 • News
 • »
 • district
 • »
 • HD Devegowda: ಆಂಜನೇಯ ದೇಗುಲಕ್ಕೆ ಬಂದ ಎಚ್.ಡಿ.ದೇವೇಗೌಡರಿಗೆ ಪೂರ್ಣಕುಂಭ ಸ್ವಾಗತ ಮಾಡಿದ ಉರುವಾರೆ ಗ್ರಾಮಸ್ಥರು

HD Devegowda: ಆಂಜನೇಯ ದೇಗುಲಕ್ಕೆ ಬಂದ ಎಚ್.ಡಿ.ದೇವೇಗೌಡರಿಗೆ ಪೂರ್ಣಕುಂಭ ಸ್ವಾಗತ ಮಾಡಿದ ಉರುವಾರೆ ಗ್ರಾಮಸ್ಥರು

ದೇವೇಗೌಡರನ್ನು ಸ್ವಾಗತಿಸಿದ ಗ್ರಾಮಸ್ಥರು.

ದೇವೇಗೌಡರನ್ನು ಸ್ವಾಗತಿಸಿದ ಗ್ರಾಮಸ್ಥರು.

ಇವತ್ತು ಗಣೇಶನ ಹಬ್ಬ, ಶ್ರೇಷ್ಠವಾದ ದಿನ ಪೂಜೆಗೆ ಬರುತ್ತೇನೆಂದು ಹೇಳಿದ್ದೆ. ಊರಿನ ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ. ತಾಯಂದಿರು ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

 • Share this:

  ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಅವರು ಇಂದು ಹಾಸನ ತಾಲ್ಲೂಕಿನ ಉಡುವಾರೆ ಗ್ರಾಮಕ್ಕೆ (Uduvare Village) ಆಗಮಿಸಿದರು. ಉಡುವಾರೆ ಗ್ರಾಮದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ನಿಮಿತ್ತ ದೇವೇಗೌಡರು ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಕ್ಕೆ ಬಂದ ಗೌಡರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಸ್ಥರು ಬರಮಾಡಿಕೊಂಡರು. ಕಳೆದ ವಾರವಷ್ಟೇ ಆಂಜನೇಯ ದೇವಾಲಯ ಉದ್ಘಾಟನೆಯಾಗಿತ್ತು. ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ದೇವೇಗೌಡರು ಬರಬೇಕಾಗಿತ್ತು. ಆದರೆ, ಅವರು ಅಂದು ದೆಹಲಿಯಲ್ಲಿ ಇದ್ದ ಕಾರಣ, ಗಣೇಶ ಚತುರ್ಥಿ ದಿನದಂದು ಬರುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದರಂತೆ ಇಂದು ಗಣೇಶ ಚತುರ್ಥಿಯ ದಿನ ಕೊಟ್ಟ ಮಾತಿನಂತೆ ಗ್ರಾಮಕ್ಕೆ ಆಗಮಿಸಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.


  ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ದೇವೇಗೌಡ ಅವರು, ಗ್ರಾಮದ ಜನರು ದೇವಸ್ಥಾನದ ಉದ್ಘಾಟನೆ ಬರಬೇಕು ಎಂದು ಕೇಳಿಕೊಂಡಿದ್ದರು. ಆದರೆ ನಾನು ದೆಹಲಿಯಲ್ಲಿ ಇದ್ದಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಇವತ್ತು ಗಣೇಶನ ಹಬ್ಬ, ಶ್ರೇಷ್ಠವಾದ ದಿನ ಪೂಜೆಗೆ ಬರುತ್ತೇನೆಂದು ಹೇಳಿದ್ದೆ. ಊರಿನ ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ. ತಾಯಂದಿರು ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.


  ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿದ ದೇವೇಗೌಡ ಅವರು, ಈ ವಿಚಾರದಲ್ಲಿ ಕುಮಾರಸ್ವಾಮಿಯವರಿದ್ದಾರೆ. ಅವರು ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ಇನ್ನೂ ಎಲೆಕ್ಷನ್ ನೋಟಿಫಿಕೇಷನ್ ಆಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದು ನಿಜ. ಸಿಎಂ ಬಸವರಾಜ ಬೊಮ್ಮಾಯಿ, ಕಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ. ಅಲ್ಲಿಯ ಮುಖಂಡರು, ಗೆದ್ದಿರುವ ಸದಸ್ಯರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.


  ಜೆಡಿಎಸ್ ಜೊತೆಗೆ ಒಟ್ಟಿಗೆ ಹೋಗೋಣ ಅಂತಾ ಹೇಳಿದ್ದೇನೆ ಎಂಬ ಸಿಎಂ ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡ ಅವರು, ಅವರು ಹೇಳ್ತಾರೆ ಅದು ಬೇರೆ ವಿಚಾರ. ಖರ್ಗೆಯವರು ನಮಗೆ ಹೇಳಿಲ್ವೇ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಇಬ್ಬರು ಮುಸ್ಲಿಂರು ಸದಸ್ಯರು ಗೆದ್ದಿದ್ದಾರೆ. ಒಂದು ಶೆಡ್ಯೂಲ್ ಕಾಸ್ಟ್, ಒಂದು ರೆಡ್ಡಿ ಸಮುದಾಯದವರು ಗೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಮ್ಮ ಮನಸ್ಸೋ ಇಚ್ಚೆ ತೀರ್ಮಾನ ಮಾಡೋದು ಸರಿಯಲ್ಲ ಎಂದು ಹೇಳಿದರು.


  ಇದನ್ನು ಓದಿ: Explained: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಯಾರ ಜತೆ ಮೈತ್ರಿ ಮಾಡಿಕೊಳ್ಳಲಿದೆ; ಕಾಂಗ್ರೆಸ್ ಲೆಕ್ಕಾಚಾರವೇನು?


  ಜೆಡಿಎಸ್ ಬೆಂಬಲ ಅನಿವಾರ್ಯ


  ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ಇರುವ ವಾರ್ಡ್ 55. ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಅಭ್ಯರ್ಥಿಯೂ ಆಯ್ಕೆಯಾಗಿದ್ದಾರೆ. ಪಾಲಿಕೆ ಅಧ್ಯಕ್ಷರ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಇದೆ. ಇವರೆಲ್ಲರನ್ನೂ ಸೇರಿ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ. ಬಿಜೆಪಿಯಲ್ಲಿ ಪಾಲಿಕೆ ಸದಸ್ಯರ ಸಂಖ್ಯೆ 23, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿಯ ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್​ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲದು. ಹಾಗೆಯೇ, ಪಾಲಿಕೆಯಲ್ಲಿ ಗೆಲುವು ಸಾಧಿಸಿರುವ ಏಕೈಕ ಪಕ್ಷೇತರ ಅಭ್ಯರ್ಥಿ ವಾಸ್ತವವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಅವರು ಸ್ಪರ್ಧಿಸಿದ್ದರು. ಇವರನ್ನ ಮನವೊಲಿಸಿ ಬಿಜೆಪಿ ಬೆಂಬಲ ಗಿಟ್ಟಿಸುವ ನಿರೀಕ್ಷೆ ಇದೆ. ಅತ್ತ, ಕಾಂಗ್ರೆಸ್ ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್​ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯ.


  • ವರದಿ: ಶಶಿಧರ್.ಬಿ.ಸಿ.

  Published by:HR Ramesh
  First published: