ಚಿಕ್ಕೋಡಿ(ಜೂ.18): ಕಲ್ಲೋಳ-ಯಡೂರ ಸೇತುವೆಯು ಪ್ರವಾಹ ರಭಸಕ್ಕೆ ಶಿಥಿಲಗೊಂಡಿದೆ. ತೀರಾ ಹಳೆಯದಾದ ಸೇತುವೆಯು ಶೇ 60ರಷ್ಟು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲವೊಂದು ಕಡೆಗಳಲ್ಲಿ ಸೇತುವೆ ಕುಸಿಯುತ್ತಾ ಹೋಗುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆ ಕಂಡಿರುವ ಸೇತುವೆ ಮೇಲೆ ವಾಹನಗಳು ಸಂಚಾರ ಮಾಡುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ಇನ್ನೂ ಹೊಸ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಆರಂಭದ ಭಾಗ್ಯ ಕೂಡಿಬರುತ್ತಿಲ್ಲ. ಇದರಿಂದ ಗಡಿ ಭಾಗದ ಜನ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಳೆದ 2005 ಮತ್ತು 2006ರಲ್ಲಿ ಬಂದಿರುವ ಭೀಕರ ಪ್ರವಾಹದಿಂದ ಸೇತುವೆ ನಾಶವಾಗಿ ಹೋಗಿದೆ. 2019ರಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹದಲ್ಲಿ ಸೇತುವೆ ಸಂಪೂರ್ಣ ಶಿಥಿಲಗೊಂಡು ಈಗಲೋ ಆಗಲೋ ಬಿಳುವ ಹಂತಕ್ಕೆ ಬಂದು ತಲುಪಿದೆ. ಹಿಂದಿನ ಪ್ರವಾಹಕ್ಕಿಂತ ಮುಂಚೆ ಹೊಸ ಸೇತುವೆ ನಿರ್ಮಾಣವಾಗಬೇಕಿತ್ತು. ಆದರೆ ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸೇತುವೆ ಕಾಮಗಾರಿ ಇನ್ನೂ ಆರಂಭವಾಗದೇ ಇರುವುದು ದುರ್ದೈವದ ಸಂಗತಿ.
ಹೊಸ ಸೇತುವೆ ಮಂಜೂರು:
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಶಿಥಿಲಾವಸ್ಥೆ ಕಂಡಿರುವ ಪರಿಣಾಮ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ಅವರು ಹೊಸ ಸೇತುವೆ ನಿರ್ಮಿಸಲು 27 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕಾಮಗಾರಿ ಆರಂಭಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್ಡಿಸಿಎಲ್)ಗೆ ಒಪ್ಪಿಸಿದ್ದಾರೆ. ಕಲ್ಲೋಳ-ಯಡೂರ ಹೊರತು ಪಡಿಸಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿಗೆ ಅಡ್ಡಲಾಗಿ ಜುಗಳು-ಕೇದರಾಪೂರ, ಮಳವಾಡ-ಚಿಂಚಲಿ, ಕುಡಚಿ, ಕೃಷ್ಣಾ ಕಿತ್ತೂರ ಹೀಗೆ ಐದು ಸೇತುವೆಗಳು ಮಂಜೂರಾಗಿವೆ. ಆದರೆ ಮಂಜೂರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಆರಂಭವಾಗದೇ ಇರುವುದು ಗಡಿ ಭಾಗದ ಜನರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಎರಡೆರಡು ಬಾರಿ ಉದ್ಘಾಟನೆ:
ಕಲ್ಲೋಳ-ಯಡೂರ ಸೇತುವೆ ಕಾಮಗಾರಿ ಆರಂಭ ಮಾಡಲು ಎರಡು ಬಾರಿ ಉದ್ಘಾಟಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಒಂದು ಬಾರಿ ಉದ್ಘಾಟಿಸಿದರೇ ಎರಡನೆ ಬಾರಿಗೆ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಶಾಸಕ ಗಣೇಶ ಹುಕ್ಕೇರಿ ಸೇತುವೆಗೆ ಚಾಲನೆ ದೊರಕಿದೆ. ಆದರೂ ಕೂಡಾ ಕಾಮಗಾರಿ ಆರಂಭದ ಭಾಗ್ಯ ಕೂಡಿ ಬರುತ್ತಿಲ್ಲ, ಅಧಿಕಾರಿಗಳನ್ನು ಕೇಳಿದರೇ ಪ್ರವಾಹ, ಮಳೆ ಹೀಗೆ ಅನೇಕ ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :
ಹೆರಿಗೆ ರಜೆ ಪಡೆದ ಶಿಕ್ಷಕಿಯಿಂದಲೇ ಲಂಚ - ಬಿಇಒ ಹಾಗೂ ಎಸ್.ಡಿ.ಎ. ಎಸಿಬಿ ಬಲೆಗೆ
ಇನ್ನು ಮತ್ತೆ ನದಿ ನೀರು ಏರಿಕೆಯಾಗಿದ್ದು ಮತ್ತೆ ಈ ಸೇತುವೆ ಮುಳುಗಡೆಯಾಗಿದೆ ಪರಿಣಾಮ ಜನ ಬರಿ ಎರಡು ಕಿಲೋಮೀಟರ್ ಅಂತರದಲ್ಲಿ ತಮ್ಮ ಊರು ಸೇರಿಕೊಳ್ಳುತ್ತಿದ್ದ ಜನ ಅನಿವಾರ್ಯವಾಗಿ 9 ಕಿಲೋಮೀಟರ್ ಸುತ್ತುವರಿದು ಸಂಚಾರ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಕನಿಷ್ಠ ಒಂದುವರೆ ತಿಂಗಳು ಇದೆ ಪರಿಸ್ಥಿತಿ ಇರುತ್ತೆ. ಕೃಷ್ಣಾ ನದಿಯಲ್ಲಿ ಸ್ವಲ್ಪ ನೀರು ಹೆಚ್ಚಿದ್ರು ಸೇತುವೆ ಮುಳುಗಡೆಯಾಗುತ್ತೆ. ಇರೋ ಸೇತುವೆ ಬಿದ್ದು ಅನಾಹುತ ಸಂಭವಿಸುವ ಮುನ್ನ ಕಾಮಗಾರಿ ಆರಭಿಸಬೇಕು ಎಂದು ಇಲ್ಲಿನ ಜನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ