ಉಡುಪಿ: ಉಡುಪಿ (Udupi) ನಗರದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಐಷಾರಾಮಿ ಆರೋಗ್ಯ ಸೇವೆ ನೀಡುತ್ತಿದ್ದ ತಾಯಿ, ಮಕ್ಕಳ ಆಸ್ಪತ್ರೆಯ ಭವಿಷ್ಯವೇ ಅನಿಶ್ಚಿತತೆಗೆ ಸಿಲುಕಿದೆ. ಸರ್ಕಾರದ ಜಾಗವನ್ನು ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ (BR Shetty) ನೀಡಿ, ಕೆಲ ಷರತ್ತುಗಳೊಂದಿಗೆ ಸರಕಾರ ಈ ಅಸ್ಪತ್ರೆಯನ್ನು(BRS Hospital) ಕಟ್ಟಿಸಿತ್ತು. ನಿರೀಕ್ಷಿತ ರೀತಿಯ ಸೇವೆಯೂ ಇಲ್ಲಿ ಲಭ್ಯವಿತ್ತು. ಆದರೆ ಬಿ.ಆರ್ ಶೆಟ್ಟಿ ಅವರ ಸಾಮ್ರಾಜ್ಯ ಪತನವಾಗುವುದರೊಂದಿಗೇ ಈ ಆಸ್ಪತ್ರೆಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.
ಈ ಐಷಾರಾಮಿ ಬಹುಮಡಿ ಕಟ್ಟಡ ಉಡುಪಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಹಾಜಿ ಅಬ್ದುಲ್ಲ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ. ಮೂರು ವರ್ಷದ ಹಿಂದೆ ಕಾರ್ಯಾಚರಣೆಗೆ ತೊಡಗಿದ ಆಸ್ಪತ್ರೆ ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುವ ಹೆಗ್ಗಳಿಕೆ ಹೊಂದಿತ್ತು. ಇದೊಂದು ರೀತಿ ಸರಕಾರಿ ಖಾಸಗಿ ಸಹಭಾಗಿತ್ವದ ಆಸ್ಪತ್ರೆ. ಹಳೆಯ ಸರಕಾರಿ ಆಸ್ಪತ್ರೆಯ ಜಾಗವನ್ನು ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿ, ಈ ಆಸ್ಪತ್ರೆಯನ್ನು 60 ವರ್ಷಗಳವರೆಗೆ ಬಿ.ಆರ್ ಶೆಟ್ಟಿ ನಡೆಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಿರೀಕ್ಷೆಯಂತೆಯೇ ಇಲ್ಲಿ ಬಡ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿತ್ತು. ಹನ್ನೊಂದು ಸಾವಿರದಷ್ಟು ಉಚಿತ ಹೆರಿಗೆ ಆದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಆದರೆ ಬಡಜನರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ದೌರ್ಭಾಗ್ಯ ಎನ್ನಬೇಕು. ಉದ್ಯಮಿ ಬಿ.ಆರ್ ಶೆಟ್ಟರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮ ಈ ಆಸ್ಪತ್ರೆಯ ನಿರ್ವಹಣೆಯೇ ಈಗ ಕಷ್ಟವಾಗಿದೆ. ಸಿಬ್ಬಂದಿಗಳು ಮತ್ತು ವೈದ್ಯರಿಗೆ ಸಂಬಳ ನೀಡುವುದಕ್ಕೇ ಬಿ.ಆರ್ ಎಸ್ ಮ್ಯಾನೇಜ್ ಮೆಂಟಿಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಇಲ್ಲಿಯ ಸಿಬ್ಬಂದಿಗಳು ಹಲವು ಬಾರಿ ಕರ್ತವ್ಯ ಮಾಡದೆ ವೇತನಕ್ಕಾಗಿ ಧರಣಿ ಮಾಡುವುದು ಈಗ ಸಾಮಾನ್ಯವಾಗಿದೆ.
ಕಳೆದ ಮೂರು ತಿಂಗಳಲ್ಲಿ ಹಲವು ಬಾರಿ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿ ಧರಣಿಯ ಮೊರೆ ಹೋಗಿದ್ದರು. ನಿರಂತರ ನಡೆದ ಪ್ರತಿಭಟನೆ ಫಲವಾಗಿ ಸರ್ಕಾರ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ 50ಲಕ್ಷ ಹಣವನ್ನ ಬಾಕಿ ವೇತನ ಪಾವತಿಗೆ ಬಿಡುಗಡೆ ಮಾಡಿ ಹಸ್ತಾಂತರ ಕೂಡ ಮಾಡಲಾಗಿತ್ತು. ಆದರೆ ಬಂದ ಹಣದಲ್ಲಿ ಬಹುಪಾಲು ಹಣ ಮ್ಯಾನೇಜ್ ಮೆಂಟ್ ಮುಖ್ಯಸ್ಥರು, ಕೆಲ ವೈದ್ಯರ ಖಾತೆ ಸೇರಿದೆ. ಕಡಿಮೆ ವೇತನ ಪಡೆಯುವ ವೈದ್ಯರು, ನೌಕರರ ಮೂರು ತಿಂಗಳ ಬಾಕಿ ವೇತನವನ್ನಷ್ಟೇ ಭರಿಸಲಾಗಿದೆ. ಹೀಗಾಗಿ ಸಂಪೂರ್ಣ ಬಾಕಿ ವೇತನ ನೀಡದಕ್ಕೆ ಶಾಸಕರ ಸಹಿತ ನೌಕರರು, ವೈದ್ಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿತ್ತು.
ಸದ್ಯ ಸ್ವಲ್ಪ ಮಟ್ಟಿಗೆ ವೇತನ ಪಾವತಿಯಾಗಿದ್ದರೂ ಇಲ್ಲಿನ ಸಿಬ್ಬಂದಿಗಳಿಗೆ ಬಿ.ಆರ್ ಎಸ್ ಮ್ಯಾನೇಜ್ ಮೆಂಟ್ ಮೇಲೆ ನಂಬಿಕೆ ಉಳಿದಿಲ್ಲ. ಈ ಸಂಬಂಧ ಸಿಎಂ, ಆರೋಗ್ಯ ಸಚಿವರು ಮತ್ತು ಶಾಸಕ ರಘುಪತಿ ನೇತೃತ್ವದಲ್ಲಿ ಸಭೆಗಳಾಗಿವೆ. ಸಭೆಯಲ್ಲಿ ಆಸ್ಪತ್ರೆಯನ್ನು ಸರಕಾರವೇ ನಡೆಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ. ಇಲ್ಲಿಯ ಸಿಬ್ಬಂದಿಗಳೂ ಕೂಡ ಈಗಿನ ಮ್ಯಾನೇಜ್ ಮೆಂಟ್ ಬಗ್ಗೆ ಬೇಸತ್ತಿದ್ದು ಸರಕಾರವೇ ಈ ಆಸ್ಪತ್ರೆಯನ್ನು ಮುನ್ನಡೆಸಿದರೆ ಒಳ್ಳೆಯದು ಅಂತಾರೆ. ಇನ್ನೊಂದೆಡೆ ಸರ್ಕಾರ ಸಂಪೂರ್ಣವಾಗಿ ಈ ಆಸ್ಪತ್ರೆ ನಿಯಂತ್ರಿಸಿದರೆ ಈಗಿರೋ ವೈದ್ಯರ ಗತಿ ಏನು. ಸರ್ಕಾರಿ ವೈದ್ಯರನ್ನೇ ನೇಮಿಸಿದಲ್ಲಿ ಈಗಿರೋ ವೈದ್ಯರು ಎಲ್ಲಿಗೆ ಹೋಗಬೇಕು ಅನ್ನೋ ಗೊಂದಲದಲ್ಲಿದ್ದಾರೆ ವೈದ್ಯರು. ಈ ಬಗ್ಗೆ ವೈದ್ಯ ಕೋಮಲ್ ಅವರು ಅಳಲನ್ನ ತೋಡಿಕೊಂಡಿದ್ದಾರೆ. ಬಾಕಿ ಇರುವ ಸಂಬಳ ಕೊಟ್ಟು
ಸರ್ಕಾರ ಈ ಆಸ್ಪತ್ರೆ ಮುಂದುವರೆಸುವ ನಿರ್ಧಾರ ಬೇಗ ತೆಗೆದುಕೊಳ್ಳಲಿ. ನಮ್ಮನ್ನ ಕೂಡ ಕೈ ಬಿಡದೆ ಆಸ್ಪತ್ರೆ ಮುಂದುವರೆಸಲಿ. ನಮಗೆ ವೇತನದ ಜೊತೆಗೆ ಜಾಬ್ ಸೆಕ್ಯೂರಿಟಿ ಕೂಡ ಬೇಕಿದೆ ಎಂದು ವಿನಂತಿಸಿದ್ದಾರೆ.
ವರದಿ: ಪರೀಕ್ಷಿತ್ ಶೇಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ